ಇಂದು ಅಂತರಾಷ್ಟ್ರೀಯ ಚಹ ದಿನ: ಟೀ ಬಗ್ಗೆ ಸ್ವಾರಸ್ಯಕಾರಿ ಝೆನ್ ಕಥೆಗಳು

ಇಂದು ಅಂತರಾಷ್ಟ್ರೀಯ ಟೀ ದಿನ. ಚಹಾದ ಸುತ್ತ ಇರುವ ಸಾಂಸ್ಕೃತಿಕ ಮತ್ತು ಆರ್ಥಿಕ ಮಹತ್ವವನ್ನು ಗುರುತಿಸಿ ಆಚರಿಸಲು ಮೇ 21ನ್ನು ವಿಶ್ವ ಟೀ ದಿನವಾಗಿ ಆಚರಿಸಲು ವಿಶ್ವಸಂಸ್ಥೆ ಮೊದಲು ಮಾಡಿದೆ.

ಪತ್ರಕರ್ತ ಟೆಕ್ ಕನ್ನಡ ಸಂಸ್ಥಾಪಕ-ಸಂಪಾದಕ ಕುಮಾರ್ ಅವರು ಕನ್ನಡದಲ್ಲಿ ಟೀ ಕುರಿತಂತೆ ವಿಶೇಷ ಮಾಹಿತಿಯುಳ್ಳ ಪುಸ್ತಕವನ್ನು ಬರೆದಿದ್ದಾರೆ. ಚಹಾದ ಇತಿಹಾಸ, ಅದರ ಗುಣಗಳು, ಸಾಹಿತ್ಯದಲ್ಲಿ ಚಹ, ಚಹಾದ ಸುತ್ತಿನ ಕಥೆಗಳು ಹೀಗೆ ವಿಶಿಷ್ಟ ಹತ್ತು ಹಲವು ಸಂಗತಿಗಳುಳ್ಳ ‘ಬುಕ್ ಆಫ್ ಟೀ‘ ಪುಸ್ತಕವನ್ನು ಪಲ್ಲವ ಪ್ರಕಾಶನ ಪ್ರಕಟಿಸಿದೆ. ಈ ದಿನ ಮೇಲಿನ ಪುಸ್ತಕದಿಂದ ಆಯ್ದ ಟೀ ಬಗೆಗಿನ ಕೆಲವು ಝೆನ್ ಕಥೆಗಳು ನಿಮ್ಮ ಓದಿಗೆ

1. ಒಂದು ಕಪ್ ಚಹಾ

`ನಾನ್ ಇನ್’ ಜಪಾನಿನ ಪ್ರಸಿದ್ಧ ವಿದ್ವಾಂಸ. ಈತನಲ್ಲಿಗೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ಝೆನ್ ಕುರಿತು ಕೇಳಲು ಬಂದರು.

ನಾನ್ ಆತನಿಗಾಗಿ ಟೀ ತರಲು ತಮ್ಮ ಶಿಷ್ಯನಿಗೆ ಹೇಳಿದರು. ತಟ್ಟೆಯೊಂದರಲ್ಲಿ ಟೀ ಬಟ್ಟಲು, ಟೀ ಪಾಟ್ ತಂದು ಗುರುಗಳ ಮುಂದಿಟ್ಟ. ನಾನ್ ಅತಿಥಿಗೆಂದು ಒಂದು ಕಪ್‍ಗೆ ಚಹಾ ಸುರಿಯಲು ಆರಂಭಿಸಿದರು. ಕಪ್ ತುಂಬಿದ ಮೇಲೂ ನಾನ್ ಚಹಾ ಸುರಿಯುತ್ತಲೇ ಇದ್ದರು.

ಇದನ್ನು ನೋಡುತ್ತಿದ್ದ ಪ್ರಾಧ್ಯಾಪಕರು, “ಬಟ್ಟಲು ತುಂಬಿದೆ, ಸುರಿದಿದ್ದು ಚೆಲ್ಲಿ ಹೋಗುತ್ತೆ” ಏರಿದ ದನಿಯಲ್ಲಿ ಹೇಳಿದರು.

“ಹಾಗೇನೆ” ನಾನ್ ಅವರು ಪ್ರಾಧ್ಯಾಪಕರ ಮಾತಿಗೆ ಉತ್ತರಿಸಿದರು,

“ನೀವು ನಿಮ್ಮದೇ ಅಭಿಪ್ರಾಯ, ಊಹೆಗಳಿಂದ ತುಂಬಿ ಹೋಗಿದ್ದೀರಿ. ನೀವು ಖಾಲಿಯಾಗದೆ, ಝೆನ್ ಬಗ್ಗೆ ನಾನೇನು ಹೇಳಬಹುದು?”

2. ಕೊಲ್ಲುವುದು ಸಲ್ಲ

16ನೇ ಶತಮಾನ. ಟಕುಗಾವ ಅನ್ನೋ ಫ್ಯೂಡಲ್ ವ್ಯವಸ್ಥೆ ಜಾರಿಯಲ್ಲಿದ್ದ ಕಾಲ. ಆಗ ಟೈಕೋ ಅನ್ನೋ ಕ್ಷತ್ರಿಯನಿದ್ದ. ಈತನು ಟೀ ಸಂಸ್ಕಾರವನ್ನು ಸೆನ್ ರಿಕ್ಯು ಟೀ ಮಾಸ್ಟರ್‍ನಿಂದ ಕಲಿತಿದ್ದ. ಸೆನ್ ರಿಕ್ಯು ಪ್ರಶಾಂತ, ಸಂತೃಪ್ತ ಜೀವನದ ಬೋಧಕನಾಗಿದ್ದ.

ಟೈಕೊನ ಅನುಚರ ಕ್ಯಾಟೊ ಈ ವಿಷಯ ತಿಳಿದು ಮುನಿದ. ಟೀ ಸಂಸ್ಕಾರ ಕಲಿತವರು, ಈ ಬಗ್ಗೆ ಆಸಕ್ತಿ ಇರುವವರು ದೇಶದ ಆಡಳಿತ, ಅಭಿವೃದ್ಧಿ ಬಗ್ಗೆ ಉದಾಸೀನ ಮಾಡುತ್ತಾರೆ. ಇಂಥ ಪದ್ಧತಿಯನ್ನು ಕಲಿಸುತ್ತಿರುವ ರಿಕ್ಯು ಅನ್ನು ಕೊಂದು ಬಿಡುವುದೆಂದು ನಿರ್ಧರಿಸಿದ.

ಅದಕ್ಕಾಗಿ ಸಂಚು ಹೂಡಿ ರಿಕ್ಯುನನ್ನು ಚಹಾ ಸೇವನೆಗೆಂದು ಆಹ್ವಾನಿಸಿದ.

ಚಹಾ ಕುಟೀರಕ್ಕೆ ಬರುವ ಹೊತ್ತಿಗೆ ರಿಕ್ಯುಗೆ ಕ್ಯಾಟೊ ಉದ್ದೇಶ ತಿಳಿದು ಹೋಯಿತು. ಕ್ಯಾಟೋ ಖಡ್ಗದೊಂದಿಗೆ ಚಹಾ ಕುಟೀರದತ್ತ ಹೆಜ್ಜೆ ಹಾಕುತ್ತಿದ್ದ. ಇದನ್ನು ನೋಡಿದ ರಿಕ್ಯು ಖಡ್ಗವನ್ನು ಕುಟೀರದ ಹೊರಗೆ ಬಿಟ್ಟುಬರುವಂತೆ ಹೇಳಿದ. ಚಹಾ ಸೇವನೆಯ ವಿಧಿ ಶಾಂತಿಯ ಸಂಕೇತ. ಅಂಥಲ್ಲಿಗೆ ಖಡ್ಗವನ್ನು ತರುವುದು ಅಪಚಾರ ಎಂದು ವಿವರಿಸಿದ.

“ನಾನೊಬ್ಬ ಕ್ಷತ್ರಿಯ. ಖಡ್ಗ ಯಾವಾಗಲೂ ನನ್ನೊಂದಿಗಿರಬೇಕು. ಚಹಾ ಸೇವನೆಯಾಗಲಿ, ಇನ್ನೇನೆ ಇರಲಿ ಖಡ್ಗವನ್ನು ನಾನು ಬಿಟ್ಟಿರುವಂತಿಲ್ಲ” ಎಂದು ರಿಕ್ಯು ಮಾತನ್ನು ತಳ್ಳಿ ಹಾಕಿದ.

ರಿಕ್ಯು ಒಪ್ಪಿ ಕುಟೀರದೊಳಗೆ ಬರುವಂತೆ ಹೇಳಿದ. ಕಲ್ಲಿದ್ದಲ ಒಲೆ ಮೇಲೆ ಇದ್ದ ಟೀ ಪಾತ್ರೆಯಲ್ಲಿ ನೀರು ಕುದಿಯುತ್ತಿತ್ತು. ರಿಕ್ಯು ಒಲೆ ಬಳಿ ಬಂದವನೇ ಪಾತ್ರೆಯನ್ನು ಕೊಂಚ ವಾಲಿಸಿದ, ಇದ್ದಕ್ಕಿದ್ದಂತೆ ಕುಟೀರದ ತುಂಬ ಹೊಗೆ ತುಂಬಿಕೊಂಡು ಬಿಟ್ಟಿತ್ತು. ಉಸಿರುಗಟ್ಟಿದಂತಾಗಿ ಕ್ಯಾಟೊ ಕುಟೀರದಿಂದ ಹೊರ ಓಡಿದ.

ರಿಕ್ಯು ಆತನ ಹಿಂದೆಯೇ ನಡೆದು, “ಕ್ಷಮಿಸು, ತಪ್ಪಾಯಿತು. ಒಳ ಬಂದು ಟೀ ಸೇವಿಸು. ನಿನ್ನ ಖಡ್ಗದ ಮೇಲೆ ಬೂದಿ ಕೂತು ಬಿಟ್ಟಿದೆ. ಅದನ್ನು ಸ್ವಚ್ಛ ಮಾಡಿಕೊಡುತ್ತೇನೆ. ಒಳಗೆ ಬಾ” ಎಂದು ಪ್ರೀತಿಯಿಂದ ಒಳ ಕರೆದ.

ಕ್ಯಾಟೊ, ಟೀ ಮಾಸ್ಟರನನ್ನು ಕೊಲ್ಲುವ ಯೋಚನೆ ಕೈ ಬಿಟ್ಟ.

3. ಪಂದ್ಯ

ಒಂದು ಚಹಾ ಕೂಟ. ಅಲ್ಲಿಗೆ ಬಂದ ಸೈನಿಕನೊಬ್ಬನನ್ನು ಕೂಟ ನಡೆಸುತ್ತಿದ್ದ ಚಹಾ ಗುರು ಉಪೇಕ್ಷಿಸಿಬಿಟ್ಟರು. ಆದರೆ, ತಕ್ಷಣ ಅರಿವಿಗೆ ಬಂದು ಅವರು ಸೈನಿಕನಲ್ಲಿ ಕ್ಷಮೆ ಯಾಚಿಸಿದರು. ಆದರೆ ದುಡುಕಿನ ಸ್ವಭಾವದವನಂತೆ ಕಂಡ ಆ ಸೈನಿಕ ವಿಷಯವನ್ನು ಖಡ್ಗಗಳ ಮೂಲಕ ಇತ್ಯರ್ಥ ಮಾಡಿಕೊಳ್ಳಬೇಕೆಂದು ಪಟ್ಟು ಹಿಡಿದ.

ಚಹಾ ಗುರುಗೆ ಖಡ್ಗಗಳನ್ನು ಹಿಡಿದೇ ಗೊತ್ತಿರಲಿಲ್ಲ. ಇನ್ನು ಹೋರಾಡುವುದೆಲ್ಲಿಂದ ಬಂತು. ಝೆನ್ ಗುರುಗಳಿಗೆ ಈ ಕತ್ತಿ ವರಸೆಯ ಕೌಶಲ್ಯ ತಿಳಿದಿತ್ತು. ಚಹಾ ಗುರು ಅವರಲ್ಲಿ ಸಹಾಯ ಮಾಡುವಂತೆ ಕೇಳಿಕೊಂಡರು.

ಚಹಾ ಗುರು ಏಕಾಗ್ರತೆ ಹಾಗೂ ತನ್ಮಯತೆಯಿಂದ ಚಹಾ ಮಾಡುವುದನ್ನು ನೋಡಿದ್ದ ಝೆನ್ ಗುರುಗಳು ಇಷ್ಟು ಹೇಳಿದರು, “ನಾಳೆ ನೀವಿಬ್ಬರು ಯುದ್ಧಕ್ಕೆ ನಿಂತಾಗ, ನೀನು ನಿನ್ನ ಖಡ್ಗವನ್ನು ಎರಡು ಕೈಗಳಿಂದ ಎತ್ತಿ ಹಿಡಿದು ನಿಲ್ಲು. ಜತೆಗೆ, ನೀನು ಚಹಾ ಮಾಡುವಾಗ ನಿನ್ನಲ್ಲಿರುವ ಏಕಾಗ್ರತೆ, ತನ್ಮಯತೆ ಇರಲಿ”

ಮರುದಿನ ಹೇಳಿದ ಸ್ಥಳ ಮತ್ತು ಸಮಯಕ್ಕೆ ಸರಿಯಾಗಿ ಚಹಾ ಗುರು ಮತ್ತು ಸೈನಿಕ ಇಬ್ಬರೂ ಬಂದರು. ಇಬ್ಬರು ಖಡ್ಗ ಹಿಡಿದು ನಿಂತರು. ಸೈನಿಕನು ಹೊಡೆಯುವುದಕ್ಕೆ ಸಿದ್ಧನಾಗಿ ಚಹಾ ಗುರುವನ್ನೇ ದುರುಗಟ್ಟು ನೋಡಿದ.

ಚಹಾ ಗುರುವಿನ ಮುಖದಲ್ಲಿ ಯಾವುದೇ ಆತಂಕವಿರಲಿಲ್ಲ. ಪ್ರಶಾಂತವಾಗಿತ್ತು.

ಕೆಲ ಕ್ಷಣ ಚಹಾ ಗುರುವನ್ನೇ ದಿಟ್ಟಿಸಿ ನೋಡಿದ ಸೈನಿಕ ದಿಢೀರನೆ ಖಡ್ಗವನ್ನು ಕೆಳಗಿಳಿಸಿ ಚಹಾ ಗುರುಗಳಲ್ಲಿ ಕ್ಷಮೆ ಕೇಳಿದ. ತನ್ನ ಉದ್ಧಟತನವನ್ನು ಮನ್ನಿಸುವಂತೆ ಬೇಡಿಕೊಂಡ.

4. ಹೆದರಿದ ಗುರು

ಶಾಲೆಯ ಮಕ್ಕಳಿಗೆ ತನ್ನ ಗುರುಗಳ ಬಗ್ಗೆ ವಿಚಿತ್ರವಾದ ತಾತ್ಸಾರ. ಗುರುಗಳೇನು ತುಂಬಾ ಶಿಸ್ತಿನಿಂದಿರಬೇಕು ಎನ್ನುವವರಲ್ಲ. ಆದರೆ ಯಾವ ಕಾರಣಕ್ಕೂ ಅವರು ವಿಚಲಿತರಾಗದಷ್ಟು ಶಾಂತ ಸ್ವಭಾವದವರು. ಮಕ್ಕಳಿಗೆ ಇದು ಕೆಲವೊಮ್ಮೆ ತಮಾಷೆಯಾಗಿಯೂ, ಕೆಲವೊಮ್ಮೆ ಭಯಾಂಕರವಾಗಿಯೂ ಕಂಡಿದ್ದಿದೆ.

ಒಂದು ದಿನ ಗುರುಗಳ ತಾಳ್ಮೆಯನ್ನು ಪರೀಕ್ಷಿಸಿ ಬಿಡುವುದೆಂದು ಮಕ್ಕಳ ಒಂದು ಗುಂಪು ನಿರ್ಧರಿಸಿತು. ಕತ್ತಲೆ ಕೋಣೆಯ ಮೂಲೆಯೊಂದರಲ್ಲಿ ಈ ಗುಂಪು ಗುರುಗಳು ಆ ಕೋಣೆಯ ಬಾಗಿಲ ಮೂಲಕ ಹಾದು ಹೋಗುವುದನ್ನೇ ಕಾಯುತ್ತಾ ಕೂತಿತು.

ಕೆಲ ನಿಮಿಷಗಳಲ್ಲಿ ಗುರುಗಳು ಕೈಯಲ್ಲಿ ಚಹಾ ಬಟ್ಟಲು ಹಿಡಿದು ಆ ಕೋಣೆಯೊಳಕ್ಕೆ ಬಂದರು. ಹಿಂದಿನಿಂದ ಬಂದ ಮಕ್ಕಳು ಜೋರಾಗಿ ಕೂಗಿಕೊಂಡರು.

ಆದರೆ ಗುರುಗಳು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಶಾಂತವಾಗಿಯೇ ಕೋಣೆ ದಾಟಿದ ಅವರು ಮುಂದಿದ್ದ ಟೇಬಲ್ಲಿನ ಮೇಲೆ ಚಹಾ ಬಟ್ಟಲು ಇಟ್ಟು…

ಗೋಡೆಯನ್ನು ಹಿಡಿದುಕೊಂಡು ಭಯದಿಂದ ಜೋರಾಗಿ ಕಿರುಚಿಕೊಂಡುಬಿಟ್ಟರು!!

5. ನೀರು ಬೇರೆಯಾದರೆ..

ಚಹಾ ಗುರು ಲೂ ಯುಗೆ ವಿಶಿಷ್ಟವಾದ ಶಕ್ತಿಯಿತ್ತು. ಅದೇನಂದರೆ ಬೇರೆ ಬೇರೆ ಪ್ರದೇಶದ, ಬೇರೆ ಬೇರೆ ಮೂಲದ ನೀರಿನ ವೈಶಿಷ್ಟ್ಯಗಳನ್ನು ಗುರುತಿಸಬಲ್ಲವರಾಗಿದ್ದರು. ಅಷ್ಟೇ ಅಲ್ಲ ಚಹಾ ಬಗ್ಗೆ ಆಪಾರವಾದ ಜ್ಞಾನವಿತ್ತು. ಯಾಂಗ್ಜೌ ನೀರಿನಲ್ಲಿ ಚಹಾ ಮಾಡಿದರೆ ಹೆಚ್ಚು ರುಚಿಕರವಾಗಿರುತ್ತದೆ ಎಂದು ಹೇಳುತ್ತಿದ್ದರು. ಒಮ್ಮೆ ಈತನೊಂದಿಗೆ ಲಿ ಜಿಕಿಂಗ್ ಎಂಬ ಲೇಖಕ ಯಾಂಗ್ಜೌಗೆ ಪ್ರವಾಸ ಹೊರಟ.

ಅಲ್ಲಿ ಒಬ್ಬ ಸೈನಿಕನಿಗೆ ನ್ಯಾನಿಂಗ್ ಎಂಬಲ್ಲಿಂದ ನೀರು ತರುವಂತೆ ಹೇಳಿದ. ಹತ್ತಿರದಲ್ಲಿ ಯಾಂಗ್ಜಿ ನದಿ ಹರಿಯುತ್ತಿತ್ತು.

ಕೆಲವು ಗಂಟೆಗಳ ಬಳಕೆ ನೀರು ತರಲು ಹೋದ ಸೈನಿಕ ವಾಪಸ್ ಬಂದ. ಲೂಯು ಸ್ವಲ್ಪ ನೀರನ್ನು ಬಟ್ಟಲಿಗೆ ಸುರಿದು, “ಇದು ನ್ಯಾನಿಂಗ್ ನಿಂದ ತಂದ ನೀರಲ್ಲ, ಇದು ಯಾಂಗ್ಜಿ ನದಿ ನೀರು. ನದಿ ತಟದಲ್ಲೇ ತುಂಬಿಕೊಂಡು ಬಂದ ಹಾಗಿದೆ” ಎಂದರು.

ಸೈನಿಕ, “ಇಲ್ಲ ನಾನು ದೋಣಿಯಲ್ಲಿ ನದಿ ಮಧ್ಯದ ನ್ಯಾನಿಂಗ್‍ಗೆ ಹೋಗಿದ್ದೆ, ಇದನ್ನು ನೂರಾರು ಜನ ನೋಡಿದ್ದಾರೆ ಕೂಡ..” ಅಂದ.

ಲೂಯು ಸೈನಿಕನ ಮಾತು ಕೇಳಿ. ತನ್ನ ಕೈಯಲ್ಲಿದ್ದ ಹೂಜಿಯಿಂದ ಅರ್ಧ ನೀರು ಖಾಲಿ ಮಾಡಿದ, “ಈಗ ಇದು ನ್ಯಾನಿಂಗ್ ನೀರು” ಎಂದ.

ಸೈನಿಕ ಬೆಚ್ಚಿಬಿದ್ದ. “ಗುರುಗಳೇ ನಾನು ಹೂಜಿ ತುಂಬ ನ್ಯಾನಿಂಗ್ ನೀರನ್ನೇ ತುಂಬಿಕೊಂಡು ಬಂದಿದ್ದೆ. ಆದರೆ ತುಳುಕಾಟದಿಂದ ಅರ್ಧದಷ್ಟು ನೀರು ಚೆಲ್ಲಿ ಹೋಗಿತ್ತು. ನೀವು ನನ್ನನ್ನು ಬೈಯ್ಯಬಹುದು ಎಂದು ಹೆದರಿ ದೋಣಿ ಇಳಿದ ತಕ್ಷಣ ಯಾಂಗ್ಜಿ ನೀರನ್ನು ತುಂಬಿಕೊಂಡು ಬಂದೆ’ ತನ್ನ ತಪ್ಪನ್ನು ಒಪ್ಪಿಕೊಂಡ.

ಇದನ್ನೆಲ್ಲಾ ಆಶ್ಚರ್ಯದಿಂದ ನೋಡುತ್ತಿದ್ದ ಲೇಖಕ ಲಿ ಜಿಕಿಂಗ್, ‘ಯಾವ ನೀರು ಉತ್ತಮ?’ ಎಂದು ಪ್ರಶ್ನೆ ಕೇಳಿದ. ಲೂ ಯು ನೀರಿನ ಶ್ರೇಷ್ಠತೆಯನ್ನು ಹೇಗೆ ತಿಳಿಯಬೇಕೆನ್ನುವುದನ್ನು ವಿವರಿಸಿದರು. ನೀರು ಚಹಾದ ತಾಯಿಯಂತೆ, ಹಾಗಾಗಿ ನೀರಿನ ಆಯ್ಕೆಯಲ್ಲಿ ಹೆಚ್ಚು ಕಾಳಜಿ ವಹಿಸಬೇಕು ಎಂಬುದನ್ನು ತಿಳಿಸಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights