FACT CHECK | ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿಯ ಆಸ್ತಿ ಪಾಕಿಸ್ತಾನ ವಿಸ್ತಿರ್ಣಕ್ಕಿಂತ ಹೆಚ್ಚಿದೆ ಎಂಬುದು ನಿಜವೇ?

ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿಯ ಆಸ್ತಿ ವಿಷಯದಲ್ಲಿ ರೈತರಿಗೆ ನೋಟಿಸ್‌ ನೀಡಿರುವುದು ಹಾಗೂ ಕೆಲವು ಮಠ–ಮಂದಿರಗಳ ಸ್ವಾಧೀನದಲ್ಲಿರುವ ಆಸ್ತಿಗಳ ಪಹಣಿಯಲ್ಲಿ ಮಂಡಳಿಯ ಹೆಸರು ಉಲ್ಲೇಖ ವಾಗಿರುವುದು ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದೆ. ಮತ್ತೊಂದು ಕಡೆ ಸಾಮಾಜಿಕ ಮಾಧ್ಯಮಗಳಲ್ಲಿ ವಕ್ಫ್‌ ಮಂಡಳಿಯ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸಮಾಜಿಕ ಮಾಧ್ಯಮಗಳಲ್ಲಿ ಭಾರತದ ವಕ್ಪ್‌  ಬೋರ್ಡ್ ಆಸ್ತಿ ಪಾಕಿಸ್ತಾನಕ್ಕಿಂತ ಹೆಚ್ಚಿಗೆ ಇದೆ ಎಂದು ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

Image

ವಕ್ಫ್ ಮಂಡಳಿಯ ಆಸ್ತಿಯು  ಪಾಕಿಸ್ತಾನದ ಪ್ರದೇಶಕ್ಕಿಂತ ಗಮನಾರ್ಹವಾಗಿ ದೊಡ್ಡದಾಗಿದೆ. ಮುಂಬರುವ ದಿನಗಳಲ್ಲಿ ಇಡೀ ದೇಶದ ಆಸ್ತಿಯನ್ನು ತನ್ನದಾಗಿಸುವ ನಿಟ್ಟಿನಲ್ಲಿ ವಕ್ಫ್‌ ಹೊಂಚು ಹಾಕಿದೆ ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಇನ್ನೂ ಮುಂದುವರೆದು ,“ ಇದು ಕಾಂಗ್ರೆಸ್‌ನ ಅದ್ಭುತವಾದ ಕೆಲಸ. ಪಾಕಿಸ್ತಾನದ ವಿಸ್ತೀರ್ಣ 8.81 ಲಕ್ಷ ಚದರ ಕಿಲೋಮೀಟರ್. ವಕ್ಫ್ ಮಂಡಳಿಯ ವಿಸ್ತೀರ್ಣ 9.40 ಲಕ್ಷ ಚದರ ಕಿ.ಮೀ. ಒಂದು ಪಾಕಿಸ್ತಾನವನ್ನು ಹೊರಗೆ ರಚಿಸಲಾಗಿದೆ, ಮತ್ತು ಇನ್ನೊಂದನ್ನು ಒಳಗೆ ರಚಿಸಲಾಗಿದೆ. ಹಿಂದೂಗಳೆ ನಿದ್ದೆ ಮಾಡುತ್ತಿರಿ” ಎಂದು ಕೂಡ ಪೋಸ್ಟ್‌ನಲ್ಲಿ ಬರೆದುಕೊಳ್ಳಲಾಗಿದೆ. ಈ ವೈರಲ್‌ ಪೋಸ್ಟ್‌ನಲ್ಲಿನ ಅಂಕಿ ಅಂಶಗಳನ್ನು ಗಮನಿಸಿದ ಹಲವು ಮಂದಿ ಈ ಫೋಸ್ಟ್‌ ಅನ್ನು ನಿಜವೆಂದು ಭಾವಿಸಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದೆ.

ಇದೇ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್‌  :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ಕೀ ವರ್ಡ್‌ಗಳನ್ನು ಬಳಸಿ ಗೂಗಲ್ ಸರ್ಚ್ ಮಾಡಿದಾಗ, ಪೋಸ್ಟ್‌ ಕಾರ್ಡ್‌ನ ಸುಳ್ಳು ಪೋಸ್ಟ್‌ವೊಂದು ಲಭ್ಯವಾಗಿದೆ. ಇದರ ಕಮೆಂಟ್‌ ವಿಭಾಗದಲ್ಲಿ ವೈರಲ್‌ ಪೋಸ್ಟ್‌ಗೆ ಪ್ರತಿಕ್ರಿಯ ನೀಡಿದ್ದ ವ್ಯಕ್ತಿಯೊಬ್ಬ  “ಪಾಕಿಸ್ತಾನದ ಗಾತ್ರ 8.8 ಲಕ್ಷ ಚದರ ಕಿ.ಮೀ. ವಕ್ಫ್ ಮಂಡಳಿಯ ಗಾತ್ರ 8.8 ಲಕ್ಷ ಎಕರೆ (ಕಿಮೀ ಅಲ್ಲ).” ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ.

ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಮತ್ತಷ್ಟು ಸರ್ಚ್ ಮಾಡಿದಾಗ, ಆಗಸ್ಟ್ 8 ರಂದು ದಿ ಎಕನಾಮಿಕ್ ಟೈಮ್ಸ್ ಪ್ರಕಟಿಸಿದ ವರದಿಯೊಂದು ಕಂಡು ಬಂದಿದೆ. ಅದರಲ್ಲಿ  ರೈಲ್ವೇ ಮತ್ತು ರಕ್ಷಣಾ ಇಲಾಖೆಯ ನಂತರ ವಕ್ಫ್ ಮಂಡಳಿಯು ಭಾರತದಲ್ಲಿ ಮೂರನೇ ಅತಿ ದೊಡ್ಡ ಭೂಮಾಲೀಕವಾಗಿದೆ ಎಂದು ಹೇಳಲಾಗಿದೆ. ಇದು ದೇಶಾದ್ಯಂತ 9,40,000 ಎಕರೆ ವಿಸ್ತೀರ್ಣದಲ್ಲಿ 8,70,000 ಆಸ್ತಿಗಳನ್ನು ನೋಡಿಕೊಳ್ಳುತ್ತದೆ, ಅಂದಾಜು ಒಟ್ಟು ಮೌಲ್ಯ ರೂ 1.2 ಲಕ್ಷ ಕೋಟಿ.  ಎಂದು ಉಲ್ಲೇಖಿಸಿದೆ.

ಸೆಪ್ಟೆಂಬರ್ 13 ರಂದು ಪ್ರೆಸ್‌ ಇನ್‌ಫರ್‌ಮೇಷನ್‌ ಬ್ಯೂರೋದ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟವಾದ ” ವಕ್ಫ್ ತಿದ್ದುಪಡಿ ಮಸೂದೆ 2024 ರ ವಿವರಣೆ ” ಎಂಬ ಶೀರ್ಷಿಕೆಯ ವರದಿಯೊಂದು ಕಂಡು ಬಂದಿದೆ. ಇದರಲ್ಲಿ ಪ್ರಶ್ನೆ 6 ರಲ್ಲಿ ವಕ್ಫ್ ಮಂಡಳಿಯು ಎಷ್ಟು ಆಸ್ತಿಗಳನ್ನು ನಿಯಂತ್ರಿಸುತ್ತದೆ? ಎಂದು ಕೇಳಲಾದ ಪ್ರಶ್ನೆಗೆ ವಕ್ಫ್ ಮಂಡಳಿಗಳು ಪ್ರಸ್ತುತ ಭಾರತದಾದ್ಯಂತ 9.4 ಲಕ್ಷ ಎಕರೆಗಳಷ್ಟು ವ್ಯಾಪಿಸಿರುವ 8.7 ಲಕ್ಷ ಆಸ್ತಿಗಳನ್ನು ನಿಯಂತ್ರಿಸುತ್ತವೆ ಮತ್ತು ಅಂದಾಜು ಮೌಲ್ಯ 1.2 ಲಕ್ಷ ಕೋಟಿ. ಭಾರತವು ವಿಶ್ವದಲ್ಲೇ ಅತಿ ದೊಡ್ಡ ವಕ್ಫ್ ಹಿಡುವಳಿ ಹೊಂದಿದೆ. ಇದಲ್ಲದೆ, ಸಶಸ್ತ್ರ ಪಡೆಗಳು ಮತ್ತು ಭಾರತೀಯ ರೈಲ್ವೆಯ ನಂತರ ವಕ್ಫ್ ಬೋರ್ಡ್ ಭಾರತದಲ್ಲಿ ಅತಿ ದೊಡ್ಡ ಭೂಮಾಲೀಕ ಸಂಸ್ಥೆಯಾಗಿದೆ ಎಂಬುದನ್ನು ಉಲ್ಲೇಖಿಸಲಾಗಿದೆ.

PIB ಅಧಿಕೃತ ವರದಿಯಲ್ಲಿ ನೀಡಿರುವ ಮಾಹಿತಿಯನ್ನು ನೋಡಿದಾಗ ಭಾರತದಲ್ಲಿ ವಕ್ಫ್‌ ಆಸ್ತಿ 9.4 ಲಕ್ಷ ಎಕರೆ ಆಗಿದೆ. ಅಂದರೆ ಇದು ಸರಿಸುಮಾರು 3,804 ಚದರ ಕಿ.ಮೀ. ಆಗಿದೆ. ಪಾಕಿಸ್ತಾನದ ಒಟ್ಟು ವಿಸ್ತೀರ್ಣ  8,81,913 ಚದರ ಕಿಲೋಮೀಟರ್‌ಗಳಾಗಿದೆ. ಇದನ್ನು ಪಾಕಿಸ್ತಾನದ ಭೂ ವಿಸ್ತರಣೆಗೆ ಹೋಲಿಸಿದರೆ, ಪಾಕಿಸ್ತಾನದ ವಿಸ್ತೀರ್ಣ ಭಾರತದ ವಕ್ಫ್‌ ಮಾಲಿಕತ್ವದ ಭೂಪ್ರದೇಶಕ್ಕಿಂತಲೂ  231 ಪಟ್ಟು ದೊಡ್ಡದಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಭಾರತದಲ್ಲಿ ವಕ್ಫ್ ಬೋರ್ಡ್ ಆಸ್ತಿಗಳ ವಿಸ್ತೀರ್ಣ 9.40 ಲಕ್ಷ ಚದರ ಕಿಲೋಮೀಟರ್ ಅಲ್ಲ ಎಂಬುದು ಸ್ಪಷ್ಟವಾಗಿದೆ. ಬದಲಿಗೆ, ಇದು 9.4 ಲಕ್ಷ ಎಕರೆ, ಇದು ಪಾಕಿಸ್ತಾನದ ಒಟ್ಟು ಪ್ರದೇಶಕ್ಕಿಂತ 231 ಪಟ್ಟು ಚಿಕ್ಕದಾಗಿದೆ. ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗುತ್ತಿರುವ ಪೋಸ್ಟ್‌ ಸುಳ್ಳಿನಿಂದ ಕೂಡಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ರಾಹುಲ್ ಗಾಂಧಿಯನ್ನು ‘ಸೊರೊಸ್ ಏಜೆಂಟ್’ ಇದ್ದಂತೆ ಅಂದ್ರಾ ಡೊನಾಲ್ಡ್‌ ಟ್ರಂಪ್?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights