ಫ್ಯಾಕ್ಟ್‌ಚೆಕ್: ಮಹಿಳಾ ಪೊಲೀಸ್ ಪೇದೆ ಜಾತಿ ನಿಂದನೆ ಬಗ್ಗೆ ಮಾತನಾಡಿದ್ದನ್ನು ಲವ್ ಜಿಹಾದ್ ಬಗ್ಗೆ ಎಂದು ತಪ್ಪಾಗಿ ಹಂಚಿಕೆ

ದೇಶದಲ್ಲಿ ಹೆಚ್ಚುತ್ತಿರುವ ಇಸ್ಲಾಂ ಪ್ರಾಬಲ್ಯ ಮತ್ತು ಲವ್ ಜಿಹಾದ್ ಬಗ್ಗೆ ಮಹಿಳಾ ಪೇದೆಯೊಬ್ಬರು ಸತ್ಯವನ್ನು ಬಹಿರಂಗಪಡಿಸುತ್ತಿರುವ ದೃಶ್ಯಗಳು ಎಂದು ಹೇಳುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.

“ಈ ಪೊಲೀಸ್ ಮಹಿಳೆಯ ಮಾತು ಕೇಳಿ! ಇಸ್ಲಾಂ ದೇಶದ ಮೇಲೆ ಹೇಗೆ ಪ್ರಾಬಲ್ಯ ಸಾಧಿಸುತ್ತಿದೆ” ಎಂಬ ಹೇಳಿಕೆಯೊಂದಿಗೆ ವಿಡಿಯೋ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಲವ್ ಜಿಹಾದ್‌ ಬಗ್ಗೆ ಮಹಿಳಾ ಪೊಲೀಸ್‌ ಪೇದೆ ಏನು ಹೇಳಿದ್ದಾರೆ ? ಈ ವಿಡಿಯೋದ ವಾಸ್ತವ ಏನೆಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ : 

ವೀಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಸರ್ಚ್ ಮಾಡಿದಾಗ, ಇದೇ ರೀತಿಯ ದೃಶ್ಯಗಳೊಂದಿಗೆ ಮತ್ತೊಂದು ವೀಡಿಯೊವು 20 ಡಿಸೆಂಬರ್ 2016 ರಂದು ‘ಪಂಜಾಬ್ ಕೇಸರಿ’ ಪತ್ರಿಕೆ ಪ್ರಕಟಿಸಿದ ಲೇಖನದಲ್ಲಿ ಕಂಡುಬರುತ್ತದೆ. ಪಂಜಾಬ್ ಕೇಸರಿ ವಿವರಣೆಯೊಂದಿಗೆ ವೀಡಿಯೊವನ್ನು ಪ್ರಕಟಿಸಿದೆ, ” ಪೊಲೀಸ್‌ ಅಧಿಕಾರಿಯೊಬ್ಬರು ಲೇಡಿ ಕಾನ್‌ಸ್ಟೆಬಲ್ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಕ್ಕಾಗಿ ಬಹಿರಂಗಪಡಿಸಿದ್ದಾರೆ. ಮೂಲ ವಿಡಿಯೋದಲ್ಲಿ ಮಹಿಳಾ ಪೇದೆ ಇಸ್ಲಾಂ ಧರ್ಮದ ಬಗ್ಗೆ ಅಥವಾ ಲವ್ ಜಿಹಾದ್ ಬಗ್ಗೆ ಏನನ್ನೂ ಮಾತನಾಡಿಲ್ಲ.

ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಹೆಚ್ಚಿನ ಮೂಲಗಳನ್ನು ಹುಡುಕಿದಾಗ, 17 ಡಿಸೆಂಬರ್ 2016 ರಂದು ‘ಖಸ್ಖಭರ್’ ಸುದ್ದಿ ವೆಬ್‌ಸೈಟ್ ಪ್ರಕಟಿಸಿದ ಲೇಖನದಲ್ಲಿ ಈ ವೀಡಿಯೊದ ಸಂಪೂರ್ಣ ವಿವರಗಳನ್ನು ನಾವು ಕಂಡುಕೊಂಡಿದ್ದೇವೆ. ಲೇಖನದ ಪ್ರಕಾರ, ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯ ಕರ್ಹಾಲ್‌ನಲ್ಲಿ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿರುವ  ದಲಿತ ಮಹಿಳಾ ಕಾನ್‌ಸ್ಟೆಬಲ್ ರೂಪೇಶ್ ಭಾರ್ತಿ ಎಂಬುವವರು  ಎಸ್‌ಎಚ್‌ಒ ಸುಭಾಷ್ ಚಂದ್ರ ಯಾದವ್ ಅವರಿಂದ ಜಾತಿ ನಿಂದನೆ ಮತ್ತು ಮಾನಸಿಕ ಕಿರುಕುಳದ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಮಾಧ್ಯಮಗಳಿಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.

ಮಾಧ್ಯಮದವರೊಂದಿಗೆ ಮಾತನಾಡಿದ ರೂಪೇಶ್ ಭಾರ್ತಿ, ಸುಭಾಷ್ ಚಂದ್ರ ಯಾದವ್ ಅವರು ತಮ್ಮ ಮನೆಯಲ್ಲಿ ತಮ್ಮ ಮಕ್ಕಳಿಗೆ ಊಟ ಮಾಡಿಸುವಂತೆ ಹೇಳಿದ್ದರು. ನಂತರ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ನಾನು ಕೆಲಸಕ್ಕೆ ಹಾಜರಾಗಿದ್ದರೂ ಯಾದವ್ ನನ್ನ ” ಕರ್ತವ್ಯಕ್ಕೆ ಗೈರಾಗಿದ್ದೇನೆ ” ಎಂದು ಹೇಳಿದ್ದಾರೆ ಎಂದು ಭಾರ್ತಿ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಈ ಬಗ್ಗೆ ಸಿಒ ಕರ್ಹಾಲ್ ಅವರಿಗೆ ಮೌಖಿಕವಾಗಿ ದೂರು ನೀಡಿದ್ದು, ಅವರು ಸಮಸ್ಯೆಯನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದರು. ಇದಲ್ಲದೆ, ಸುಭಾಷ್ ಚಂದ್ರ ಯಾದವ್ ತಾನು ಸಿಗರೇಟ್ ಸೇದಿ ನನ್ನ ಮುಖದ ಮೇಲೆ ಹೊಗೆಯನ್ನು ಬಿಡುವ ಮೂಲಕ ಅಸಭ್ಯವಾಗಿ ವರ್ತಿಸಿದ್ದಾರೆ, ಮತ್ತು ಜಾತಿ ಸೂಚಕ ಪದಬಳಕೆ ಮಾಡಿ ಮಾತನಾದ್ದಾರೆ ಎಂದು ಆರೋಪಿಸಿದ್ದರು.

ಈ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಉತ್ತರ ಪ್ರದೇಶ ಪೊಲೀಸರು ಮತ್ತು ‘ಐಜಿ ಆಗ್ರಾ’ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದರು ಮತ್ತು ಈ ವಿಷಯದಲ್ಲಿ ತಕ್ಷಣದ ತನಿಖೆ ಮತ್ತು ಪರಿಣಾಮಕಾರಿ ಕ್ರಮಕ್ಕೆ ಭರವಸೆ ನೀಡಿದರು. ಈ ಎಲ್ಲಾ ಆಧಾರಗಳಿಂದ ತಿಳಿದುಬರುವುದೇನೆಂದರೆ, ಮಹಿಳಾ ಪೊಲೀಸ್‌ ಪೇದೆ ಮಾತನಾಡಿರುವುದು ಮೇಲಧಿಕಾರಿಯಿಂದ ತನ್ನ ಮೇಲೆ ನಡೆದ ಜಾತಿ ನಿಂದನೆ ಬಗ್ಗೆಯೇ ಹೊರತು ಲವ್ ಜಿಹಾದ್ ಬಗ್ಗೆ ಅಲ್ಲ ಎಂಬುದು ಸ್ಪಷ್ಟವಾಗಿದೆ.

ಆದರೆ ವೈರಲ್ ಪೋಸ್ಟ್ ಬೇರೆ ಆಡಿಯೊವನ್ನು ಸೇರಿಸುವ ಮೂಲಕ ಮೂಲ ವೀಡಿಯೊದ ಬದಲಾದ ಆವೃತ್ತಿಯನ್ನು ಹಂಚಿಕೊಂಡಿದೆ ಎಂದು ತೀರ್ಮಾನಿಸಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, 2016 ರಲ್ಲಿ ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯ ಕರ್ಹಾಲ್‌ನಲ್ಲಿ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿರುವ  ದಲಿತ ಮಹಿಳಾ ಕಾನ್‌ಸ್ಟೆಬಲ್ ರೂಪೇಶ್ ಭಾರ್ತಿ,  ಜಾತಿ ನಿಂದನೆಯ ಬಗ್ಗೆ ದೂರು ನೀಡುವ ವೀಡಿಯೊವನ್ನು  ಲವ್ ಜಿಹಾದ್ ನಿರೂಪಣೆಯೊಂದಿಗೆ  ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಬಾಬಾ ರಾಮ್‌ದೇವರ ಪತಂಜಲಿಯಲ್ಲೂ ಬಂತೆ ಬೀಫ್ ಬಿರಿಯಾನಿ ರೆಸಿಪಿ ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights