FACT CHECK | ಕಟ್ಟಿಂಗ್ ಶಾಪ್‌ನಲ್ಲಿ ಮಸಾಜ್ ಮಾಡಿಸಿಕೊಳ್ಳುವಾಗ ವ್ಯಕ್ತಿಯೊಬ್ಬ ಸಾವನಪ್ಪಿದ್ದಾನೆ ಎಂಬ ವಿಡಿಯೋದ ಅಸಲೀಯತ್ತೇನು ಗೊತ್ತೇ?
ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ಪ್ರಸಾರವಾಗುತ್ತಿದ್ದು, ‘‘ಕ್ಷೌರದಂಗಡಿಗೆ ಮಸಾಜ್ ಮಾಡಲು ಬಂದ ವ್ಯಕ್ತಿ. ಮಸಾಜ್ ಪ್ರಕ್ರಿಯೆಯಲ್ಲಿ, ವ್ಯಕ್ತಿ ಇದ್ದಕ್ಕಿದ್ದಂತೆ ಪ್ರಜ್ಞೆತಪ್ಪಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇದಕ್ಕೆ ಅತಿಯಾದ ಮಸಾಜ್ ಕಾರಣ’’ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಫೇಸ್‌ಬುಕ್ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡು, ‘‘ಕಟ್ಟಿಂಗ್ ಸಲೂನ್ ಗಳಲ್ಲಿ ಮಸಾಜ್ ಮಾಡಿಸಿಕೊಳ್ಳುವ ಅಭ್ಯಾಸ ಬಹಳ ಜನರಿಗೆ ಇರುತ್ತದೆ. ಇದು ಎಷ್ಟು ಅಪಾಯಕಾರಿ ಎಂಬುದನ್ನು ಈ ವಿಡಿಯೋನಲ್ಲಿ ನೋಡಿ. ಜಾಗ್ರತೆಯಾಗಿರಿ.’’ ಎಂದು ಬರೆದುಕೊಂಡಿದ್ದಾರೆ.
ಸಲೂನ್ ಅಂಗಡಿಯಲ್ಲಿ ತಲೆಗೆ ಮಸಾಜ್ ಮಾಡಿಸಿಕೊಳ್ಳುತ್ತಿದ್ದ ಯುವಕನೊಬ್ಬ ಪಾರ್ಶ್ವವಾಯುವಿಗೆ ತುತ್ತಾಗಿ ಸಾವನ್ನಪ್ಪಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಕ್ಷೌರಿಕರು ತಲೆ ಮತ್ತು ಕುತ್ತಿಗೆಗೆ ಹೊಡೆಯುವ ಮೂಲಕ ಮಸಾಜ್ ಮಾಡುತ್ತಾರೆ. ಮಸಾಜ್ ಸಮಯದಲ್ಲಿ ಯುವಕನು ಅಸ್ವಸ್ಥಗೊಂಡಿರುವುದು ಕಂಡುಬಂದಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಲೂನ್ ಅಂಗಡಿಯಲ್ಲಿ ತಲೆಗೆ ಮಸಾಜ್ ಮಾಡಿಸಿಕೊಳ್ಳುತ್ತಿದ್ದ ಯುವಕನೊಬ್ಬ ಪಾರ್ಶ್ವವಾಯುವಿಗೆ ತುತ್ತಾಗಿ ಸಾವನ್ನಪ್ಪಿದ್ದಾನೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ವಿಡಿಯೋದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್ ರಿವರ್ಸ್ ಇಮೇಜನಲ್ಲಿ ಸರ್ಚ್ ಮಾಡಿದಾಗ, ನವೆಂಬರ್ 10 ರಂದು ದಕ್ಷಿಣ ಭಾರತದ ನಟಿ ಸಂಜನಾ ಗಲ್ರಾನಿ ಅವರು ತಮ್ಮ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡ ಅದೇ ರೀತಿಯ ವಿಡಿಯೋವೊಂದು ಲಭ್ಯವಾಗಿದೆ. ಇದು ಸ್ಕ್ರಿಪ್ಟ್ ಮಾಡಿದ ವಿಡಿಯೋ ಎಂಬ ಸಂದೇಶವನ್ನು ಕೂಡ ಅವರು ನೀಡಿದ್ದಾರೆ.
“ಈ ಪೇಜ್ ಸ್ಕ್ರಿಪ್ಟ್ ಮಾಡಿದ ಡ್ರಾಮಾ, ಜಾಗೃತಿಯ ವಿಡಿಯೋಗಳನ್ನು ಒಳಗೊಂಡಿದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ಕಿರುಚಿತ್ರಗಳನ್ನು ಮನರಂಜನೆ, ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ ಮಾಡಲಾಗಿದೆ. ವಿಡಿಯೋಗಳಲ್ಲಿ ಚಿತ್ರಿಸಲಾದ ಎಲ್ಲಾ ಪಾತ್ರಗಳು, ಸನ್ನಿವೇಶಗಳು ಕಾಲ್ಪನಿಕವಾಗಿವೆ. ಜಾಗೃತಿ ಮೂಡಿಸಲು, ಮನರಂಜನೆಗಾಗಿ ಉದ್ದೇಶಿಸಲಾಗಿದೆ” ಎಂದು ಅವರು ಹೇಳಿದ್ದಾರೆ.
Third Eye ಎಂಬ ಯೂಟ್ಯೂಬ್ ಖಾತೆಯಿಂದ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ‘‘ಹೀಗೂ ಆಗಬಹುದು- ಕ್ಷೌರಿಕರೊಬ್ಬರು ಮಸಾಜ್ ಮಾಡಿದಾಗ ಸಲೂನ್‌ನಲ್ಲಿ ಏನಾಯಿತು ಎಂಬುದನ್ನು ವೀಕ್ಷಿಸಿ’’ ಎಂದು ಶೀರ್ಷಿಕೆ ನೀಡಲಾಗಿದೆ. ಜೊತೆಗೆ ವಿವರಣೆಯ ಕೆಳಗೆ ಇದು ಸ್ಕ್ರಿಪ್ಟ್ ಮಾಡಿದ ವಿಡಿಯೋ ಎಂದು ಬರೆಯಲಾಗಿದೆ. 3RD EYE ಎಂಬ ಯೂಟ್ಯೂಬ್ ಚಾನಲ್ನಲ್ಲಿ ಜಾಗೃತಿಗಾಗಿ ಮಾಡಿದ ಹಲವು ವಿಡಿಯೋಗಳನ್ನು ಇಲ್ಲಿ ನೋಡಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, ಕ್ಷೌರದಂಗಡಿಯಲ್ಲಿ ಮಸಾಜ್ ಮಾಡಿಸಿಕೊಳ್ಳುತ್ತಿದ್ದ ಯುವಕನೊಬ್ಬ ಸಾವನ್ನಪ್ಪಿದ್ದಾನೆ ಎಂದು ಜಾಗೃತಿ ಮೂಡಿಸಲು ಮಾಡಿರುವ ಸ್ಕ್ರಿಪ್ಟೆಡ್ ವಿಡಿಯೋವನ್ನು ನೈಜ ಘಟನೆ ಎಂಬಂತೆ ಸುಳ್ಳು ಪೋಸ್ಟ್‌ನೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಫೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಟ್ರಾಫಿಕ್ ಪೊಲೀಸ್ ಮೇಲೆ ಹಲ್ಲೆ ಮಾಡಿದ ಮುಸ್ಲಿಂ ವ್ಯಕ್ತಿಗಳು ಎಂದು 2015 ವಿಡಿಯೋ ವೈರಲ್

