ಇಲ್ಲಿ ಶಾಲೆಗೆ ಹೋದ ಮಕ್ಕಳು ವಾಪಸ್ ಮನೆಗೆ ಬಂದು ಸೇರುವ ತನಕ‌ ಪೋಷಕರಲ್ಲಿ ಆತಂಕ!

ದೇಶದಲ್ಲಿ ಎಲ್ಲಾ ಮಕ್ಕಳಿಗೂ ಶಿಕ್ಷಣ ಸಿಗಬೇಕು, ಬಾಲ್ಯದಲ್ಲಿ ಮಕ್ಕಳು ನಲಿಯುತ್ತಾ ಶಿಕ್ಷಣ ಕಲಿಯಬೇಕು ಎಂಬುದು ಸರ್ವ ಶಿಕ್ಷಣ ಅಭಿಯಾನದ ಮೂಲ ಆಶಯ. ಆದರೆ ಕೋಟೆನಾಡು ಚಿತ್ರದುರ್ಗ ನಗರದಲ್ಲಿನ ಸರ್ಕಾರಿ ಶಾಲೆ ಮಕ್ಕಳಿಗೆ ಶಾಲೆಗೆ ಹೋಗುವುದೇ ಹರಸಾಹಸದ ಕೆಲಸವಾಗಿದೆ.ಪ್ರತಿದಿನ ಮಕ್ಕಳು ನಲಿಯುತ್ತಾ ಶಾಲೆಗೆ ಹೋಗುವ ಬದಲು ಜೀವ ಕೈಯಲ್ಲಿಡಿದುಕೊಂಡು ಭಯದಿಂದಲೇ ಶಾಲೆಗೆ ಹೋಗುವಂತಾಗಿದೆ.ಅಲ್ಲದೆ ಶಾಲೆಗೆ ಹೋದ ಮಕ್ಕಳು ವಾಪಸ್ ಮನೆಗೆ ಬಂದು ಸೇರುವ ತನಕ‌ ಪೋಷಕರು ಆತಂಕದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೋಟೆನಾಡು ಚಿತ್ರದುರ್ಗ ನಗರದ ಹೊರ ವಲಯದಲ್ಲಿರುವ ಪಿಳ್ಳೇಕೆರೆನಹಳ್ಳಿ ಸರ್ಕಾರಿ ಶಾಲೆಗೆ ಬರುವ ಮಕ್ಕಳು ದಿನನಿತ್ಯ ರಸ್ತೆ ದಾಟಲು ಎಣಗಾಡಬೇಕಿದೆ. ಇತ್ತೀಚೆಗೆ ಚಿತ್ರದುರ್ಗ ಹೊಸಪೇಟೆ ಸೊಲ್ಲಾಪುರ ಸಂಪರ್ಕದ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಚತುಸ್ಪಥ ರಸ್ತೆ ನಿರ್ಮಾಣಕ್ಕಾಗಿ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದೆ. ಅಗಲೀಕರಣದ ಕಾಮಗಾರಿ ಮಾಡುವ ವೇಳೆ ರಸ್ತೆಯ ಎತ್ತರವನ್ನು ಹೆಚ್ಚು ಮಾಡಿರೋದ್ರಿಂದ ಅಕ್ಕಪಕ್ಕದ ಗ್ರಾಮಗಳು ಹಳ್ಳಕ್ಕೆ ಸಿಲುಕಿದಂತಾಗಿವೆ. ಒಂದು ಬದಿಯಿಂದ ಮತ್ತೊಂದು ಬದಿಗೆ ಹೋಗಬೇಕಾದ್ರೆ ಗುಡ್ಡ ಏರುವ ಮಾದರಿಯಲ್ಲಿ ರಸ್ತೆಯನ್ನ ಹತ್ತಿ ಇಳಿದು ಹೋಗಬೇಕು.

ಇಲ್ಲಿ ಪ್ರತಿನಿತ್ಯ ರಸ್ತೆಯ ಮತ್ತೊಂದು ಭಾಗದ ಪಿಳ್ಳೆಕೆರೆನ ಹಳ್ಳಿ ಗ್ರಾಮದಲ್ಲಿ ವಾಸಿಸುತ್ತಿರುವ ಜನರು ಹಾಗು ಶಾಲಾ ಮಕ್ಕಳು ಮತ್ತೊಂದು ಬದಿಯಲ್ಲಿರೋ ಶಾಲೆಗೆ ಹೋಗಲು ಕಸರತ್ತು ಮಾಡಿ ಕಷ್ಟಪಡುತ್ತಿದ್ದಾರೆ.ಮೊದಲೇ NH13 ರಾಷ್ಟ್ರೀಯ ಹೆದ್ದಾರಿಯಾಗಿದ್ದು ಈ ರಸ್ತೆಯಲ್ಲಿ ವಾಹನ ದಟ್ಟಣೆ ಬಿಡುವೇ ಇಲ್ಲದೆ ಹೆಚ್ಚಾಗಿ ಇರುತ್ತದೆ.ಈ ವಾಹನ ದಟ್ಟಣೆಯ ಸಮಯದಲ್ಲಿ ಅನಿವಾರ್ಯವಾಗಿ ಜನರು ರಸ್ತೆ ದಾಟುವ ಸಂಧರ್ಭದಲ್ಲಿ ಹಲವಾರು ಬಾರಿ ಅಪಘಾತಗಳು ಸಂಭವಿಸಿವೆ. ಹೀಗಾಗಿ ಶಾಲೆಗೆ ಹೋಗುವ ಮಕ್ಕಳು ಜೀವ ಕೈಯಲ್ಲಿ ಹಿಡಿದುಕೊಂಡು ರಸ್ತೆ ದಾಟುತ್ತಿದ್ದಾರೆ.ಹೀಗೆ ಶಾಲೆಗೆ ಹೋದ ಮಕ್ಕಳು ಸುರಕ್ಷಿತವಾಗಿ ವಾಪಾಸ್ ಮನೆಗೆ ಬರುವ ತನಕ ಪೋಷಕರು ಆತಂಕದಿಂದಲ್ಲೇ ಮಕ್ಕಳ ಬರುವಿಕೆಗಾಗಿ ಕಾಯಬೇಕಾಗಿದೆ.

ಅಷ್ಟೆ ಅಲ್ಲದೆ ಶಾಲೆಗೆ ಕರೆದೊಯ್ದು, ಶಾಲೆಯಿಂದ ಕರೆತರಬೇಕಿದೆ. ಇದರಿಂದ ಬೇಸತ್ತ ಪೋಷಕರು, ದಿಢೀರ್ ಅಂತ ಪ್ರತಿಭಟನೆಗಿಳಿದು ಹೆದ್ದಾರಿ ತಡೆ ಮಾಡುವ ಮೂಲಕ‌ ಆಕ್ರೋಶ ಹೊರಹಾಕಿದ್ದು, ಖಾಸಗಿ ಶಾಲೆಗಳ ಬಳಿ ಅಂಡರ್ ಪಾಸ್ ನಿರ್ಮಿಸಿರುವ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸರ್ಕಾರಿ ಶಾಲೆ ಬಳಿ ಅಂಡರ್ ಪಾಸ್ ನಿರ್ಮಿಸದೆ ತಾರತಮ್ಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನೂ ಪೋಷಕರು ಹಾಗು ವಿದ್ಯಾರ್ಥಿಗಳ ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಹೆದ್ದಾರಿ ಗುತ್ತಿಗೆದಾರರು, ಪ್ರತಿಭಟನಾ ನಿರತರನ್ನು ಮನವೊಲಿಸಿದ್ದು, ಎಲ್ಲಿ ಅಂಡರ್ ಪಾಸ್ ನಿರ್ಮಾಣ ಮಾಡಬೇಕು ಎಂಬ ಬಗ್ಗೆ ಕೇಂದ್ರ ಸರ್ಕಾರ ನೀಡಿರುವ ಯೋಜನೆಯಲ್ಲಿ ಗುರುತಿಸಲಾಗಿದೆ. ಖಾಸಗಿ ಶಾಲೆ, ಸರ್ಕಾರಿ ಶಾಲೆ ಎಂಬ ಬಗ್ಗೆ ನಾವು ತಾರತಮ್ಯ ಮಾಡುತ್ತಿಲ್ಲ. ಸರ್ಕಾರ ಹೇಳಿದ ಜಾಗದಲ್ಲಿ ದಾರಿ ಬಿಡಲಾಗಿದೆ.

ಇಲ್ಲಿ ಸಾರ್ವಜನಿಕರು ಮತ್ತು ಮಕ್ಕಳಿಗೆ ತೊಂದರೆ ಆಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಕೂಡಲೇ ಸಂಬಂಧಪಟ್ಟವರ ಜೊತೆ ಮಾತನಾಡಿ ಈ ಭಾಗದಲ್ಲಿ ಸುರಕ್ಷಿತ ದಾರಿ ಕಲ್ಪಿಸುವ ವ್ಯವಸ್ಥೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಒಟ್ಟಾರೆ ಸಂಭ್ರಮದಿಂದ ಆಟವಾಡುತ್ತಾ ಪಾಠ ಕಲಿಯಬೇಕಾದ ಮಕ್ಕಳು ಕೇಂದ್ರ ಸರ್ಕಾರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಡಿರುವ ಯಡವಟ್ಟಿನಿಂದ ಜೀವ ಕೈಯಲ್ಲಿ ಹಿಡಿದುಕೊಂಡು ಶಾಲೆಗೆ ಹೋಗುವಂತಾಗಿದೆ. ಅಲ್ಲದೆ ಮಕ್ಕಳನ್ನು ಶಾಲೆಗೆ ಕಳುಹಿದ ಪೋಷಕರು ಮಕ್ಕಳ ಸುರಕ್ಷತೆಯ ಬಗ್ಗೆ ಚಿಂತಿಸುತ್ತಾ ಆತಂಕದಿಂದ ಬದುಕುತ್ತಿದ್ದಾರೆ, ಇನ್ನಾದ್ರೂ ಸಂಬಂಧಿಪಟ್ಟವರು ಇತ್ತ ಗಮನಹರಿಸುತ್ತಾರಾ? ಎಂಬುದನ್ನ ಕಾದು ನೋಡಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights