ಅಸ್ಪೃಶ್ಯತಾ ಆಚರಣೆಯನ್ನು ಹೊಗಳಿದ ಕವಿ: ಎಫ್‌ಐಆರ್‌ ದಾಖಲು

ಅಸ್ಪೃಶ್ಯತಾ ಆಚರಣೆಯನ್ನು ಉತ್ತೇಜಿಸಿದ್ದಕ್ಕಾಗಿ ಕವಿ ಮತ್ತು ತೆಲುಗು ಗೀತರಚನೆಕಾರ ಜೊನ್ನವಿತುಲಾ ರಾಮಲಿಂಗೇಶ್ವರ ರಾವ್ ವಿರುದ್ಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಮೂಲತಃ ಬ್ರಾಹ್ಮಣನಾಗಿರುವ ಜೊನ್ನವಿತುಲಾ, ಬ್ರಾಹ್ಮಣ್ಯವನ್ನೂ ಜಾತಿಯತೆಯ ಸಂಸ್ಕೃತಿಯನ್ನೂ ಪ್ರತಿಪಾದಿಸುತಿದ್ದು, ಕೊರೊನಾ ಸಂದರ್ಭದ ಸಾಮಾಜಿಕ ಅಂತರವನ್ನು ಅಸ್ಪೃಷ್ಯತೆಯನ್ನು ಉತ್ತೇಜಿಸುವಂತೆ ಹಾಗೂ ಅಭ್ಯಾಸ ಮಾಡಿಕೊಳ್ಳುವಂತೆ ಹೊಗಳಿ ಕವಿತೆ ಬರೆದು ಹಾಕಿದ್ದಾರೆ.

ಅಸ್ಪೃಶ್ಯತಾ ಅಚರಣೆಯನ್ನೂ, ಅದರ ಅಭ್ಯಾಸವನ್ನೂ ಶ್ಲಾಘಿಸಿದ ಬ್ರಾಹ್ಮಣ ಜೊನ್ನಾವಿತುಲಾ, ಕೊರೊನಾ ಸಂದರ್ಭ ಸಾಮಾಜಿಕ ಅಂತರವು  ಮಾನವಕುಲಕ್ಕೆ ‘ಕಿರೀಟ’ ಆಗಿ ಮಾರ್ಪಟ್ಟಿದೆ ಎಂದು ಹೇಳಿದ್ದಾರೆ.

“ದೂರವನ್ನು ಉಳಿಸಿಕೊಳ್ಳುವ ಕಲ್ಪನೆಯು ಸಾವನ್ನು ನಿವಾರಿಸಲು ಒಂದು ಮಂತ್ರವಾಗಿದೆ. ಎಲ್ಲಾ ಇತರ ರಾಷ್ಟ್ರಗಳ ಪರಿಹಾರಗಳು ವಿಫಲವಾಗಿವೆ. ಭಾರತೀಯ ಸನಾತನ ಸಂಸ್ಕೃತಿಯ ಶಕ್ತಿ ವ್ಯಕ್ತವಾಗಿದೆ” ಎಂದು ಹಾಡಿನಲ್ಲಿ ಹೇಳಿದ್ದಾರೆ. ಇದನ್ನು ಚಮಿರಾಜು ನ್ಯೂಸ್ ಎಂಬ ಹಿಂದೂ ಭಕ್ತ ಯೂಟ್ಯೂಬ್ ಚಾನೆಲ್‌ಗೆ ಅಪ್‌ಲೋಡ್ ಮಾಡಲಾಗಿದೆ.

జొన్నవిత్తులపై కేసు నమోదు.. వారిని ...
ಜೊನ್ನಾವಿಥುಲಾ

ಇದರ ಬೆನ್ನಲ್ಲೇ ತೆಲಂಗಾಣದ ಮಾಲಾ ಕಲ್ಯಾಣ ಸಂಘದ ಅಧ್ಯಕ್ಷ ಬಟುಲಾ ರಾಮ್ ಪ್ರಸಾದ್ ಅವರು ಹೈದರಾಬಾದ್‌ನ ನಾಂಪಲ್ಲಿ ಪೊಲೀಸ್‌ ಠಾಣೆಯಲ್ಲಿ ಮೇ 21 ರಂದು ದೂರು ದಾಖಲಿಸಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್ 3(1) ಮತ್ತು ನಾಗರಿಕ ಹಕ್ಕುಗಳ ತಡೆ ಕಾಯ್ದೆ 7(1)(ಡಿ) ಅಡಿಯಲ್ಲಿ ದೂರು ದಾಖಲಾಗಿದೆ.

“ಮಾರ್ಚ್ 23 ರಂದು ಟಿವಿ 9 ನಲ್ಲಿ ಲೈವ್ ಶೋವೊಂದರಲ್ಲಿ ಅವರು ಈ ಹಾಡನ್ನು ಹಾಡಿದರು. ಅದೇ ಹಾಡನ್ನು ಉದ್ದೇಶಪೂರ್ವಕವಾಗಿ ಏಪ್ರಿಲ್ 14 ರ ಅಂಬೇಡ್ಕರ್ ಜಯಂತಿಯಂದು ಚಾಮಿರಾಜು ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಇದು ಹಿಂದೂತ್ವವನ್ನು ಉತ್ತೇಜಿಸುತ್ತದೆ” ಎಂದು ದೂರುದಾರ ರಾಮ್ ಪ್ರಸಾದ್ ತಿಳಿಸಿದ್ದಾರೆ.

“ಈ ಕವಿತೆಯಲ್ಲಿ ದುರುದ್ದೇಶವಿದೆ, ಅಸ್ಪೃಶ್ಯತೆ ಆಚರಣೆಯನ್ನು ಪುನಃಸ್ಥಾಪಿಸಲು ಮತ್ತು ಮನು ಪ್ರತಿಪಾದಿಸಿದ ತಾರತಮ್ಯದ ಹಿಂದೂ ಸಂಹಿತೆಯನ್ನು ಅನುಸರಿಸಲು ಭಾರತದ ಜನರಿಗೆ ಸಂದೇಶ ಮತ್ತು ನಿರ್ದೇಶನವಿದೆ. ಅಸ್ಪೃಶ್ಯತೆಯ ಘೋರ ಅಭ್ಯಾಸವನ್ನು ಅನುಸರಿಸಲು ಅವರು ಪ್ರಪಂಚದಾದ್ಯಂತ ಬೋಧಿಸುತ್ತಿದ್ದಾರೆ” ಎಂದು ರಾಮ್ ಪ್ರಸಾದ್ ಹೇಳಿದರು.

“ಬಿಕ್ಕಟ್ಟಿನ ಸಂದರ್ಭದಲ್ಲಿ ತಾರತಮ್ಯದ ಆಚರಣೆಗಳನ್ನು ಪುನಃಸ್ಥಾಪಿಸಲು ಜೊನ್ನಾವಿತುಲಾ ಉದ್ದೇಶಪೂರ್ವಕ ಕಿಡಿಗೇಡಿತನ ಮಾಡಿದ್ದಾರೆ. ಕವಿತೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸದಸ್ಯರನ್ನು ಅವಮಾನಿಸುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ರಚಿಸಲಾಗಿದೆ” ಎಂದು ಅವರು ಹೇಳಿದರು.

ಕೊರೊನಾ ಬಿಕ್ಕಟ್ಟಿನ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಲು ‘ಹಿಂದೂ ಪ್ರಚಾರಕರನ್ನೂ’ ಮತ್ತು ‘ಬಾಬಾಗಳನ್ನು’ ತೆಲುಗು ಟಿವಿ ಚಾನೆಲ್‌ಗಳು ಆಹ್ವಾನಿಸಿದ್ದಕ್ಕಾಗಿ ಮಾಧ್ಯಮಗಳ ವಿರುದ್ಧ ಅಸಹನೆಯನ್ನು ರಾಮ್ ಪ್ರಸಾದ್ ವ್ಯಕ್ತಪಡಿಸಿದ್ದಾರೆ.

“ಬಾಬಾಗಳು, ಜ್ಯೋತಿಸಿಗಳು, ಧರ್ಮ ಪ್ರಚಾರಕರುಗಳು ವೈದ್ಯರೇ ಅಥವಾ ಆರೋಗ್ಯ ತಜ್ಞರೇ? ಸಾಂಕ್ರಾಮಿಕ ರೋಗದ ಬಗ್ಗೆ ಮಾತನಾಡಲು ಜೊನ್ನವಿತುಲಾ ಅವರಿಗೆ ಯಾವ ಅರ್ಹತೆ ಇದೆ? ಟಿವಿ ಚಾನೆಲ್‌ಗಳಿಗೆ ಸಾಮಾಜಿಕ ಜವಾಬ್ದಾರಿ ಇದೆಯೇ ಅಥವಾ ಇಲ್ಲವೇ?” ಎಂದು ರಾಮ್ ಪ್ರಸಾದ್ ವಾದಿಸಿದರು.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights