ಕೊರೋನಾ ವೈರಸ್‌ ಭೀತಿಯಲ್ಲಿ ಭಾರತ: ಖಜಾನೆ ತುಂಬಿಸಲು ಮುಂದಾದ ಮಾಸ್ಕ್ ಮಾರಾಟಗಾರರು

ವಿಶ್ವವ್ಯಾಪಿ ಭಯದ ವಾತಾವರಣ ಸೃಷ್ಟಿಸಿರುವ ಕೊರೋನಾ ವೈರಸ್‌ನ ಅಟ್ಟಹಾಸ ಹೆಚ್ಚಾಗುತ್ತಿದೆ. ಭಾರತದಲ್ಲಿಯೂ ಕೊರೋನಾ ವೈರಸ್‌ ಕಾಣಿಸಿಕೊಂಡಿದ್ದು, ಇದೂವರೆಗೂ 31 ಸೋಂಕಿತ ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ವೈರಸ್‌ ಕಾಣಿಸಿಕೊಳ್ಳುತ್ತಿದ್ದಂತೆ ದೇಶಾದ್ಯಂತ ಕೊರೋನಾ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಅರಿವು ಮೂಡಿಸಲು ಮುಂದಾಗಿವೆ.  ಆಂಧ್ರಪ್ರದೇಶದ ಪ್ರದೇಶದ ಸರ್ಕಾರ ಒಂದು ಹೆಜ್ಜೆ ಮುಂದೆ ಹೋಗಿ ರಾಜ್ಯದ ವಿಮಾನ ನಿಲ್ದಾಣದಲ್ಲಿ ವಿದೇಶೀ ಪ್ರಯಾಣಿಕರನ್ನು ಸ್ಕ್ರೀನಿಂಗ್‌ಗೆ ಒಳಪಡಿಸಲಾಗುತ್ತಿದೆ.

ಕೊರೋನಾ ವೈರಸ್‌ ಪೀಡಿತ ದೇಶಗಳಿಂದ ಬಂದಿರುವ 361 ಜನರಲ್ಲಿ 13 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, 24ರ ರಕ್ತ ಪರೀಕ್ಷೆಗೆ ಮಾಡಲಾಗುತ್ತಿದೆ. ಈ ಎಲ್ಲಾ ಹಿನ್ನೆಲೆಗಳಿಂದ ದೇಶದಲ್ಲಿ ಕೊರೋನಾ ವೈರಸ್‌ನ ಭೀತಿಯಲ್ಲಿ ಜನರು ಮಾಸ್ಕ್‌ಗಳನ್ನು ಕರೀದಿಸಲು ಮುಂದಾಗಿದ್ದು, ಮೆಡಿಕಲ್‌ ಸ್ಟೋರ್‌ಗಳಲ್ಲಿ ಮಾಸ್ಕ್‌ಗಳೇ ಸಿಗದಂತಹ ರೀತಿಯಲ್ಲಿ ಮಾರಾಟವಾಗುತ್ತಿವೆ. ಈ ಸಂದರ್ಭವನ್ನೇ ತಮ್ಮ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಂಡಿರುವ ಅಂಗಡಿಗಳ ಮಾರಾಟಗಾರರು ಮಾಸ್ಕ್‌ಗಳ ಬೆಲೆಯನ್ನು ತಮಗಿಚ್ಚಿಸಿದ ಬೆಲೆಗೆ ಏರಿಕೆ ಮಾಡಿದ್ದಾರೆ.

ಸಾಮಾನ್ಯವಾಗಿ ಸರ್ಜಿಕಲ್‌ ಮಾಸ್ಕ್‌ಗಳ ಬೆಲೆ 10 -12 ರೂಗಳಷ್ಟೇ ಇರುತ್ತಿದೆ. ಆದರೆ, ಈಗ ಈ ಮಾಸ್ಕ್‌ಗಳ ಬೆಲೆಯನ್ನು 50 ರೂಗಳಿಗೆ ಏರಿಸಲಾಗಿದೆ. 200-250 ರೂಗಳಿಗೆ ದೊರೆಯುತ್ತಿದ್ದ ಎನ್‌-95 ನಂತಹ ಮಾಸ್ಕ್‌ಗಳ ಬೆಲೆ 500ರ ಗಡಿ ದಾಟಿ ಮಾರಾಟವಾಗುತ್ತಿವೆ. ಮಾಸ್ಕ್‌ಗಳ ಬೆಲೆಗಳನ್ನು ಹಿಗ್ಗಾಮುಗ್ಗಾ ಏರಿಕೆ ಮಾಡಿದ್ದರು, ಜೀವ ಭಯದಿಂದ ಜನರು ಮಾಸ್ಕ್‌ಗಳನ್ನು ಖರೀದಿಸುತ್ತಿದ್ದಾರೆ. ವೈದ್ಯರಿಗೇ ಮಾಸ್ಕ್‌ಗಳು ಸಿಗದಂತಹ ರೀತಿಯಲ್ಲಿ ಮಾಸ್ಕ್‌ಗಳ ಮಾರಾಟವಾಗುತ್ತಿದೆ.

ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಆಸ್ಪತ್ರೆಗಳಲ್ಲಿ ಐಸೋಲೇಟೆಡ್‌ ವಾರ್ಡ್‌ಗಳನ್ನು ರೂಪಿಸಲಾಗುತ್ತಿದ್ದು, ಕೊರೋನಾ ವೈರಸ್‌ಗೆ ಚಿಕಿತ್ಸೆ ನೀಡಲು ಕಾಶ್ಮೀರಿ ಆಸ್ಪತ್ರೆಗಳು ಸಜ್ಜಾಗುತ್ತಿದೆ.

ಕೊರೋನಾ ಭಯದಲ್ಲಿ ಮಾಸ್ಕ್‌ಗಳಿಗೆ ಹಣ ಸುರಿಯುತ್ತಿರುವ ಜನರಿಗೆ ಕಡಿಮೆ ಬೆಲೆಯಲ್ಲಿ ಮಾಸ್ಕ್‌ಗಳನ್ನು ಒದಗಿಸುವ ವ್ಯವಸ್ಥೆ ಮಾಡಬೇಕಾದ ಸರ್ಕಾರಗಳು ನಿರಾಯಾಸವಾಗಿ ಕಾಲಹರಣ ಮಾಡುತ್ತಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights