ಎಂಎಲ್‌ಸಿ ನಾಮಪತ್ರದಲ್ಲಿ ಆಸ್ತಿವಿವರ: ಬಿಜೆಪಿ ಸೇರಿದ ಎಂಟಿಬಿ ನಾಗರಾಜ್ ಆಸ್ತಿಯಲ್ಲಾಗಿರುವ ಏರಿಕೆ ಎಷ್ಟು ಗೊತ್ತಾ?

ಜೂನ್‌ 29ರಂದು ಕರ್ನಾಟಕ ವಿಧಾನ ಪರಿಷತ್ ಚುನಾವಣೆ ನಡೆಯಲಿದೆ. ಚುನಾವಣೆಗೆ ಮೂರು ಪಕ್ಷದ ಅಭ್ಯರ್ಥಿಗಳೂ ನಾಪಪತ್ರ ಸಲ್ಲಿಸಿದ್ದಾರೆ. ಜೆಡಿಎಸ್‌ನಿಂದ ಇಂಚರ ಗೋವಿಂದರಾಜು ಬಿಜೆಪಿಯಿಂದ ಎಂಟಿಬಿ ನಾಗರಾಜ್, ಪ್ರತಾಪ್ ಸಿಂಹ ನಾಯಕ್, ಸುನೀಲ್ ವಲ್ಯಾಪುರೆ, ಆರ್. ಶಂಕರ್, ಕಾಂಗ್ರೆಸ್‌ನಿಂದ ಬಿ.ಕೆ. ಹರಿಪ್ರಸಾದ್, ನಜೀರ್ ಅಹಮದ್ ಚುನಾವಣಾ ಕಣದಲ್ಲಿ ಸ್ಪರ್ಧಿಸಿದ್ದಾರೆ.

ವಿಧಾನ ಪರಿಷತ್ತಿಗೆ ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿಗಳು ತಮ್ಮ ಆಸ್ತಿ ವಿವರವನ್ನು ಘೋಷಿಸಿದ್ದಾರೆ. ಒಟ್ಟು ಏಳು ಜನ ಅಭ್ಯರ್ಥಿಗಳಲ್ಲಿ ಬಿಜೆಪಿಯ ಎಂಟಿಬಿ ನಾಗರಾಜ್ ಅತಿ ಶ್ರೀಮಂತ ಅಭ್ಯರ್ಥಿ ಎನಿಸಿದ್ದಾರೆ.

ಎಂಟಿಬಿ ನಾಗರಾಜ್ ಈಸಲ 1,224 ಕೋಟಿ ರೂ.ಗಿಂತ ಅಧಿಕ ಆಸ್ತಿ ಘೋಷಿಸಿದ್ದಾರೆ. ಇದರಲ್ಲಿ ಅಪಾರ ಮೌಲ್ಯದ ಡೈಮೆಂಡ್, ಪ್ಲಾಟಿನಂ ಸೇರಿದಂತೆ ಚಿನ್ನಾಭರಣಗಳು ಸೇರಿವೆ. ನಾಗರಾಜ್ ಹೆಸರಲ್ಲಿ 884 ಕೋಟಿ ರೂ.ಗಿಂತ ಹೆಚ್ಚು ಆಸ್ತಿ ಇದ್ದು, ಅವರ ಪತ್ನಿ ಶಾಂತಕುಮಾರಿ ಹೆಸರಲ್ಲಿ 331 ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ ಆಸ್ತಿಯಿದೆ. ಎಂಟಿಬಿ ನಾಗರಾಜ್ ಹೆಸರಿನಲ್ಲಿ 461 ಕೋಟಿ ರೂ. ಮೌಲ್ಯದ ಚರಾಸ್ತಿ, 416 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಅವರ ಹೆಂಡತಿ 160 ಕೋಟಿ ರೂ. ಮೌಲ್ಯದ ಚರಾಸ್ತಿ ಮತ್ತು 179 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.

ಇದೇ ಎಂಟಿಬಿ ನಾಗರಾಜ್‌ರವರು ಆರು ತಿಂಗಳ ಹಿಂದೆಯಷ್ಟೇ ನಡೆದ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದಾಗ ಒಟ್ಟು ಆಸ್ತಿ ಮೌಲ್ಯ 1201.50 ಕೋಟಿ ರೂ ಘೋಷಿಸಿದ್ದರು. ಅಂದರೆ ಈ ಆರು ತಿಂಗಳಲ್ಲಿ ಅವರ ಒಟ್ಟು ಆಸ್ತಿಯಲ್ಲಿ 23 ಕೋಟಿ ರೂ ಹೆಚ್ಚಳ ಕಂಡುಬಂದಿದೆ.

ಇನ್ನು ಹಿಂದಕ್ಕೆ ಹೋಗುವುದಾರೆ ಎರಡು ವ‍ರ್ಷಗಳ ಹಿಂದೆ ಅಂದರೆ 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಹೊಸಕೋಟೆಯಿಂದ ಸ್ಪರ್ಧಿಸಿದ್ದಾಗ ಇದೇ ಎಂಟಿಬಿ ನಾಗರಾಜ್‌ರವರು 1015 ಕೋಟಿ ರೂ ಆಸ್ತಿ ಘೋಷಿಸಿದ್ದರು. ಅಂದರೆ ಎರಡು ವರ್ಷದಲ್ಲಿ ಅವರ ಆಸ್ತಿಯಲ್ಲಿ 209 ಕೋಟಿ ರೂ ಹೆಚ್ಚಳವಾಗಿದೆ.

ಅವರು ಕಾಂಗ್ರೆಸ್‌ ತ್ಯಜಿಸಿ ಬಿಜೆಪಿ ಸೇರಿ ಕಾಂಗ್ರೆಸ್‌ ಜೆಡಿಎಸ್‌ ಸರ್ಕಾರ ಉರುಳಲು ಕಾರಣರಲ್ಲಿ ಒಬ್ಬರಾಗಿದ್ದರು. ಅದಕ್ಕಾಗಿಯೇ ಅವರಿಗೆ 50 ಕೋಟಿಗೂ ಹೆಚ್ಚಿನ ಹಣ ಸಂದಾಯವಾಗಿದೆ. ಕೇವಲ ಒಂದು ವಾರದ ಅವಧಿಯಲ್ಲಿ ಅವರ ಖಾತೆಗೆ 48 ಕೋಟಿಗೂ ಅಧಿಕ ಮೊತ್ತ ವರ್ಗಾವಣೆಯಾಗಿದೆ ಎಂದು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಆರೋಪಿಸಿದ್ದವು. 2018ರಿಂದ 2019 ರ ನಡುವೆ ಕೇವಲ 18 ತಿಂಗಳಿನಲ್ಲಿ 180 ಕೋಟಿ ರೂ ಹೆಚ್ಚಳವಾಗಿತ್ತು.

ಅಲ್ಲದೇ ಸದ್ಯಕ್ಕೆ ಘೋಷಿಸಿರುವ ಅಫಿಡವಿಟ್‌ನಂತೆ ಎಂಟಿಬಿ ನಾಗರಾಜ್ 52.75 ಕೋಟಿ ರೂ. ಸಾಲ ಹೊಂದಿದ್ದಾರೆ. ಅವರ ಪತ್ನಿ ಹೆಸರಲ್ಲಿ 1.97 ಕೋಟಿ ರೂ. ಸಾಲ ಇದೆ. ನಾಗರಾಜ್ ಅವರು 2.23 ಕೋಟಿ ರೂ. ಮೌಲ್ಯದ ಡೈಮೆಂಡ್, ಪ್ಲಾಟಿನಂ ಸೇರಿದಂತೆ ಚಿನ್ನಾಭರಣ ಹೊಂದಿದ್ದಾರೆ. ಪತ್ನಿಯ ಬಳಿ 1.48 ಕೋಟಿ ರೂ. ಮೌಲ್ಯದ ಡೈಮೆಂಡ್, ಪ್ಲಾಟಿನಂ ಸೇರಿದಂತೆ ಚಿನ್ನಾಭರಣ ಇದೆ. ನಾಗರಾಜ್ ಬಳಿ 32.60 ಲಕ್ಷ ರೂ. ನಗದು ಇದ್ದರೆ, ಪತ್ನಿ ಬಳಿ 45.60 ಲಕ್ಷ ರೂ. ನಗದು ಇದೆ. ಇವರು 2.48 ಕೋಟಿ ರೂ. ಮೌಲ್ಯದ ಐದು ಕಾರುಗಳನ್ನು ಹೊಂದಿದ್ದಾರೆ. ಈ ಪೈಕಿ 51.50 ಲಕ್ಷ ರೂ. ಮೌಲ್ಯದ ಲ್ಯಾಂಡ್ ರೋವರ್, 96.12 ಲಕ್ಷ ರೂ. ಮೌಲ್ಯದ ಮರ್ಸಿಡೀಸ್ ಬೆನ್ಜ್ ಕಾರ್, 29 ಲಕ್ಷ ರೂ. ಮೌಲ್ಯದ ಫಾರ್ಚೂನರ್ ದುಬಾರಿ ಮೌಲ್ಯದ ಕಾರುಗಳಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights