ಮಲೆನಾಡಿಗೆ ಬರ್ತಿಲ್ಲ ಪ್ರವಾಸಿಗರು : ಪ್ರವಾಸಿಗರಿಲ್ಲದೆ ನಲುಗಿದ ಹೋಂ ಸ್ಟೇ, ರೆಸಾರ್ಟ್, ಲಾಡ್ಜ್ ಮಾಲೀಕರು
ಒಂದೆಡೆ ಮಳೆ ಭಯ. ಮತ್ತೊಂದೆಡೆ ರಣಗಾಳಿಯ ಆತಂಕ. ಕುಸಿಯುತ್ತಿರೋ ಬೆಟ್ಟ-ಗುಡ್ಡಗಳು. ಬಾಯ್ಬಿಟ್ತಿರೋ ಭೂಮಿ. ಧರೆಗುರುಳುತ್ತಿರೋ ಬೃಹತ್ ಮರಗಳು. ಮಲೆನಾಡಲ್ಲಿ ಎರಡ್ಮೂರು ತಿಂಗಳು ಸುರಿದ ಮಳೆಗೆ ಮಲೆನಾಡಿನ ಆರ್ಥಿಕ ವ್ಯವಸ್ಥೆಯೇ ಅಲ್ಲೋಲ-ಕಲ್ಲೋಲವಾಗಿದೆ. ನಿರಂತರವಾಗಿ ಸುರಿದ ದೈತ್ಯ ಮಳೆಗೆ ಮಲೆನಾಡಿನ ನಿತ್ಯಸುಮಂಗಲಿ ದೇಗುಲಗಳಲ್ಲೂ ಅನಾಥ ಪ್ರಜ್ಞೆ ಕಾಡ್ತಿದೆ. ಮಳೆ ಬಂದಾಗ್ಲು ಕಷ್ಟ. ನಿಂತಾಗ್ಲು ಕಷ್ಟ. ವ್ಯವಹಾರದಲ್ಲಿ ನಷ್ಟ. ಮಲೆನಾಡಲ್ಲಾದ ಪ್ರಕೃತಿ ವಿಕೋಪಕ್ಕೆ ಕಾಫಿನಾಡಿನ ಅರ್ಥ ವ್ಯವಸ್ಥೆಯೇ ಬುಡಮೇಲಾಗಿದೆ.
ಹೌದು, ಅತ್ತ, ಕಾಫಿನಾಡಿನ ಮಲೆನಾಡು ಭಾಗದಲ್ಲಿ ಸುರಿದ ಭಾರೀ ಮಳೆಗೆ ಕಾಫಿ, ಮೆಣಸು, ಅಡಿಕೆ, ಭತ್ತ ನೀರಲ್ಲಿ ಕೊಚ್ಚಿ ಹೋಗಿದ್ರೆ, ಇತ್ತ ಪ್ರವಾಸೋಧ್ಯಮ ಕೂಡ ಸಂಪೂರ್ಣ ನೆಲಕಚ್ಚಿದೆ. ಮಲೆನಾಡಿನ ಸೌಂದರ್ಯ ಸವಿಯೋಕೆ ದೇಶ-ವಿದೇಶದ ಪ್ರವಾಸಿಗ್ರು ಕಾಫಿನಾಡಿಗೆ ಬರ್ತಿದ್ರು. ಆದ್ರೆ, ಈ ವರ್ಷ ಮಲೆನಾಡ ಶಾಶ್ವತ ಮುತ್ತೈದೆಗೆ ವಿಧವಾ ಪ್ರಜ್ಞೆ ಕಾಡ್ತಿದೆ. ಮಲೆನಾಡಲ್ಲಿ ಎಲ್ಲೆಂದರಲ್ಲಿ ನೀರು. ಬೆಟ್ಟ-ಗುಡ್ಡ-ಭೂಮಿ ಎಲ್ಲಾ ಕುಸಿಯುತ್ತಿರೋದ್ರಿಂದ ಕಾಫಿನಾಡಿಗೆ ಬರೋ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ಕಾಫಿನಾಡಿನ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ದತ್ತಪೀಠ, ದೇವರಮನೆ ಗುಡ್ಡ, ಶೃಂಗೇರಿ, ಹೊರನಾಡು, ಕಳಸ ಸೇರಿದಂತೆ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡೋ ಭಕ್ತರ ಸಂಖ್ಯೆ ಇಳಿಮುಖವಾಗಿದ್ದು, ಹೋಟೆಲ್, ಹೋಂಸ್ಟೇ, ರೆಸಾರ್ಟ್, ಲಾಡ್ಜಿಂಗ್ ನೆಚ್ಚಿಕೊಂಡು ಬದುಕು ಸಾಗಿಸ್ತಿದ್ದ ಮಧ್ಯಮ ವರ್ಗದ ಜನರ ಬದುಕು ಕೂಡ ಅತಂತ್ರವಾಗಿದ್ದು, ಮಳೆ ಅನ್ನೋ ಎರಡಕ್ಷರದಿಂದ ಕಾಫಿನಾಡಿನ ಅರ್ಥಿಕತೆಯ ಕಂಗೆಟ್ಟಿದೆ.
ಪ್ರತಿ ವರ್ಷ ಜುಲೈ ನಿಂದ ನವಂಬರ್ವರೆಗೂ ಕಾಫಿನಾಡಿನ ಪ್ರವಾಸಿ ತಾಣಗಳು ಝಗಮಗಿಸುತ್ತಿದ್ವು. ಆದ್ರೆ, ಎರಡ್ಮೂರು ತಿಂಗಳ ಮಳೆ ಹಾಗೂ ಆಗಸ್ಟ್ ತಿಂಗಳಲ್ಲಿ ಸುರಿದ ಮಹಾಮಳೆಯಿಂದ ಉಂಟಾದ ಪ್ರಕೃತಿ ವಿಕೋಪದಿಂದ ಮಲೆನಾಡು ಅಕ್ಷರಶಃ ತತ್ತರಿಸಿದ್ದು, ಪ್ರವಾಸಿ ತಾಣಗಳಿಗೆ ಪ್ರವಾಸಿಗರೇ ಇಲ್ಲದಂತಾಗಿದೆ. ಮಲೆನಾಡಲ್ಲಿ ಮಳೆ ನಿಂತ ಮೇಲೂ ಬೆಟ್ಟ-ಗುಡ್ಡಗಳು ಕುಸಿಯುತ್ತಿದ್ದು, ಭೂಮಿ ಬಾಯ್ಬಿಡ್ತಿರೋದು ಕಾಫಿನಾಡಿಗೆ ಬರೋ ಪ್ರವಾಸಿಗರನ್ನ ಹಿಂದೇಟು ಹಾಕುವಂತೆ ಮಾಡಿದ್ದು, ಪ್ರವಾಸೋಧ್ಯಮವನ್ನೆ ನೆಚ್ಚಿಕೊಂಡು ಬದುಕ್ತಿದ್ದ ಟೂರಿಸ್ಟ್ ವಾಹನಗಳ ಬದುಕು ಕೂಡ ಮಳೆಯಲ್ಲಿ ಕೊಚ್ಚಿ ಹೋಗಿದೆ. ಮೂರು ತಿಂಗಳಿಂದ ಗಾಡಿ ತರೋದು ಟ್ಯಾಕ್ಸಿ ಸ್ಟ್ಯಾಂಡ್ನಲ್ಲಿ ನಿಲ್ಲಿಸೋದು ಸಂಜೆ ಮನೆಗೆ ಹೋಗೋದು ಮಾಮೂಲಿಯಾಗಿದೆ. ಸದ್ಯ ಮಲೆನಾಡು ಸಹಜ ಸ್ಥಿತಿಗೆ ಮರಳಿದ್ದು, ಮಲೆನಾಡ ಸೊಬಗನ್ನ ಸವಿಯಲು ಮತ್ತೆ ಬನ್ನಿ ಅಂತಾ ಪ್ರವಾಸಿಗರನ್ನ ಆಹ್ವಾನಿಸಿದ್ದಾರೆ..
ಒಟ್ಟಾರೆ, ಮಳೆ ಬರಲಿ, ಬಾರದಿರಲಿ, ಕಾಫಿನಾಡಿಗೆ ಬರೋ ಪ್ರವಾಸಿಗರ ಸಂಖ್ಯೆಗೇನು ಕೊರತೆ ಇರ್ತಿರ್ಲಿಲ್ಲ. ಆದ್ರೆ, ಈ ಬಾರಿ ಆಗಸ್ಟ್ ತಿಂಗಳಲ್ಲಿ ಸುರಿದ ಮಹಾಮಳೆಗೆ ಪ್ರವಾಸಿರು ಬೆಚ್ಚಿ ಬಿದ್ದಿರೋದ್ರಲ್ಲಿ ಅನುಮಾನವಿಲ್ಲ. ಮಲೆನಾಡಲ್ಲಿ ಮಳೆ ಬರುವಾಗ ಒಂದು ರೀತಿಯ ಕಷ್ಟ. ಮಳೆ ನಿಂತ ಮೇಲೆ ಮತ್ತೊಂದು ರೀತಿಯ ಕಷ್ಟ ಎದುರಾಗಿದೆ. ಆದ್ರೆ, ಮಳೆಯಿಂದ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳು ಮಣ್ಣು ಪಾಲಾಗಿದ್ರೆ, ಪ್ರವಾಸೋಧ್ಯಮವನ್ನೇ ನೆಚ್ಚಿಕೊಂಡು ಬದುಕ್ತಿದ್ದೋರ ಬದುಕು ಕೂಡ ಅತಂತ್ರವಾಗಿರೋದ್ರಲ್ಲಿ ಅನುಮಾನವಿಲ್ಲ.