ಮನಮೋಹಕ ಕಲ್ಲತ್ತಿಗಿರಿ ಜಲಪಾತ..! ಆನೆಯ ಆಕಾರದಲ್ಲಿ ಹರಿಯೋ ನೀರಿಗೆ ಧಾರ್ಮಿಕ ನಂಬಿಕೆ

ವರ್ಷಪೂರ್ತಿ ಧಾರಾಕಾರವಾಗಿ ಹರಿಯೋ ಆ ನೀರು ಎಲ್ಲಿಂದ ಬರ್ತಿದೆ ಅನ್ನೋದೇ ನಿಗೂಢ. ಆನೆಯ ಆಕಾರದಲ್ಲಿ ಹರಿಯೋ ನೀರಿಗೆ ಧಾರ್ಮಿಕ ನಂಬಿಕೆಯೂ ಸಾಕಷ್ಟಿದೆ. ಪ್ರವಾಸಿ ತಾಣ ಹಾಗೂ ಧಾರ್ಮಿಕ ಕ್ಷೇತ್ರವಾಗಿರೋ ಕಲ್ಲತ್ತಿಗರಿ ಜಲಪಾತಕ್ಕೆ ದಿನಂ ಪ್ರತಿ ಸಾವಿರಾರು ಪ್ರವಾಸಿಗರು ಭೇಟಿ ನೀಡ್ತಾರೆ. ಮಳೆಗಾಲವಾದ್ದರಿಂದ ಮೈದುಂಬಿ ಹರಿಯುತ್ತಿರೋ ಈ ಜಲಪಾತ ಎಲ್ಲರನ್ನೂ ತನ್ನತ್ತ ಕೈಬೀಸಿ ಕರೆಯುತ್ತಿದೆ.

ಗುಡ್ಡದ ತುತ್ತ ತುದಿಯಿಂದ ಹರಿಯುತ್ತಿರೋ ಈ ಜಲಧಾರೆ ಇರೋದು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ. ಧುಮ್ಮಿಕ್ಕೋ ಈ ಜಲಪಾತ ಹತ್ತಾರು ಕಿ.ಮೀ. ಹರಿದು ಕೆಳಗೆ ಬರುವಷ್ಟರಲ್ಲಿ ಕಲ್ಲತ್ತಿಗರಿ ಜಲಪಾತವಾಗಿ ರೂಪುಗೊಳ್ಳುತ್ತದೆ. ಈ ಜಲಪಾತ ಇತಿಹಾಸದಲ್ಲಿ ಬತ್ತಿದ ಉದಾಹರಣೆ ಇಲ್ಲ. ಬೆಟ್ಟ-ಗುಡ್ಡಗಳ ನಡುವೆ ಔಷಧಿ ಶಕ್ತಿಯುಳ್ಳ ಮರಗಿಡಗಳ ನಡುವೆ ಹರಿದು ಬರೋ ಈ ನೀರಿನಲ್ಲಿ ಸ್ನಾನ ಮಾಡಿದ್ರೆ ಕೆಲ ಖಾಯಿಲೆ ಹಾಗೂ ಮೂಳೆ ಹಾಗೂ ಕೀಲು ಸಂಬಂಧಿ ಖಾಯಿಲೆಗಳು ಹುಷಾರುಗತ್ತೆ ಅನ್ನೋದು ಜನರ ನಂಬಿಕೆ. ಆನೆ ಆಕಾರದಲ್ಲಿರೋ ಈ ಜಲಪಾತಕ್ಕೆ ಧಾರ್ಮಿಕವಾಗಿಯೂ ಇತಿಹಾಸವಿದೆ. ಆದ್ರೆ, ಇಲ್ಲಿಗೆ ಬರೋರಲ್ಲಿ ಪ್ರವಾಸಿಗರೇ ಹೆಚ್ಚು. ರಾಜ್ಯದ ಬಹುತೇಕ ಜಿಲ್ಲೆಯ ಶಾಲಾ ಮಕ್ಕಳಿಗೆ ಈ ಕಲ್ಲತ್ತಿಗಿರಿ ಚಿರಪರಿಚಿತ. ಕೇವಲ ಮಕ್ಕಳಲ್ಲದೇ ಕುಟುಂಬ ಸಮೇತರಾಗಿ ಆಗಮಿಸಿ ಸಖತ್ ಎಂಜಾಯ್ ಮಾಡ್ತಾರೆ.

 

ಶತಮಾನಗಳಿಂದ ಹರಿಯುತ್ತಿರೋ ಈ ಜಲಪಾತದ ಬಳಿ ದತ್ತಾತ್ರೇಯ, ಈಶ್ವರ-ಪಾರ್ವತಿ ಹಾಗೂ ಗಣಪತಿಯ ಜೊತೆ ಬೇಲೂರು ಚನ್ನಕೇಶವ ಸೇರಿದಂತೆ ಶಿಲಾಬಾಲಿಕ ಮೂರ್ತಿಗಳು ಉದ್ಭವವಾಗಿವೆ. ಇತಿಹಾಸ ಹಾಗೂ ಪುರಾಣಗಳ ಪ್ರಕಾರ ನರಮನುಷ್ಯರು ಈ ಕ್ಷೇತ್ರಕ್ಕೆ ಬಂದು ಈ ಪವಿತ್ರ ಗಂಗೆಯಲ್ಲಿ ಸ್ನಾನ ಮಾಡಿ, ಇಲ್ಲಿನ ವೀರಭದ್ರ ಸ್ವಾಮಿಗೆ ಪೂಜೆ ಸಲ್ಲಿಸಿದ್ರೆ ಅವರ ಪಾಪ ಕರ್ಮಗಳೆಲ್ಲಾ ಪರಿಹಾರ ಆಗುತ್ತೆ ಅನ್ನೋದು ಸ್ಥಳಿಯರ ನಂಬಿಕೆ. ಪವಿತ್ರ ಗಂಗೆಯಾಗಿರೋ ಈ ಕ್ಷೇತ್ರದಲ್ಲಿ ಕಲ್ಲಿನ ಗುಹೆಯೊಳಗೆ ವೀರಭದ್ರನ ಮೂರ್ತಿ ಕೂಡ ಉದ್ಭವವಾಗಿದೆ. ಈ ಕ್ಷೇತ್ರದಲ್ಲಿ ಸ್ನಾನ ಮಾಡಿ, ಪೂಜೆ ಸಲ್ಲಿಸಿದ್ರೆ ವೀರಭದ್ರಸ್ವಾಮಿ ನರಮನುಷ್ಯರ ಮೈಮೇಲೆ ಬರುವಂತಹಾ ದುಷ್ಟಶಕ್ತಿಗಳನ್ನ ಸರ್ವನಾಶ ಮಾಡ್ತಾನೆ ಅನ್ನೋದು ಸ್ಥಳಿಯರ ನಂಬಿಕೆ. ಅದಕ್ಕಾಗಿ ದಿನಂ ಪ್ರತಿ ಈ ಕ್ಷೇತ್ರದಲ್ಲಿ ಹತ್ತಾರು ಜನ ದೇವರಗಳನ್ನ ಕರೆತಂದು ಪೂಜೆ-ಕೈಂಕರ್ಯ ಕೈಗೊಳ್ತಾರೆ. ಪ್ರಕೃತಿಯ ಸೌಂದರ್ಯ ಕಂಡು ಪುಳಕಿತರಾಗ್ತಾರೆ..

ಒಟ್ಟಾರೆ, ಕಲ್ಲತ್ತಿಗಿರಿ ಕ್ಷೇತ್ರದ ಜಲಪಾತ ಹತ್ತಾರು ಆಶ್ಚರ್ಯಗಳಿಗೆ ಸಾಕ್ಷಿಯಾಗಿದೆ. ಮೂಲವೇ ಗೊತ್ತಿಲ್ಲದ ಗಂಗೆಯ ಉಗಮ ಸ್ಥಾನ ಒಂದೆಡೆಯಾದ್ರೆ, ದುಷ್ಟಶಕ್ತಿಗಳನ್ನ ದೂರ ಮಾಡೋ ದೈವಶಕ್ತಿಗೆ ಈ ಕ್ಷೇತ್ರ ಹೆಸರುವಾಸಿಯಾಗಿದೆ. ಪ್ರವಾಸಕ್ಕೂ ಸೈ, ಧಾರ್ಮಿಕ ನಂಬಿಕೆಗೆ ಸೈ ಅನ್ನೋ ಈ ಕ್ಷೇತ್ರ ಕಾಫಿನಾಡಿನ ವೈಭವಕ್ಕೆ ಹಿಡಿದ ಕೈಗನ್ನಡಿ ಅಂದ್ರೆ ತಪ್ಪಲ್ಲ. ಆದ್ರೆ, ಇಲ್ಲಿನ ಮೂಲಭೂತ ಸಮಸ್ಯೆಗಳತ್ತ ಸರ್ಕಾರ ಗಮನ ಹರಿಸಬೇಕು ಅನ್ನೋದು ಎಲ್ಲರ ಒತ್ತಾಯವಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights