ಆಘಾತದ ಸುದ್ದಿ: ಎರಡು ಲಾರಿಯೊಳಗಿದ್ದರು 300 ಜನ ಅಮಾಯಕ ಕೂಲಿ ಕಾರ್ಮಿಕರು!

ತೆಲಂಗಾಣದಿಂದ ರಾಜಸ್ಥಾನಕ್ಕೆ ಅಗತ್ಯ ಸರಕುಗಳನ್ನು ಸಾಗಿಸುತ್ತಿದ್ದ ಎರಡು ಕಂಟೇನರ್ ಟ್ರಕ್‌ಗಳ ಒಳಗೆ 300 ಕ್ಕೂ ಹೆಚ್ಚು ವಲಸೆ ಕಾರ್ಮಿಕರು ಅಪಾಯಕಾರಿ ಪರಿಸ್ಥಿತಿಯಲ್ಲಿ ಪ್ರಯಾಣ ಮಾಡುತ್ತಿರುವುದನ್ನು ಮಹಾರಾಷ್ಟ್ರ ಪೊಲೀಸರು ಗುರುವಾರ ಪತ್ತೆ ಮಾಡಿದ್ದಾರೆ.

ಆಘಾತಕ್ಕೊಳಗಾದ ಅಧಿಕಾರಿಗಳು ವಿಚಾರಿಸಿದಾಗ ಅವರೆಲ್ಲರೂ ರಾಜಸ್ಥಾನದಿಂದ ಹೈದರಾಬಾದ್‌ಗೆ ಬಂದಿದ್ದ ಕಾರ್ಮಿಕರಾಗಿದ್ದು, ಕೊರೊನಾ ಲಾಕ್‌ಡೌನ್‌ ಕಾರಣಕ್ಕೆ ಅವರು ತಮ್ಮ ಮನೆಗೆ ಮರಳಲು ಬಯಸಿದ್ದರಿಂದ ಈ ರಹಸ್ಯ ಮತ್ತು ಅಪಾಯಕಾರಿ ಪ್ರಯಾಣದ ವಿಧಾನವನ್ನು ಆರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಲಾಕ್‌ಡೌನ್‌ ಘೋಷಿಸಿರುವ ಮಧ್ಯೆ ಹತಾಶ ವಲಸೆ ಕಾರ್ಮಿಕರು ತಮ್ಮ ಮನೆಗಳಿಗೆ ನಡೆದುಕೊಂಡು ತೆರಳುತ್ತಿರುವ ವರದಿಗಳು ದೇಶದ ಹಲವು ಭಾಗಗಳಿಂದ ಹೊರಬರುತ್ತಿವೆ, ನೋಡುಗರ ಮನಕಲಕುತ್ತಿವೆ.

ಪೊಲೀಸ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ತಂಡ ತೆಲಂಗಾಣದ ಗಡಿ ಜಿಲ್ಲೆ ಯವತ್ಮಾಲ್‌ನಲ್ಲಿ ಬರುತ್ತಿದ್ದ ಎರಡು ಕಂಟೇನರ್ ಟ್ರಕ್‌ಗಳನ್ನು ತಪಾಸಣೆಗಾಗಿ ನಿಲ್ಲಿಸಿತು. ಆಗ ಟ್ರಕ್‌ಗಳಲ್ಲಿ 300 ಜನ ಕಷ್ಟಕರ ಪರಿಸ್ಥಿತಿಯಲ್ಲಿ ಪ್ರಯಾಣಿಸುತ್ತಿರುವುದು ಕಂಡುಬಂದಿದೆ.

ಲಾಕ್‌ಡೌನ್‌ ಕಾರಣಕ್ಕಾಗಿ ಅವರಿಗೆ ಬೇರೆ ಯಾವ ಸಾರಿಗೆಗಳು ಲಭ್ಯವಿಲ್ಲದ ಕಾರಣ ಈ ಮಾರ್ಗ ಆಯ್ದುಕೊಂಡಿದ್ದಾರೆ. ಲಾರಿಗಳ ಚಾಲಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು, ಆದರೆ ಆ ಅಮಾಯಕ ಕಾರ್ಮಿಕರನ್ನು ಹೇಗೆ ಎದುರಿಸಬೇಕು ಎಂಬ ಬಗ್ಗೆ ಅಧಿಕಾರಿಗಳು ಗೊಂದಲದಲ್ಲಿದ್ದಾರೆ ಎನ್ನಲಾಗಿದೆ.

“ಅವರೊಂದಿಗೆ ಏನು ಮಾಡಬೇಕೆಂದು ನಮಗೆ ತಿಳಿದಿಲ್ಲ. ಅವರು ಉಳಿವಿಗಾಗಿ ಅವರ ಮನೆಗೆ ಹೋಗಬೇಕಾಗಿದೆ. ಶೀಘ್ರದಲ್ಲೇ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ” ಎಂದು ಪೊಲೀಸರು ಹೇಳಿದ್ದಾರೆ.

ಎಂಥೆಹ ವಿಪತ್ತುಗಳ ಬಂದರೂ ಅದರ ಹೆಚ್ಚಿನ ಬಲಿಪಶುಗಳು ಬಡವರು ಮತ್ತು ಕೂಲಿ ಕಾರ್ಮಿಕರೆ ಆಗಿರುತ್ತಾರೆ ಎಂಬುದು ಇದರಿಂದ ತಿಳಿದುಬರುತ್ತದೆ. ಆ ಕಾರ್ಮಿಕರು ಸುರಕ್ಷಿತವಾಗಿ ಮನೆ ಸೇರಲಿ, ಇಂತಹವರ ಸಹಾಯಕ್ಕೆ ಸರ್ಕಾರ ಧಾವಿಸಲಿ ಎಂಬುದು ನಮ್ಮ ಆಶಯವಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights