ಅಂತರಾಷ್ಟ್ರೀಯ ಭಯೋತ್ಪಾದಕ ಸಂಘಟನೆಯ ಜತೆ ನಂಟು : ಓರ್ವ ಆರೋಪಿ ಬಂಧನ

ಅಂತರಾಷ್ಟ್ರೀಯ ಭಯೋತ್ಪಾದಕ ಸಂಘಟನೆಯ ಜತೆ ನಂಟು ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಹಳೇ ಹುಬ್ಬಳ್ಳಿಯ ಅರವಿಂದ ನಗರದ ಮಹಮ್ಮದ್ ಜಾಫರ್ ಸಾದಿಕ್ ಎಂಬಾತನನ್ನು ಬಂಧಿಸಲಾಗಿದೆ. ಹಳೇಹುಬ್ಬಳ್ಳಿ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು, ಆಂತರಿಕ ಭದ್ರತಾ ಸಿಬ್ಬಂದಿಗೆ ಒಪ್ಪಿಸಿದ್ದಾರೆ. ಮಹಮ್ಮದ್ ಜಾಫರ್ ಸಾದಿಕ್ ಹುಬ್ಬಳ್ಳಿಯ ರೈಲ್ವೆ ಕಾರ್ಯಾಗಾರದಲ್ಲಿ ಮೆಕ್ಯಾನಿಕ್‌ ಕೆಲಸ ನಿರ್ವಹಿಸುತ್ತಿದ್ದ. ಉತ್ತರ ಪ್ರದೇಶದ ಹಿಂದೂ ಸಂಘಟನೆಯ ಮುಖಂಡ ಕಮಲೇಶ್ ತಿವಾರಿ ಹತ್ಯೆ ಪ್ರಕರಣದಲ್ಲಿ ಐಎಸ್‌ಡಿ ಪೊಲೀಸರಿಗೆ ಬೇಕಾಗಿದ್ದ. ಈ ಹಿಂದೆ ಸಿಮಿ ಸೇರಿ ದೇಶವಿರೋಧಿ ಸಂಘಟನೆ ಜತೆ ಗುರುತಿಸಿಕೊಂಡಿದ್ದ ಆರೋಪವೂ ಮಹಮ್ಮದ್ ಜಾಫರ್‌ ಸಾದಿಕ್‌ ಮೇಲಿದೆ. ಆದರೆ ಹಮ್ಮದ್ ಜಾಫರ್ ಸಾಧಿಕ್ ಅಮಾಯಕ ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ. ಆತ ಅಪರಾಧ ಚಟುವಟಿಕೆಯಲ್ಲಿ ಭಾಗವಹಿಸುವಂತಹ ವ್ಯಕ್ತಿಯಲ್ಲ ಎಂದು ಪತ್ನಿ ಕಣ್ಣೀರು ಸುರಿಸಿದ್ದಾರೆ. ಸಾಧಿಕ್‌ ಪತ್ನಿ ಬ್ರೇನ್‌ ಹ್ಯಾಮರೇಜ್‌ನಿಂದ ಬಳಲುತ್ತಿದ್ದಾರೆ. ಮೂವರು ಪುಟ್ಟ ಮಕ್ಕಳಿವೆ. ಬಂಧಿತನಿಗೆ ಮೂವರು ಸಹೋದರರು ಮತ್ತು ಇಬ್ಬರು ಸಹೋದರಿಯರಿದ್ದಾರೆ. ಎಲ್ಲರೂ ಹುಬ್ಬಳ್ಳಿಯಲ್ಲಿಯೇ ವಾಸಿಸುತ್ತಾರೆ. ಮಹಮ್ಮದ್ ಜಾಫರ್ ಸಾಧಿಕ್‌ನನ್ನು ಪೊಲೀಸರು ವಿಚಾರಣೆ ನಡೆಸುವುದಿದೆ ಎಂದು ಹೇಳಿ ಕರೆದುಕೊಂಡು ಹೋಗಿದ್ದಾರೆ. ಆತ ಸುನ್ನಿ ಜಮಾತ್ ಸಂಘಟನೆ ಜೊತೆಗೆ ಸೇರಿ ಸಮಾಜ ಸೇವೆ ಮಾಡುತ್ತಿದ್ದ. ಬಡ ಹಿಂದೂಗಳ ಮಕ್ಕಳ ವಿದ್ಯಾಭ್ಯಾಸ, ಮದುವೆಗೂ ಆರ್ಥಿಕ ಸಹಾಯ ಮಾಡಿದ್ದ. ಆತನ ಮೇಲೆ ಸುಳ್ಳು ಆರೋಪ ಹೊರಿಸಿ ಕರೆದೊಯ್ಯಲಾಗಿದೆ ಎಂದು ಮಹಮ್ಮದ್‌ ಜಾಫರ್‌ ಸಾಧಿಕ್ ಪತ್ನಿ, ಸಹೋದರಿ ಮತ್ತು ತಮ್ಮ ಆರೋಪಿಸಿದ್ದಾರೆ.

ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ನಡೆದ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ರೈಲ್ವೆ ಪ್ರೊಟಕ್ಷನ್ ಫೋರ್ಸ್ ಡಿಜಿ ಅರುಣಕುಮಾರ್‌ ಮತ್ತು ರೈಲ್ವೇ ಪೊಲೀಸ್ ವರಿಷ್ಠಾಧಿಕಾರಿ ಬೋರಲಿಂಗಯ್ಯ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಜೀವಂತ ಸ್ಪೋಟಕಗಳನ್ನು ಇರಿಸಿದ ಸ್ಥಳಕ್ಕೆ ತೆರಳಿ ವೀಕ್ಷಿಸಿದ್ದಾರೆ‌. ಆರ್‌ಪಿಎಫ್ ಸಿಬ್ಬಂಧಿಯಿಂದ ಮಾಹಿತಿ ಸಂಗ್ರಹಿಸಿದ್ದಾರೆ. ನಾಲ್ಕು ತಂಡಗಳನ್ನು ಮಾಡಿ ತನಿಖೆ ನಡೆಸಲಾಗುತ್ತಿದ್ದು, ಫಾರೆನ್ಸಿಕ್ ಮತ್ತು ಬ್ಯಾಲೆಸ್ಟಿಕ್ ತಜ್ಞರು ಸ್ಪೋಟಕಗಳ ಮಾಹಿತಿ ಕಲೆಹಾಕಿದ್ದಾರೆ. ಸ್ಪೋಟಕ್ಕೆ ಬಳಸಿದ ವಸ್ತುಗಳ ಮಾದರಿಗಳನ್ನು ಸಂಗ್ರಹಿಸಿದ್ದಾರೆ‌. ಕೊಲ್ಹಾಪುರದ ಎಸ್‌ಪಿ ನೇತ್ರತ್ವದ ತಂಡ ಕೂಡ ತನಿಖೆ ನಡೆಸುತ್ತಿದೆ. ಸ್ಪೋಟಕಗಳನ್ನು ಹುಬ್ಬಳ್ಳಿಗೆ ಬರುವ ಹಿಂದಿನ ನಿಲ್ದಾಣದಲ್ಲಿಯೇ ರೈಲಿನಲ್ಲಿ ಇಟ್ಟಿರುವ ಸಾಧ್ಯತೆಯಿದೆ ಎಂದು ರೈಲ್ವೇ ಪೊಲೀಸ್ ವರಿಷ್ಠಾಧಿಕಾರಿ ಬೋರಲಿಂಗಯ್ಯ ಹೇಳಿದ್ದಾರೆ. ಬಾಕ್ಸ್ ಮೇಲೆ ಬರೆಯಲಾಗಿದ್ದ ಬರಹಗಳು ಹಲವು ಸಂಶಯಗಳನ್ನು ಹುಟ್ಟುಹಾಕಿದ್ದು. ಘಟನೆಗೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಿಲ್ಲ,‌ ಸಧ್ಯಕ್ಕೆ ಯಾವುದೇ ಸುಳಿವು ಸಿಕ್ಕಿಲ್ಲ. ವಿವಿಧ ಆಯಾಮಗಳಿಂದ ಪರಿಶೀಲನೆ ನಡೆಯುತ್ತಿದೆ ಎಂದವರು ತಿಳಿಸಿದ್ದಾರೆ.

ಹುಬ್ಬಳ್ಳಿ- ಧಾರವಾಡದಾದ್ಯಂತ ಧಾರಾಕಾರ ಮಳೆ ಸುರಿಯುತ್ತಿದೆ. ಮಳೆಯ ಹೊಡೆತಕ್ಕೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ತಗ್ಗು ಪ್ರದೇಶದ ಮನೆಗಳಿಗೆ ಚರಂಡಿ ನೀರು ನುಗ್ಗಿ ಜನರು ಪರದಾಡುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಹಲವು ಮನೆಗಳು ಧಾರಾಶಾಹಿಯಾಗಿವೆ. ಬೆಣ್ಣೆ ಹಳ್ಳ, ತುಪ್ಪರಿಹಳ್ಳ, ಯರೇಹಳ್ಳದ ಪ್ರವಾಹದಿಂದಾಗಿ ಸಾವಿರಾರು ಹೆಕ್ಟೇರ್ ಬೆಳೆನಾಶವಾಗಿದೆ. ಹುಬ್ಬಳ್ಳಿ, ನವಲಗುಂದ, ಕುಂದಗೋಳದಲ್ಲಿ ಅಪಾರ ಪ್ರಮಾಣದ ಹತ್ತಿ, ಮೆಣಸಿನಕಾಯಿ, ಶೇಂಗಾ, ಈರುಳ್ಳಿ ಬೆಳೆ ನಷ್ಟವಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದೆ ಅನ್ನದಾತರು ಕಂಗಾಲಾಗಿದ್ದಾರೆ. ಹುಬ್ಬಳ್ಳಿಯ ಚೆನ್ನಾಪುರದ ಬಳಿ ಪ್ರವಾಹದ ರಭಸಕ್ಕೆ ರಸ್ತೆಗಳು ಕೊಚ್ಚಿಹೋಗಿವೆ. ಸಾರಿಗೆ ಸಂಸ್ಥೆಯ ಬಸ್ ಚಾಲಕನ ಸಮಯಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದೆ. ಕರ್ಕಿ ಹಳ್ಳದ ನೆರೆಯ ರಭಸಕ್ಕೆ ಕೊಚ್ಚಿಹೋಗಿದ್ದ ರಸ್ತೆಯ ಗುಂಡಿಗೆ ಬಸ್‌ ಕುಸಿದಿದೆ. ಗುಂಡಿಯಲ್ಲಿ ಸಿಲುಕಿ ಪಲ್ಟಿಯಾಗುತ್ತಿದ್ದ ಬಸ್‌ನ್ನು ಚಾಲಕ ನಿಯಂತ್ರಿಸಿದ್ದಾನೆ. ಗಿರಿಯಾಲದಿಂದ ಚೆನ್ನಾಪುರ ಮಾರ್ಗವಾಗಿ ಹುಬ್ಬಳ್ಳಿಗೆ ಬರುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಇದಾಗಿದ್ದು, 20ಕ್ಕೂ ಹೆಚ್ಚು ಪ್ರಯಾಣಿಕರು ಬಚಾವಾಗಿದ್ದಾರೆ. ರಸ್ತೆ ದಾಟುವಾಗ ಬೈಕ್‌ವೊಂದು ನೆರೆಯಲ್ಲಿ ಕೊಚ್ಚಿಹೋದ ಘಟನೆ ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕಿನ ಶಿರೂರು ಗ್ರಾಮದ ಬಳಿ ನಡೆದಿದೆ. ಧಾರಾಕಾರ ಮಳೆಯಿಂದ ರಸ್ತೆಯ ಮೇಲೆ ರಭಸವಾಗಿ ನೀರು ಹರಿಯುತ್ತಿತ್ತು. ಬೈಕ್‌ ಸವಾರ ಅಜಾಗರೂಕತೆಯಿಂದ ನೆರೆಯಲ್ಲಿಯೇ ಬೈಕ್‌ ಓಡಿಸಿಕೊಂಡು ರಸ್ತೆ ದಾಟಲು ಮುಂದಾಗಿದ್ದ. ಈ ವೇಳೆ ನೀರಿನ ಹೊಡತಕ್ಕೆ ಬೈಕ್‌ ನೆಲಕ್ಕಪ್ಪಳಿಸಿದೆ. ಕೂಡಲೆ ಬೈಕ್‌ನಿಂದ ಕಳೆಗ ಜಿಗಿದ ಯುವಕ ಬಚಾವಾಗಿದ್ದಾನೆ. ಬೈಕ್‌ ನೀರಲ್ಲಿಯೇ ಕೊಚ್ಚಿ ಹೋಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights