ಕೊರೊನಾ ನಡುವೆಯೂ ಅಮೆರಿಕಾ ಅಧ್ಯಕ್ಷೀಯ ಚುನಾವಣೆ; ಜೋ ಬೆಂಬಲಕ್ಕೆ ಒಬಾಮ

ಕೊರೊನಾ ವೈರಸ್‌ನ ನಿಯಂತ್ರಣಕ್ಕಾಗಿ ಜಗತ್ತಿನ ಹಲವಾರು ದೇಶಗಳು ಲಾಕ್‌ಡೌನ್ ಘೋಷಿಸಿವೆ. ಅಮೆರಿಕಾದಲ್ಲಿ ಅತೀ ಹೆಚ್ಚು ಸಾವುಗಳು ಕೊರೊನಾ ವೈರಸ್‌ನಿಂದ ಸಂಭವಿಸುತ್ತಿದ್ದರೂ, ಅಮೆರಿಕಾ ಲಾಕ್‌ಡೌನ್‌ ಮಾಡಿಲ್ಲ. ಅಲ್ಲದೆ, ಕೊರೊನಾ ಆಕ್ರಮಣದ  ನಡುವೆಯೂ ಇದೇ ನವೆಂಬರ್‌ನಲ್ಲಿ ಅಮೆರಿಕದ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಇಂತಹ ಸಂದಿಗ್ಧ ಸಂದರ್ಭದಲ್ಲಿಯೂ ಚುನಾವಣೆ ನಡೆಯುತ್ತಿರುವುದು ಇಡೀ ವಿಶ್ವದ ಗಮನ ಸೆಳೆದಿದೆ.

ಎರಡನೇ ಬಾರಿ ಆಯ್ಕೆ ಬಯಸಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ರಿಪಬ್ಲಿಕನ್ ಪಕ್ಷದಿಂದ ಟ್ರಂಪ್ ಅವರೇ ಮತ್ತೆ ಅಭ್ಯರ್ಥಿಯಾಗುವುದು ಖಚಿತವಾಗಿದೆ.

ಆದರೆ ಪ್ರತಿಸ್ಪರ್ಧಿ ಡೆಮಾಕ್ರೆಟಿಕ್‌ನಲ್ಲಿ ಅಭ್ಯರ್ಥಿ ಆಯ್ಕೆಗೆ ಕಸರತ್ತು ಮುಂದುವರೆದಿದ್ದು, ಹಲವು ಅಧ್ಯಕ್ಷೀಯ ಉಮೇದುವಾರರು ಕಣದಿಂದ ಹಿಂದೆ ಸರಿದ ಬಳಿಕ ಜೋ ಬಿಡೆನ್ ಅಂತಿಮವಾಗಿ ಕಣದಲ್ಲಿ ಉಳಿದಿದ್ದಾರೆ.

ಈ ಹಿನ್ನೆಲೆಯಲ್ಲಿ ಡೆಮಾಕ್ರೆಟಿಕ್ ಪಕ್ಷದಿಂದ ಜೋ ಬಿಡೆನ್ ಅವರೇ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಅಮೆರಿಕದ ಮಾಜಿ ಉಪಾಧ್ಯಕ್ಷರೂ ಆಗಿರುವ 77 ವರ್ಷದ ಜೋ ಬಿಡೆನ್ ಪ್ರಸಕ್ತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಎದುರಿಸಲಿದ್ದಾರೆ.

ಇನ್ನು ಜೋ ಬಿಡೆನ್ ಅವರ ಅಧ್ಯಕ್ಷೀಯ ಉಮೇದುವಾರಿಕೆಯನ್ನು ಸಮರ್ಥಿಸಿಕೊಂಡಿರುವ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ, ಬಿಡೆನ್ ಅಮೆರಿಕದ ಅಧ್ಯಕ್ಷರಾಗಲು ಸಮರ್ಥ ವ್ಯಕ್ತಿ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸದ್ಯಕ್ಕೆ ಅಮೆರಿಕಕ್ಕೆ ಕತ್ತಲು ಆವರಿಸಿದ್ದು ಈ ಕತ್ತಲನ್ನು ಹೋಗಲಾಡಿಸಿ ಬೆಳಕು ತರಲು ಜೋ ಬಿಡೆನ್ ಸಮರ್ಥ ವ್ಯಕ್ತಿ ಎಂದು ಒಬಾಮಾ ಹೇಳಿದ್ದಾರೆ. ದೇಶಕ್ಕೆ ಕತ್ತಲು ಆವರಿಸಿದೆ ಎನ್ನುವ ಮೂಲಕ ಟ್ರಂಪ್ ಆಡಳಿತವನ್ನು ಒಬಾಮಾ ಟೀಕಿಸಿದ್ದಾರೆ.

ಬರಾಕ್ ಒಬಾಮಾ ಅಮೆರಿಕದ ಅಧ್ಯಕ್ಷರಾಗಿದ್ದಾಗ ಜೋ ಬಿಡೆನ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಒಟ್ಟಿನಲ್ಲಿ ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಕಾವು ಈಗಿನಿಂದಲೇ ಏರುತ್ತಿರುವುದು ಕುತೂಹಲ ಮೂಡಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights