ಆಪರೇಷನ್‌ ಕಮಲಕ್ಕೆ ಆಪರೇಷನ್‌ ಮಾಡಿದ ಮಸ್ಕಿ; ಕ್ಷೇತ್ರದಲ್ಲಿ ನಡೀಲಿಲ್ಲ ವಿಜಯೇಂದ್ರ ಚಮತ್ಕಾರ!

2019ರಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ಆಪರೇಷನ್‌ ಮಾಡಿ, ಅಧಿಕಾರದ ಗದ್ದುಗೆ ಏರಿದ್ದ ಬಿಜೆಪಿಯನ್ನು ಮಸ್ಕಿ ಜನರು ತಿರಸ್ಕರಿಸಿದ್ದಾರೆ. ಈ ಮೊದಲು ನಡೆದ ಎರಡು ಹಂತದ ಉಪಚುನಾವಣೆಯಲ್ಲಿ ಬಿಜೆಪಿ ಪರ ಕಮಾಲ್‌ ನಡೆಸಿದ್ದ ಸಿಎಂ ಬಿವೈಎಸ್‌ ಪುತ್ರ ವಿಜಯೇಂದ್ರ ಅವರ ಚಮತ್ಕಾರವೂ ಮಸ್ಕಿಯಲ್ಲಿ ವರ್ಕ್‌ ಆಗಿಲ್ಲ ಎಂದು ಇದೀಗ ಸ್ಪಷ್ಟವಾಗಿದೆ.

ಮಸ್ಕಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರವಿಹಾಳ ಅವರು ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್‌ ವಿರುದ್ದ ಸುಮಾರು 26,000 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಆಪರೇಷನ್‌ ಕಮಲಕ್ಕೆ ಒಳಗಾಗಿ ಬಿಜೆಪಿ ಸೇರಿದ್ದ ಪ್ರತಾಪಗೌಡ ಸೋಲುಂಡಿದ್ದಾರೆ.

ಇದೇ ರೀತಿಯಲ್ಲಿ ಮೊದಲ ಹಂತದ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ಎಚ್.ವಿಶ್ವನಾಥ್ ಸೋಲು ಕಂಡಿದ್ದರು. ಅದೇ ಸಂದರ್ಭದಲ್ಲಿ ಶಿವಾಜಿನಗರದ ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ರಿಜ್ವಾನ್ ಅರ್ಷದ್ ಗೆಲುವು ಸಾಧಿಸುವ ಮೂಲಕ ರೋಷನ್ ಬೇಗ್ ರಾಜಕೀಯ ಭವಿಷ್ಯಕ್ಕೆ ಫುಲ್‌ಸ್ಟಾಪ್‌ ಇಟ್ಟಿದ್ದರು.

ಎರಡನೇ ಹಂತದಲ್ಲಿ ನಡೆದ ಉಪಚುನಾವಣೆಯಲ್ಲಿ ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಮುನಿರತ್ನ ಕಾಂಗ್ರೆಸ್‌ ವಿರುದ್ದ ಬಾರೀ ಪ್ರಾಯಾಸದಿಂದ ಗೆಲುವು ಸಾಧಿಸಿದ್ದರು.

ಇದೀಗ ಮಸ್ಕಿ ಕ್ಷೇತ್ರದಲ್ಲಿ ಮೂರನೆ ಹಂತದಲ್ಲಿ ಉಪಚುನಾವಣೆ ನಡೆದಿತ್ತು. ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪ್ರತಾಪ್‍ಗೌಡ ಪಾಟೀಲ್ ಸೋಲು ಕಂಡಿದ್ದಾರೆ. ಈ ಮೂಲಕ ಆಪರೆಷನ್ ಕಮಲದಲ್ಲಿ ಬಿಜೆಪಿ ಕೈ ಹಿಡಿದಿದ್ದವರ ಪೈಕಿ ಎಚ್.ವಿಶ್ವನಾಥ್, ರೋಷನ್ ಬೇಗ್, ಪ್ರತಾಪ್‍ಗೌಡ ಪಾಟೀಲ್ ಹಿನ್ನೆಡೆ ಅನುಭವಿಸಿದ್ದಾರೆ.

ಆಪರೇಷನ್ ಕಮಲದ ರುವಾರಿಯಾಗಿದ್ದ ರಮೇಶ್ ಜಾರಕಿಹೊಳಿ ಲೈಂಗಿಕ ಹಗರಣದಲ್ಲಿ ಸಚಿವ ಸ್ಥಾನ ಕಳೆದುಕೊಂಡು ಮೂಲೆ ಗುಂಪಾಗಿದ್ದಾರೆ. ಮುಳಬಾಗಿಲು ಕ್ಷೇತ್ರದ ಶಾಸಕರಾಗಿದ್ದ ಹಾಗೂ ಹಿಂದಿನ ಸರ್ಕಾರ ಮತ್ತು ಈಗಿನ ಸರ್ಕಾರದಲ್ಲಿ ಸಚಿವರಾಗಿದ್ದ ಆರ್.ನಾಗೇಶ್‍ರನ್ನು ಇತ್ತೀಚೆಗೆ ಸಂಪುಟ ವಿಸ್ತರಣೆಯ ವೇಳೆ ಕೈಬಿಡಲಾಗಿದೆ.

ಬೆಳಗಾವಿ ಜಿಲ್ಲೆಯ ಅಥಣಿ ಕ್ಷೇತ್ರದ ಮಹೇಶ್ ಕುಮಟಳ್ಳಿ ಉಪಚುನಾವಣೆಯಲ್ಲಿ ಗೆಲುವು ಕಂಡಿದ್ದರೂ, ಸಚಿವರಾಗದೆ ಉಳಿದಿದ್ದಾರೆ.ಉಳಿದಂತೆ ಡಾ.ಸುಧಾಕರ್, ಎಂ.ಟಿ.ಬಿ.ನಾಗರಾಜ್, ಆನಂದ್ ಸಿಂಗ್, ಶಿವರಾಮ್ ಹೆಬ್ಬಾರ್, ಆರ್.ಶಂಕರ್, ಕೆ.ಗೋಪಾಲಯ್ಯ, ಕೆ.ಸಿ.ನಾರಾಯಣಗೌಡ, ಎಸ್.ಟಿ.ಸೋಮಶೇಖರ್, ಬಿ.ಸಿ.ಪಾಟೀಲ್, ಬೈರತಿ ಬಸವರಾಜು, ಶ್ರೀಮಂತ ಪಾಟೀಲ್ ಸಚಿವರಾಗಿದ್ದಾರೆ.

Read Also: ಬಸವ ಕಲ್ಯಾಣದಲ್ಲಿ BJP ಅಭ್ಯರ್ಥಿ ಶರಣು ಸಲಗರ ಗೆಲುವು: ಕಾಂಗ್ರೆಸ್‌ಗೆ ಭಾರೀ ನಿರಾಶೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights