‘ಸಿ.ಟಿ.ರವಿಯವರೇ ಚಿಕ್ಕಮಗಳೂರು ಕನ್ನಡ ಸಾಹಿತ್ಯ ಸಮ್ಮೇಳನದ ದಿನಾಂಕ ನಿಗದಿ ಮಾಡಿದ್ದು’ – ಕಲ್ಕುಳಿ ವಿಠಲ್

ಆರಂಭಕ್ಕೂ ಮುನ್ನವೇ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸಾಕಷ್ಟು ವಿವಾದಕ್ಕೆ ಸಿಲುಕಿದೆ. ಈ ವಿವಾದಗಳ ನಡುವೆಯೂ ಸದ್ಯಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಇಂದು, ನಾಳೆ ಶೃಂಗೇರಿಯಲ್ಲಿ ನಡೆಯಲಿರುವ ಸಮ್ಮೇಳನಕ್ಕೆ ಬೃಹತ್ ವೇದಿಕೆ, ಭವ್ಯ ಮಂಟಪ ನಿರ್ಮಾಣವಾಗಿದೆ. ಈ ನಡುವೆ ಸಮ್ಮೇಳನಾಧ್ಯಕ್ಷರ ವಿಚಾರವಾಗೇ ಸಮ್ಮೇಳನಕ್ಕೆ ವಿರೋಧ ವ್ಯಕ್ತವಾಗಿದ್ದು, ಈ ಕುರಿತು ಸಮ್ಮೇಳನಾಧ್ಯಕ್ಷ ಕಲ್ಕುಳಿ ವಿಠಲ್ ಹೆಗಡೆ ಮಾತನಾಡಿದ್ದಾರೆ. “ವಿವಾದಕ್ಕೆ ಕಾರಣವೇ ಇಲ್ಲ. ಸಾಹಿತ್ಯ ಪರಿಷತ್ ಸ್ವಾಯತ್ತ ಸಂಸ್ಥೆ. ವಿವಾದ ಮಾಡಲು ಹೊರಟಿರುವವರು ಸರ್ಕಾರದ ಆಡಳಿತದಲ್ಲಿರುವವರು. ತಮ್ಮ ಮೂಗಿನ ನೇರಕ್ಕೆ ಸಮ್ಮೇಳನ ನಡೆಯದಿದ್ದಕ್ಕೆ ಸಮ್ಮೇಳನದಲ್ಲಿ ಗೊಂದಲ ಎಬ್ಬಿಸಿದ್ದಾರೆ. ಸರ್ವಾಧಿಕಾರಿ ಧೋರಣೆ ಅನುಸರಿಸಲಾಗುತ್ತಿದೆ” ಎಂದು ಹೇಳಿದ್ದಾರೆ.

“ಸಚಿವ ಸಿ.ಟಿ.ರವಿಯವರೇ ಸಮ್ಮೇಳನದ ದಿನಾಂಕ ನಿಗದಿ ಮಾಡಿದ್ದು. ಕಸಾಪ ನಿಗದಿ ಮಾಡಿದ ದಿನಾಂಕ ಅಲ್ಲ. ಈ ಸಮ್ಮೇಳನದಲ್ಲಿ ಕನ್ನಡಿಗರಿಗೆ, ಕನ್ನಡಕ್ಕೆ ಬಂದ ಸಂಕಷ್ಟಗಳ ಬಗ್ಗೆ ಚರ್ಚೆ ಆಗಬೇಕಿತ್ತು. ಆದರೆ ಸಾಹಿತ್ಯ ಸಮ್ಮೇಳನದ ಬಗ್ಗೆಯೇ ಚರ್ಚೆ ಆಗುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಸರ್ಕಾರ ಅನುದಾನ ನೀಡದೇ ಇರಬಹುದು ಆದ್ರೆ ಕನ್ನಡದ ಅಭಿಮಾನಿಗಳು ಇದನ್ನು ಸವಾಲಾಗಿ ತೆಗೆದುಕೊಂಡಿದ್ದಾರೆ. ಸಚಿವರು ಮಾಡಿರುವ ಆರೋಪಗಳು ಈ ಹಿಂದೆಯೇ ತೀರ್ಮಾನವಾಗಿದೆ.

ಇವರ ಬಳಿ ದಾಖಲೆಗಳಿಲ್ಲ. ಸಚಿವ ಸಿ.ಟಿ ರವಿ ಹಾಗೂ ಶೋಭಾ ಕರಂದ್ಲಾಜೆ ವೈಯುಕ್ತಿಕ ದ್ವೇಷದಿಂದ ಹೇಳಿಕೆ ಕೊಡ್ತಾ ಇದ್ದಾರೆ. ಇವ್ಯಾವುದಕ್ಕೂ ಆಧಾರ ಇಲ್ಲ” ಎಂದು ತಿಳಿಸಿದ್ದಾರೆ. ಹಿಂದುಪರ ಸಂಘಟನೆಗಳಿಂದ ನಿನ್ನೆ ಶೃಂಗೇರಿ ಬಂದ್ ಗೆ ಕರೆ ನೀಡಲಾಗಿದ್ದು, ಈ ಹಿನ್ನೆಲೆಯಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಎಸ್ಪಿ ಹರೀಶ್ ಪಾಂಡೆ ಶೃಂಗೇರಿಯಲ್ಲಿ ಮೊಕ್ಕಾಂ ಹೂಡಿದ್ದಾರೆ. ಸಮ್ಮೇಳನಕ್ಕೆ ಶೃಂಗೇರಿ ಮಠದಿಂದ ಬೆಂಬಲ ದೊರೆತಿದ್ದು, ಮಠದಿಂದ ಊಟದ ಸಾಮಗ್ರಿಗಳನ್ನು ನೀಡಲಾಗುತ್ತಿದೆ.

ಶೃಂಗೇರಿ ಪಟ್ಟಣದ ಶಾರದಾ ನಗರದಲ್ಲಿರುವ ಸಮ್ಮೇಳನಾಧ್ಯಕ್ಷ ವಿಠಲ ಹೆಗಡೆ ಅವರ ಮನೆಗೂ ಭಾರೀ ಪೊಲೀಸ್ ಬಂದೋಬಸ್ತ್ ನೀಡಲಾಗಿದೆ. ಸಮ್ಮೇಳನಕ್ಕೆ 2 ಕೆಎಸ್.ಆರ್.ಪಿ ತುಕಡಿ ಸೇರಿದಂತೆ 60ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights