ಕೊರೊನಾ ಅಟ್ಟಹಾಸ : ದೆಹಲಿಯಲ್ಲಿ ಓರ್ವ ವೃದ್ಧೆ, ಇಟಲಿಯಲ್ಲಿ ಒಂದೇ ದಿನ 250 ಮಂದಿ ಸಾವು…!

ಭಾರತದಲ್ಲಿ ಮೊದಲು ಕರ್ನಾಟಕದ ಕಲಬುರ್ಗಿಯಲ್ಲಿ ಕೊರೋನಾ ಬಲಿ ದಾಖಲಾಗಿದೆ. ಮಾತ್ರವಲ್ಲದೇ ದೆಹಲಿಯಲ್ಲೂ ಕೊರೋನಾಗೆ ವೃದ್ಧೆ ಬಲಿಯಾಗಿದ್ದಾಳೆ. ಇನ್ನೂ ಮಾರಣಾಂತಿಕ ಕೊರೊನಾ ವೈರಸ್ ನಿಂದಾಗಿ ಇಟಲಿಯಲ್ಲಿ ನಿನ್ನೆ ಒಂದೇ ದಿನ 250 ಮಂದಿ ಸಾವನ್ನಪ್ಪಿದ್ದಾರೆ. ನಿನ್ನೆ (ಶುಕ್ರವಾರ) ಒಂದೇ ದಿನ ಇಟಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 17% ರಷ್ಟು ಏರಿಕೆಯಾಗಿದ್ದು, 15,113 ಕ್ಕೆ ಇದ್ದ ಕೊರೊನಾ ಪೀಡಿತರ ಸಂಖ್ಯೆ ಇಂದು ಏಕ್ದಂ 17,660ಕ್ಕೆ ತಲುಪಿದೆ.

ಚೀನಾ ಬಿಟ್ಟರೆ ಕೊರೊನಾ ವೈರಸ್ ನಿಂದ ಹೆಚ್ಚು ತತ್ತರಿಸಿರುವ ದೇಶ ಇಟಲಿ. ಇಲ್ಲಿಯವರೆಗೆ ಇಟಲಿಯಲ್ಲಿ 1266 ಮಂದಿ ಮೃತಪಟ್ಟಿದ್ದಾರೆ. ಅದರಲ್ಲಿ 250 ಮಂದಿಯನ್ನು ನಿನ್ನೆ ಡೆಡ್ಲಿ ಕೊರೊನಾ ಬಲಿ ಪಡೆದಿದೆ. ಕೊರೊನಾ ಸೋಂಕಿನಿಂದಾಗಿ ಇನ್ನೂ 1328 ಮಂದಿ ಇಟಲಿಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ.

ವಿಶ್ವದ ಸಾಂಕ್ರಾಮಿಕ ಪಿಡುಗು ಕೊರೊನಾ ವೈರಸ್ ನ ಕೇಂದ್ರ ಸ್ಥಾನ ಇದೀಗ ಯೂರೋಪ್ ಎಂದು ಶುಕ್ರವಾರ ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿದೆ. ಕೊರೊನಾ ವೈರಸ್ ಮೊದಲು ಕಾಣಿಸಿಕೊಂಡಿದ್ದ ಚೀನಾ ದೇಶಕ್ಕೆ ಹೋಲಿಸಿದರೆ, ಪ್ರತಿ ದಿನ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚು ದಾಖಲಾಗುತ್ತಿರುವುದು ಯೂರೋಪ್ ನಲ್ಲಿ. ಕೊರೊನಾ ಸೋಂಕಿನಿಂದ ಬೆದರಿರುವ ಇಟಲಿ ಸಂಪೂರ್ಣ ಸ್ತಬ್ಧವಾಗಿದ್ದು, ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ಅಂಗಡಿಗಳು ಮತ್ತು ಫಾರ್ಮಸಿಗಳನ್ನು ಮಾತ್ರ ತೆರೆಯುವಂತೆ ಸರ್ಕಾರ ಆದೇಶಿಸಿದೆ.

ಇನ್ನೂ ಕರ್ನಾಟಕದಲ್ಲಿ ಕೊರೋನಾ ವೈರಸ್​ನ 5 ಪ್ರಕರಣಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೊರೋನಾ ಭೀತಿ ಹೆಚ್ಚಾಗಿರುವುದರಿಂದ ಇಂದಿನಿಂದ ಕರ್ನಾಟಕದಲ್ಲಿ ಮಾಲ್, ಸಿನಿಮಾ ಟಾಕೀಸ್, ಪಬ್, ನೈಟ್​ ಕ್ಲಬ್ ಬಂದ್ ಆಗಲಿದೆ. 1 ವಾರಗಳ ಕಾಲ ರಾಜ್ಯದಲ್ಲಿ ಮದುವೆ, ಸಾರ್ವಜನಿಕ ಸಮಾರಂಭ, ಜಾತ್ರೆಗಳನ್ನು ನಡೆಸುವಂತಿಲ್ಲ. ಎಸಿ ರೂಮಿನಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸಿಎಂ ಬಿ.ಎಸ್. ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

ಹನಿಮೂನ್‍ಗೆ ಗ್ರೀಸ್ ದೇಶಕ್ಕೆ ತೆರಳಿದ್ದ ಬೆಂಗಳೂರಿನ ದಂಪತಿ ಪೈಕಿ ಪತಿಗೆ ಕೊರೊನಾ ವೈರಸ್ ಸೋಂಕು ಇರುವ ಬಗ್ಗೆ ದೃಢಪಟ್ಟಿತ್ತು. ಇದೀಗ ಗೂಗಲ್ ಉದ್ಯೋಗಿಯ ಪತ್ನಿಗೂ ಕೊರೊನಾ ಬಂದಿದೆ.

ಪತ್ನಿಗೆ ಕೊರೊನಾ ವೈರಸ್ ಬಂದಿರುವ ಬಗ್ಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ವರದಿಯಲ್ಲಿ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ. ಗೂಗಲ್ ಟೆಕ್ಕಿಯ ಪತ್ನಿ ಕೆಲವು ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದಳು. ದಂಪತಿ ಹನಿಮೂನ್‍ಗಾಗಿ ಗ್ರೀಸ್ ದೇಶಕ್ಕೆ ಭೇಟಿ ನೀಡಿ ಮಾರ್ಚ್ ಮೊದಲ ವಾರದಲ್ಲಿ ಅಲ್ಲಿಂದ ವಾಪಸ್ ಬಂದಿದ್ದರು.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights