ಫ್ಯಾಕ್ಟ್‌ಚೆಕ್ : ಸಾಯಿಬಾಬಾ ಮುಸ್ಲಿಂ ಎಂಬುದು ನಿಜವೇ?

ಸಾಯಿಬಾಬಾರ ಭಕ್ತರು ಅವರನ್ನು ದೈವಿಕ ರೂಪವೆಂದು ಪೂಜಿಸುತ್ತಾರೆ. ಕೆಲವರು ಸಾಯಿಬಾಬಾರನ್ನು ಹಿಂದೂ ಎಂದು ಕರೆಯುತ್ತಾರೆ, ಕೆಲವರು ಅವರನ್ನು ಮುಸ್ಲಿಂ ಎಂದು ಕರೆಯುತ್ತಾರೆ. ಎಲ್ಲಾ ಧರ್ಮದವರೂ ಸಾಯಿಬಾಬಾರವರ ಮೇಲೆ ನಂಬಿಕೆ ಇಡಲು ಇದೂ ಒಂದು ಕಾರಣವಾಗಿದೆ. ಆದರೆ ಈಗ ಸಾಯಿಬಾಬಾ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತಿದ್ದು ಸಾಯಿಬಾಬಾ ಮುಸ್ಲಿಂ ಎಂಬುದು ಖಚಿತವಾಗಿದೆ ಎಂದು ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

“ಸಾಕ್ಷ್ಯದ ಆಧಾರದಲ್ಲಿ ಸಾಯಿಬಾಬಾ ಮುಸ್ಲಿಂ ಎಂದು ಸಾಬೀತಾಯಿತು. ಸುಪ್ರೀಂ ಕೋರ್ಟ್‌ನಲ್ಲಿ ಸ್ವಾಮಿ ಸ್ವರೂಪಾನಂದ ಸರಸ್ವತಿಯ ಕ್ಷಮೆಯಾಚಿಸಿದ ಸಾಯಿ ಟ್ರಸ್ಟ್  ಹಿಂದೂಗಳು ಎಲ್ಲಾ ದೇವಾಲಯಗಳಿಂದ ಸಾಯಿಬಾಬಾರವರ ವಿಗ್ರಹವನ್ನು ತೆಗೆಯಲು ಪ್ರಾರಂಭಿಸಿದ್ದಾರೆ. ಅಬ್ದುಲ್ ರ ಮಕ್ಕಳು ಮಾತ್ರ ಸಾಯಿಬಾಬಾನನ್ನು ಪೂಜಿಸುತ್ತಾರೆ” ಎಂಬ ಬರಹದೊಂದಿಗೆ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ವಿಡಿಯೋದಲ್ಲಿ ಹಿಂದೂ ರಾಷ್ಟ್ರ ಶಕ್ತಿ ಕಾರ್ಯಕರ್ತರು, ‘ಶಿರಡಿ ಸಾಯಿಬಾಬ ಮುಸ್ಲಿಂ ಸಮುದಾಯಕ್ಕೆ ಸೇರಿದವರಾದ್ದರಿಂದ ಹಿಂದೂ ದೇವಸ್ಥಾನಗಳಲ್ಲಿ ಅವರ ಮೂರ್ತಿಗಳನ್ನು ತೆಗೆಯಬೇಕು’ ಎಂದು ಒತ್ತಾಯಿಸಿ ಮನವಿ ಪತ್ರ ಸಲ್ಲಿಸುವುದನ್ನು ನೋಡಬಹುದಾಗಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್ ಚೆಕ್

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾನೆಯನ್ನು ಪರಿಶೀಲಿಸಲು ಮೊದಲು ಸಾಯಿಬಾಬಾ ಅವರ ವಿಗ್ರಹಗಳನ್ನು ತೆಗೆಯುತ್ತಿರುವ ಬಗ್ಗೆ ಸರ್ಚ್ ಮಾಡಿದಾಗ, ದಕ್ಷಿಣ ದೆಹಲಿಯ ಶಾಹ್‌ಪುರ ಜಾತ್‌ನಲ್ಲಿ ಪುರಾನ ಶಿವ ಮಂದಿರ ದೇವಾಲಯದಲ್ಲಿನ ಶಿರಡಿ ಸಾಯಿಬಾಬಾ ಮೂರ್ತಿಯನ್ನು ಮಾರ್ಚ್ 25, 2021 ರಂದು ಧ್ವಂಸಗೊಳಿಸಿರುವ ದಿ ಸ್ಕ್ರೋಲ್ ವರದಿ ಲಭ್ಯವಾಗಿದೆ.

ಈತ ದೇವರಲ್ಲ, ಈತ 1918ರಲ್ಲಿಯೇ ಮರಣ ಹೊಂದಿದ್ದಾನೆ. ಈತ ಮುಸ್ಲಿಂ ಆಗಿದ್ದು, ಮುಲ್ಲಾ ಇವನು” ಎಂದು ಹೇಳುತ್ತಾ ದೇವಸ್ಥಾನದಲ್ಲಿನ ಶಿರಡಿ ಸಾಯಿಬಾಬಾರ ಮೂರ್ತಿಯನ್ನು ಹಾರೆ ಮತ್ತು ಸುತ್ತಿಗೆಗಳಿಂದ ಧ್ವಂಸಗೈಯುವ ವಿಡಿಯೋವನ್ನು ಲಲ್ಲನ್‌ಟಾಪ್ ಯೂಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಿರುವುದು ಕಂಡು ಬಂದಿದೆ. ಆನಂತರಲ್ಲಿ ಅಲ್ಲಿ ಗಣಪತಿ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ ಎಂದು ಅಲ್ಲಿನ ಭಕ್ತರು ಪೊಲೀಸ್ ದೂರು ಸಹ ದಾಖಲಿಸಿದ್ದಾರೆ.

ಸಾಯಿಬಾಬ ವಿವಾದದ ಬಗ್ಗೆ ಮತ್ತಷ್ಟು ಹುಡುಕಿದಾಗ ಜೂನ್ 2014ರಲ್ಲಿ ಪ್ರಕಟಗೊಂಡ ಹಲವು ವರದಿಗಳು ಕಂಡುಬಂದಿವೆ. ಮಧ್ಯಪ್ರದೇಶದ ದ್ವಾರಕ ಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಎಂಬುವವರು ಸಾಯಿಬಾಬ ಹಿಂದೂ ಅಲ್ಲ ಬದಲಿಗೆ ಮುಸ್ಲಿಂ. ಹಿಂದೂಗಳು ಯಾರೂ ಅವರನ್ನ ಪೂಜಿಸಬಾರದು ಎಂದು ಹೇಳಿಕೆ ನೀಡಿರುವುದು ಆಜ್ ತಕ್ ಚಾನೆಲ್‌ನಲ್ಲಿ ವರದಿಯಾಗಿದೆ.

ಅಲ್ಲದೇ ಚತ್ತೀಸ್‌ಘಡದ ರಾಯ್ಪುರದಲ್ಲಿ ಆಗಸ್ಟ್ 26, 2014ರಲ್ಲಿ ನಡೆದ ಧರ್ಮ ಸಂಸದ್‌ನಲ್ಲಿ ಸಾಯಿಬಾಬರನ್ನು ಹಿಂದೂಗಳು ಪೂಜಿಸಬಾರದು ಎಂದು ನಿರ್ಣಯ ಅಂಗೀಕರಿಸಲಾಗಿದೆ ಎಂದು ದಿ ಹಿಂದೂ ವರದಿ ಮಾಡಿದೆ. ಇದರಿಂದ ಆಕ್ರೋಶಗೊಂಡ ಸಾಯಿ ಬಾಬ ಭಕ್ತರು ಸ್ಥಳದಲ್ಲಿಯೇ ವಾಗ್ವಾದ ನಡೆಸಿದರು ಎಂದು ವರದಿಯಲ್ಲಿ ಹೇಳಲಾಗಿದೆ.

ತದನಂತರ ಮುಂಬೈನ ಸಾಯಿ ಬಾಬಾ ಟ್ರಸ್ಟ್ “ಸಾಯಿಬಾಬಾರವರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಬಾರದೆಂದು ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿಯವರಿಗೆ ನಿರ್ದೇಶನ ನೀಡಬೇಕು” ಎಂದು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿತ್ತು. ಅಲ್ಲದೇ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ಹೈಕೋರ್ಟ್‌ಗಳಲ್ಲಿ ಸಾಯಿಬಾಬ ವಿರುದ್ಧ ಅವಹೇಳನಕಾರಿ ಹೇಳಿಕೆ  ನೀಡಿದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿಯವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಅರ್ಜಿ ಸಲ್ಲಿಸಿತ್ತು. “ಗೋವಿಂದ ರಘುನಾಥ್ ದಾಭೋಲ್ಕರ್ ಅವರು ಮರಾಠಿಯಲ್ಲಿ ಬರೆದಿರುವ ಶ್ರೀ ಸಾಯಿ ಸಚ್ಚರಿತ್ರವನ್ನು ಶಿರಡಿಯಲ್ಲಿರುವ ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ಪ್ರಕಟಿಸಿದೆ. ಈ ಗ್ರಂಥವನ್ನು ಸಾಯಿಬಾಬಾ ಅವರ ಅನುಯಾಯಿಗಳು ಪವಿತ್ರ ಗ್ರಂಥವೆಂದು ಪೂಜಿಸುತ್ತಾರೆ. ಪಠಾರಿ ಗ್ರಾಮದಲ್ಲಿ ಜನಿಸಿದ ಸಾಯಿಬಾಬಾ ಮುಸ್ಲಿಮರಾಗಿದ್ದರು ಎಂದು ಹೇಳಲು  ಪುರಾವೆಗಳಿಲ್ಲ ಎಂಬುದು ಈ ಪುಸ್ತಕದಿಂದ ಸ್ಪಷ್ಟವಾಗಿದೆ. ಸಾಯಿಬಾಬಾ ಹಿಂದೂ (ಬ್ರಾಹ್ಮಣ) ಆಗಿದ್ದರಿಂದ ಅಂತಹ ಯಾವುದೇ ಪುರಾವೆಗಳು ಸಹ ಇರುವುದಿಲ್ಲ. ಸಾಯಿಬಾಬಾ ಚಿಕ್ಕವನಿದ್ದಾಗ ಹೆತ್ತವರು ಮುಸ್ಲಿಂ ಫಕೀರನಿಗೆ ಹಸ್ತಾಂತರಿಸಿದರು” ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಸಾಯಿಬಾಬಾ ಟ್ರಸ್ಟ್ ಸಲ್ಲಿಸಿದ್ದ ಪಿಐಎಲ್ ಅನ್ನು ಸುಪ್ರಿಂ ಕೋರ್ಟ್ ವಿಚಾರಣೆಗೆ ತೆಗೆದುಕೊಳ್ಳಲು ನಿರಾಕರಿಸಿ, ಸಾಯಿಬಾಬಾ ಭಕ್ತರ ಪೂಜೆಗೆ ಯಾರಾದರೂ  ಅಡ್ಡಿಪಡಿಸಿದರೆ, ಅವಹೇಳನ ಮಾಡಿದರೆ ಶಂಕರಾಚಾರ್ಯರ ವಿರುದ್ಧ ಸಿವಿಲ್ ಮೊಕದ್ದಮೆ ಅಥವಾ ಕ್ರಿಮಿನಲ್ ಮೊಕದ್ದಮೆ ಹೂಡಬಹುದು ಎಂದು ಹೇಳಿತ್ತು. ಅದರ ವರದಿಯಲ್ಲಿ ಇಲ್ಲಿ ಓದಬಹುದು.

ಆನಂತರ ಲವಕುಶ್ ವಿಹಾರ್ ಸಾಯಿ ಮಂದಿರದ ಸಂಸ್ಥಾಪಕ ರಾಜೇಶ್ ಭಾಯ್ ಮತ್ತು ಸುಖ್ಲಿಯಾ ಎಂಬುವವರು ಮಧ್ಯಪ್ರದೇಶ ಹೈಕೋರ್ಟ್‌ನಲ್ಲಿ ಶಂಕರಾಚಾರ್ಯರ ವಿರುದ್ಧ ದೂರು ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಮಧ್ಯ ಪ್ರದೇಶದ ಇಂದೋರ್ ವಿಭಾಗದ ಹೈಕೋರ್ಟ್ ಮುಂದೆ ಶಂಕರಾಚಾರ್ಯರು ಕ್ಷಮಾಪಣೆ ಕೇಳುವುದಾಗಿ ಬರೆದುಕೊಟ್ಟು ತಮ್ಮ ಮೇಲಿನ ಅರ್ಜಿಯನ್ನು ವಜಾ ಮಾಡಲು ಮನವಿ ಮಾಡಿದ್ದರು. ಜಸ್ಟಿಸ್ ಎಸ್‌ ಶರ್ಮಾರವರ ಮುಂದೆ ಕ್ಷಮಾಪಣೆ ಪತ್ರ ಬರೆದುಕೊಟ್ಟಿದ್ದರಿಂದ ತೃಪ್ತರಾದ ಅರ್ಜಿದಾರರು ಶಂಕರಾಚಾರ್ಯರ ವಿರುದ್ಧದ ದೂರನ್ನು ವಾಪಸ್ ಪಡೆದಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಅದನ್ನು ಇಲ್ಲಿ ಓದಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಸಾಯಿಬಾಬಾ ಮುಸ್ಲಿಂ ಎಂಬುದು ಸಾಕ್ಷ್ಯಾಧಾರದ ಮೂಲಕ ಸಾಭೀತಾಗಿದೆ ಎಂಬುದು ಸುಳ್ಳು. ಇದಕ್ಕೆ ಯಾವ ಆಧಾರಗಳೂ ಇಲ್ಲ. ಸಾಯಿ ಟ್ರಸ್ಟ್ ಸ್ವಾಮಿ ಸ್ವರೂಪಾನಂದ ಸರಸ್ವತಿಯ ಕ್ಷಮೆಯಾಚಿಸಿದೆ ಎಂಬುದು ಸಹ ಸುಳ್ಳು. ಬದಲಿಗೆ ಸ್ವಾಮಿ ಸ್ವರೂಪಾನಂದರವರೆ ಇಂದೋರ್ ಹೈಕೋರ್ಟ್ ಮುಂದೆ ಕ್ಷಮೆ ಕೇಳಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : “ಪೆರಿಯಾರ್‌ “ರನ್ನು ನೀಚ ಎಂದು ಸುಳ್ಳಿನ ಪೋಸ್ಟ್‌ ಹಂಚಿಕೊಂಡ ಬಲಪಂಥೀಯ ಮಹಿಳೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights