ಸಚಿವ ಸಂಪುಟದಲ್ಲಿ ಯತ್ನಾಳ್ಗೆ ಸ್ಥಾನ- ಕೂಡಲ ಸಂಗಮ ಸ್ವಾಮೀಜಿ ಒತ್ತಾಯ
ಯತ್ನಾಳಗೆ ಸಚಿವ ಸ್ಥಾನ ನೀಡಲೇಬೇಕು- ಯತ್ನಾಳ ಪರ ಕೂಡಲ ಸಂಗಮ ಸ್ವಾಮೀಜಿ ಮತ್ತೋಮ್ಮೆ ಭರ್ಜರಿ ಬ್ಯಾಟಿಂಗ್
ವಿಜಯಪುರ, ಡಿ. 20- ಯತ್ನಾಳ ಪರ ಕೂಡಲ ಸಂಗಮ ಸ್ವಾಮೀಜಿ ಭರ್ಜರಿ ಬ್ಯಾಟಿಂಗ್ ನಡೆಸಿದ್ದಾರೆ. ವಿಜಯಪುದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸಚಿವ ಸಂಪುಟದಲ್ಲಿ ಪಂಚಮಸಾಲಿ ಸಮಾಜದ ಪ್ರಮುಖ ನಾಯಕ ಮತ್ತು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ರಾ. ಪಾಟೀಲ ಯತ್ನಾಳ ಅವರಿಗೆ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.
ಯತ್ನಾಳ ಅವರು ಪಂಚಮಸಾಲಿ ನಾಯಕರು ಮಾತ್ರವಲ್ಲ, ಉತ್ತರ ಕರ್ನಾಟಕದ ಜನರ ಪರವಾಗಿ ನಿಂತಿದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ಮೂವರಿಗೆ ಸಚಿವ ಸ್ಥಾನ ನೀಡಬೇಕು ಎಂಬುದು ನಮ್ಮ ಆಗ್ರಹವಾಗಿತ್ತು. ರಾಜ್ಯದಲ್ಲಿ ಪಂಚಮಸಾಲಿ ಸಮಾಜದ 15 ಜನ ಶಾಸಕರಿದ್ದಾರೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಬೆನ್ನಿಗೆ ನಿಂತವರು ಯತ್ನಾಳ. ಅಷ್ಟೇ ಅಲ್ಲ, ಹಿರಿಯ ಮುಖಂಡರೂ ಆಗಿರುವುದರಿಂದ ಯತ್ನಾಳ ಅವರಿಗೆ ಸಚಿವ ಸ್ಥಾನ ನೀಡುವುದರಲ್ಲಿ ತಪ್ಪಿಲ್ಲ. ವಿಜಯಪುರ ಜಿಲ್ಲೆಯ ಬಸನಗೌಡ ರಾ. ಪಾಟೀಲ ಯತ್ನಾಳ, ಬಾಗಲಕೋಟೆ ಜಿಲ್ಲೆಯ ಮುರುಗೇಶ ನಿರಾಣಿ ಮತ್ತು ಸಿದ್ದು ಸವದಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬುದು ಪಂಚಮಸಾಲಿ ಜನರ ಅಭಿಪ್ರಾಯವಾಗಿದೆ ಎಂದು ಅವರು ತಿಳಿಸಿದರು.
ಎಲ್ಲರಿಗೂ ಅವಕಾಶ ಕೊಡಲು ಆಗಲ್ಲ. ಆದರೆ, ಪ್ರಯತ್ನಿಸುತ್ತೇನೆ ಎಂದು ಸಿಎಂ ಬಿ. ಎಸ್. ಯಡಿಯೂರಪ್ಪ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಒಂದು ವೇಳೆ ಸಚಿವ ಸ್ಥಾನ ಸಿಗದಿದ್ದರೆ ಪಂಚಮಸಾಲಿ ಸಮಾಜದ ಮುಖಂಡರೊಂದಿಗೆ ಚರ್ಚಿಸಿ ತೀರ್ಮಾನಿಸುತ್ತೇವೆ ಎಂದು ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.