ಎಚ್ಚೆಸ್ವಿ ‘ಗುಬ್ಬಿಮರಿಯ ಹೊಸ ತರ್ಕ’ ಪದ್ಯ: ಜನಾಂಗೀಯ ನಿಂದನೆ ಆರೋಪ!

ಹಿರಿಯ ಸಾಹಿತಿ, ಕಳೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಎಚ್ ಎಸ್ ವೆಂಕಟೇಶ ಮೂರ್ತಿ ಅವರ ಒಂದು ಮಕ್ಕಳ ಪದ್ಯ ವಾದ-ವಿವಾದಗಳಿಗೆ ಗುರಿಯಗಿದೆ. ಈ ಪದ್ಯ ಜನಾಂಗೀಯ ನಿಂದನೆ, ವರ್ಣಬೇಧದ ನಿಲುವು ತಳೆದಿದೆ ಎಂದು ರಂಗಕರ್ಮಿ ವಸಂತ ಬನ್ನಾಡಿ ಅವರು ತಮ್ಮ ಫೇಸ್ಬುಕ್ ಪುಟದಲ್ಲಿ ಚರ್ಚಿಸಿ ಬರೆದಿದ್ದಾರೆ.

ಈ ಫೇಸ್ಬುಕ್ ಪೋಸ್ಟ್ ನ ಪೂರ್ಣ ಪಠ್ಯ ಇಲ್ಲಿದೆ. 

‘ಗುಬ್ಬಿ ಮರಿಯ ಹೊಸ ತರ್ಕ’ ಎಂಬ ಮಕ್ಕಳ ಪದ್ಯದ ಧಾಟಿಯ ಪದ್ಯವನ್ನು ಬರೆದಿರುವವರು ಎಚ್.ಎಸ್. ವೆಂಕಟೇಶಮೂರ್ತಿ. ಈಚೆಗೆ ಉಡುಪಿಯ ಮಾನಸಿ ಸುಧೀರ್ ಕೊಡವೂರು ಈ ಪದ್ಯವನ್ನು ಭಾವಾಭಿನಯದ ಸಹಿತ ಹಾಡಿದ್ದಾರೆ.

ಇಡೀ ಪದ್ಯವನ್ನು ಅವರು ತುಂಬಾ ಲವಲವಿಕೆಯಿಂದ ಪರಿಣಾಮಕಾರಿಯಾಗಿಯೇ ಪ್ರಸ್ತುತಪಡಿಸಿದ್ದಾರೆ. ಅದನ್ನು ಸಾವಿರಾರು ಜನ ಮೆಚ್ಚಿಕೊಂಡೂ ಇದ್ದಾರೆ. ಆದರೆ ಈ ಪದ್ಯದ ಒಳ ಹೂರಣದ ಬಗ್ಗೆ ಯಾರೊಬ್ಬರೂ ಅಷ್ಟಾಗಿ ಪ್ರಶ್ನೆ ಎತ್ತಿಲ್ಲ ಎಂಬುದು ಅಚ್ಚರಿಯ ವಿಷಯ.

ಇದೊಂದು ಪಕ್ಕಾ ರೇಸಿಸ್ಟ್ ಪದ್ಯ. ಈ ಪದ್ಯದ ವಿವಿಧ ಘಟ್ಟಗಳನ್ನು ನೋಡಿ

೧)’ಕಾಗೆ ಜೋಡಿ ಆಡು
ನಿನ್ನ ಕಾಲು ಮುರಿತೀನಿ’ಅಂತು ಅಮ್ಮ ಗುಬ್ಬಿ
‘ಯಾಕಮ್ಮ ಹಾಗಂತಿ?
ಕಾಗೆ ಮರಿ ಜಾಣಮರಿ ಆಡಿದ್ರೇನು ತಪ್ಪು’
ಅಂತು ಗುಬ್ಬಿಮರಿ

೨)’ಗುಬ್ಬಿ ಮರಿ ಗುಬ್ಬಿ ಮರಿ ಜೋಡಿ ಮಾತ್ರ ಆಡ್ಕೊಬೇಕು’ಅಮ್ಮ ಗುಬ್ಬಿ ಹೇಳ್ತು
‘ಗುಬ್ಬಿ ಮರಿ ಕಾಗೆ ಮರಿ ಜೋಡಿ ಯಾಕೆ ಆಡ್ಕೋಬಾದು೯?’
ಮರಿಗುಬ್ಬಿ ಕೇಳ್ತು

೩) ಅಮ್ಮ ಗುಬ್ಬಿ ಯೋಚಿಸಿ ಹೇಳ್ತು
‘ನೋಡು ಪುಟ್ಟ,ಕಾಗೆಮರಿ ಕಾಳ್ಗಪ್ಪು
ನೀನು ಬಿಳಿ
ಅದ್ರ ಜೋಡಿ ಆಡ್ತಾ ಇದ್ರೆ
ನೀನು ಕೂಡ ಕರ್ರಗೆ ಕರಿ ಕೊರಮ ಆಗ್ತಿ ನೋಡು

೪) ‘ನಂಗೇನಂತೆ ನಂಗೇನಂತೆ,ಅದಕೇ’
ಪುಟಾಣಿ ಗುಬ್ಬಿ ಥಟ್ಟನೆ ಹೇಳ್ತು
‘ಹೌದಲ್ಲಮ್ಮ ನಾನು ಬಿಳಿ
ಕಾಗೆ ಮರಿ ಕಾಳ್ಗಪ್ಪು
ನನ್ನ ಜೋಡಿ ಆಡ್ತಾ ಇದ್ರೆ
ಕಾಗೆ ಮರಿ ಮಲ್ಲಿಗೆ ಹೂವಿನ ಹಾಗೇ
ಬೆಳ್ಳಗೇ ಬೆಳ್ಳಗೇ ಆಹಾ,ಆಗುತ್ನೋಡು’
ಅದಕೇ ಅಂತ ಬುರ್ರನೆ ಹಾರಿಹೋಯ್ತು
ಕಾಗೆ ಜೋಡಿ ಆಡೋಕೆ

ಮೇಲ್ನೋಟಕ್ಕೇ ಈ ಪದ್ಯ ಬಿಳಿ ವರ್ಣವನ್ನು ಎತ್ತಿಹಿಡಿಯುತ್ತದೆ ಎಂಬುದು ಸ್ಪಷ್ಟ. ಆದರೆ ಈ ಅಂಶ ಈ ಪದ್ಯ ಕೇಳಿದ ಯಾರ ಗಮನಕ್ಕೂ ಬಂದ ಹಾಗೇ ಇಲ್ಲ. ಬಂದಿದ್ದರೂ ತಪ್ಪು ಎಂದು ಅನಿಸಿಯೇ ಇಲ್ಲ. ಫೇರ್ ಅಂಡ್ ಲವ್ಲಿ ಉಪಯೋಗಿಸಿ ಎಲ್ಲರೂ ‘ಬಿಳಿ ಕಾಗೆಮರಿ’ಯಾಗಲು ಪ್ರಯತ್ನಿಸುತ್ತಿರುವಾಗ ಅದು ಹೊಳೆಯುವುದಾದರೂ ಹೇಗೆ?

https://youtu.be/3vNtQeydAnc

ಹೀಗಾಗಿ ಪ್ರತಿಯೊಬ್ಬರೂ ಪದ್ಯವನ್ನು ಮೆಚ್ಚುವವರೇ. ಇದು ಸದ್ಯ ಜನಮಾನಸದಲ್ಲಿ ಸಾರ್ವತ್ರಿಕವಾಗಿ ಆವರಿಸಿರುವ ಮಂಪರಿನ ಲಕ್ಷಣ. ಮುಖ್ಯವಾಗಿ ಮಧ್ಯಮವರ್ಗ ಇಂಥ ಮನಸ್ಥಿತಿಯನ್ನು ತಾನೇ ಸ್ವತಃ ಸೆಲೆಬ್ರೇಟ್ ಮಾಡುತ್ತಿದೆ.

ನಮ್ಮ ಹೆಚ್ಚಿನ ಸಾಹಿತಿವರೇಣ್ಯರು ಕೂಡ ಅದಕ್ಕೆ ಹೊರತಾದವರಲ್ಲ.ತಮ್ಮ ಓದುಗರ ಮನಸ್ಥಿತಿಗೆ ತಕ್ಕುದಾದ ಪದ್ಯಗಳನ್ನು ಹೊಸೆಯುತ್ತಿದ್ದಾರೆ. ನೂರಕ್ಕೆ ತೊಂಭತ್ತು ಮಂದಿ ಸಾಹಿತಿಗಳು ಮತ್ತು ಅವರ ‘ಜನಪ್ರಿಯತೆ’ಗೆ ಕಾರಣವಾಗಿರುವ ಓದುಗರು ಇಂಥವರೇ ಆಗಿದ್ದಾರೆ. ಸದ್ಯ ಚಾಲ್ತಿಯಲ್ಲಿರುವ ಕಪ್ಪು ಬಿಳಿ ತಾರತಮ್ಯ,ಅಸಮಾನತೆಗಳಿಗೆಲ್ಲ ಮಣ್ಣು ನೀರು ಒದಗಿಸುವ ಘನ ಕಾರ್ಯವನ್ನು ಇವರೆಲ್ಲರೂ ಯಥೇಚ್ಚವಾಗಿ ಮಾಡುತ್ತಿದ್ದಾರೆ.

ಈ ರೀತಿ ಯಥಾಸ್ಥಿತಿಯನ್ನು ಎತ್ತಿಹಿಡಿಯುವ ಕೆಲಸ ಆಕಸ್ಮಿಕವಾದುದು ಎಂದು ನನಗಂತೂ ಅನಿಸುತ್ತಿಲ್ಲ.ಇದು ಇಂದಿನ ರಾಜಕೀಯ ವಿದ್ಯಮಾನಗಳಿಗೆ ಪೂರಕವಾಗಿ ಕೆಲಸ ಮಾಡುತ್ತಿರುವುದನ್ನೂ ಗಮನಿಸಬೇಕು. ಇದೆಲ್ಲ ಮೇಲ್ನೋಟಕ್ಕೆ ಅಪ್ರಜ್ಞಾಪೂರ್ವಕ ಅನಿಸಿದರೂ ಪ್ರಜ್ಞಾಪೂರ್ವಕವಾದುದು. ಕನ್ನಡ ಸಾಹಿತ್ಯ ತಲುಪಿರುವ ಅಧೋಗತಿಗೆ ಸಾಕ್ಷಿಯಾಗುವಂಥದ್ದು.

ಇಲ್ಲಿ ನನಗೆ ಕೆಲವು ಅಚ್ಚರಿಗಳು ಉಳಿದುಬಿಟ್ಟಿವೆ
ಈ ಪದ್ಯದ ರಾಗ ಸಂಯೋಜನೆ ಮಾಡಿದವರು ಗುರುರಾಜ ಮಾರ್ಪಳ್ಳಿ. ಪ್ರಾಯಶ: ಪದ್ಯದ ಆಯ್ಕೆ ಕೂಡ ಅವರದೇ ಇರಬಹುದು.  ‘ಚಾಕ್ ಸರ್ಕಲ್’, ‘ಜನ ಶತ್ರು’,’ಸಂಕ್ರಾಂತಿ’ಸೇರಿದಂತೆ ನನ್ನ ಹಲವು ನಾಟಕಗಳಿಗೆ ಸಂಗೀತ ನಿರ್ದೇಶನ ಮಾಡಿದವರು.
ಯಾವತ್ತೂ ಬ್ರಾಹ್ಮಣ್ಯವನ್ನು ಎತ್ತಿ ಹಿಡಿದವರಲ್ಲ. ಅವರು ಈ ಪದ್ಯವನ್ನು ಯಾಕೆ ಕೈಗೆತ್ತಿಕೊಂಡರು? ಈ ಪದ್ಯದ ‘ಕಪ್ಪು ಕಾಗೆ ಮರಿ ಬಿಳಿ ಕಾಗೆಮರಿ’ಯಾಗುವ ಆಶಯ ಅವರ ಗಮನಕ್ಕೆ ಏಕೆ ಬರಲಿಲ್ಲ?

OHCHR | Victims mount as extreme nationalism fuels racism

ಅತ್ಯುತ್ತಮ ಕಲಾವಿದೆಯಾದ ಮಾನಸಿ ಸುಧೀರ್ ಕೂಡ ಇದನ್ನು ಏಕೆ ಗಮನಿಸಲಿಲ್ಲ? ಇದ್ಯಾವುದನ್ನೂ ಗಮನಿಸದಂತೆ ಅವರು ಈ ಪದ್ಯಕ್ಕೆ ಜೀವ ತುಂಬಲು ತಮ್ಮೆಲ್ಲ ಶಕ್ತಿಯನ್ನು ಧಾರೆ ಎರೆದಿದ್ದಾರೆ.

೧)ಮಕ್ಕಳ ಮೇಲೆ ಈ ಪದ್ಯ ಯಾವ ರೀತಿಯ ಪ್ರಭಾವವನ್ನು ಮಾಡಬಹುದು ಎಂಬುದನ್ನು ಇಬ್ಬರೂ ಯೋಚಿಸಿದಂತಿಲ್ಲ.
೨)’ನೀನು ಕೂಡ ಕರ್ರಗೆ ಕಪ್ಪು ಕೊರಮ ಆಗ್ತೀ ನೋಡು’ಎಂಬುದು ಮಕ್ಕಳಲ್ಲಿ ಯಾವ ಭಾವವನ್ನು ಹುಟ್ಟಿಸಬಹುದು?
೩)’ಕಾಳ್ಗಪ್ಪು,ಕರಿ ಕೊರಮ’ ಮುಂತಾದ ಪದಗಳ ಮೇಲೆ ಈ ಪದ್ಯದಲ್ಲಿ ಯಾಕೆ ಅಷ್ಟು ಒತ್ತು ಇದೆ?
೪)ಬಿಳಿ ಗುಬ್ಬಿಮರಿಯ ಜೊತೆ ಸೇರಿಸಿ ಕಾಳ್ಗಪ್ಪು ಕಾಗೆ ಮರಿಯನ್ನು ಬಿಳಿ ಮಾಡುವ ಪ್ರಯತ್ನ ಯಾಕೆ ನಡೆದಿದೆ?
೫)ತನ್ನ ಜೊತೆ ಸೇರಿಸಿಕೊಂಡು ಕಪ್ಪು ಕಾಗೆ ಮರಿಯನ್ನು ಬಿಳಿ ಮಾಡಲು ಹೊರಟಿರುವುದನ್ನು ಗುಬ್ಬಿಮರಿಯ ಮುಗ್ಧತೆ ಎಂದು ಮೆಚ್ಚಿಕೊಂಡು ಬಿಡಬಹುದೇ? ಇದು ಕೇವಲ ಗುಬ್ಬಿ ಮರಿಯ ಮುಗ್ಧತೆಯೇ? ಲೇಖಕರ ಆಶಯ ಕೂಡ ಹೌದಲ್ಲವೇ?

ಇಷ್ಟಕ್ಕೂ ಗುಬ್ಬಿ ಮರಿಯನ್ನು ಲೇಖಕರು ಯಾಕೆ ಆಯ್ಕೆ ಮಾಡಿಕೊಂಡಿದ್ದಾರೆ? ಇಲ್ಲಿ ಗುಬ್ಬಿ ಮರಿ ಬಿಳಿ ಅನ್ನುವುದು ಲೇಖಕರ ತರ್ಕ ಅಷ್ಟೇ.ಇನ್ನು ಲೇಖಕರ ಕೈಯಲ್ಲಿ ಕಾಗೆಮರಿ ಕಪ್ಪು ಕೊರಮ ಆಗಿರುವುದರ ಹಿಂದಿರುವುದಂತೂ ಲೇಖಕರ ತಿರುಚಿದ ಲೋಕದೃಷ್ಟಿಯೇ.

Coronavirus and racism: colors don't matter | Voices of Youth
ಆರ್.ಕೆ.ಲಕ್ಷ್ಮಣ್ ಅಂಥವರು ‘ಕಾಗೆ ತನ್ನ ಇಷ್ಟದ ಪಕ್ಷಿ’ಎಂದಿರುವುದು ಲೇಖಕರ ಸಾಮಾನ್ಯ ಜ್ಞಾನಕ್ಕೆ ನಿಲುಕಿಲ್ಲ. ಕಾಗೆ ಮರಿಯ ಕಪ್ಪು ಕೂಡ ಚೆಂದ ಎಂದು ಹೇಳಿಸುವುದೂ ಲೇಖಕರಿಗೆ ಸಾಧ್ಯವಾಗಿಲ್ಲ.
ಇವರ ದೃಷ್ಟಿಯೆಲ್ಲ ಇವರು ಬದುಕುವ ಸುತ್ತಮುತ್ತಲಿನ ಜನರ ಜೀವನ ದೃಷ್ಟಿಯ ಜೊತೆಗೆ ಬೆರೆತುಹೋಗಿದೆ,ಅಷ್ಟೇ.

ಇದನ್ನೇ ನಾನು,ಅಪ್ರಜ್ಞಾಪೂರ್ವಕ ಅನಿಸಿದರೂ ಅರಿವಿದ್ದೋ ಇಲ್ಲದೆಯೋ ಲೇಖಕನೊಬ್ಬ ತೆಗೆದುಕೊಳ್ಳುವ ಪ್ರಜ್ಞಾಪೂರ್ವಕ ನಿಲುವು ಇದು ಎಂದು ಹೇಳಿದ್ದು. ತಮ್ಮ ಜಾತಿ,ವರ್ಗಗಳನ್ನು ಮೀರಿ ಯೋಚಿಸುವುದು ಕನ್ನಡ ಲೇಖಕರಿಗೆ ಏಕೆ ಸಾಧ್ಯವಾಗುತ್ತಿಲ್ಲ?

ಈ ಹಿನ್ನೆಲೆಯಲ್ಲಿಯೇ,ಎಚ್.ಎಸ್. ವೆಂಕಟೇಶಮೂರ್ತಿಯವರು ಉದಯವಾಣಿಯಲ್ಲಿ ವ್ಯಕ್ತಿ ಪರಿಚಯದ ಕಾಲಮ್ ಬರೆಯುತ್ತಿದ್ದಾಗ ‘ಏಕೆ ವೆಂಕಟೇಶಮೂರ್ತಿಯವರು ನೂರಕ್ಕೆ ತೊಂಬತ್ತು ಜನ ಬ್ರಾಹ್ಮಣ ಲೇಖಕರ ಬಗ್ಗೆ ಮಾತ್ರ ಬರೆಯುತ್ತಿದ್ದಾರೆ’ ಎಂದು ನಾನು ಪ್ರಶ್ನೆ ಮಾಡಿದ್ದೆ. ಆಗ ‘ಅವರು ದಿನನಿತ್ಯ ಬೆರೆಯುವ, ಹತ್ತಿರದಿಂದ ನೋಡಿದ ಲೇಖಕರ ಬಗ್ಗೆ ಮಾತ್ರ ಬರೆದಿದ್ದಾರೆ’ಎಂದು ಒಬ್ಬರು ವಾದಿಸಿದರು.ಹಾಗಿದ್ದರೆ ಅದು ಇನ್ನೂ ಕೆಟ್ಟದ್ದು.

ಈ ಹಾಡಿನ ಮಾಲಿಕೆಯಲ್ಲಿ ಮಾನಸಿ ಸುಧೀರ್ ಆಯ್ಕೆ ಮಾಡಿಕೊಂಡಿರುವ ಕವಿಗಳನ್ನು ನೋಡಿ. ಬಿ.ಆರ್ ಲಕ್ಷ್ಮಣರಾವ್ ,ಕೆ.ವಿ.ತಿರುಮಲೇಶ್, ದುಂಡಿರಾಜ್ ಮತ್ತು ಈಗ ಎಚ್. ಎಸ್ .ವೆಂಕಟೇಶಮೂರ್ತಿ.ಇಲ್ಲಿ ಹಾಡಲು ಅವರು ಆಯ್ಕೆ ಮಾಡಿಕೊಂಡಿರುವ ಎಲ್ಲಾ ಪದ್ಯಗಳೂ ತೀರಾ ಸಾಮಾನ್ಯ ಪದ್ಯಗಳು. ಅವರು ಹಾಡಿರುವ ಡುಂಡಿರಾಜರ ಪದ್ಯದಲ್ಲಂತೂ ‘ನಮ್ಮದು ಗಣರಾಜ್ಯ ,ಹೆಗ್ಗಣರಾಜ್ಯ’ವೆಂಬ ಅಭಿರುಚಿಹೀನ ಸಾಲುಗಳು ಇವೆ!

ಇದರ ಅರ್ಥ ಹಾಡುಗಾರರೆಲ್ಲ ನಾಳೆ ಬೆಳಿಗ್ಗೆ ‘ಅಬ್ರಾಹ್ಮಣ ಲೇಖಕ’ರ ಪದ್ಯಗಳನ್ನು ಆಯ್ದಕೊಳ್ಳಬೇಕೆಂದೇನೂ ನಾನು ಖಂಡಿತ ಸೂಚಿಸುತ್ತಿಲ್ಲ. ಮೊದಲ ನಾಲ್ಕು ‘ಮುಖ್ಯ ಲೇಖಕ’ರ ಬಳಿಕ ತಮ್ಮ ಅವಕಾಶಕ್ಕಾಗಿ ಅಂತಹ ‘ಅಬ್ರಾಹ್ಮಣ ಲೇಖಕ’ರು ಕಾದುಕುಳಿತುಕೊಂಡಿರುವ ಕರುಣಾಜನಕ ದೃಶ್ಯವನ್ನು ಈಗ ನಾವು ಎಲ್ಲೆಲ್ಲೂ ನೋಡಬಹುದು! ಅಂತಹ ಅನೇಕ ‘ಕಪ್ಪು ಕಾಗೆ ಮರಿ’ಗಳು ಈಗಾಗಲೇ ‘ಬಿಳಿ ಗುಬ್ಬಿ ಮರಿ’ ಗಳ ಜೋಡಿ ಆಡ್ತಾ ‘ಬಿಳಿ ಗುಬ್ಬಿಮರಿ’ಗಳೇ ಆಗಿಬಿಟ್ಟಿದ್ದಾರೆ!
ಚಂದ್ರಶೇಖರ ಕಂಬಾರ ಮತ್ತು ಸಿದ್ದಲಿಂಗಯ್ಯ ಅವರಿಗಿಂತ ಒಳ್ಳೆಯ ಉದಾಹರಣೆಗಳು ಬೇಕೇ?

ಸಾಹಿತ್ಯಕ ಮತ್ತು ಸಾಂಸ್ಕೃತಿಕ ರಾಜಕಾರಣ – ೩೫ಒಂದು ರೇಸಿಸ್ಟ್ ಹಾಡು -ಎಚ್ .ಎಸ್ .ವೆಂಕಟೇಶಮೂರ್ತಿ ಅವರ'ಗುಬ್ಬಿ ಮರಿಯ ಹೊಸ ತರ್ಕ'…

Posted by Vasantha Bannadi B on Thursday, June 18, 2020

– ವಸಂತ ಬನ್ನಾಡಿ

ರಂಗಕರ್ಮಿ, ಕುಂದಾಪುರ

ಅದೇ ಪೋಸ್ಟ್ ನಲ್ಲಿ ಪ್ರತಿಕ್ರಿಯಿಸಿರುವ ಹಿರಿಯ ಸಾಹಿತಿ ಮತ್ತು ಚಲನಚಿತ್ರ ನಿರ್ದೇಶಕ ಎನ್ ಎಸ್ ಶಂಕರ್ ಅವರು “ಕೊರಮ ಎಂಬುದೊಂದು ಜಾತಿ ಸಮುದಾಯ ಎಂಬ ಕಲ್ಪನೆಯೂ ಇವರಿಗಿಲ್ಲ. ಅದನ್ನು ಅವಹೇಳನವಾಚಕವಾಗಿ ಮಾತ್ರ ಬಳಸುವಾಗ ಒಂದು ಇಡೀ ಸಮುದಾಯವನ್ನು ಅವಮಾನಿಸುತ್ತಿದ್ದೇನೆಂಬ ಪರಿಜ್ಞಾನವೂ ಇದ್ದಂತಿಲ್ಲ” ಎಂದು ಹೇಳಿದ್ದಾರೆ. ಈಗ ಈ ಪದ್ಯ ತೀವ್ರ ವಾಗ್ವಾದಕ್ಕೆ ಗುರಿಯಾಗಿದೆ.


ಇದನ್ನೂ ಓದಿ: ಕಪ್ಪು ವರ್ಣೀಯನ ಹತ್ಯೆ; ಹಿಂಸಾಚಾರಕ್ಕೆ ತುತ್ತಾದ ಅಮೆರಿಕಾ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights