ರೈತರಿಗೆ ಹೊಸ ವರ್ಷದ ಗಿಫ್ಟ್ : ಹಾಲಿನ ದರ ಹೆಚ್ಚಿಸಿದ ಹೆಚ್,ಡಿ,ರೇವಣ್ಣ
ಹೊಸ ವರ್ಷದ ಹಿನ್ನೆಲೆ ಹಾಸನದಲ್ಲಿ ಮಾಜಿ ಸಚಿವ ಮತ್ತು ಹಾಸನ ಹಾಲು ಒಕ್ಕೂಟದ ಅಧ್ಯಕ್ಷ ಹೆಚ್,ಡಿ,ರೇವಣ್ಣ ಹಾಲಿನ ದರ ಹೆಚ್ಚಳ ಮಾಡಿ ರೈತರಿಗೆ ಗಿಫ್ಟ್ ಕೊಟ್ಟಿದ್ದಾರೆ.
ಹಾಸನ ಹಾಲು ಒಕ್ಕೂಟದಿಂದ ಪ್ರತೀ ಲೀಟರ್ ಹಾಲಿಗೆ 1.50 ರೂ ಹೆಚ್ಚಳ ಮಾಡಿದ್ದಾರೆ. ಪ್ರತೀ ಲೀಟರ್ ಹಾಲಿಗೆ 29 ರೂ ದರ ನಿಗದಿಪಡಿಸಲಾಗಿದೆ. ಮಾರ್ಚ್ ಅಂತ್ಯದವರೆಗೆ 25 ಕೋಟಿ ಹಣ ಹೆಚ್ಚುವರಿಯಾಗಲಿದೆ. ಒಟ್ಟು 15 ಕೋಟಿ ಲಾಭ ಬಂದಿದೆ. 30 ಸಾವಿರ ಹಾಲು ಉತ್ಪಾದಕರ 50 ಸಾವಿರ ರಾಸುಗಳಿಗೆ ಒಕ್ಕೂಟದಿಂದ ವಿಮೆ ನೀಡಲಾಗುವುದು.
150 ಕೋಟಿ ವೆಚ್ಚದಲ್ಲಿ ಪ್ರತೀ ಗಂಟೆಗೆ 30 ಸಾವಿರ ಪೆಟ್ ಬಾಟಲ್ ತಯಾರಿಸುವ ಘಟಕ ನಿರ್ಮಾಣ ಮಾಡಲಾಗಿದೆ. ಜರ್ಮನಿಯಿಂದ ಪೆಟ್ ಬಾಟಲ್ ಘಟಕದ ಯಂತ್ರ ತರಿಸಲಾಗಿದೆ. ದಕ್ಷಿಣ ಭಾರತದಲ್ಲಿಯೇ ಮೊದಲ ಬಾರಿಗೆ ಹಾಸನದಲ್ಲಿ ಪೆಟ್ ಬಾಟಲ್ ಘಟಕ ನಿರ್ಮಾಣ ಮಾಡಲಾಗಿದೆ. ಏಪ್ರಿಲ್ ನಿಂದ ಪೆಟ್ ಬಾಟಲ್ ಘಟಕ ಕಾರ್ಯಾರಂಭಗೊಳ್ಳಲಿದೆ.
2018 -19 ನೇ ಸಾಲಿನಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಕೃಷಿ ಪ್ರಶಸ್ತಿ ನೀಡಲಾಗಿತ್ತು. ಕೃಷಿ ಉತ್ಪಾದನೆಯಲ್ಲಿ ದೇಶದಲ್ಲಿಯೇ ರಾಜ್ಯಕ್ಕೆ ನಂಬರ್ ಒನ್ ಸ್ಥಾನ ಬಂದಿದೆ.
ಶ್ರೀರಾಮುಲು ಉಪ ಮುಖ್ಯಮಂತ್ರಿ ಮಾಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ರೇವಣ್ಣ ಜಿಲ್ಲೆಗೆ ಒಬ್ಬೊಬ್ಬ ಉಪ ಮುಖ್ಯಮಂತ್ರಿ ಮಾಡಲಿ ನಮಗೇನು ಯಾರನ್ನಾದ್ರೂ ಮಾಡಲಿ ನಮ್ಮದೇನು ಅಭ್ಯಂತರವಿಲ್ಲಾ ಎಂದು ವ್ಯಂಗ್ಯವಾಡಿದ್ದಾರೆ.