ಇತಿಹಾಸದಲ್ಲೇ ಮೊದಲು ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಬಿಎಂಪಿ ಬಜೆಟ್ ಮಂಡನೆ!

ರಾಜ್ಯದಲ್ಲೆಡೆ ಕೊರೊನಾ ಭೀತಿ ಹೆಚ್ಚಾಗಿದ್ದು ಮನೆ ಬಿಟ್ಟು ಹೊರಗಡೆ ಬಾರದ ಸ್ಥಿತಿ ನಿರ್ಮಾಣವಾಗಿಬಿಟ್ಟಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಂಗಳೂರು ಮಹಾನಗರ ಪಾಲಿಕೆ ಇತಿಹಾಸದಲ್ಲೇ ಮೊದಲ ಬಾರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಬಜೆಟ್ ಮಂಡನೆ ಮಾಡಿದೆ.

ಹೌದು… ಇಂದು ಬರೋಬ್ಬರಿ 10,899.23 ಕೋಟಿ ಮೊತ್ತದ ಬಜೆಟ್ ನ್ನು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್ ಶ್ರೀನಿವಾಸ್ ಬಜೆಟ್ ಮಂಡಿಸಿದ್ದಾರೆ. ಈ ಬಜೆಟ್ ಕೇಂದ್ರ ಸರ್ಕಾರದ ಅನುದಾನ 558 ಕೋಟಿ ರೂ ಹಾಗೂ ರಾಜ್ಯ ಸರ್ಕಾರದ ಅನುದಾನ 3,780 ಕೋಟಿ ರೂ ಒಳಗೊಂಡಿದ್ದು, ಅಗತ್ಯತೆಗೆ ಅನುಗುಣವಾಗಿ ಬಜೆಟ್ ರೂಪಿಸಲಾಗಿದೆ. ಆದಾಯ ಹೆಚ್ಚಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮುಂದಾದ ಪಾಲಿಕೆಬಿ ಖಾತ ಆಸ್ತಿಗಳನ್ನು ಎ ಖಾತ ಮಾಡುವ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಜೊತೆಗೆ ಖಾತ ನಕಲು ಮತ್ತು ಖಾತ ಧೃಡೀಕರಣ ಪತ್ರದ ಶುಲ್ಕ ದ್ವಿಗುಣ ಮಾಡಲಾಗಿದ್ದು, 3 ವರ್ಷಕ್ಕೂ ಅಧಿಕ ತೆರಿಗೆ ಬಾಕಿ ಉಳಿಸಿಕೊಂಡರೆ ಕಚೇರಿಯ ಋಣಭಾರ ಪತ್ರದಲ್ಲಿ ನಮೂದು ಮಾಡಬೇಕು ಎನ್ನುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಬೆಂಗಳೂರಿನಲ್ಲಿ ಕೊರೊನಾ ಭೀತಿ ಹೆಚ್ಚಾದ ಹಿನ್ನೆಲೆ ಸೋಂಕು ಹರಡದಂತೆ ನಿಯಂತ್ರಿಸಲು 49.50 ಕೋಟಿ ಮೀಸಲಿಡಲಾಗಿದ್ದು, ಉಚಿತವಾಗಿ ಜನನ-ಮರಣ ಪತ್ರ ವಿತರಣೆ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಹೆಸರಲ್ಲಿ 20 ಕೋಟಿ ವೆಚ್ಚದಲ್ಲಿ ಮಕ್ಕಳ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣಕ್ಕೂ ರೂಪುರೇಷೆ ಸಿದ್ದಪಡಿಸಲಾಗಿದೆ. ಮಾತ್ರವಲ್ಲದೇ ಉಚಿತವಾಗಿ ಡಯಾಲಿಸಿಸ್ ಸೇವೆ ನಿರ್ವಹಣೆಗೆ 16 ಕೋಟಿ, ಲಿಂಕ್ ವರ್ಕರ್ಸ್‌ಗಳಿಗೆ ಪ್ರತಿ ತಿಂಗಳು ಸಾವಿರ ರೂ ಸಂಭಾವನೆ ಹೆಚ್ಚಳ. ಹೊಸ ವಲಯಗಳಲ್ಲಿ ನಾಯಿ ಕೆನಲ್ ಸ್ಥಾಪನೆಗೆ 5 ಕೋಟಿ ಹಣವನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿದೆ.

ಬಜೆಟ್‌ನಲ್ಲಿ ಶಿಕ್ಷಣ ವಿಭಾಗಕ್ಕೂ ಸಾಕಷ್ಟು ಒತ್ತು ನೀಡಲಾಗಿದೆ. ಪಾಲಿಕೆಯ ಶಾಲಾ ಕಾಲೇಜುಗಳಲ್ಲಿ ಸ್ಮಾರ್ಟ್ ಶಿಕ್ಷಣ ಆರಂಭಕ್ಕೆ 7 ಕೋಟಿ, ಜ್ಞಾನ ದೀಪ ಕಾರ್ಯಕ್ರಮಕ್ಕೆ  7.5 ಕೋಟಿ, ನಾಡ ಪ್ರಭು ಕೆಂಪೇಗೌಡ ಹೆಸರಲ್ಲಿ ಶಾಲೆಗಳ ನಿರ್ಮಾಣಕ್ಕೆ 10 ಕೋಟಿ, ವಿದ್ಯಾರ್ಥಿಗಳ ಬಿಎಂಟಿಸಿ ಬಸ್ ಪಾಸ್ ಗಾಗಿ 75 ಲಕ್ಷ, ಸಿ.ಸಿ ಕ್ಯಾಮೆರಾ ಅಳವಡಿಕೆಗೆ 5 ಕೋಟಿ, ಶಾಲಾ ಕಾಲೇಜುಗಳಲ್ಲಿ ಕುಡಿಯುವ ನೀರಿಗೆ 2 ಕೋಟಿ, ಮಳೆ ನೀರು ಕೊಯ್ಲು ಪದ್ದತಿಗೆ 2 ಕೋಟಿ, ಶಾಲಾ ಕಾಲೇಜು ಶಿಕ್ಷಕರ ಸಮವಸ್ತ್ರ ಕ್ಕೆ  30 ಲಕ್ಷ ಹಾಗೂ ಅಂತರ್ ಶಾಲಾ ಕಾಲೇಜುಗಳ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ 50 ಲಕ್ಷ ರೂ ಗಳನ್ನು ಮೀಸಲಿಡಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights