ಅಂಫಾನ ಚಂಡಮಾರುತ : ಪಶ್ಚಿಮ ಬಂಗಾಳಕ್ಕೆ 1 ಸಾವಿರ ಕೋಟಿ ತುರ್ತು ಪರಿಹಾರ ಘೋಷಿಸಿದ ಮೋದಿ

ಕೊರೊನಾ ಕಾಲಘಟ್ಟದಲ್ಲಿ ಪಶ್ಚಿಮ ಬಂಗಾಳದಲ್ಲಿ ಅಂಫಾನ್ ಚಂಡಮಾರುತ ಅಪ್ಪಳಿಸಿದೆ. ಇದರಿಂದ ಸಾಕಷ್ಟು ಆಸ್ತಿ-ಪಾಸ್ತಿ ಹಾನಿಗೊಳಗಾಗಿದ್ದು, 80 ಜನ ಪ್ರಾಣ ಕಳೆದುಕೊಂಡಿದ್ದಾರೆ. ಇಂದು ಪ್ರಧಾನಿ ಮೋದಿಯವರು ಪಶ್ಚಿಮ ಬಂಗಾಳದ ವೈಮಾನಿಕ ಸಮೀಕ್ಷೆ ಕೈಗೊಂಡು 1 ಸಾವಿರ ಕೋಟಿ ತುರ್ತು ಪರಿಹಾರ ಘೋಷಿಸಿದ್ದಾರೆ.

ಬರೋಬ್ಬರಿ 190 ಕಿ.ಮೀ ವೇಗದಲ್ಲಿ ಅಪ್ಪಳಿಸಿದ ಅಂಫಾನ್ ಚಂಡಮಾರುತ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಅಕ್ಷರಶಃ ಘರ್ಜಿಸಿತು. ಅಂಫಾನ್ ಚಂಡಮಾರುತದ ಹೊಡೆತಕ್ಕೆ ಸಿಲುಕಿರುವ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಮರಗಳು ಧರೆಗುರುಳಿವೆ. ಭೂ ಕುಸಿತ ಸಂಭವಿಸಿದೆ. ಎಷ್ಟೋ ಮನೆಗಳು ನೆಲಕಚ್ಚಿವೆ. ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟವಾಗಿದೆ.

ಗುರುವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಚಂಡಮಾರುತ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವಂತೆ ಪ್ರಧಾನಿಯನ್ನು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ ಮೋದಿ ಅವರು ವೈಮಾನಿಕ ಸಮೀಕ್ಷೆ ನಡೆಸಿದ್ಧಾರೆ.

ಅಂಫಾನ್ ಚಂಡಮಾರುತದ ಅಬ್ಬರಕ್ಕೆ ಪಶ್ಚಿಮ ಬಂಗಾಳದ ವಿವಿಧ ಜಿಲ್ಲೆಗಳಲ್ಲಿ 80 ಮಂದಿ ಮೃತಪಟ್ಟಿದ್ದಾರೆಂದು ವರದಿಯಾಗಿದೆ. ಮೃತಪಟ್ಟ 80 ಮಂದಿ ಪೈಕಿ 15 ಮಂದಿ ಕೋಲ್ಕತ್ತಾದಲ್ಲಿಯೇ ಸಾವನ್ನಪ್ಪಿದ್ದಾರೆ. ಅಮ್ಫಾನ್ ನಿಂದ ಮೃತಪಟ್ಟ ಪ್ರತಿಯೊಬ್ಬರ ಕುಟುಂಬಗಳಿಗೆ 2 ಲಕ್ಷ ರೂ  ಪರಿಹಾರ, ಗಾಯಗೊಳಗಾದವರಿಗೆ ತಲಾ 50 ಸಾವಿರ ಮತ್ತು ಚಂಡಮಾರುತದಿಂದ ತತ್ತಿರಿಸಿರುವ ರಾಜ್ಯದ ಜನರ ಪುನರ್ವಸತಿಗಾಗಿ 1,000 ಕೋಟಿ ರೂ.ಗಳ ಪರಿಹಾರ ಮೋದಿ ಘೋಷಿಸಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights