ಕರ್ನಾಟಕದ ಮೂವರು ಸಚಿವರು ಕ್ವಾರಂಟೈನ್‌ನಲ್ಲಿ; ಉಳಿದವರು ಆತಂಕದಲ್ಲಿ

ಕನ್ನಡದ ಖಾಸಗೀ ಸುದ್ದಿವಾಹಿನಿಯೊಂದರ ಕ್ಯಾಮೆರಾಮೆನ್‌ಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಂಪುಟದ ಅನೇಕ  ಸಚಿವರಲ್ಲಿ ಆತಂಕ ಮೂಡಿಸಿದೆ.

ಕ್ಯಾಮೆರಾಮನ್‌ ಜೊತೆಗೆ ಒಡನಾಟ ಹೊಂದಿದ್ದ ಉಪ ಮುಖ್ಯಮಂತ್ರಿ ಡಾ. ಸಿ.ಎನ್‌.ಅಶ್ವತ್ಥನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ವೈದ್ಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್‌ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಕೊರೊನ್‌ ವೈರಸ್‌ ಟೆಸ್ಟ್‌ಗೆ ಒಳಗಾಗಿದ್ದರು. ನಾಲ್ವರಿಗೂ ಕೊರೊನಾ ಸೋಂಕು ಇಲ್ಲವೆಂದು ಟೆಸ್ಟ್‌‌ ವರದಿ ಬಂದಿದೆ.

ಆದರೆ, ಅಶ್ವತ್ಥನಾರಾಯಣ, ಬಸವರಾಜ ಬೊಮ್ಮಾಯಿ, ಸುಧಾಕರ್‌ ಅವರು ಸ್ವಯಂ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಕ್ವಾರಂಟೈನ್‌ಗೆ ಒಳಪಟ್ಟಿದ್ದು, ಮನೆಯಿಂದಲೇ ಕೆಲಸ ಮಾಡುತ್ತೇವೆ ಎಂದು ಅಶ್ವತ್ತ ನಾರಾಯಣ. ಸುಧಾಕರ್ ಮತ್ತು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಸಿಟಿ ರವಿ ಮತ್ತು ಸುರೇಶ್ ಕುಮಾರ್ ಅವರಿಗೂ ನೆಗೆಟಿವ್ ರಿಪೋರ್ಟ್‌ ಬಂದಿದ್ದು, ಅವರು ಕ್ವಾರಂಟೈನ್ ಗೆ ಒಳಗಾಗಿಲ್ಲ,ಈ ಬೆಳವಣಿಗೆ ಇತರೆ ಸಚಿವರು, ಅಧಿಕಾರಿಗಳ ವಲಯದಲ್ಲಿ ತಳಮಳಕ್ಕೆ ಕಾರಣವಾಗಿದೆ.

ಇದಕ್ಕೂ ಮುನ್ನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಕನ್ನಡ ಚಾನೆಲ್‌ ಕ್ಯಾಮೆರಾಮನ್‌ಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಆತನ ಸಂಪರ್ಕದಲ್ಲಿದ್ದ ಸಿಎಂ, ಡಿಸಿಎಂ ಹಾಗೂ ಸಚಿವರನ್ನು ಏಕೆ ಕ್ವಾರಂಟೈನ್‌ ಮಾಡಿಲ್ಲ ಎಂದು ಗಂಭೀರ ಪ್ರಶ್ನೆ ಎತ್ತಿದ್ದರು.  ಕ್ಯಾಮೆರಾಮನ್‌ ಏಪ್ರಿಲ್ 23ರಂದು ತಪಾಸಣೆಗೆ ಒಳಗಾಗಿದ್ದು, ಸೋಂಕು ದೃಢಪಟ್ಟಿದೆ.

ಅವರು ಸಿಎಂ, ಡಿಸಿಎಂ ಸೇರಿದಂತೆ ಹಲವರ ಮಾತುಗಳನ್ನು ಸಮೀಪದಿಂದ  ಚಿತ್ರೀಕರಿಸಿದ್ದಾರೆ. ಹೀಗಾಗಿ, ಕೊರೊನಾ ಸೋಂಕು ನಿರ್ವಹಣೆಯ ಶಿಷ್ಟಾಚಾರದಂತೆ ಇವರಿಗೆಲ್ಲಾ ಕ್ವಾರಂಟೈನ್‌ ಏಕಿಲ್ಲ ಎಂದು ಪ್ರಶ್ನಿಸಿ ಡಿಕೆಶಿ ಟ್ವೀಟ್‌ ಮಾಡಿದ್ದರು. ಕೊರೋನಾ ಸೋಂಕಿಗೆ ಒಳಗಾಗಿದ್ದ ಕ್ಯಾಮರಾಮನ್ ಸಿಎಂ ಕಚೇರಿಗೂ ಹೋಗಿದ್ದ ಆದರೆ ಸಿಎಂ ಭೇಟಿಯಾಗಿರಲಿಲ್ಲ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights