ಅರ್ಹ ರೈತರಿಗೆ ದೊರೆಯದ ಕೃಷಿ ಸನ್ಮಾನ್ ನಿಧಿ : ಸತ್ಯಾಂಶ ಇಲ್ಲಿದೆ..

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನಮಂತ್ರಿ ಕೃಷಿ ಸನ್ಮಾನ್ ನಿಧಿ ಯೋಜನೆಯನ್ನು ದೇಶಾದ್ಯಂತ ಜಾರಿಗೊಳಿಸಿದ್ದು ಅದರ ಫಲ ಬಹುತೇಕ ಅರ್ಹ ರೈತರಿಗೆ ದೊರಕಿಲ್ಲದೇ ಇರುವುದು ಶೋಚನೀಯ ಸಂಗತಿ.  ಕೃಷಿ ಸನ್ಮಾನ್ ನಿಧಿ ಯೋಜನೆಯ ಹಣ ಪಡೆಯಲು ಬೇಕಾದ ಎಲ್ಲಾ ದಾಖಲೆಗಳನ್ನು ನೀಡಿಯೂ ಹಣ ಬ್ಯಾಂಕ್ ಖಾತೆಗೆ ಬಿದ್ದಿಲ್ಲ ಎಂಬುದು ರೈತರ ನೋವು. ಈ ಯೋಜನೆ ಜಾರಿಗೆ ಬಂದು ಒಂದು ವರ್ಷ ಪೂರೈಸಿದೆ. ಪ್ರಧಾನಿ ನರೇಂದ್ರ ಮೋದಿ ತುಮಕೂರಿನಲ್ಲಿ ಜನವರಿ 2ರಂದು ನಡೆಯಲಿರುವ ರೈತರ ಸಮಾವೇಶದಲ್ಲಿ ಕೃಷಿ ಸನ್ಮಾನ್ ನಿಧಿ ಯೋಜನೆಯ ನಾಲ್ಕನೇ ಕಂತಿನ ಹಣ ಬಿಡುಗಡೆ ಮಾಡಲಿದ್ದಾರೆ. ಹಾಗಾದರೆ ರಾಜ್ಯದಲ್ಲಿ ರೈತರಿಗೆ ಒಂದು ವರ್ಷದ ಹಣ ಆರು ಸಾವಿರ ರೂಪಾಯಿ ಬಂದಿದೆಯೇ ಇಲ್ಲವೇ ಎಂಬ ಬಗ್ಗೆ ಕ್ರಾಸ್ ಚೆಕ್ ಮಾಡಿದಾಗ ಕಂಡುಬಂದ ಸತ್ಯಾಂಶದ ವರದಿ ಇಲ್ಲಿದೆ. 

ಕೃಷಿ ಸನ್ಮಾನ್ ನಿಧಿ ಯೋಜನೆಯನ್ನು 01-12-2018ರಂದು ಪ್ರಧಾನಿ ನರೇಂದ್ರ ಮೋದಿ ವಿಧ್ಯುಕ್ತವಾಗಿ ಚಾಲನೆ ನೀಡಿದರು. ಆಗ ಉತ್ತರಭಾರತದ ಕೆಲವು ರಾಜ್ಯಗಳ ಉಪಚುನಾವಣೆಗಳು ನಡೆಯುವುದರಲ್ಲಿದ್ದವು. ಚುನಾವಣೆ ಯಲ್ಲಿ ಮತ ಸೆಳೆಯುವ ಉದ್ದೇಶವನ್ನಿಟ್ಟುಕೊಂಡೇ ಈ ಯೋಜನೆ ಜಾರಿಯಾಯಿತು. ಎರಡು ಹೆಕ್ಟೇರ್ ಅಂದರೆ 5 ಎಕರೆಯೊಳಗೆ ಭೂಮಿ ಇರುವ ರೈತರ ಖಾತೆಗಳಿಗೆ 2 ಸಾವಿರ ರೂಪಾಯಿ ಹಣವನ್ನು ನೇರ ರೈತರ ಖಾತೆಗಗಳಿಗೆ ಬಿಡುಗಡೆ ಮಾಡಲಾಯಿತು. ಅದು ಮೊದಲ ಕಂತಾಗಿತ್ತು. ಇದನ್ನು ಬೆಂಬಲಸಿದ ಅಂದಿನ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಕರ್ನಾಟಕ ಸರ್ಕಾರವೂ ವಾರ್ಷಿಕ 4 ಸಾವಿರ ರೂಪಾಯಿ ರೈತರಿಗೆ ನೀಡುವುದಾಗಿ ಘೋಷಿಸಿತು. ಇದು ಈಗ ಇತಿಹಾಸದ ಪುಟ ಸೇರಿಹೋಗಿದೆ.

ಕೇಂದ್ರ ಸರ್ಕಾರ ಈಗಾಗಲೇ ಈ ಯೋಜನೆಯಡಿ ಮೂರು ಕಂತುಗಳಲ್ಲಿ 6 ಸಾವಿರ ರೂಪಾಯಿ ಹಣವನ್ನು ಸಣ್ಣ ಮತ್ತು ಅತಿಸಣ್ಣ ರೈತರಿಗೆ ಬಿಡುಗಡೆ ಮಾಡಿದೆ ಎಂದು ಬೀಗುತ್ತಿದೆ. ಆದರೆ ವಾಸ್ತವದಲ್ಲಿ ಎಲ್ಲ ರೈತರ ಖಾತೆಗೂ ಹಣ ನೇರವರ್ಗಾವಣೆಯಾಗಿದೆಯೇ ಎಂದು ಕ್ರಾಸ್ ಚೆಕ್ ಮಾಡಿದಾಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸುಳ್ಳು ಹೇಳುತ್ತಿದೆ ಎಂಬುದು ಸಾಬೀತಾಗಿದೆ. ಕೆಲವು ಕಡೆ ಮೂರು ಕಂತುಗಳನ್ನು ಹಾಕಿ ತನ್ನ ಮಾತನ್ನು ಉಳಿಸಿಕೊಂಡಿದ್ದಾರೆ ಮೋದಿ. ಆದರೆ ಬಹುತೇಕ ಕಡೆಯ ರೈತರಿಗೆ ಒಂದು ಕಂತಿನ ಹಣವನ್ನು ಮಾತ್ರ ವರ್ಗಾವಣೆ ಮಾಡಲಾಗಿದೆ. ಅಂದರೆ ರೈತರಿಗೆ ಹಣ ನೀಡುವಲ್ಲಿ ತಾರತಮ್ಯ ಮಾಡಿರುವುದು ಗೋಚರಿಸಿದೆ.

ಯೋಜನೆ ಜಾರಿಯಾದ ಆರಂಭದಲ್ಲೇ ರೈತರು ಗ್ರಾಮ ಲೆಕ್ಕಾಧಿಕಾರಿ, ಕೃಷಿ ಇಲಾಖೆ, ಗ್ರಾಮ ಪಂಚಾಯ್ತಿ ಪಿಡಿಒಗಳ ಮೂಲಕ ಅಗತ್ಯ ದಾಖಲೆಗಳನ್ನು ನೀಡಿದ್ದಾರೆ. ಅಂದರೆ ರೈತರು ಜಮೀನು ಹೊಂದಿರುವ ಬಗ್ಗೆ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಹೀಗೆ ಸರ್ಕಾರ ಕೇಳಿದ ಎಲ್ಲಾ ದಾಖಲೆಗಳನ್ನು ನೀಡಿದ್ದಾರೆ. ಕೆಲವರಿಗೆ ಮೊದಲ ಕಂತಿನ ಹಣ ಬಂದಿದೆ. ಮತ್ತೆ ಕೆಲವರಿಗೆ ಎರಡು ಕಂತು, ಇನ್ನೂ ಕೆಲವರಿಗೆ ಮೂರು ಕಂತುಗಳ ಹಣ ಬಂದಿದೆ. ಸರ್ಕಾರ ಘೋಷಿಸಿದ ಪೂರ್ಣ ಹಣ ಬಾರದ ರೈತರು ಮತ್ತೆ ಪಿಡಿಒ, ಗ್ರಾಮ ಲೆಕ್ಕಾಧಿಕಾರಿ, ಕೃಷಿ ಇಲಾಖೆ, ಬ್ಯಾಂಕ್ ಗಳಿಗೆ ಅಲೆದು ಮೂರು ಬಾರಿ ಸೂಚಿಸಿದ ದಾಖಲೆಗಳನ್ನು ನೀಡಿದ್ದರೂ ಹಣ ಬಂದಿಲ್ಲ. ಈ ಬಗ್ಗೆ ಕೇಳಿದರೆ ನಾವು ಕಳಿಸಿದ್ದೇವೆ. ಎಲ್ಲವೂ ದೆಹಲಿಯಲ್ಲೇ ತಿರ್ಮಾನವಾಗುತ್ತದೆ ಎಂಬ ಸಬೂಬು ಹೇಳಿಕಳಿಸಿದ್ದಾರೆ.

ಕೊಪ್ಪಳ ಜಿಲ್ಲೆಯಲ್ಲಿ ಸುಮಾರು 72 ಸಾವಿರ ರೈತರು ಕೃಷಿ ಸನ್ಮಾನ್ ನಿಧಿ ಯೋಜನೆಯ ನೆರವು ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಇವರ ಪೈಕಿ 12 ಸಾವಿರ ಮಂದಿ ರೈತರಿಗೆ 6 ಸಾವಿರ ಅಂದರೆ ಮೂರು ಕಂತಿನ ಹಣ ಬಂದಿದೆ. ಉಳಿದ 60 ಸಾವಿರ ಮಂದಿ ರೈತರಿಗೆ ಒಂದು, ಎರಡು ಕಂತಿನ ಹಣ ರೈತರ ಖಾತೆಗೆ ವರ್ಗಾವಣೆಯಾಗಿದೆ. ಅಂದರೆ ಇವರಿಗೆ ಪೂರಾ ಹಣ ಬಂದಿಲ್ಲ. ಇನ್ನೂ ಶೇಕಡ 25ರಷ್ಟು ಹಣ ಬರಬೇಕು.

ಬಿಜೆಪಿ ಸಂಸದ ಎ. ನಾರಾಯಣಸ್ವಾಮಿ ಕ್ಷೇತ್ರ ಚಿತ್ರದುರ್ಗದಲ್ಲಿ ಶೇಕಡ 90ರಷ್ಟು ಹಣ ಬಂದಿದೆ. ಈ ಜಿಲ್ಲೆಯಲ್ಲಿ ಎಲ್ಲ ರೈತರು ವಾರ್ಷಿಕವಾಗಿ ನೀಡುವ ಮೂರು ಕಂತಿನ ಹಣವನ್ನು ಪಡೆದುಕೊಂಡಿದ್ದಾರೆ. ದಾಖಲೆಗಳನ್ನು ಸಮರ್ಪಕವಾಗಿ ನೀಡದ ರೈತರಿಗೆ ಮಾತ್ರ ಹಣ ಬಿಡುಗಡೆಯಾಗಿಲ್ಲ. ಉಳಿದಂತೆ ಎಲ್ಲಾ ರೈತರಿಗೂ ಹಣ ಬಂದಿದೆ ಎನ್ನುತ್ತಾರೆ.

ತುಮಕೂರು ಜಿಲ್ಲೆಯಲ್ಲಿ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಕಿಸಾನ್ ಸನ್ಮಾನ್ ನಿಧಿ ಯೋಜನೆಯಡಿ ಒಂದು ಕಂತಿನ ಹಣ ವರ್ಗಾವಣೆಯಾಗಿರುವುದು ಬಿಟ್ಟರೆ ಬಹುತೇಕ ಅರ್ಹ ಫಲಾನುಭವಿ ರೈತರಿಗೆ ಈ ಯೋಜನೆಯ ನೆರವು ದೊರೆತಿಲ್ಲ. ಕುಣಿಗಲ್ ಸಂತೆಮಾವತ್ತೂರು ರೈತ ನಾಗಣ್ಣ ಹೇಳುವ ಹಾಗೆ ನೆರವಿಗಾಗಿ ಆಧಾರ್, ಪಹಣಿ, ಬ್ಯಾಂಕ್ ಪುಸ್ತಕ ಕೊಟ್ಟರೂ ನಮಗೆ ಇದುವರೆಗೆ ಬಿಡಿಗಾಸು ನೋಡಿಲ್ಲ. ನಮ್ಮ ಗ್ರಾಮದಲ್ಲಿ ಯಾರಿಗೂ ಒಂದು ಕಂತು ಹಣವೂ ಬಂದಿಲ್ಲ. ಏನು ನಡೆಯುತ್ತಿದೆ ಎಂದು ಗೊತ್ತಿಲ್ಲ ಎನ್ನುತ್ತಾರೆ.

ಗುಬ್ಬಿ ತಾಲೂಕು ಚೇಳೂರು ರೈತ ರಾಜಣ್ಣ ಮತ್ತು ಬುಡ್ಡಣ್ಣ ಮಾತ್ರ ನಮಗೆ ಒಂದು ಕಂತಿನ ಹಣ ಬಂತು. ಬ್ಯಾಂಕಿನಿಂದ ಆ ಹಣವನ್ನು ಬಿಡಿಸಿಕೊಂಡಿದ್ದೇವೆ. ಮತ್ತು ಮೊಬೈಲ್ ನಲ್ಲಿ ಚೆಕ್ ಮಾಡಿದರೆ ಪೆಂಡಿಂಗ್ ಅಂತ ಬರ್ತಾ ಇದೆ. ನಾವು ಅವರು (ಸರ್ಕಾರ) ಹೇಳಿದ ದಾಖಲೆಗಳನ್ನು ಕೊಟ್ಟರೂ ನಮಗೆ ದುಡ್ಡು ಬರ್ತಿಲ್ಲ. ಯಾರನ್ನು ಕೇಳಿದರೂ ಏನು ಹೇಳ್ತಿಲ್ಲ.

ಈ ಕುರಿತು ನಾನುಗೌರಿ.ಕಾಂ ವತಿಯಿಂದ ಪಾವಗಡ ತಾಲೂಕು ಸೊಳಿಯಪ್ಪ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಲಾಯಿತು. ಅವರು ನನಗೆ ಎರಡು ಎಕರೆ ಜಮೀನು ಇದೆ. ಗ್ರಾಮ ಲೆಕ್ಕಾಧಿಕಾರಿ, ಪಿಡಿಒ, ಕೃಷಿ ಇಲಾಖೆಗೆ ಎರಡೆರಡು ಬಾರಿ ದಾಖಲೆ ನೀಡಿದ್ದೇನೆ. ಹಣವೂ ಇಲ್ಲ. ಉತ್ತರವೂ ಇಲ್ಲ. ಯಾರ್ನಪ್ಪ ಕೇಳಾನ. ಇಲ್ಲಿಯವರನ್ನು ಕೇಳಿದರೆ ಮೇಲಕ್ಕೆ ತೋರಿಸುತ್ತಾರೆ. ನಾವು ಅಲ್ಲಿಗೋಗಿ ಕೇಳಕಾಗಲ್ಲ.

ಹೆಂಡತಿ ಹೆಸರಿನಲ್ಲಿ 3 ಎಕರೆ ಜಮೀನಿದೆ. ಪಾಸ್ ಬುಕ್, ಆರ್.ಟಿ.ಸಿ. ಆಧಾರ್ ಎಲ್ಲ ಕೊಟ್ಟರೂ ನಮಗೆ ದುಡ್ಡೇ ಬಂದಿಲ್ಲ. ಪಿಡಿಓ, ಗ್ರಾಮ ಲೆಕ್ಕಾಧಿಕಾರಿ, ಗ್ರಾಮ ಪಂಚಾಯಿತಿ ಮತ್ತು ಕೃಷಿ ಇಲಾಖೆಯಲ್ಲಿ ಏನೋ ನಡೀತಾ ಇದೆ. ಸಣ್ಣ ರೈತರು ಅಂದರೆ ಎಲ್ಲರಿಗೂ ಕೊಡಬೇಕಲ್ವ, ಕೆಲವ್ರಿಗೆ ಕೊಡ್ತಾರೆ. ಬಹುತೇಕರಿಗೆ ಇಲ್ಲ. ರಾಜಕೀಯ ನಡೆಯುತ್ತಿದೆ. – ಸಿ. ಅಜ್ಜಪ್ಪ, ಕೂಲಿ ಕೆಲಸ.

ಕೃಷಿ ಸನ್ಮಾನ್ ನಿಧಿ ಯೋಜನೆಯಡಿ ಸಂಸದರು, ಸಚಿವರು, ಶಾಸಕರು, ಮಂತ್ರಿಗಳು, ಮೇಯರ್, ಸರ್ಕಾರಿ, ನೌಕರರು, ವೈದ್ಯರು, ವಕೀಲರು ಮೊದಲಾದವರಿಗೆ ಹಣ ನೀಡಲು ಬರುವುದಿಲ್ಲ ಎಂದು ಹೇಳಿದೆ. ಇದರ ಹೊರತಾಗಿಯೂ ಸೂಕ್ತ ದಾಖಲೆ ಹೊಂದಿರುವ ಅರ್ಹ ಫಲಾನುಭವಿ ರೈತರಿಗೆ ನೆರವು ದೊರೆಯುತ್ತಿಲ್ಲ. ಗ್ರಾಮ ಪಂಚಾಯಿತಿ, ಕೃಷಿ ಇಲಾಖೆ, ಮತ್ತು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ರೈತರಿಗೆ ಸಿಗಬೇಕಾದ ಸರ್ಕಾರದ ನೆರವಿಗೆ ಅಡ್ಡಿಪಡಿಸುತ್ತಿದ್ದಾರೆಂಬ ಆರೋಪಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಅರ್ಹ ರೈತರಿಂದ ಸೂಕ್ತ ದಾಖಲೆಗಳನ್ನು ಪಡೆದರೂ ಅವುಗಳನ್ನು ಕಂಪ್ಯೂಟರ್ ನಲ್ಲಿ ಅಳವಡಿಸುತ್ತಿಲ್ಲ. ಜೊತೆಗ ಯಾವ ಪಕ್ಷದವರು ಎಂಬುದನ್ನು ನೋಡಿ ಅರ್ಜಿಗಳನ್ನು ಮುಂದಕ್ಕೆ ರವಾನೆ ಮಾಡಲಾಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.

ತುಮಕೂರು ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಬರುತ್ತಿದ್ದಾರೆ. ಕೃಷಿ ಸನ್ಮಾನ್ ನಿಧಿ ಯೋಜನೆಯ ನಾಲ್ಕನೇ ಕಂತಿನ ಹಣ ಬಿಡುಗಡೆ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ನೆರವು ದೊರೆಯದ ರೈತರ ಸಮಸ್ಯೆಗಳ ಕುರಿತು ಪ್ರಸ್ತಾಪಿಸಿ ರೈತರಿಗೆ ನೆರವು ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ಮತ್ತೊಂದು ಕಡೆ ರಾಜ್ಯ ಸರ್ಕಾರ ರೈತರಿಗೆ ಘೋಷಿಸಿರುವ ನಾಲ್ಕು ಸಾವಿರ ಹಣ ಇದುವರೆಗೂ ಬಂದಿಲ್ಲ. ಈ ಬಗ್ಗೆಯೂ ಉತ್ತರವನ್ನು ರೈತರು ನಿರೀಕ್ಷಿಸುತ್ತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights