FACT CHECK | ಟ್ರಾಫಿಕ್ ಪೊಲೀಸ್ ಮೇಲೆ ಹಲ್ಲೆ ಮಾಡಿದ ಮುಸ್ಲಿಂ ವ್ಯಕ್ತಿಗಳು ಎಂದು 2015 ವಿಡಿಯೋ ವೈರಲ್
ಮುಸ್ಲಿಂ ಹುಡುಗರ ಗುಂಪು ಹಿಂದೂ ಟ್ರಾಫಿಕ್ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ಮಾಡುತ್ತಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ಅನ್ನು ಹಂಚಿಕೊಳ್ಳಲಾಗುತ್ತಿದೆ.
ಮುಸ್ಲಿಂ ವ್ಯಕ್ತಿಗಳು ಕೋಮುದ್ವೇಷದ ಹಿನ್ನೆಲೆಯಲ್ಲಿ ಹಿಂದೂ ಪೊಲೀಸರಿಗೆ ಥಳಿಸಿದ್ದಾರೆ ಎಂದು ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ. ಮುಸಲ್ಮಾರ ಈ ದಾಳಿ ಭವಿಷ್ಯದ ಭಾರತವನ್ನು ಕಣ್ಣ ಮುಂದೆ ತಂದು ನಿಲ್ಲಿಸಿದೆ. ಇಂದು ಅವರು ತಮ್ಮ ಜನಸಂಖ್ಯೆಯನ್ನು ಹೆಚ್ಚು ಮಾಡಿಕೊಂಡು ಮುಂದೆ ಹಿಂದೂಗಳು ಅಲ್ಪಸಂಖ್ಯಾತರಾದಾಗ ಅವರ ದಾಳಿಗಳು ಹೀಗೆ ಇರಲಿವೆ. ಈ ದಾಳಿಯನ್ನು ಗಮನಿಸಿ ಪೊಲೀಸರು ಹಿಂದೂಗಳು ಎಂದು ತಿಳಿದ ತಕ್ಷಣ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಬರೆದುಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ಈ ಘಟನೆ ಬಿಹಾರದಲ್ಲಿ ನಡೆದಿದೆ ಎಂದು ಹಂಚಿಕೊಂಡಿದ್ದಾರೆ.
ಇದೇ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ಕೆಲವೊಂದು ಕೀ ವರ್ಡ್ಗಳನ್ನು ಬಳಸಿಕೊಂಡು ಗೂಗಲ್ ಸರ್ಚ್ ಮಾಡಿದಾಗ ಜುಲೈ 14, 2015 ರಂದು ಎನ್ಡಿಟಿವಿ ಹಂಚಿಕೊಂಡ ವರದಿಯೊಂದು ಲಭ್ಯವಾಗಿದೆ. ಆ ಮೂಲಕ ಈ ವೈರಲ್ ವಿಡಿಯೋ 9 ವರ್ಷಗಳಷ್ಟು ಹಳೆಯದಾಗಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಸಂಪೂರ್ಣವಾಗಿ ಪರಿಶೀಲನೆ ನಡೆಸಿದಾಗ ಹೆಲ್ಮೆಟ್ ಧರಿಸದ ಮತ್ತು ಟ್ರಿಪಲ್ ರೈಡ್ ಮಾಡಿದ್ದಕ್ಕಾಗಿ ಬೈಕ್ನಲ್ಲಿ ಬಂದ ಮೂವರನ್ನು ತಡೆದ ನಂತರ ಪೊಲೀಸರು ಮತ್ತು ಸವಾರರ ನಡುವೆ ವಾಗ್ವಾದ ನಡೆದಿದೆ. ಅದರಲ್ಲಿ ಪ್ರಮುಖವಾಗಿ ಮೂವರು ಆರೋಪಿಗಳಿಗೆ ಬೇರೆ ಬೇರೆ ಚಲನ್ ನೀಡಿರುವುದು ಸವಾರರ ಆಕ್ರೋಶಕ್ಕೆ ಕಾರಣವಾಗಿದ್ದು, ಇದರಿಂದ ಕುಪಿತಗೊಂಡು ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಮೂವರು ಆರೋಪಿಗಳಲ್ಲಿ ಒಬ್ಬ ಬಾಲಕನಾಗಿದ್ದು, ಇನ್ನಿಬ್ಬರಲ್ಲಿ ಶಾನವಾಜ್, (22), ಮತ್ತು ಸಗೀರ್ ಅಹಮದ್, (65) ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ. ಇಂಡಿಯನ್ ಎಕ್ಸ್ಪ್ರೆಸ್ ಸೇರಿದಂತೆ ಇನ್ನೂ ಹಲವು ವರದಿಗಳಲ್ಲಿ ಕೂಡ ಕ್ಷುಲ್ಲಕ ಕಾರಣಕ್ಕೆ ಬೈಕ್ ಸವಾರರು ಟ್ರಾಫಿಕ್ ಪೊಲೀಸರನ್ನು ಥಳಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆಯೆ ಹೊರತು ಈ ವರದಿಗಳಲ್ಲಿ ಎಲ್ಲಿಯೂ ಕೋಮು ನಿರೂಪಣೆ ಕಂಡು ಬಂದಿಲ್ಲ.
ಇನ್ನು ಮುಸ್ಲಿಂ ಜನಸಂಖ್ಯೆ ಹೆಚ್ಚಾಗುತ್ತಿದೆ. ಭಾರತಕ್ಕೆ ಮುಂದೆ ಅಪಾಯ ಇದೆ. ಮುಸಲ್ಮಾನರು ತಮ್ಮ ಜನಸಂಖ್ಯೆ ಹೆಚ್ಚು ಮಾಡಿಸಿಕೊಳ್ಳುವತ್ತ ಗಮನ ಹರಿಸುತ್ತಿದ್ದಾರೆ ಎಂಬುದೆಲ್ಲವೂ ಕೂಡ ಸುಳ್ಳು.ವಾಸ್ತವದಲ್ಲಿ, ಸರ್ಕಾರದ ಸ್ವಂತ ದತ್ತಾಂಶದ ಪ್ರಕಾರ, ಭಾರತದಲ್ಲಿನ ಎಲ್ಲಾ ಪ್ರಮುಖ ಧಾರ್ಮಿಕ ಗುಂಪುಗಳಲ್ಲಿ ಮುಸ್ಲಿಂ ಫಲವತ್ತತೆ ದರಗಳು ವೇಗವಾಗಿ ಕುಸಿಯುತ್ತಿವೆ. 1992 ಮತ್ತು 2021 ರ ನಡುವೆ ಮುಸ್ಲಿಮರಲ್ಲಿ ಫಲವತ್ತತೆ ದರ – ಮಹಿಳೆಯು ಜನ್ಮ ನೀಡುವ ಮಕ್ಕಳ ಸರಾಸರಿ ಸಂಖ್ಯೆ – 4.41 ರಿಂದ 2.36 ಕ್ಕೆ ಇಳಿದಿದ್ದರೆ, ಹಿಂದೂಗಳಿಗೆ ಇದು 3.3 ರಿಂದ 1.94 ಕ್ಕೆ ಇಳಿದಿದೆ ಎಂದು ಕನ್ನಡ ಫ್ಯಾಕ್ಟ್ಚೆಕ್ ವರದಿ ಮಾಡಿದೆ.

ನಾಗರೀಕ ನೊಂದಾಣಿ ವ್ಯವಸ್ಥೆ (CRS) ಹೇಳಿಕೆಯ ಪ್ರಕಾರ ಕೇಂದ್ರ ಗೃಹ ಸಚಿವಾಲಯ ಜನನ-ಮರಣ ನೊಂದಾಣಿ ಪ್ರಕ್ರಿಯೆಯನ್ನು ಮಾಡುತ್ತದೆ, ಆದರೆ ಅದರ ಮಾಹಿತಿ ಯಾವುದೇ ಧರ್ಮದ ಆಧಾರದ ಮೇಲೆ ಲಭಿಸುವುದಿಲ್ಲ. NHFS-5ರ ವರದಿಯಂತೆ ಕಳೆದ ಮೂರು ದಶಕಗಳಲ್ಲಿ ಹಿಂದೂ ಮಹಿಳೆಯರ ಫಲವತ್ತತೆಯ ದರ 3.3 ನಿಂದ 1.9 ಗೆ ಕುಸಿದರೆ, ಮುಸ್ಲಿಂ ಮಹಿಳೆಯರಲ್ಲಿನ ಫಲವತ್ತತೆಯ ದರ ಸಹ 4.4 ನಿಂದ 2.3ಗೆ ಕುಸಿದಿದೆ. 2030ರ ವೇಳೆಗೆ ಎರಡೂ ಧರ್ಮದ ಫಲವತ್ತತೆಯ ದರ ಸಮಾನಂತರಕ್ಕೆ ಬರಬಹುದು ಎಂದು ಸಮೀಕ್ಷೆಗಳು ಹೇಳಿವೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿಯಲ್ಲಿ ಮುಸ್ಲಿಂ ವ್ಯಕ್ತಿಗಳು ಟ್ರಾಫಿಕ್ ಪೊಲೀಸರು ಹಿಂದೂ ಧರ್ಮದವರು ಎಂಬ ಕಾರಣಕ್ಕೆ ಹಲ್ಲೆ ಮಾಡಿದ್ದಾರೆ ಎಂಬುದು ಸುಳ್ಳು, ವಾಸ್ತವವಾಗಿ ಈ ವಿಡಿಯೋ ಇತ್ತೀಚಿನದ್ದಲ್ಲ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಆಸ್ತಿ ಪಾಕಿಸ್ತಾನ ವಿಸ್ತಿರ್ಣಕ್ಕಿಂತ ಹೆಚ್ಚಿದೆ ಎಂಬುದು ನಿಜವೇ?

