ಹೊಟ್ಟೆಗೆ ಹಿಟ್ಟಿಲ್ಲದವರಿಂದ ಸುಲಿಗೆ ಮಾಡುತ್ತಿದೆ ಸರ್ಕಾರ: ಬಸ್‌ಸ್ಟಾಂಡ್‌ಗಳಲ್ಲಿ ಕಾರ್ಮಿಕರ ಪರದಾಟ

ಲಾಕ್‌ಡೌನ್‌ ಮುಂದುವರೆಯುತ್ತಲೇ ಇದೆ. ಈ ಸಂದರ್ಭದಲ್ಲಿ ಊರಿಗೆ ತೆರಳಲಾರದೇ ಬೆಂಗಳೂರಿನಲ್ಲಿ ಸಿಕ್ಕಿಕೊಂಡಿರುವ ಕಾರ್ಮಿಕರಿಗೆ ಊರಿಗೆ ಹೋಗಲು ಸರ್ಕಾರ ಬಸ್‌ ವ್ಯವಸ್ಥೆ ಮಾಡಿದೆ. ಆದರೆ ಆ ಕಾರ್ಮಿಕರು ಊರಿಗೆ ಹೋಗುವಂತಿಲ್ಲ, ಇಲ್ಲಿಯೂ ಇರುವಂತಿಲ್ಲದೇ ನರಳುವಂತಹ ಪರಿಸ್ಥಿತಿ ಬಂದಿದೆ.

ಏಕೆ ಹೀಗಾಯಿತು?

ಗುರುವಾರ ಸಂಜೆ ಸಂಪುಟ ಸಭೆಯ ಬಳಿಕ ಕಾನೂನು ಸಚಿವ ಮಾಧುಸ್ವಾಮಿ ನಾಳೆಯಿಂದಲೇ ಕಾರ್ಮಿಕರು ತಮ್ಮ ಊರುಗಳಿಗೆ ಮರಳಲು ಬಸ್‌ ವ್ಯವಸ್ಥೆ ಮಾಡಲಾಗುವುದು ಎಂದು ಘೋಷಿಸಿದರು. ಅದರಂತರೆ ಕಂದಾಯಭವನದ ಎದುರಿನ ಬನ್ನಪ್ಪ ಪಾರ್ಕ್‌ ನಿಂದ ಬಸ್‌ ತೆರಳುತ್ತವೆ ಎಂದು ತಿಳಿಯುತ್ತಲೇ ಕಾರ್ಮಿಕರು ಅಲ್ಲಿ ಜಮಾಯಿಸಿದರು.

ಕೊರೊನಾ ಹರಡದಂತೆ ಟೆಸ್ಟ್‌ ಮಾಡಿಸಿಕೊಂಡಿರಬೇಕು, ಟಿಕೇಟ್‌ ಖರೀದಿಸಿ ಪ್ರಯಾಣಿಸಬೇಕು ಮತ್ತು ಒಂದು ಬಸ್‌ನಲ್ಲಿ ಒಟ್ಟು ಬಸ್‌ ಸಾಮರ್ಥ್ಯದ ಶೇ.40% ಜನ ಮಾತ್ರ ಪ್ರಯಾಣಿಸಬಹುದು ಎಂದು ನಿಯಮಗಳನ್ನು ಸರ್ಕಾರ ವಿಧಿಸಿತ್ತು. ಆದರೆ ಒಂದು ಬಸ್‌ನ ಪ್ರಯಾಣ ದರ ಕಿ.ಮೀ.ಗೆ 39 ರೂಪಾಯಿಯಂತೆ ನಿಗದಿ ಮಾಡಿದ್ದು, ಒಬ್ಬ ಪ್ರಯಾಣಿಕನಿಗೆ ಲಾಕ್‌ಡೌನ್‌ಗೂ ಮೊದಲು ಇದ್ದ ಪ್ರಯಾಣ ದರಕ್ಕಿಂತ ಮೂರು/ನಾಲ್ಕು ಪಟ್ಟು ಹೆಚ್ಚಿಸಲಾಗಿದೆ ಎಂದು ಅವರು ಬಾಯಿಬಿಟ್ಟಿರಲಿಲ್ಲ. ಇದರಿಂದ ಇತ್ತ ಒಂದೂವರೆ ತಿಂಗಳಿನಿಂದ ಬೆಂಗಳೂರಿನಲ್ಲಿ ಲಾಕ್‌ಡೌನ್‌ನಲ್ಲಿ ಸಿಕ್ಕಿಬಿದ್ದು ಹೊಟ್ಟೆ ಬಟ್ಟೆಗಿಲ್ಲದೇ ಕಷ್ಟ ಅನುಭವಿಸಿದ್ದ ಕಾರ್ಮಿಕರು ಅಂತೂ ತಮ್ಮೂರು ತಲುಪುವ ಆಸೆಯಲ್ಲಿ ಬನ್ನಪ್ಪ ಪಾರ್ಕ್‌ ಬಳಿ ಬಂದರೆ ಅವರಿಗೆ ನಿರಾಶೆ ಕಾದಿತ್ತು.

ಏಕೆಂದರೆ ಕಾರ್ಮಿಕನೊಬ್ಬ 450 ರೂ ಕೊಟ್ಟು ರಾಯಚೂರಿಗೆ ಪ್ರಯಾಣಿಸುವುದೇ ಲಾಕ್‌ಡೌನ್‌ನಿಂದಾಗಿ ಕಷ್ಟವಾಗಿರುವಾಗ, ಸರ್ಕಾರ ರಾಯಚೂರಿಗೆ ಒಬ್ಬರಿಗೆ 1203 ರೂ ನಿಗಧಿಪಡಿಸಿದೆ! ಉತ್ತರ ಕನ್ನಡಕ್ಕೆ 1493 ರೂ! ಯಾದಗಿರಿಗೆ 1411ರೂ! ಹೆಚ್ಚು ಕಮ್ಮಿ ಎರಡು ತಿಂಗಳು ಯಾವುದೇ ಕೆಲಸವಿಲ್ಲ, ಕೂಲಿಯಿಲ್ಲದೇ ಇದ್ದಬದ್ದ ಹಣವನ್ನೆಲ್ಲಾ ದಿನಬಳಕೆಯ ವಸ್ತುಗಳಿಗಾಗಿ ಬಳಸಿರುವ ಆ ಕಾರ್ಮಿಕರು ಇಷ್ಟೊಂದು ಹಣವನ್ನು ಭರಿಸುವುದೇಗೆ ಎನ್ನುವ ಸಣ್ಣ ಕಾಮನ್‌ ಸೆನ್ಸ್‌ ಕೂಡ ಸರ್ಕಾರಕ್ಕಿಲ್ಲ.

ಸರ್ಕಾರ ನಿಗಧಿಪಡಿಸಿರುವ ದರಪಟ್ಟಿ

ಕೂಲಿ ಕೆಲಸ ಹುಡುಕಿಕೊಂಡು ದೂರದ ಜಿಲ್ಲೆಗಳಿಂದ ವಲಸೆ ಬಂದಿದ್ದ ಕೂಲಿ ಕಾರ್ಮಿಕರು ತಿಂಗಳಿಗೆ ಹೆಚ್ಚೆಂದರೆ 6,000 ದಿಂದ 8,000ದ ವರೆಗೆ ದುಡಿಯಬಹುದು. ಆ ದುಡಿಮೆಯಲ್ಲೇ ತಮ್ಮ ಇಡೀ ಕುಟುಂಬವನ್ನುಯ ಸಾಕುವುದರ ಜೊತೆಗೆ ಮಕ್ಕಳ ಭವಿಷ್ಯ ರೂಪಿಸಲು ಕಷ್ಟಪಡುತ್ತಿದ್ದಾರೆ. ಹೀಗಿರುವಾಗ ಲಾಕ್‌ಡೌನ್‌ ಆಗಿ ತಿಂಗಳುಗಳೇ ಕಳೆದಿದ್ದು, ಅಂದಿನಿಂದ ಕೂಲಿಯೂ ಇಲ್ಲದೆ ಹೊಟ್ಟೆ ಪಾಡಿಗೆ ಬೆಂಗಳೂರಿನಲ್ಲಿ ಏನೂ ಸಿಗದೆ ತಮ್ಮೂರಿಗೆ ತೆರೆಳಲು ಮುಂದಾಗಿದ್ದಾರೆ. ಹೀಗಿರುವಾಗ ಮೂರು ನಾಲ್ಕು ಜನ ಇರುವ ಕುಟುಂಬವೊಂದು ಉತ್ತರ ಕರ್ನಾಟಕದ ತಮ್ಮ ಹಳ್ಳಿಗೆ ಮರಳಬೇಕಾದರೆ ಕನಿಷ್ಟ 5-6 ಸಾವಿರ ಹಣ ಹೊಂದಿರಬೇಕಾಗುತ್ತದೆ. ಅಂದರೆ, ಅದು ಅವರ ಕುಟುಂಬದ ಒಂದು ತಿಂಗಳ ಆದಾಯ. ಅಷ್ಟು ಹಣವನ್ನು ಅವರು ಹೊಂದಿಸುವುದೇಗೆ? ತಮ್ಮದಲ್ಲದ ತಪ್ಪಿಗೆ ಈ ಕಾರ್ಮಿಕರೇಕೆ ಇಷ್ಟು ನೋವು ಅನುಭವಿಸಬೇಕು? ಕಾರ್ಮಿಕರ ಕುರಿತಾಗಿ ಸರ್ಕಾರ ಇಷ್ಟು ಅಮಾನವೀಯವಾಗಿ ವರ್ತಿಸಬಾರದಿತ್ತು ಎಂಬ ಆಕ್ರೋಶ ತೀವ್ರವಾಗಿ ಕೇಳಿಬಂದಿದೆ.

ಸರ್ಕಾರದ ವಾದವೇನು?

ಈಗಾಗಲೇ ಕೆ.ಎಸ್‌.ಆರ್‌.ಟಿ.ಸಿ ನಷ್ಟದಲ್ಲಿದೆ. ಅಲ್ಲದೇ ಕೇವಲ 40% ಜನರನ್ನು ಮಾತ್ರ ಕೊಂಡೊಯ್ಯಬೇಕು. ವಾಪಸ್‌ ಬೆಂಗಳೂರಿಗೆ ಬಸ್‌ ಖಾಲಿ ಬರಬೇಕು. ಇದೆಲ್ಲವನ್ನು ಕೂಡಿಸಿ ಆ ಭಾರವನ್ನು ಕಾರ್ಮಿಕರ ತಲೆಯ ಮೇಲೆ ಹಾಕಲು ಸರ್ಕಾರ ನಿರ್ಧರಿಸಿದೆ. ಒಂದೂವರೆ ತಿಂಗಳು ನೋವುಂಡು ಜರ್ಜರಿತವಾಗಿರುವ ಕಾರ್ಮಿಕರನ್ನು ಉಚಿತವಾಗಿ ಅವರ ಊರುಗಳಿಗೆ ಕಳಿಸಬೇಕಾದ ಸರ್ಕಾರ ಅವರಿಂದಲೇ ಲೂಟಿಗೆ ಇಳಿದಿರುವುದು ನಾಗರೀಕ ಸಮಾಜ ತಲೆ ತಗ್ಗಿಸುವಂತೆ ಆಗಿದೆ ಎಂದು ಹಲವಾರು ಕಾರ್ಮಿಕರು ದೂರಿದ್ದಾರೆ.

ಕಾರಣರಾರು?

ಸಂಪುಟ ಸಭೆಯಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ನಿಗಧಿಪಡಿಸಬೇಕೆಂದು ಸೂಚಿಸಿದವರು ಸಾರಿಗೆ ಸಚಿವ ಮತ್ತು ಉಪಮುಖ್ಯಮಂತ್ರಿ ಲಕ್ಷ್ಮಣ್‌ ಸವದಿ ಎಂದು ಹೇಳಲಾಗುತ್ತಿದೆ. ಅಲ್ಲದೇ ಮತ್ತೊಬ್ಬ ಉಪಮುಖ್ಯಮಂತ್ರಿ ಅಶ್ವಥ್‌ ನಾರಾಯಣ್‌ ಇದಕ್ಕೆ ಒತ್ತಾಯಿಸಿದ್ದಾರೆ ಎಂದು  ಹೆಸರು ಹೇಳಲಿಚ್ಚಿಸದ ಹಿರಿಯ ಐಎಎಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉತ್ತರ ಕರ್ನಾಟಕದವರೇ ಆದ, ಸಾರಿಗೆ ಸಚಿವನಾಗಿ, ಉಪಮುಖ್ಯಮಂತ್ರಿಯಾಗಿ ಲಕ್ಷ್ಮಣ್‌ ಸವಧಿಯವರ ಈ ನಿರ್ಧಾರ ಅಮಾನವೀಯವಾದುದ್ದಾಗಿದೆ. ಬಹುತೇಕ ವಲಸೆ ಕಾರ್ಮಿಕರು ಉತ್ತರ ಕರ್ನಾಟಕದವರೆ ಆಗಿದ್ದು ಅವರ ಪಾಲಿಗೆ ಒಂದೂ ಒಳ್ಳೇಯ ಕೆಲಸ ಮಾಡಲಾಗದ ಇವರು ಇಂದು ಇಂತಹ ದುಷ್ಟ ನಿರ್ಧಾರ ತೆಗೆದುಕೊಂಡಿರುವುದು ಕಾರ್ಮಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನು ಐಟಿಬಿಟಿ ಸಚಿವ ಮತ್ತು ಉಪಮುಖ್ಯಮಂತ್ರಿ ಅಶ್ವಥ್‌ ನಾರಾಯಣ್‌ಗೆ ಕಾರ್ಮಿಕರ ಸಂಕಷ್ಟಕ್ಕಿಂತ ಬೆಂಗಳೂರಿನ ರಿಯಲ್‌ ಎಸ್ಟೇಟ್‌ ಕುಳಗಳ ಹಿತವೇ ಮುಖ್ಯವಾಗಿದೆ. ಕಾರ್ಮಿಕರೆಲ್ಲ ತಮ್ಮ ಊರುಗಳಿಗೆ ಹೊರಟುಹೋದರೆ ಇನ್ನು ಕೆಲವೇ ದಿನಗಳಲ್ಲಿ ಕಟ್ಟಡ ಕಾಮಗಾರಿ ಆರಂಭವಾದರೆ ಕಾರ್ಮಿಕರ ಕೊರತೆ ಉಂಟಾಗುತ್ತದೆ ಎಂಬ ದೂರಾಲೋಚನೆ ಅವರದು. ಒಟ್ಟಿನಲ್ಲಿ ಇದರಲ್ಲಿ ನಲುಗಿಹೋಗಿರುವವರು ಮಾತ್ರ ಕಾರ್ಮಿಕರಾಗಿದ್ದಾರೆ.

ಮುಖ್ಯಮಂತ್ರಿಗಳನ್ನು ಭೇಟಿಯಾಗುತ್ತೇನೆ: ಪ್ರಿಯಾಂಕ್‌ ಖರ್ಗೆ

ಈ ಕುರಿತು ನಾನುಗೌರಿ.ಕಾಂ ಮಾಜಿ ಸಚಿವರಾದ ಪ್ರಿಯಾಂಕ್‌ ಖರ್ಗೆಯವರನ್ನು ಮಾತಾಡಿಸಿತು. ಅವರು “ಈಗಾಗಲೇ ಎರಡು ತಿಂಗಳಿನಿಂದ ಕಾರ್ಮಿಕರಿಗೆ ಕೆಲಸ, ಕೂಲಿ ಸಿಗದೇ ಸಂಕಷ್ಟದಲ್ಲಿದ್ದಾರೆ. ಇನ್ನು ನಮ್ಮ ಜೀವನ ಸಾಕು ನಮ್ಮೂರಿಗೆ ಹೋಗಿ, ನಮ್ಮ ಮಣ್ಣಿನಲ್ಲಿ ಪ್ರಾಣ ಬಿಡೋಣ ಎಂದು ನಿರ್ಧರಿಸಿದ್ದಾರೆ. ಅದಕ್ಕೂ ಈ ಸರ್ಕಾರ ಅವಕಾಶ ಕೊಡದಷ್ಟು ಅಮಾನವೀಯವಾಗಿಬಿಟ್ಟಿದೆ. ಟಿಕೆಟ್‌ ಬೆಲೆಯನ್ನು ಹೆಚ್ಚಿಸುವ ಮೂಲಕ ಸಂಕಷ್ಟದಲ್ಲಿರುವ ಬಡವರ ಮೇಲೆ ಸರ್ಕಾರ ಮತ್ತೊಮ್ಮೆ ಬರೆ ಎಳೆಯುತ್ತಿದೆ. ಕಾಮಿರ್ಕರು 5-6 ಸಾವಿರ ಕೊಟ್ಟು ಊರಿಗೆ ಹೋಗುವಷ್ಟು ಶ್ರೀಮಂತರಾಗಿದ್ದರೆ ಅವರಿಗೆ ಸರ್ಕಾರ ಏಕೆ ರೇಷನ್‌ ಮತ್ತು ಆಹಾರ ಕಿಟ್‌ ಕೊಡಬೇಕಿತ್ತು ಹೇಳಿ? ಈ ಸರ್ಕಾರಕ್ಕೆ ಯಾರು ಸಲಹೆ ಕೊಡುತ್ತಿದ್ದಾರೆ ಗೊತ್ತಾಗತ್ತಿಲ್ಲ” ಎಂದು ಕಿಡಿಕಾರಿದರು.

ಪ್ರಿಯಾಂಕ್‌ ಖರ್ಗೆ

ಅಮಿತ್‌ ಶಾರವರು ಉತ್ತರಖಂಡದಿಂದ 1800 ಕಾರ್ಮಿಕರನ್ನು ಉಚಿತವಾಗಿ ವಾಪಸ್‌ ಕರೆಸಿಕೊಳ್ಳುತ್ತಾರೆ. ಕೇರಳದವರು ರಾಜಸ್ಥಾನದಿಂದ ತಮ್ಮ ಕಾರ್ಮಿಕರನ್ನು ಉಚಿತವಾಗಿ ಕರೆಸಿಕೊಳ್ಳುತ್ತಾರೆ. ತೆಲಂಗಾಣದಿಂದ ಜಾರ್ಖಂಡ್‌ ಕಾರ್ಮಿಕರು ಉಚಿತರವಾಗಿ ತೆರಳಿದ್ದಾರೆ. ಆದರೆ ನಮ್ಮ ಕರ್ನಾಟಕದಿಂದ ಕರ್ನಾಟಕದ ಇನ್ನೊಂದು ಜಿಲ್ಲೆಗೆ ಹೋಗಲು ಇಷ್ಟು ಸಾವಿರ ಹಣ ಕೊಡಬೇಕು ಎಂದರೆ ಯಾವ ನ್ಯಾಯ? ಈ ಕುರಿತು ಸಿಎಂಗೆ ಪತ್ರ ಬರೆಯುತ್ತಿದ್ದು, ಇಂದೇ ಅವರನ್ನು ಭೇಟಿಯಾಗಿ ಚರ್ಚಿಸುತ್ತೇನೆ ಎಂದರು.

 

ಸರಕಾರದ ದಿವಾಳಿತನಕ್ಕೆ ಸಾಕ್ಷಿ: ರಜಾಕ್‌ ಉಸ್ತಾದ್‌

ಅದೇ ರೀತಿಯಾಗಿ ಹೈದರಾಬಾದ್‌ ಕರ್ನಾಟಕ ಹೋರಾಟಗಾರರಾದ ರಜಾಕ್‌ ಉಸ್ತಾದ್‌ರವರು ಪ್ರತಿಕ್ರಿಯಿಸಿ “ಸರಕಾರ ಲಾಕಡೌನ್‌ ಘೋಷಿಸಿದ ನಂತರ ಬಡವರು, ನಿರ್ಗತಿಕರು, ಕೂಲಿಕಾರ್ಮಿಕರ ಬಗ್ಗೆ ಯಾವುದೇ ಪರಿಹಾರ ಕಾರ್ಯಕ್ರಮ ನೀಡದೇ, ಈಗ

ರಜಾಕ್ ಉಸ್ತಾದ್

ಕಾರ್ಮಿಕರನ್ನು ಅವರ ಊರುಗಳಿಗೆ ತೆರಳಲು ಬಸ್ ಗಳ ವ್ಯವಸ್ಥೆ ಮಾಡುವದಾಗಿ ಹೇಳಿದ ಸರಕಾರ ಬಸ್ ದರವನ್ನು ಮೂರುಪಟ್ಟು ಹೆಚ್ಚಿಗೆ ಹಣವನ್ನು ಪಡೆಯುವದರ ಮೂಲಕ ಹಗಲು ದರೋಡೆಗೆ ಇಳಿದಿದೆ. ಬಡವರ ಬಡತನವನ್ನು ದುರುಪಯೋಗ ಪಡಿಸಿಕೊಂಡು ಅವರ ಸುಲಿಗೆಗೆ ಇಳಿದಿರುವದು ಸರಕಾರದ ದಿವಾಳಿತನಕ್ಕೆ ಸಾಕ್ಷಿಯಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಕಾರ್ಮಿಕರ ಸಂಕಷ್ಟದ ಕುರಿತಾಗಿ ನಡೆಯುತ್ತಿರುವ ಸರ್ವೆಯ ಭಾಗವಾಗಿ ಕೆಲ ಕಾರ್ಮಿಕರಿಗೆ ಸ್ವಯಂಸೇವಕರು ಫೋನ್‌ ಮಾಡಿದಾಗ “ಅವರು ಸರ್‌ ದಯವಿಟ್ಟು ನಮ್ಮೂರಿಗೆ ತೆರಳಲು ಅವಕಾಶ ಮಾಡಿಕೊಡಿ, ಒಂದಷ್ಟು ಸಾಲ ಕೊಡಿ ಎಂದು ಅವಲತ್ತುಕೊಳ್ಳುತ್ತಿರುವ” ದೃಶ್ಯಗಳು ಸಾಮಾನ್ಯವಾಗಿವೆ. ಇನ್ನು ಕೆಲವರು ಗರ್ಭಿಣಿ ಸ್ತ್ರೀಯರಿದ್ದು ಊರಿಗೆ ಹೋಗಲು ಹಣವಿಲ್ಲದೇ ಒದ್ದಾಡುವ ಪರಿಸ್ಥಿತಿಯನ್ನು ವಿವರಿಸುತ್ತಿದ್ದಾರೆ. ಹಾಗಾಗಿ ಸರ್ಕಾರ ಕೂಡಲೇ ಉಚಿತವಾಗಿ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಅವಕಾಶಮಾಡಿಕೊಡಬೇಕಿದೆ. ಯಾವು ಯಾವುದಕ್ಕೋ ಕೋಟ್ಯಾಂತರ ಹಣ ಖರ್ಚು ಮಾಡುವ ಸರ್ಕಾರ ನಮ್ಮ ನಾಡು ಕಟ್ಟುವ ಕಾರ್ಮಿಕರಿಗೆ ಕೆಲವು ಲಕ್ಷ ಕೋಟಿಗಳನ್ನು ವ್ಯಯಿಸಿದರೆ ಕಳೆದುಕೊಳ್ಳುವುದು ಏನು ಇಲ್ಲ. ಇಲ್ಲವಾದರೆ ಕಾರ್ಮಿಕರ ಕಣ್ಣೀರು ಮತ್ತಷ್ಟು ಹೆಚ್ಚಾಗಲಿದ್ದು, ಅವರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights