ಮಣ್ಣಿನಿಂದಲೇ ವಿನಾಯಕನ ಜನನ : ಪರಿಸರ ಸ್ನೇಹಿ ಗಣೇಶನನ್ನೇ ಬಳಸಬೇಕು ಜನ…

ಇನ್ನೇನು ಗಣೇಶನ ಹಬ್ಬ ಬಂದೇ ಬಿಡ್ತು. ಒಂದು ಕಡೆ ಜನ ಹಬ್ಬದ ತಯಾರಿಯಲ್ಲಿದ್ದರೆ ಇನ್ನೊಂದು ಕಡೆ ಪರಿಸರಕ್ಕೆ ಹಾನಿಯಾಗುವ ಯೋಚನೆ ಪರಿಸರವಾದಿಗಳಲ್ಲಿ ಮೂಡುತ್ತಿದೆ. ಇದರ ಬಗ್ಗೆ ಪರಿವಿಲ್ಲದವರು ಪಿಒಪಿಯಂತ ಗಣೇಶನ ಮೂರ್ತಿಗೆಗಳಿಗೆ ಮಾರು ಹೋಗಿ ಪರಿಸರಕ್ಕೆ ಹಾನಿಯನ್ನುಂಟು ಮಾಡುತ್ತಿದ್ದಾರೆ.

          

ಅಂದಕ್ಕೆ ಚಂದಕ್ಕೆ ಅಲಂಕಾರಕ್ಕೆ ಆಕರ್ಷಕರಾಗುವ ಜನ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶನ ಮೂರ್ತಿಗಳ ಕಡೆಗೆ ಹೆಚ್ಚು ಒಲವು ತೋರಿಸುತ್ತಿದ್ದಾರೆ. ಆದರೆ ಮನೆ, ಮಂದಿರಗಳಲ್ಲಿ ಗಣೇಶನನ್ನು ಪ್ರತಿಷ್ಟಾಪಿಸುವ ಜನ ಹೊಂಚ ಸುಧಾರಿಸಿದ್ದಾರಾದರೂ, ಮೈದಾನ, ದೊಡ್ಡ ಸಭೆ, ಸಮಾರಂಭಗಳಲ್ಲಿ, ಸಂಘ-ಸಂಸ್ಥೆಗಳಲ್ಲಿ ಹೆಚ್ಚಾಗಿ ಪಿಒಪಿ ಗಣೇಶನನ್ನೇ ಬಳಕೆ ಮಾಡಲಾಗುತ್ತಿದೆ..

ಇಂಥ ಗಣೇಶನ ಮೂರ್ತಿಗಳು ವಿಸರ್ಜನೆ ಬಳಿಕ ಪರಿಸರದ ಮೇಲೆ ದುಷ್ಪರಿಣಾಮವನ್ನು ಬೀರೋದ್ರಲ್ಲಿ ಎರಡು ಮಾತಿಲ್ಲ. ಹೀಗಾಗಿ ಜಿಲ್ಲಾಡಳಿತ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಲಿ ಪಿಒಪಿ ಗಣೇಶನ ಬಳಕೆಗೆ ನಿಯಂತ್ರ ಹೇರಿದ್ರೂ ಪೂರ್ಣ ಪ್ರಮಾಣದ ಬಳಕೆ ಮಾತ್ರ ನಿಂತಿಲ್ಲ.

ಅಷ್ಟಕ್ಕೂ ಪಿಒಪಿ ಗಣೇಶ ಯಾಕೆ ಬಳಕೆ ಮಾಡಬಾರದು..? ಪರಿಸರ ಸ್ನೇಹಿ ಮಣ್ಣಿನ ಗಣೇಶನನ್ನೇ ಯಾಕೆ ಬಳಕೆ ಮಾಡಬೇಕು..? ಅನ್ನೋದರ ಬಗ್ಗೆ ಎಲ್ಲರಿಗೂ ಅರಿವಾಗಬೇಕಿದೆ.

ಪರಿಸರ ಮತ್ತು ಜಲಚರಗಳಿಗೆ ಅಪಾಯಕಾರಿಯಲ್ಲದ ಜೇಡಿ ಮಣ್ಣಿನಿಂದ ಸಿದ್ಧಪಡಿಸಿದ, ನೈಸರ್ಗಿಕ ಬಣ್ಣ ಲೇಪಿತ ವಿಗ್ರಹಗಳನ್ನು ಪೂಜಿಸುವುದರಿಂದ ಕೊಂಚ ಮಟ್ಟಿಗೆ ಪರಿಸರ ಮತ್ತು ಜೀವಿಗಳಿಗೆ ಅಪಾಯಕಾರಿಯಲ್ಲ. ಯಾಕಂದ್ರೆ ಜೇಡಿ ಮಣ್ಣು ನೀರಿನಲ್ಲಿ ಕರಗುತ್ತದೆ. ನೈಸರ್ಗಿಕ ಬಣ್ಣ ನೀರನ್ನು ವಿಷವಾಗಿಸುವುದಿಲ್ಲ.

ಜೊತೆಗ ಜಗತ್ತಿನ ಸೃಷ್ಟಿಯ ಮೂಲ ಎನಿಸಿದ ಮಣ್ಣಿನಿಂದಲೇ ವಿನಾಯಕನ ಜನನವೂ ಆಗಿದೆ. ಪುರಾಣಗಳೂ ಅದನ್ನೇ ಸಾರಿ ಹೇಳುತ್ತವೆ. ಹೀಗಿದ್ದೂ ನೆಲದ ಮೂಲಧಾತುವನ್ನು ಬಿಟ್ಟು ಪ್ಲಾಸ್ಟರ್ ಆಫ್ ಪ್ಯಾರಿಸ್ ಗೆ ಜನ ಮಾರು ಹೋಗಿರುವುದು ವಿಪರ್ಯಾಸ. ಅಷ್ಟಕ್ಕೂ ನೀವು ಬಳಕೆ ಮಾಡಲು ಇಚ್ಚಿಸುವ ಪಿಒಪಿ ಗಣೇಶನಿಂದ ಆಗುವ ದುಷ್ಪರಿಣಾಮಗಳು ಎಂಥವು ಗೊತ್ತಾ..?

ಪಿಒಪಿ ಗಣೇಶ ಕಸವಾಗಿ ನೀರಿನಲ್ಲಿ ನಿಲ್ಲುತ್ತದೆ. ಹೀಗಾಗಿ ಕೆರೆಗಳ ಸಂಖ್ಯೆ ಮತ್ತು ವಿಸ್ತೀರ್ಣ ಕಡಿಮೆಯಾಗಿರುವುದರಿಂದ ಹಣಪತಿ ಮೂರ್ತಿಗಳು ಕೆಲ ಬಾರಿ ಕೆರೆಯನ್ನೇ ಮುಚ್ಚಿ ಬಿಡುತ್ತವೆ. ಪಿಒಪಿ ನೀರಿನಲ್ಲಿ ಕರಗುವುದಿಲ್ಲ. ಇದರಿಂದಾಗಿ ನೀರಿನ ಶಾಖ ಹೆಚ್ಚುತ್ತದೆ. ಇದು ಜಲಚರಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಗಣೇಶ ವಿಸರ್ಜನೆ ಬಳಿಕ ಜಲಚರಗಳು ಸಾವನ್ನಪ್ಪಿದ ನಿದರ್ಶನಗಳು ಸಾಕಷ್ಟಿವೆ.

ಇದಲ್ಲದೆ ಪಿಒಪಿ ಗಣೇಶನಿಂದ ನೀರಿನ ಗಡಸುತನ, ಕೆಲ ಬಗೆಯ ರಾಸಾಯನಿಕ ಸಾಂದ್ರತೆ ಹೆಚ್ಚುತ್ತದೆ. ಅದಕ್ಕಿಂತಲೂ ವಿಗ್ರಹ ತಯಾರಿಸಲು ಅಪಾಯಕಾರಿ ರಾಸಾಯನಿಕ ಬಣ್ಣಗಳಾದ ಸೀಸ ಮತ್ತು ಕ್ಯಾಡ್ಮಿಯಂನಂಥ ಭಾರಲೋಹ ಬಳಕೆ ಇರುವ ತೈಲವರ್ಣದ ಬಳಕೆ ಮಾಡಲಾಗುತ್ತದೆ. ಇದು ನೀರನ್ನ ವಿಷವಾಗಿಸುವುದಲ್ಲದೆ ಜಲಚರಗಳಿಗೆ ಮಾರಕವೂ ಹೌದು..

ಇದನ್ನರಿಯದ ಕೆಲವರು ವಿಗ್ರಹದ ತಾತ್ವಿಕ ಹಿನ್ನೆಲೆಯನ್ನೂ ಮರೆತು ಬಿಟ್ಟಿದ್ದಾರೆ. ಹೊರಗಿನ ಅಂದದ ಬೆನ್ನು ಹತ್ತಿರುವ ಭಕ್ತರು ಪರಿಸರ ಹಾನಿಯ ಕಡೆಗೆ ಓಗೊಡುತ್ತಲೇ ಇಲ್ಲ. ಹೀಗಾಗಿ ಪರಿಸರ ಕಾಪಾಡುವುದು ಎಲ್ಲರ ಕರ್ತವ್ಯ. ಈ ಜವಬ್ದಾರಿ ಎಲ್ಲರ ಹೆಗಲಮೇಲಿದೆ. ನೀವು ನಿಮ್ಮ ಮಕ್ಕಳಿಗೆ, ಸ್ನೇಹಿತರಿಗೆ, ಅಕ್ಕ-ಪಕ್ಕದ ಜನರಿಗೆ ಇಕೋ ಫ್ರೆಂಡ್ಲಿ ಗಣೇಶನ ಪೂಜೆ ಮಾಡಲು ವಿನಂತಿ ಮಾಡಿಕೊಳ್ಳಿ. ಗಣೇಶ ಹಬ್ಬ ಸ್ವಾತಂತ್ರ್ಯ ಸಾರಲು ಕೇಂದ್ರ ಬಿಂದುವಾಗಿ ಬಳಕೆ ಮಾಡಿಕೊಂಡು ಬೆಳಸಿಕೊಂಡು ಬಂದ ಹಬ್ಬ. ಹೀಗಾಗಿ ಈ ಹಬ್ಬ ಒಳಿತಿನ ಸಂಕೇತವಾಗಿರಬೇಕೇ ಹೊರತು ಮಾರಕವಾಗಬಾರದು.

ವಿದ್ಯಾದಾತನ ಆರಾಧನೆ ವಿದ್ಯೆ, ಉತ್ತಮ ಜ್ಞಾನ ಪಡೆಯಲೇಂದೇ ಹೊರತು ಅವಿದ್ಯಾವಂತರಾಗಲು ಅಲ್ಲ.

ಪ್ರಕೃತಿ ಬಗ್ಗೆ ನಾವು ಈಗ ಯೋಚನೇ ಮಾಡದೇ ಇದ್ದಲ್ಲಿ ಮುಂದೊಂದು ದಿನ ಬದುಕುವುದು ಕೂಡ ಕಷ್ಟವಾಗಿಬಿಡುತ್ತದೆ. ಇಂದು ನಾವು ಇಡುವ ಹೆಜ್ಜೆ ನಾಳೆ ಅತ್ಯುತ್ತಮ ಓಟಗಾರರನ್ನಾಗಿ ಮಾಡಬಹುದು. ಬನ್ನಿ ಪರಿಸರ ರಕ್ಷಣೆಗಾಗಿ ನಾವೆಲ್ಲರೂ ಕೈ ಜೋಡಿಸೋಣ. ಪರಿಸರ ಕಾಳಜಿ ಬಗ್ಗೆ ಎಲ್ಲರಲ್ಲೂ ಅರಿವು ಮೂಡಿಸೋಣ. ಜೇಡಿ ಮಣ್ಣಿನ ಗಣೇಶನ ಪೂಜೆ ಮಾಡಿ ಹಬ್ಬ ಆಚರಿಸೋಣ.

Spread the love

Leave a Reply

Your email address will not be published. Required fields are marked *