ಕೊರೊನಾ ಲಾಕ್ ಡೌನ್ ಉಲ್ಲಂಘಿಸಿದರೆ ಯಮರಾಜ ಬರ್ತಾನೆ ಹುಷಾರ್!

ದಿನೇ ದಿನೇ ಲಾಕ್ ಡೌನ್ ನಿಯಮ ಉಲ್ಲಂಘಿಸುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಜನರಿಗೆ ಬೈದಿದ್ದು ಆಯ್ತು, ಹೊಡೆದಿದ್ದು ಆಯ್ತು, ಎರಡು ಕೈ ಜೋಡಿಸಿ ವಿನಂತಿ ಮಾಡಿಕೊಂಡಿದ್ದು ಆಯ್ತು. ಆದರೆ ಭಂಡಗೆಟ್ಟ ಕೆಲವು ಮಂದಿಗೆ ಯಾವರೀತಿ ಹೇಳಿದರೂ ಪ್ರಯೋಜನವಾಗದ ಕಾರಣ ಗದಗದಲ್ಲಿ ಪೊಲೀಸರು ಯಮರಾಜನನ್ನು ಕರೆತಂದಿದ್ದಾರೆ.

ಹೌದು… ಲಾಕ್ ಡೌನ್ ನಿಯಮ ಉಲ್ಲಂಘಿಸುವವರಿಗೆ ಬುದ್ಧಿ ಕಲಿಸಲು ಪೊಲೀಸರು ದೇವರ ಮೊರೆ ಹೋಗಿದ್ದಾರೆ. ಕೊಪ್ಪಳದಲ್ಲಿ ಇಂದು ಮನೆಬಿಟ್ಟು ಹೊರಬಂದವರಿಗೆ ಗೋಣಿ ಚೀಲ ಹೊದಿಸಿ ಬಿಸಿಲಿನಲ್ಲಿ ನಿಲ್ಲಿಸುವ ಮೂಲಕ ವೈದ್ಯರು ಅನುಭವಿಸುವ ಸಂಕಷ್ಟದ ಅರಿವು ಮೂಡಿಸಲಾಗಿತ್ತು. ಇದೇ ರೀತಿ ಯಮರಾಯನ ವೇಷಧಾರಿಯನ್ನ ಪೊಲೀಸ್ ರು ಬೀದಿಗಿಳಿಸಿ ಜನ ಜಾಗೃತಿ ಮೂಡಿಸಿದ್ದಾರೆ.

ಗದಗ ಜಿಲ್ಲೆಯ ಬೆಟಗೇರಿ ಠಾಣೆಯ ಪೊಲೀಸ್ ಸಿಬ್ಬಂದಿಗಳು ಈ ನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಕೊರೊನಾ ಕುರಿತು ಜಾಗೃತಿ ಮೂಡಿಸಲು ಯಮ ಇಬ್ಬರು ಕಿಂಕರರು ಪೊಲೀಸ್ ವಾಹನದಲ್ಲಿಯೇ ಓಡಾಡುತ್ತಿದ್ದಾರೆ.

ಬೆಟಗೇರಿ ಠಾಣೆಯ ಪಿಎಸ್‌ಐ ರಾಜೇಶ ಅವರ ಈ ಪ್ರಯತ್ನಕ್ಕೆ ಚಂದ್ರು ದೊಡ್ಡಮನಿ, ದಶರಥ ಹಾಗೂ ಅಲಂದಾರ ಅವರು ಸಹಕಾರ ನೀಡಿದ್ದಾರೆ. ಜನರಿಗೆ ಕಲೆಯ ಮೂಲಕವೂ ತಿಳುವಳಿಕೆ ನೀಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಪೊಲೀಸ್ ಜೀಪ್‌ನಲ್ಲಿ ಬಂದು ವಾಹನ ಸವಾರರಿಗೆ ತಿಳುವಳಿಕೆ ಹೇಳಿದ್ದಾರೆ. ಯಮ ಮತ್ತು ಕಿಂಕರಂತೆ ವೇಷ ಧರಿಸಿದ ಪೊಲೀಸರು ಬೆಟಗೇರಿ ಮುಖ್ಯ ರಸ್ತೆಯಲ್ಲಿ ಪೊಲೀಸ್ ವಾಹನದಲ್ಲಿಯೇ ಸಂಚಾರ ನಡೆಸಿದ್ದಾರೆ. ಅನಗತ್ಯವಾಗಿ ಓಡಾಡುವ ಜನರನ್ನು ಹಿಡಿದು ಲಾಕ್ ಡೌನ್ ನಿಯಮ ಪಾಲನೆ ಮಾಡುವಂತೆ ಅರಿವು ಮೂಡಿಸಿದ್ದಾರೆ.ಲಾಕ್ ಡೌನ್ ನಿಯಮಗಳನ್ನು ಪಾಲನೆ ಮಾಡಿ. ನಾವು ಕುಟುಂಬದ ಜವಾಬ್ದಾರಿಯನ್ನು ಮರೆತು ನಿಮ್ಮ ರಕ್ಷಣೆಗೆ ನಿಂತಿದ್ದೇವೆ. ನಮ್ಮ ಪ್ರಯತ್ನಕ್ಕೆ ನಿಮ್ಮ ಕೈಜೋಡಿಸಿ. ಕೊರೊನಾ ವಿರುದ್ಧ ಎಲ್ಲರೂ ಒಟ್ಟಾಗಿ ಹೋರಾಡೋಣ ಎಂಬುದು ಪೊಲೀಸರು ಮನವಿ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights