ಔರಂಗಾಬಾದ್ ರೈಲು ದುರಂತ : ಸಾವನ್ನಪ್ಪಿದವರ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ

ವಲಸೆ ಕಾರ್ಮಿಕರು ಊರಿಗೆ ಹೋಗುವ ಸಮಸ್ಯೆ ದೇಶಾದ್ಯಂತ ಇರುವ ಸಮಯದಲ್ಲಿ ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ಗೂಡ್ಸ್ ರೈಲು ಹಳಿ ಮೇಲೆ ಹರಿದು 16 ಮಂದಿ ವಲಸೆ ಕಾರ್ಮಿಕರು ಮೃತಪಟ್ಟು ಐವರು ಗಾಯಗೊಂಡಿರುವ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ. ಈ ದುರ್ಘಟನೆಯಲ್ಲಿ ಸಾವನ್ನಪ್ಪಿದ ಕುಟುಂಬಗಳಿಗೆ ಮಧ್ಯಪ್ರದೇಶ ಸರ್ಕಾರ 5 ಲಕ್ಷ ರೂ. ಪರಿಹಾರ ಧನ ಘೋಷಿಸಿದೆ.

ಲಾಕ್​ಡೌನ್​ನಿಂದ ಮಹಾರಾಷ್ಟ್ರದಲ್ಲಿ ಸಿಲುಕಿಕೊಂಡಿದ್ದ ಮಧ್ಯಪ್ರದೇಶದ ಕಾರ್ಮಿಕರು ರೈಲ್ವೆ ಹಳಿಯನ್ನು ಅನುಸರಿಸಿ ತಮ್ಮ ಊರಿಗೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದರು. ಈ ವೇಳೆ ಸುಸ್ತಾದ ಕಾರ್ಮಿಕರು ವಿಶ್ರಾಂತಿಗೆಂದು ನಿನ್ನೆ ರಾತ್ರಿ ಹಳಿಯ ಮೇಲೆ ಮಲಗಿದ್ದರು. ಇಂದು ಬೆಳಗ್ಗೆ ಜಾಲ್ನಾದಿಂದ ಔರಂಗಾಬಾದ್​ನತ್ತ ತೆರಳುತ್ತಿದ್ದ ಗೂಡ್ಸ್​ ರೈಲು ಹಳಿಯ ಮೇಲೆ ಮಲಗಿದ್ದ ಕಾರ್ಮಿಕರ ಮೇಲೆ ಹರಿದಿತ್ತು. ಈ ಘಟನೆಯಲ್ಲಿ 16 ಕಾರ್ಮಿಕರು ಸಾವನ್ನಪ್ಪಿದ್ದಾರೆ, ಐವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.ಸ್ಥಳೀಯ ಪೊಲೀಸರು ಮತ್ತು ರೈಲ್ವೆ ಪೊಲೀಸ್ ಪಡೆ ಸ್ಥಳಕ್ಕೆ ಧಾವಿಸಿದ್ದು ಪರಿಸ್ಥಿತಿ ಪರಾಮರ್ಶೆ ನಡೆಸುತ್ತಿದೆ. ಹೆಚ್ಚಿನ ಮಾಹಿತಿ ಸಿಗಬೇಕಿದೆ ಎಂದು ದಕ್ಷಿಣ ಮಧ್ಯ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ರೈಲ್ವೆ ಸಚಿವಾಲಯ, ಹಳಿ ಮೇಲೆ ಕಾರ್ಮಿಕರು ಮಲಗಿರುವುದನ್ನು ಕಂಡು ಗೂಡ್ಸ್ ರೈಲಿನ ಲೊಕೊ ಪೈಲಟ್ ರೈಲನ್ನು ನಿಲ್ಲಿಸಲು ಪ್ರಯತ್ನಿಸಿದರೂ ಸಾಧ್ಯವಾಗದೆ ಆಕಸ್ಮಿಕವಾಗಿ ರೈಲು ಕಾರ್ಮಿಕರ ದೇಹದ ಮೇಲೆ ಹರಿದುಹೋಯಿತು. ಈ ಬಗ್ಗೆ ತನಿಖೆಗೆ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದೆ.

ಈ ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ ಧನ ನೀಡುವುದಾಗಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್​ ಸಿಂಗ್ ಚೌಹಾಣ್ ಘೋಷಿಸಿದ್ದಾರೆ. ಈ ಘಟನೆಯ ಬಗ್ಗೆ ಸಂಪೂರ್ಣ ತನಿಖೆ ನಡೆಸಲು ರೈಲ್ವೆ ಇಲಾಖೆಗೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ. ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ರಾಹುಲ್ ಗಾಂಧಿ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights