ಸಿದ್ದು ಕೋಟೆಯಲ್ಲಿ ಡಿಕೆಶಿಗೆ ಅದ್ಧೂರಿ ಸ್ವಾಗತ : ತೆರೆದ ವಾಹನದಲ್ಲಿ ಮೆರವಣಿಗೆ

ದೆಹಲಿಯ ತಿಹಾರ್ ಜೈಲಿನಿಂದ ಬಿಡುಗಡೆಯಾದ ಬಳಿಕ ಡಿಕೆ ಶಿವಕುಮಾರ್ ಹೊಸ ಇನ್ನಿಂಗ್ಸ್ ಪ್ರಾರಂಭವಾದಂತಿದೆ. ಅವರ ಜನಪ್ರಿಯತೆ ಹಿಂದಿಗಿಂತಲೂ ಹೆಚ್ಚಿದಂತಿದೆ. ಇದಕ್ಕೆ ಮೈಸೂರು ಇವತ್ತು ಸಾಕ್ಷಿಯಾಗಿದೆ. ಕಾಂಗ್ರೆಸ್ ಸಭೆಯಲ್ಲಿ ಪಾಲ್ಗೊಳ್ಳಲು ರೈಲು ನಿಲ್ದಾಣದಲ್ಲಿ ಬಂದಿಳಿದ ಡಿಕೆ ಶಿವಕುಮಾರ್ ಅವರನ್ನು ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬರಮಾಡಿಕೊಂಡರು. ಡಿಕೆಶಿ ಅವರ ಮುಖವಾಡ ಹಾಕಿಕೊಂಡು ಕೈ ಕಾರ್ಯಕರ್ತರು ಹರ್ಷೋದ್ಘಾರ ವ್ಯಕ್ತಪಡಿಸಿದರು, ತಮ್ಮ ನಾಯಕನಿಗೆ ಜೈಕಾರ ಹಾಕಿ ತಮ್ಮ ಅಭಿಮಾನ ಮತ್ತು ಪ್ರೀತಿ ತೋರ್ಪಡಿಸಿದರು.

ಮಾಜಿ ಸಂಸದ ಧ್ರುವನಾರಾಯಣ, ಶಾಸಕರಾದ ತನ್ವೀರ್ ಸೇಠ್, ಚಿಕ್ಕಮಾದು, ಮಾಜಿ ಶಾಸಕ ಸೋಮಶೇಖರ್, ವಾಸು, ಪರಿಷತ್ ಸದಸ್ಯ ಧರ್ಮಸೇನ ಮೊದಲಾದ ಮುಖಂಡರು ಕಾರ್ಯಕರ್ತರ ಜೊತೆ ಸೇರಿ ಡಿಕೆಶಿಯನ್ನು ಸ್ವಾಗತಿಸಿದರು. ಜೆಡಿಎಸ್ ಪಕ್ಷದ ಕಾರ್ಯಕರ್ತರೂ ಕೂಡ ಸ್ವಾಗತಕ್ಕೆ ನಿಂತಿದ್ದು ವಿಶೇಷ. ಪಕ್ಷಾತೀತವಾಗಿ ಒಕ್ಕಲಿಗ ಮುಖಂಡರೂ ಕೂಡ ಅಲ್ಲಿಗೆ ಬಂದದ್ದು ಡಿಕೆಶಿಗೆ ಹೊಸ ಪವರ್ ತಂದುಕೊಟ್ಟಂತಿತ್ತು.ರೈಲು ನಿಲ್ದಾಣದಲ್ಲಿ ಡಿಕೆ ಶಿವಕುಮಾರ್ ಭಾವ ಚಿತ್ರ ರಾರಾಜಿಸಿತು. ಸೇಬುಗಳ ಬೃಹತ್ ಹಾರ ಹಾಕಿ ಸ್ವಾಗತ ಕೋರಲಾಯಿತು. ಹಾರದಿಂದ ಒಂದು ಸೇಬು ಕಿತ್ತು ಡಿಕೆಶಿ ತಿಂದ ಬಳಿಕ ಕಾರ್ಯಕರ್ತರು ಉಳಿದ ಸೇಬುಗಳನ್ನ ಮುಗಿಬಿದ್ದು ತಿಂದರು.

ಇನ್ನು, ಕಾಂಗ್ರೆಸ್ ಸಭೆ ಆರಂಭಕ್ಕೂ ಮುನ್ನವೇ ಡಿಕೆಶಿ ಅವರು ತಮ್ಮನ್ನು ಸ್ವಾಗತಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಅರ್ಪಿಸಿದರು. ವಿವಿಧ ಪಕ್ಷಗಳಿಂದ, ವಿವಿಧ ಸಮುದಾಯಗಳಿಂದ ಜನರು ಬಂದಿದ್ದಾರೆ. ಬೇರೆ ಪಕ್ಷಗಳಿಂದಲೂ ಜನರು ಬಂದಿದ್ದಾರೆ. ಇದು ಪಕ್ಷದ ಕಾರ್ಯಕ್ರಮವಾದ್ದರಿಂದ ಬೇರೆ ಪಕ್ಷದವರು ಇಲ್ಲಿ ಬರಲು ಆಗಿಲ್ಲ. ಅವರನ್ನು ರಾತ್​ರಿ 8ಗಂಟೆಗೆ ಅತಿಥಿ ಗೃಹದಲ್ಲಿ ಭೇಟಿಯಾಗುತ್ತೇನೆ ಎಂದು ತಿಳಿಸಿದರು.

ಇನ್ನು, ಶಾಸಕ ತನ್ವೀರ್ ಸೇಠ್ ಮಾತನಾಡಿ, ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಬೇಕು. ಅಜಾತಶತ್ರು ಡಿಕೆಶಿ ಮತ್ತೆ ಮುಖ್ಯಮಂತ್ರಿಯಾಗಬೇಕು. ಈ ಕಷ್ಟಕಾಲದಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ತಾವೆಲ್ಲಾ ಡಿಕೆಶಿ ಪರವಾಗಿ ನಿಲ್ಲುತ್ತೇವೆ ಎಂದು ಹೇಳಿದರು. ಸಿದ್ದರಾಮಯ್ಯ ಮಗ ಯತೀಂದ್ರ ಮೊದಲಾದವರೂ ಈ ವೇಳೆ ಮಾತನಾಡಿ ಡಿಕೆಶಿಗೆ ಶುಭಕೋರಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights