ಜಾರ್ಜ್ ಫ್ಲಾಯ್ಡ್ ಹತ್ಯೆ: ಜೂನ್ 19 ಸಂಸ್ಥೆಯ ರಜಾದಿನವಾಗಿ ಘೋಷಿಸಿದ ಟ್ವಿಟರ್

ಅಮೆರಿಕಾದಲ್ಲಿ ಪೊಲೀಸರ ದೌರ್ಜನ್ಯದಿಂದ ಮೃತರಾದ ಕಪ್ಪು ಜನಾಂಗದ ಜಾರ್ಜ್ ಫ್ಲಾಯ್ಡ್ ಘಟನೆ ಆ ದೇಶದಾದ್ಯಂತ ಪ್ರತಿಭಟನೆಗಳಿಗೆ ಕಾರಣವಾಗಿತ್ತು. ಜನಾಂಗೀಯ ತಾರತಮ್ಯ ಮತ್ತು ನಿಂದನೆಯನ್ನು ಇಲ್ಲವಾಗಿಸಲು ಪೊಲೀಸ್ ಪಡೆಯಲ್ಲಿ ಸುಧಾರಣೆಯ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳುವಂತೆ ಇದು ಒತ್ತಡ ಹಾಕಿತ್ತು.

ಇದು ಹಲವು ಸಂಸ್ಥೆಗಳು ಮತ್ತು ವ್ಯಕ್ತಿಗಳನ್ನು ಕೂಡ ಜನಾಂಗೀಯ ತಾರತಮ್ಯದ ಬಗ್ಗೆ ಆತ್ಮಾವಲೋಕನಕ್ಕೆ ದೂಡಿದೆ. ಈಗ ಬ್ಲಾಕ್ ಲೈವ್ಸ್ ಮ್ಯಾಟರ್ ಪ್ರತಿಭಟನೆಗಳಿಗೆ ಸ್ಪಂದಿಸಿರುವ ಟ್ವಿಟ್ಟರ್ ಸಂಸ್ಥೆಯ ಮುಖ್ಯಸ್ಥ ಜಾಕ್ ಡೋರ್ಸೆ, ಜೂನ್ 19 ರಂದು ಸಂಸ್ಥೆಯ ರಜಾ ದಿನವಾಗಿ ಘೋಷಿಸುವುದಾಗಿ ಹೇಳಿದ್ದಾರೆ.

ಅಮೆರಿಕಾದಲ್ಲಿ ಜೀತಪದ್ಧತಿ ಕೊನೆಯಾದದ್ದರ ನೆನಪಿಗೆ ಜೂನ್ 19 ನೆಯ ತಾರೀಕನ್ನು ಆಫ್ರಿಕನ್-ಅಮೆರಿಕನ್ನರು ಜೂನ್ ಟೀಂತ್ ಎಂದು ಆಚರಿಸುತ್ತಾರೆ.

ಕಳೆದ ವಾರವಷ್ಟೇ ಡೋರ್ಸೆ ಅವರು ಅಲ್ಪಸಂಖ್ಯಾತ ಸಮುದಾಯಗಳ ಅಭಿವೃದ್ಧಿ ಯೋಜನೆಗೆ 3 ಮಿಲಿಯನ್ ಡಾಲರ್ ಕೊಡುವುದಾಗಿ ಘೋಷಿಸಿದ್ದರು. ಕಳೆದ ವಾರ ಆಲ್ಟ್ರಿಯ ಎಂಬ ಸಂಸ್ಥೆ ಕೂಡ ಜೂನ್ 19 ರಂದು ರಜೆ ಘೋಷಿಸುವುದಾಗಿ ಹೇಳಿತ್ತು.

ಅಮೆರಿಕಾದ ಹಲವು ಸಂಸ್ಥೆಗಳಲ್ಲಿ ಜನಾಂಗೀಯ ವೈವಿಧ್ಯತೆ ಇಲ್ಲ ಎಂಬುದು ಹಿಂದಿನಿಂದಲೂ ಇರುವ ಟೀಕೆ. ಇದನ್ನು ಸರಿಪಡಿಸಿಕೊಳ್ಳಲು ಹಲವು ಸಂಸ್ಥೆಗಳು ಅಲ್ಲಿ ಶ್ರಮಿಸುತ್ತವೆ. ಈಮಧ್ಯೆ ಜಪಾನಿನ ಸಾಫ್ಟ್ ಬ್ಯಾಂಕ್, ಬಿಳಿಯ ಜನಾಂಗಕ್ಕೆ ಸೇರದ ಇತರ ಅಲ್ಪಸಂಖ್ಯಾತರು ನಡೆಸುವ ಸಂಸ್ಥೆಗಳಿಗೆ ಹೂಡಿಕೆ ಮಾಡಲು 100 ಮಿಲಿಯನ್ ಡಾಲರ್ ನಿಧಿಯನ್ನು ಸ್ಥಾಪಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights