ಫ್ಯಾಕ್ಟ್‌ಚೆಕ್ : “ಪೆರಿಯಾರ್‌ “ರನ್ನು ನೀಚ ಎಂದು ಸುಳ್ಳಿನ ಪೋಸ್ಟ್‌ ಹಂಚಿಕೊಂಡ ಬಲಪಂಥೀಯ ಮಹಿಳೆ

ಡ್ರಾವಿಡ ಚಳವಳಿಯ ಪಿತಾಮಹ ಎಂದೇ ಹೆಸರಾಗಿರುವ ಇ.ವಿ.ರಾಮಸ್ವಾಮಿ ಪೆರಿಯಾರ್ ಅವರ ಕುರಿತು ಸನಾತನ ಎಂಬ ಎಕ್ಸ್‌ ಖಾತೆಯಿಂದ ಪೋಸ್ಟ್‌ವೊಂದನ್ನು ಹಂಚಿಕೊಂಡಿದೆ. ಪೆರಿಯಾರ್ ಯಾರು? ಎಂಬ ಪ್ರಶ್ನೆಯನ್ನಿಟ್ಟು ಅವರ ಜೀವನ ಮತ್ತು ವ್ಯಕ್ತಿತ್ವದ ಕುರಿತಾಗಿ ಒಂದು ಸಾಲಿನ ಉತ್ತರಗಳನ್ನು ತಾವೇ ನೀಡುತ್ತ ಹೋಗುತ್ತಾರೆ. ಅದೇ ಪೋಸ್ಟ್‌ಅನ್ನು ವೇದಾವತಿ ಎಂಬ ಬಲಪಂಥೀಯ ಪ್ರತಿಪಾದಕಿ ರೀ ಟ್ವೀಟ್ ಮಾಡುತ್ತಾ ಪೆರಿಯಾರ್‌ರನ್ನ ನೀಚ ಎಂದು ಕೋಟ್ ಮಾಡಿದ್ದಾಳೆ.

“ಇಂಥ ನೀಚನನ್ನ ಆದರ್ಶ ವ್ಯಕ್ತಿಗಳು ಅನ್ನೊರು ಇನ್ನೆಂಥ ಕುಲಗೆಟ್ಟವರಿರಬೇಕು!! ಬಾಕಿದ್ದೆಲ್ಲ ಹಾಳಾಗಲಿ ಕಡೆ ಪಕ್ಷ ಸಾಕುಮಗಳನ್ನ ಬಿಡಬೇಕಿತ್ತು ನೀಚ” ಎಂಬ ಹೇಳಿಕೆಯೊಂದಿಗೆ ವೇದಾವತಿ ಎಂಬುವವರು ಸನಾತನ ಹ್ಯಾಂಡಲ್‌ನಿಂದ ಹಂಚಿಕೊಂಡ ಪೋಸ್ಟ್‌ವೊಂದನ್ನು ಕೋಟ್ ಮಾಡಿ ರೀಟ್ವಿಟ್ ಮಾಡಿದ್ದಾರೆ.

ಸನಾತನ ಎಂಬ X ಖಾತೆಯಲ್ಲಿ ಯಾರು ಪೆರಿಯಾರ್? ಎಂಬ ಪ್ರಶ್ನೆಯನ್ನು ಹಾಕುತ್ತ, ಅವರ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಾ ಅವರು ತಮ್ಮ ದತ್ತ ಮಗಳನ್ನು ಮದುವೆಯಾಗಿದ್ದರು ಎಂದು ಪ್ರತಿಪಾದಿಸಿ ಪೋಸ್ಟ್‌ನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿರುವ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಪೆರಿಯಾರ್ ಎಂದ ಕೂಡಲೆ ಅವರ ವಿರೋಧಿಗಳಿಗೆ ( ಬ್ರಾಹ್ಮಣಶಾಹಿಗಳಿಗೆ) ತಕ್ಷಣ ನೆನಪಾಗುವ ಸುಳ್ಳು ಎಂದರೆ ಅವರು ತಮ್ಮ ದತ್ತು ಪುತ್ರಿಯನ್ನು ಮದುವೆಯಾದರು ಎಂಬ ಆಧಾರ ರಹಿತವಾದ ಸುಳ್ಳು. ಅವರು ನಿಜವಾಗಿಯೂ ತಮ್ಮ ಸಾಕು ಮಗಳನ್ನೆ ಮದುವೆಯಾಗಿದ್ದರಾ? ಎಂದು ಪರಿಶೀಲಿಸುವ ಮೊದಲು ಪೆರಿಯಾರ್ ನಿಲುವುಗಳು ಮತ್ತು ಅವರ ಬದುಕಿನ ಕುರಿತು ತಿಳಿದುಕೊಳ್ಳೋಣ.

ಬಲಪಂಥೀಯ ಪ್ರತಿಪಾದಕ ಹಿಂದುತ್ವವಾಗಿಗಳಿಗೆ ಪೆರಿಯಾರ್ ರಾಮಸ್ವಾಮಿ ಎಂದರೆ ನಂಜು ಕಾರುವುದು ಹೊಸೇಲ್ಲ. ಹಿಂದುತ್ವವಾದಿಗಳ ಅಸ್ಥಿತ್ವ ಇರುವುದೇ ಬ್ರಾಹ್ಮಣತ್ವದಲ್ಲಿ. ಬ್ರಾಹ್ಮಣಶಾಹಿ ವಿರೋಧಿಯಾಗಿದ್ದ ಪೆರಿಯಾರ್ ಯುವಕರಾಗಿದ್ದಾಗ ಆಸ್ತಿಕರಾಗಿದ್ದರು ಎಂಬುದು ವಿಶೇಷ. ಆದರೆ ಅವರ ಬದುಕಿನ 25ನೇ ವಯಸ್ಸಿನಲ್ಲಾದ ಒಂದು ಘಟನೆ ಅವರನ್ನು ನಾಸ್ತಿಕರಾಗುವಂತೆ ಮಾಡಿತ್ತು.

ಪೆರಿಯರ್ ಹಿಂದೂ ಧರ್ಮ ತ್ಯಜಿಸಲು ಕಾರಣವೇನು?

ಇವಿ ರಾಮಸ್ವಾಮಿ ಹಿಂದೂ ಧರ್ಮವನ್ನು ತಿರಸ್ಕರಿಸಲು, ದೇವರೆಂದರೆ ಉರಿದುಬೀಳಲು ಕಾರಣವಾದ ಘಟನೆಯನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು. 1904ರಲ್ಲಿ ಪೆರಿಯಾರ್ ಕಾಶಿ ವಿಶ್ವನಾಥನ ದರ್ಶನಕ್ಕೆ ಯಾತ್ರೆ ಹೋಗುತ್ತಾರೆ. ಆಗ ಅವರಿಗೆ 25 ವರ್ಷ ವಯಸ್ಸಿರಬಹುದು. ಹಿಂದೂಗಳ ಅತ್ಯಂತ ಪವಿತ್ರ ಯಾತ್ರಾ ಸ್ಥಳ ಎನಿಸಿದ ಕಾಶಿಯ ವಿಶ್ವನಾಥನ ಸನ್ನಿಧಿಯಲ್ಲಿ ನಡೆಯುತ್ತಿದ್ದ ಅನ್ಯಾಯ ಇವಿ ರಾಮಸ್ವಾಮಿಯನ್ನು ಬಡಿದೆಬ್ಬಿಸಿತ್ತು.

ಕಾಶಿಯಲ್ಲಿ ಬ್ರಾಹ್ಮಣರಿಗೊಂದು ಕ್ರಮ, ಅಬ್ರಾಹ್ಮಣರಿಗೊಂದು ಕ್ರಮ ಇತ್ತು. ಕಾಶಿಯ ಧರ್ಮಛತ್ರದಲ್ಲಿ ಉಚಿತ ಅನ್ನಸೇವೆ ಇತ್ತಾದರೂ ಅಲ್ಲಿ ಬ್ರಾಹ್ಮಣರಿಗೆ ಮಾತ್ರ ಊಟ ಹಾಕಲಾಗುತ್ತಿತ್ತು. ಹಸಿವಿನಿಂದ ಕಂಗೆಟ್ಟಿದ್ದ ರಾಮಸ್ವಾಮಿಗೆ ಅಲ್ಲಿ ಊಟ ಸಿಗದಾಯಿತು. ಬ್ರಾಹ್ಮಣನಂತೆ ಜನಿವಾರ ತೊಟ್ಟು ಹೋದರೂ ಪ್ರಯೋಜನ ಆಗಲಿಲ್ಲ. ಆಗ ಬ್ರಾಹ್ಮಣರು ಮುಖದಲ್ಲಿ ಮೀಸೆ ಬಿಡುವಂತಿರಲಿಲ್ಲ. ರಾಮಸ್ವಾಮಿ ಮೀಸೆ ಬಿಟ್ಟಿದ್ದರಿಂದ ಛತ್ರದ ಭದ್ರತಾ ಸಿಬ್ಬಂದಿ ತಡೆದು ರಸ್ತೆಗೆ ನೂಕಿಬಿಡುತ್ತಾರೆ.

ಕೈಯಲ್ಲಿ ಹಣ ಇಲ್ಲ, ಹಸಿವು ತಡೆಯಲು ಆಗುತ್ತಿಲ್ಲ. ಇವಿ ರಾಮಸ್ವಾಮಿ ರಸ್ತೆಯಲ್ಲಿ ಬಿದ್ದಿದ್ದ ಎಂಜಲೆಲೆಯಲ್ಲಿ ಉಳಿದಿದ್ದ ಆಹಾರ ತಿನ್ನುವ ಪರಿಸ್ಥಿತಿ ಬಂದಿತು. ರಾಮಸ್ವಾಮಿಗೆ ಇನ್ನಷ್ಟು ನೋವು ಕೊಟ್ಟಿದ್ದು, ತನಗೆ ಅನ್ನ ನಿರಾಕರಿಸಿದ ಧರ್ಮಛತ್ರವನ್ನು ಅಬ್ರಾಹ್ಮಣರೊಬ್ಬರು ಕಟ್ಟಿದ್ದು ಎಂಬ ವಿಚಾರ ತಿಳಿದಾಗ. ಇವಿ ರಾಮಸ್ವಾಮಿಗೆ ಕಾಶಿ ಬಗ್ಗೆ ಆವರೆಗೂ ಇದ್ದ ಭಕ್ತಿಭಾವ ಎಲ್ಲಾ ಮರೆಯಾಗಿ ತಿರಸ್ಕಾರ ಹುಟ್ಟಿಕೊಂಡಿತು. ಆಸ್ತಿಕರಾಗಿದ್ದ ರಾಮಸ್ವಾಮಿ ಅಕ್ಷರಶಃ ನಾಸ್ತಿಕನಾಗಿ ಬದಲಾಗಿಹೋದರು. ಬ್ರಾಹ್ಮಣ ವಿರೋಧಿಯಾಗಿ ಬದಲಾದರು.

ತಮಿಳು ಸ್ವಾಭಿಮಾನ ಚಳವಳಿಯ ನಾಯಕ 

ಪೆರಿಯಾರ್ ಅವರು ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂ(DMK)ನ ಸ್ಥಾಪಕ. “ತಮಿಳು ಸ್ವಾಭಿಮಾನಿ ಚಳುವಳಿ” ಯ ನಾಯಕರಾಗಿದ್ದರು. ಅವರು ಸ್ವಾತಂತ್ರ ಹೋರಾಟಗಾರರಾಗಿದ್ದರು. ತಮಿಳು ಭಾಷೆಯಲ್ಲಿ ‘ಪೆರಿಯಾರ್’ ಅಂದ್ರೆ ಗೌರವಾನ್ವಿತ, ಅಥವಾ ‘ದೊಡ್ಡವರು’ ಎಂಬ ಅರ್ಥವಿದೆ. ಈ ಮಾತಿನ ಮೂರ್ತ ರೂಪವೇ ಆಗುವ ಮೂಲಕ ಪೆರಿಯಾರ್, ತಮ್ಮ ಪ್ರಗತಿಪರ ವಿಚಾರಧಾರೆಯಿಂದಲೇ ಲಕ್ಷಾಂತರ ಜನರಿಂದ ದೊಡ್ಡ ವ್ಯಕ್ತಿ ಎಂದೇ ಕರೆಸಿಕೊಳ್ಳುತ್ತಿದ್ದರು.

1939ರಲ್ಲಿ ದ್ರಾವಿಡನಾಡು ಸಮ್ಮೇಳನ ಸಂಘಟಿಸಿದ ಪೆರಿಯಾರ್, ತಮಿಳು, ತೆಲುಗು, ಕನ್ನಡ, ಮಲಯಾಳಿ ಭಾಷೆಗಳನ್ನಾಡುವ ಜನರನ್ನು ಸೇರಿಸಿ, ದ್ರಾವಿಡ ರಾಜ್ಯ ನಿರ‍್ಮಾಣ ಮಾಡಬೇಕೆನ್ನುವ ಆಶಯ ಹೊಂದಿದ್ದರು. ಭಾರತ ಸ್ವಾತಂತ್ರ‍್ಯ ಪಡೆಯುವ ಸಂದರ್ಭದಲ್ಲಿ ಪ್ರತ್ಯೇಕ ದ್ರಾವಿಡನಾಡು ಅಸ್ತಿತ್ವಕ್ಕೆ ಬರಬೇಕೆಂದು ಪೆರಿಯಾರ್ ಒತ್ತಾಯಿಸಿದ್ದರು.

Periyar - Wikipedia

ಸ್ವಾತಂತ್ರ್ಯ ಪೂರ್ವದಲ್ಲಿ ಜಾತಿ ಶೋಷಣೆ ವಿಪರೀತವಾಗಿತ್ತು. ಶೂದ್ರರಿಗೆ, ದಲಿತರಿಗೆ ದೇವಸ್ಥಾನದೊಳಗೆ ಪ್ರವೇಶ ಇರಲಿಲ್ಲ. ದೇವಸ್ಥಾನದ ಬೀದಿಗೂ ದಲಿತರು ಕಾಲಿಡುವಂತಿರಲಿಲ್ಲ. ಆಗ ಪೆರಿಯಾರ್ ರಾಮಸ್ವಾಮಿ ಹೋರಾಟ ಪ್ರಾರಂಭಿಸಿದರು. ಇದೇ ರೀತಿ ಹತ್ತು ಹಲವು  ಹೋರಾಟಗಳನ್ನು ಮಾಡಿದ ಸಾಮಾಜಿಕ ನ್ಯಾಯದ ಹರಿಕಾರ, ವೈಚಾರಿಕ ಚಳವಳಿ ನೇತಾರ ಇಂದಿಗೂ ಕೂಡ ದಕ್ಷಿಣ ಭಾರತದ ಅಸ್ಮಿತೆಯ ಪ್ರಸ್ತಾವ ಬಂದಾಗಲೆಲ್ಲಾ ಅವರ ಹೆಸರು ಮತ್ತೆ ಮತ್ತೆ ನೆನಪಾಗುತ್ತದೆ.

ಪೆರಿಯಾರ್ ಎಂದ ಕೂಡಲೆ ಅವರ ವಿರೋಧಿಗಳಿಗೆ ( ಬ್ರಾಹ್ಮಣಶಾಹಿಗಳಿಗೆ) ತಕ್ಷಣ ನೆನಪಾಗುವ ಸುಳ್ಳು ಎಂದರೆ ಅವರು ತಮ್ಮ ದತ್ತು ಪುತ್ರಿಯನ್ನು ಮದುವೆಯಾದರು ಎಂಬ ಆಧಾರ ರಹಿತವಾದ ಸುಳ್ಳು.

ಫ್ಯಾಕ್ಟ್‌ಚೆಕ್ : ಪೆರಿಯಾರ್ ತನ್ನ ಸ್ವಂತ ಮಗಳನ್ನೆ ಮದುವೆಯಾಗಿದ್ದರೆ?

ಪೆರಿಯಾರ್ ಅವರನ್ನು ಅವರ ವಿರೋಧಿಗಳು ಟೀಕಿಸಲು ಯಾವುದೇ ಕಾರಣಗಳನ್ನು ಸಿಗದಿದ್ದಾಗ, ಅವರು ಅವರ ವೈಯಕ್ತಿಕ ಜೀವನವನ್ನು/ಮಣಿಯಮ್ಮಯ್ಯರ್ ಅವರೊಂದಿಗಿನ ವಿವಾಹವನ್ನು ಟೀಕಿಸುತ್ತಾರೆ. 9.7.1949 ರಂದು ಪೆರಿಯಾರ್-ಮಣಿಯಮ್ಮಾಯಿ ವಿವಾಹವನ್ನು ನೋಂದಾಯಿಸಲಾಯಿತು. ಮದುವೆಯ ಸಮಯದಲ್ಲಿ ಪೆರಿಯಾರ್ ಅವರಿಗೆ 70 ವರ್ಷ ಮತ್ತು ಮಣಿಯಮ್ಮಾಯಿ ಅವರಿಗೆ 30 ವರ್ಷ. ಈ ಮದುವೆಯು ಮಣಿಯಮ್ಮಾಯಿಯ ನಿರ್ಧಾರವಾಗಿತ್ತು, ಯಾವುದೇ ಬಲವಂತವಿಲ್ಲದೆ ಮಣಿಯಮ್ಮಾಯಿ ಇಚ್ಛೆ ಮತ್ತು ಒಪ್ಪಿಗೆಯ ಮೇರಿಗೆ ನಡೆಯಿತು.

ಜಸ್ಟೀಸ್ ಪಾರ್ಟಿಯ ಸ್ಥಾಪಕರಾದ ಕನಗಸಬಾಯಿ ಮುದಲಿಯಾರ್‌ರವರ ಮಗಳಾದ ಮಣಿಯಮ್ಮೈರವರು ಪೆರಿಯಾರ್‌ರವರ ಪ್ರಬಲ ಅನುಯಾಯಿಯಾಗಿ, ಆಪ್ತ ಸಹಾಯಕಿಯಾಗಿ ಕೆಲಸ ಮಾಡಿದ್ದ ಮಣಿಯಮ್ಮೈ ಪೆರಿಯಾರ್ ಮರಣದ ನಂತರ ಅವರ ರಾಜಕೀಯ ಚಳುವಳಿಯ (ದ್ರಾವಿಡ ಮುನ್ನೇತ್ರ ಕಳಗಂ) ವಾರಸುದಾರರಾದರು. ಹಾಗಾಗಿ ಪೆರಿಯಾರ್ ತಮ್ಮ ಮಗಳ (ದತ್ತು ಮಗಳು) ನ್ನು ಮದುವೆಯಾದರು ಎಂಬುದು ಸುಳ್ಳು.

ಈ ಸನಾತನಿಗಳಿಗೆ ದೇಶದಲ್ಲಿ ಇರುವ ಜಾತಿ ವ್ಯವಸ್ಥೆ, ಜಾತಿ ದೌರ್ಜನ್ಯ , ಅಸಮಾನತೆ ಕಾಣುವುದಿಲ್ಲ , ಆದರೆ ಅದರ ವಿರುದ್ದ ಹೋರಾಡುವ ವ್ಯಕ್ತಿಗಳ ಮೇಲೆ ಹೀಗೆ ಸುಳ್ಳು ಹೇಳಿಕೆಗಳನ್ನು ನೀಡಿ ಬ್ರಾಹ್ಮಣ್ಯದ ಕಾವಲುಗಾರರಾಗಿ ಕೆಲಸ ಮಾಡುತ್ತಿರುತ್ತಾರೆ.  ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಎಲ್ಲ ವಿಷಯಗಳು ಸುಳ್ಳು ಮತ್ತು ಜನರನ್ನು ದಾರಿತಪ್ಪಿಸುವಂತಿದೆ. ವೇದಾವತಿ ಎಂಬ ಬಲಪಂಥೀಯ ಪ್ರತಿಪಾದಕಿ ತನ್ನ ಪೋಸ್ಟ್‌ನಲ್ಲಿ ಬಳಸಿರುವ ಕುಲಗೆಟ್ಟವರು ಎಂಬ ಪದ ಪ್ರಯೋಗ ನೋಡಿದರೆ ತಿಳಿಯುತ್ತದೆ ಇವರಲ್ಲಿರುವ ಬ್ರಾಹ್ಮಣ್ಯವೆಂಬ ಜಾತಿ ಎಂಬ ನಂಜು ಎಷ್ಟಿದೆ? ಎಂದು.

ಎನ್‌ಸುದ್ದಿ

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿ: ಫ್ಯಾಕ್ಟ್‌ಚೆಕ್ : ದಲಿತರಿಗೆ ಮತದಾನದ ಹಕ್ಕು ಬೇಡ ಎಂಬ ನಿಲುವು ಕಾಂಗ್ರೆಸ್‌ಗಿತ್ತೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights