ಪಂಚರಾಜ್ಯ ಚುನಾವಣೆ: BJPಯ ಹುಮ್ಮಸ್ಸು ಕುಗ್ಗಿಸಲಿವೆ 04 ರಾಜ್ಯಗಳು!

2021ರ ಆರಂಭದಲ್ಲಿ ಪಂಚರಾಜ್ಯ (5 ರಾಜ್ಯಗಳಲ್ಲಿ) ಚುನಾವಣೆ ಏಕಕಾಲದಲ್ಲಿಯೇ ನಡೆಯಲಿದೆ. ಈ ಚುನಾವಣೆಗಳು ಬಿಜೆಪಿ ಬಹಳ ಕಠಿಣ ಚುನಾವಣೆಗಳಾಗಿ ಎದುರಾಗಿವೆ. 2019ರ ಲೋಕಸಭಾ ಚುನಾವಣೆಯ ಭರ್ಜರಿ ಗೆಲುವನ್ನು ಹೊರತು ಪಡೆಸಿದರೆ, 2018ರಿಂದ ಈಚೆಗೆ ನಡೆದ 12 ಪ್ರಮುಖ ರಾಜ್ಯಗಳ ಸ್ಥಳೀಯ ಮತ್ತು ರಾಜ್ಯ ಚುನಾವಣೆಗಳಲ್ಲಿ 11 ರಲ್ಲಿ ಬಿಜೆಪಿ ಮುಖಭಂಗ ಅನುಭವಿಸಿದೆ. ಅದು ಬಿಹಾರದಲ್ಲಿ ಮಾತ್ರ ತಕ್ಕಮಟ್ಟಿಗಿನ ಗೆಲುವು ಸಾಧಿಸಿದೆ. 2021ರಲ್ಲಿಯೂ ಬಿಜೆಪಿ ಅಂತಹ ಅಪಮಾನವನ್ನು ಅನುಭವಿಸಲಿದೆ ಎಂದು ರಾಜಕೀಯ ತಜ್ಞರು ಹೇಳಿದ್ದಾರೆ.

ಈ ವರ್ಷದ ಅತ್ಯಂತ ದೊಡ್ಡ ಚುನಾವಣಾ ಯುದ್ದವು ಪಶ್ಚಿಮ ಬಂಗಾಳದಲ್ಲಿ ನಡೆಯಲಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಬಂಗಾಳದಲ್ಲಿ ನಿರೀಕ್ಷೆಯಂತೆ ಗೆದ್ದ ಬಿಜೆಪಿ, ಹೆಚ್ಚಿನ ಭರವಸೆಗಳನ್ನು ಬೆಳೆಸಿಕೊಂಡಿದೆ. ಆದರೂ, ಅದು ರಾಜ್ಯ ಚುನಾವಣೆಯಲ್ಲಿ ಸೋಲುಣ್ಣಲಿದೆ. ತಮಿಳುನಾಡು ಮತ್ತು ಪುದುಚೇರಿಯಲ್ಲಿ ತನ್ನ ಸ್ಥಳೀಯ ಮಿತ್ರ ಎಐಎಡಿಎಂಕೆ ಜೊತೆ ಸೇರಿ ಚುನಾವಣೆ ಎದುರಿಸಲಿದೆ. ಇದು ಬಿಜೆಪಿಗಷ್ಟೇ ಅಲ್ಲದೆ, ಎಐಎಡಿಎಂಕೆಗೂ ಸೋಲನ್ನು ತಂದೊಡ್ಡಲಿದೆ. ಕೇರಳದಲ್ಲಿಯೂ ಇದು ನಿಶ್ಚಯವಾಗಿದೆ. ಆದರೆ, ಅಸ್ಸಾಂನಲ್ಲಿ ಮಾತ್ರ ಬಿಜೆಪಿಗೆ ಉತ್ತಮವಾದ ವಾತಾವರಣವಿದೆ ಎಂದು ರಾಜಕೀಯ ತಜ್ಞರು, ಚುನಾವಣಾ ಸಮೀಕ್ಷೆಗಳು ಹೇಳುತ್ತಿವೆ.

2018ರಿಂದ ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಪ್ರಾಬಲ್ಯ ಕುಗ್ಗುತ್ತಿದೆ. ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ಚುನಾವಣೆಯ ನಂತರ ಸರ್ಕಾರಗಳನ್ನು ಉರುಳಿಸಿ, ಅಧಿಕಾರ ಗೆದ್ದುಕೊಂಡಿದೆ. ಇದು ಉಪಚುನಾವಣೆಗಳಲ್ಲಿ ವ್ಯತಿರಿಕ್ತ ಪರಿಣಾಮವನ್ನು ಬೀರಿದೆ. ಆದರೆ, ಈ ಅಲ್ಪಾವಧಿಯ ಲಾಭವು 2021ರ ಚುನಾವಣೆಗಳ ಸೋಲಿನಿಂದ ಮತ್ತಷ್ಟು ಕುಗ್ಗಲಿದೆ. ಅಸ್ಸಾಂನಲ್ಲಿ ಮಾತ್ರ ತನ್ನ ವರ್ಚಸ್ಸನ್ನು ಬಿಜೆಪಿ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: ಮಿತ್ರ ಪಕ್ಷಕ್ಕೇ ಆಪರೇಷನ್ ಮಾಡಿದ ಬಿಜೆಪಿ: JDU ಪಕ್ಷದ 06 ಶಾಸಕರು BJPಗೆ ಸೇರ್ಪಡೆ!

ದಶಕಗಳಿಂದ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸೈಡ್‌ಲೈನ್‌ ಆಟಗಾರನಂತಿದೆ. 2016ರ ರಾಜ್ಯ ಚುನಾವಣೆಯಲ್ಲಿ ಅದು 17% ಮತಗಳನ್ನು ಮತ್ತು ಎರಡು ಸ್ಥಾನಗಳನ್ನು ಗೆದ್ದುಕೊಂಡಿತು. ಇದು 2019ರ ಲೋಕಸಭಾ ಚುನಾವಣೆಯಲ್ಲಿ ಅದ್ಭುತ ಪ್ರಗತಿಯನ್ನು ಸಾಧಿಸಿದ್ದು, 40.7% ಮತಗಳನ್ನು ಮತ್ತು 18 ಸ್ಥಾನಗಳನ್ನು ಗೆದ್ದಿದೆ, ತೃಣಮೂಲ ಕಾಂಗ್ರೆಸ್‌ 43.3% ಮತ ಪಾಲು ಮತ್ತು 22 ಸ್ಥಾನಗಳನ್ನಷ್ಟೇ ಗೆಲ್ಲಲು ಸಾಧ್ಯವಾಗಿದೆ.

ಇದು ಮುಂಬರುವ ರಾಜ್ಯ ಚುನಾವಣೆಗೆ ಪಕ್ಷದ ಸಂಘಟನೆ ಕಟ್ಟಲು ಭಾರಿ ಉತ್ಸಾಹದಿಂದ ಮುಂದಾಗಿದೆ. ಆದರೆ, ಎಡಪಂಥೀಯ ಮತ್ತು ಕಾಂಗ್ರೆಸ್ ಚುನಾವಣಾ ಒಪ್ಪಂದ ಮಾಡಿಕೊಳ್ಳಲು ನಿರ್ಧರಿಸಿದ್ದು, ಬಿಜೆಪಿ ವಿರೋಧಿ ಮತಗಳನ್ನು ಒಗ್ಗೂಡಿಸಲು ಇದು ನೆರವಾಗುತ್ತದೆ.

ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷಕ್ಕಿಂತ ಹೆಚ್ಚು ಜನಪ್ರಿಯರಾಗಿದ್ದಾರೆ. ಆದ್ದರಿಂದ, ಸ್ಥಳೀಯ ಬಿಜೆಪಿಗೆ ಜನಪ್ರಿಯತೆಯ ಕೊರತೆಯಿದೆ. ಇದು ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಹಿನ್ನಡೆಯನ್ನುಂಟು ಮಾಡುತ್ತದೆ.

ಈ ಕಾರಣದಿಂದಾಗಿ, ಬಿಜೆಪಿಯ ಮತಪಾಲು 2019ರ ಲೋಕಸಭಾ ಚುನಾವಣೆಯ  ಮಟ್ಟಕ್ಕಿಂತಲೂ ಕಡಿಮೆಯಾಗುವ ಸಾಧ್ಯತೆಯಿದೆ. ಆದರೆ, ಬಿಹಾರ ಚುನಾವಣೆಯಲ್ಲಿ 05 ಸ್ಥಾನಗಳನ್ನು ಗೆದ್ದಿರುವ ಒವೈಸಿ ಅವರ ಪಕ್ಷ ಏಕಾಂಗಿಯಾಗಿ ಸ್ಪರ್ಧೆ ಮಾಡಿದರೆ, ಅವರು ಮುಸ್ಲಿಂ ಮತವನ್ನು ಗಂಭೀರವಾಗಿ ವಿಭಜಿಸುತ್ತಾರೆ. ಹಾಗಾಗಿ, ಅವರರೊಂದಿಗೆ ಕೆಲವು ಸ್ಥಾನಗಳಲ್ಲಿ ಎಡಪಂಥೀಯ-ಕಾಂಗ್ರೆಸ್ ಅಥವಾ ಟಿಎಂಸಿ ಪಕ್ಷಗಳು ಔಪಚಾರಿಕ ಅಥವಾ ಅನೌಪಚಾರಿಕ ಒಪ್ಪಂದ ಸಾಧ್ಯವಾದರೆ – ಬಿಜೆಪಿಯ ಭವಿಷ್ಯವು ಭೀಕರವಾಗಿ ಕುಸಿಯುತ್ತದೆ.

ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ 154-162 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ. ಬಿಜೆಪಿ 98-106 ಕ್ಷೇತ್ರಗಳಲ್ಲಿ ಗೆಲ್ಲಬಹುದು. ಅಲ್ಲದೆ, ಕಾಂಗ್ರೆಸ್ ಮತ್ತು ಎಡಪಕ್ಷಗಳ ಮೈತ್ರಿ 26-34 ಸ್ಥಾನ ಗೆಲ್ಲುವ ಸಾಧ್ಯತೆ ಇದೆ ಎಂದು ಸಮೀಕ್ಷೆಗಳು ಹೇಳಿವೆ.

ಇದನ್ನೂ ಓದಿ: BJP ಆಡಳಿತದಲ್ಲಿ ಇದೂವರೆಗೂ 154 ಪತ್ರಕರ್ತರ ಬಂಧನ; 3 ಹತ್ಯೆ

ತಮಿಳುನಾಡಿನಲ್ಲಿ, ಹತ್ತು ವರ್ಷಗಳ ಆಡಳಿತ ನೀಡಿರುವ ಎಐಎಡಿಎಂಕೆ – ಮುಖ್ಯವಾಗಿ ಜಯಲಲಿತಾ ಇಲ್ಲದೆ ಚುನಾವಣೆಯನ್ನು ಎದುರಿಸಲಿದೆ. ಅಲ್ಲದೆ, ಅದು  ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಈಗಾಗಲೇ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿರುವ ಎಐಎಡಿಎಂಕೆಗೆ ಇದು ಮತ್ತಷ್ಟು ಸಂದಿಗ್ಧತೆಯನ್ನು ಉಂಟುಮಾಡಿದೆ. ಕಳೆದ ವರ್ಷದ ಲೋಕಸಭಾ ಚುನಾವಣೆಯಲ್ಲಿ, ಡಿಎಂಕೆ ನೇತೃತ್ವದ ಒಕ್ಕೂಟವು 39 ಸ್ಥಾನಗಳಲ್ಲಿ 38 ಸ್ಥಾನಗಳನ್ನು ಗಳಿಸಿತು. ಪುದುಚೇರಿಯಲ್ಲಿ ಕಾಂಗ್ರೆಸ್ ಗೆದ್ದಿತು. ರಾಜ್ಯ ಚುನಾವಣೆಗಳಲ್ಲಿ ಬಿಜೆಪಿ ವರ್ಚಸ್ಸು ಕಟ್ಟಪರಿಸ್ಥಿಯಲ್ಲಿರುವುದರಿಂದ 2021ರಲ್ಲಿ ಇದು ಭಾರೀ ಹೊಡೆತವನ್ನು ಅನುಭವಿಸಲಿದೆ.

ತಮಿಳುನಾಡಿನಲ್ಲಿ ಆಡಳಿತ ವಿರೋಧ ಅಲೆ ಭಾರೀ ಪ್ರಮಾಣದಲ್ಲಿದ್ದು, ಎಐಡಿಎಂಕೆ-ಬಿಜೆಪಿ ಮೈತ್ರಿ ಸೋಲನ್ನು ಅನುಭವಿಸಲಿದೆ. ದ್ರಾವಿಡ ನಾಡಿನ 234 ಕ್ಷೇತ್ರಗಳ ಪೈಕಿ 158-166 ಕ್ಷೇತ್ರಗಳನ್ನು ಡಿಎಂಕೆ ಪಡೆದುಕೊಳ್ಳಲಿದೆ. ಆಡಳಿತಾರೂಢ ಅಣ್ಣಾಡಿಎಂಕೆ ಪಕ್ಷವು 60-68 ಸ್ಥಾನಕ್ಕೆ ಕುಸಿಯಲಿದೆ. ಉಳಿದ ಪಕ್ಷಗಳು 06-10 ಸ್ಥಾನಗಳನ್ನು ಪಡೆದುಕೊಳ್ಳಬಹುದು ಎಂದು ಹೇಳಿದೆ.

ಕೇರಳದಲ್ಲಿ ಸಿಪಿಐ (ಎಂ) ನೇತೃತ್ವದ ಸರ್ಕಾರವು ಮತ್ತೆ ಅಧಿಕಾರಕ್ಕೆ ಬರಲಿದೆ. 140 ಸದಸ್ಯರ ವಿಧಾನಸಭೆಯಲ್ಲಿ ಎಲ್‌ಡಿಎಫ್ 80-89 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದ್ದರೆ, ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ 49-57 ಸ್ಥಾನಗಳಿಗೆ ಸೀಮಿತವಾಗಲಿದೆ.

ಪುದುಚೇರಿಯಲ್ಲಿ ಈ ಬಾರಿ ಭಾರೀ ಪೈಪೋಟಿ ನಡೆಯಲಿದ್ದು,30 ಸದಸ್ಯರ ಪೈಕಿ ಕಾಂಗ್ರೆಸ್‌ ಒಕ್ಕೂಟವು 14-18ಕ್ಕೆ ಕುಸಿಯಲಿದ್ದು, ಬಿಜೆಪಿ 14-18 ಸ್ಥಾನ ಗೆಲ್ಲುವ ಸಾಧ್ಯತೆ ಇದೆ ಇದೆ ಎಂದು ಹೇಳಲಾಗಿದೆ.

ಅಸ್ಸಾಂ ಕತೆ ಏನು?

ದಶಕಗಳ ಕಾಂಗ್ರೆಸ್ ಆಡಳಿತದ ನಂತರ, ಬಿಜೆಪಿ ನೇತೃತ್ವದ ಎನ್‌ಡಿಎ 2016 ರಲ್ಲಿ ಅಧಿಕಾರಕ್ಕೆ ಬಂದಿದೆ. 126 ಸ್ಥಾನಗಳಲ್ಲಿ 86 ಸ್ಥಾನಗಳನ್ನು ಗೆದ್ದಿದೆ. ಈಗಲೂ ಬಿಜೆಪಿಯ ಪ್ರಭಾವ ಅಲ್ಲಿ ಕಡಿಮೆಯಾಗಿಲ್ಲ. ಹಾಗಾಗಿ ಅಸ್ಸಾಂನಲ್ಲಿ ಕಾಂಗ್ರೆಸ್ ಮತ್ತು ಎಐಯುಡಿಎಫ್ ಅನೌಪಚಾರಿಕ ಮೈತ್ರಿಗೆ ಬರಲು ಸಾಧ್ಯವಾದರೆ ಮಾತ್ರ ಅವರಿಗೆ ಅವಕಾಶವಿದೆ. ಇಲ್ಲವಾದಲ್ಲಿ ಬಿಜೆಪಿ ಮತ್ತೊಮ್ಮೆ ಅಸ್ಸಾಂನಲ್ಲಿ ಅಧಿಕಾರಕ್ಕೇರುವ ಸಾಧ್ಯತೆಗಳು ದಟ್ಟವಾಗಿವೆ.

ಅಸ್ಸಾಂನ 126 ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 73-81 ಸ್ಥಾನಗಳನ್ನು ಆಯಾಸ ರಹಿತವಾಗಿ ಗೆಲ್ಲಲಿದೆ. ಯುಪಿಎ 36 ರಿಂದ 44 ಸ್ಥಾನಗಳು ದೊರೆಯಲಿವೆ ಎಂದು ಸಮೀಕ್ಷೆಗಳು ಹೇಳಿವೆ.

ಇದನ್ನೂ ಓದಿ: ಬಂಗಾಳ ಚುನಾವಣೆ: ನಂದಿಗ್ರಾಮದಲ್ಲಿ ಮಮತಾ – ಸುವೆಂದು ಅಧಿಕಾರಿ ಫೈಟ್‌; ಗೆಲ್ಲದಿದ್ದರೆ ರಾಜಕೀಯ ನಿವೃತ್ತಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights