FACT CHECK | ಮಚ್ಚು ಹಿಡಿದು ಪೊಲೀಸರಿಗೆ ಧಮ್ಕಿ ಹಾಕುತ್ತಿರುವ ಮುಸ್ಲಿಂ ಮಹಿಳೆಯ ವೈರಲ್ ವಿಡಿಯೋದ ಅಸಲೀಯತ್ತೇನು ಗೊತ್ತೇ?
ಮಚ್ಚು ಹಿಡಿದ ಮುಸ್ಲಿಂ ಮಹಿಳೆಯೊಬ್ಬರು ಪೊಲೀಸರ ಸಮ್ಮುಖದಲ್ಲೆ ಯಾರಿಗೋ ಬೆದರಿಕೆ ಹಾಕುತ್ತಿರುವಂತೆ ಕಾಣುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಹಂಚಿಕೊಂಡ ಬಹುತೇಕರು ಇಂದಿನ ಕಾಂಗ್ರೆಸ್ ಸರ್ಕಾರವನ್ನು ಗುರಿಯಾಗಿಸಿಕೊಂಡು, ಕಾಂಗ್ರೆಸ್ ಸರ್ಕಾರ ಮುಸ್ಲಿಮರ ಓಲೈಕೆ ಮಾಡುವುದರ ಪರಿಣಾಮ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಪಾದಿಸಿ ಹಂಚಿಕೊಳ್ಳುತ್ತಿದ್ದಾರೆ.
ವಾಟ್ಸಾಪ್, ಫೇಸ್‌ಬುಕ್ ಮತ್ತು ಟ್ವಿಟರ್ ಸೇರಿದಂತೆ ಎಲ್ಲಾ ಸಾಮಾಜಿಕ ಮಾಧ್ಯಮಗಳ ಫ್ಲಾಟ್‌ಫಾರ್ಮ್‌ನಲ್ಲಿಯೂ ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.
ನಾರಾಯಣ ನಾಯ್ಡು ಎಂಬ ಫೇಸ್‌ಬುಕ್ ಬಳಕೆದಾರರು ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಇದು ಭವಿಷ್ಯದ ಭಾರತ???
*ಇದು ಭವಿಷ್ಯದ ಭಾರತ???*
*ಈ ವಿಡಿಯೋದಲ್ಲಿ ಓರ್ವ ಮುಸ್ಲಿಂ ಮಹಿಳೆ ಕೈಯಲ್ಲಿ ಮಚ್ಚು ಹಿಡಿದುಕೊಂಡು, ಅದೂ ಹಲವಾರು ಪೋಲಿಸ್ ಆಫೀಸರ್ ಗಳ ಮುಂದೆಯೇ ನಾವು ಮುಸ್ಲಿಮರಿಗೆ ಹುಟ್ಟಿದವರು, ಕೊಚ್ಚಿ ಹಾಕಿ ಹೋಗ್ತೀವಿ ಅಂತ ಅವಾಸ್ ಹಾಕ್ತಿರಬೇಕಾದರೆ ಸಮಾಧಾನ ಮಾಡುವ ಪೊಲೀಸರು….*
*◆ ಮುಸ್ಲಿಮರಿಗೆ ಹೆದರುತ್ತಾರೆಯೇ??*… pic.twitter.com/XxKL8mBkf0— sg m13 (@m13_sg) November 14, 2024
ಇದೇ ರೀತಿಯ ಪ್ರತಿಪಾದನೆಯೊಂದಿಗೆ ಎಕ್ಸ್‌ನಲ್ಲಿಯೂ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ವಿಡಿಯೋದ ಅಸಲೀಯತ್ತೇನು? ಈ ಘಟನೆ ಎಲ್ಲಿ ಮತ್ತು ಯಾವಾಗ ನಡೆದಿದೆ ಎಂಬ ವಿವರಗಳನ್ನು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ‘ನಾವು ಮುಸ್ಲಿಮರು ಮಚ್ಚಿನಲ್ಲಿ ಕೊಚ್ಚಿ ಹಾಕಿ ಜೈಲಿಗೆ ಹೋಗಲು ಸಿದ್ದ’ ಎಂಬ ಕೀವರ್ಡ್ ಸಹಾಯದಿಂದ ಗೂಗಲ್ ಸರ್ಚ್ ಮಾಡಿದಾಗ, ಡಿಸೆಂಬರ್ 12 2022ರಂದು TV5 ಸುದ್ದಿವಾಹಿನಿ ತನ್ನ ಸೋಶಿಯಲ್ ಮೀಡಿಯಾ ಫೇಸ್‌ಬುಕ್ ಪೇಜ್‌ನಲ್ಲಿ ಹಂಚಿಕೊಂಡ ವಿಡಿಯೋ ಲಭ್ಯವಾಗಿದೆ.
ಮತ್ತಷ್ಟು ಮಾಹಿತಿಗಾಗಿ ಗೂಗಲ್ ಸರ್ಚ್ ಮಾಡಿದಾಗ, 13 ಡಿಸೆಂಬರ್ 2022ರಂದು STAR OF MYSORE ಎಂಬ ಸುದ್ದಿ ತಾಣದ ವೆಬ್‌ಸೈಟ್ ಪ್ರಕಟಿಸಿದ ವರದಿಯೊಂದು ಲಭ್ಯವಾಗಿದೆ. ಈ ವರದಿಯ ಪ್ರಕಾರ, ಮೊಹ್ಮದ್ ಶಫಿ ಎನ್ನುವ ವ್ಯಕ್ತಿಯೊಬ್ಬರು ಕೆಎಸ್ಆರ್ ಟಿಸಿ ಗೆ ಸೇರಿದ ಡಿಪೋ ಪಕ್ಕದ ಜಾಗವನ್ನು ಬಾಡಿಗೆ ಪಡೆದು ಕಾಲೇಜು ನಡೆಸುತ್ತಿದ್ದಾರೆ. ಶಫಿ ಬಾಡಿಗೆ ಕಟ್ಟದ ಕಾರಣ ಡಿಪೋ ಅಧಿಕಾರಿಯೊಬ್ಬರು ನೋಟಿಸ್ ನೀಡಿದ್ದಾರೆ. ಇದರಿಂದ ಅಧಿಕಾರಿ ಮೇಲೆ ರೊಚ್ಚಿಗೆದ್ದ ಶಫಿಯ ಪತ್ನಿ ಗಂಡನ ಜೊತೆ ಡಿಪೋಗೆ ಬಂದು ಕೈಯಲ್ಲಿ ಮಚ್ಚು ಹಿಡಿದು ಕೊಚ್ಚಿ ಹಾಕ್ತೀನಿ ಎಂದು ಆವಾಜ್ ಹಾಕಿದ್ದಾರೆ. ಎಂದು ಉಲ್ಲೇಖಿಸಿದೆ.

ಕನ್ನಡಪ್ರಭ ವೆಬ್‌ತಾಣದಲ್ಲಿ 12 ಡಿಸೆಂಬರ್ 2022ರಂದು ಪ್ರಕಟಿಸಿದ ವರದಿಯೊಂದು ಲಭ್ಯವಾಗಿದ್ದು, ವರದಿಯ ಪ್ರಕಾರ KRSTC ಬಸ್ ನಿಲ್ದಾಣದ ಕಟ್ಟಡವನ್ನು ಮೊಹ್ಮದ್ ಶಫಿ ಎನ್ನುವ ವ್ಯಕ್ತಿಯೊಬ್ಬರು ಕಳೆದ 3- 4 ವರ್ಷಗಳ ಹಿಂದೆಯೇ ಬಾಡಿಗೆಗೆ ಪಡೆದಿದ್ದಾರೆ. ಅಧಿಕಾರಿಗಳು ಬಾಡಿಗೆ ವಸೂಲಿ ಮಾಡಲು ಮುಂದಾದಾಗ ಮಹಿಳೆ ರೌದ್ರಾವತಾರ ತೋರಿದ್ದಾರೆ. ಪೇಪರ್ ಕವರ್ ನಲ್ಲಿ ಮಚ್ಚು ತಂದಿದ್ದ ಷಫಿ ಪತ್ನಿ. ಪೊಲೀಸರ ಎದುರೇ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಧಮ್ಕಿ ಹಾಕಿದ್ದಾರೆ.

ಬಾಡಿಗೆ ಕೇಳಿದ್ದಕ್ಕೆ ಮಹಿಳೆ ರೌದ್ರಾವತಾರ
‘ನಾವು ಮುಸ್ಲಿಮರು… ಮಚ್ಚಿನಲ್ಲಿ ಕೊಚ್ಚಿ ಹಾಕಿ ಜೈಲಿಗೆ ಹೋಗಲು ರೆಡಿ.. ಎಂದು ಜೋರಾಗಿ ಕೂಗಿಕೊಳ್ಳುತ್ತಾ ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ. ಮಚ್ಚನ್ನು ಕಸಿಯಲು ಬಿಡದೆ ಮಹಿಳೆ ರಂಪಾಟ ಮಾಡಿದ್ದು, ಮಹಿಳೆಯ ರಂಪಾಟಕ್ಕೆ ಪೊಲೀಸರು ಕೂಡ ಹೈರಾಣಾದರು. ಶಾಸಕರ ಬೆಂಬಲಿಗರ ಬಹಿರಂಗ ಗೂಂಡಾಗಿರಿಗೆ ಉದಯಗಿರಿ, ಶಾಂತಿನಗರದ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ಮಚ್ಚು ಕಸಿದುಕೊಳ್ಳಲು ಪೊಲೀಸರು, ಅಧಿಕಾರಿಗಳ ಹರಸಾಹಸ ಪಟ್ಟಿದ್ದು, ಶಫಿ ಮತ್ತು ಅವರ ಪತ್ನಿಯ ಗೂಂಡಾಗಿರಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಎಂದು ವರದಿಯಾಗಿದೆ.
14 ಡಿಸೆಂಬರ್ 2022 ರಂದು, ಮೈಸೂರು ನ್ಯೂಸ್ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಇದೇ ರೀತಿಯ ವಿಡಿಯೋವೊಂದು ಲಭ್ಯವಾಗಿದ್ದು, ಮೈಸೂರಿನಲ್ಲಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಧಮ್ಕಿ ಹಾಕಿದ ಮಹಿಳೆ ಎಂದು ವಿಡಿಯೋ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಎಲ್ಲಾ ಆಧಾರಗಳಲ್ಲಿ ನೋಡುವುದಾದರೆ, ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಮುಸ್ಲಿಂ ಮಹಿಳೆಯೊಬ್ಬರು ಅಧಿಕಾರಿಗಳಿಗೆ ಧಮ್ಕಿ ಹಾಕುತ್ತಿರುವ ವೈರಲ್ ವಿಡಿಯೋ 2022ರದ್ದು. ಆಗ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದದ್ದು BJP ಸರ್ಕಾರ.
ಒಟ್ಟಾರೆಯಾಗಿ ಹೇಳುವುದಾದದರೆ, 2022 ಡಿಸೆಂಬರ್‌ನಲ್ಲಿ ಮೈಸೂರಿನ ಸಾತಗಳ್ಳಿ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಜಾಗದ ಬಾಡಿಗೆ ನೀಡದ ವಿಚಾರಕ್ಕೆ ನೋಟಿಸ್ ನೀಡಿದ ಕಾರಣಕ್ಕೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಅವಾಸ್ ಹಾಕಿದ ಹಳೆಯ ಘಟನೆಯನ್ನು ಇತ್ತೀಚೆಗೆ ನಡೆದಿದೆ ಎಂದು ಬಿಂಬಿಸಿ ವಕ್ಫ್ ಆಸ್ತಿ ವಿಚಾರ ಹೆಚ್ಚು ಚರ್ಚೆ ನಡೆಯುತ್ತಿರುವ ಬೆನ್ನಲ್ಲೆ ಜನರನ್ನು ಪ್ರಚೋದಿಸಲು ಹಳೆಯ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಕಟ್ಟಿಂಗ್ ಶಾಪ್‌ನಲ್ಲಿ ಮಸಾಜ್ ಮಾಡಿಸಿಕೊಳ್ಳುವಾಗ ವ್ಯಕ್ತಿಯೊಬ್ಬ ಸಾವನಪ್ಪಿದ್ದಾನೆ ಎಂಬ ವಿಡಿಯೋದ ಅಸಲೀಯತ್ತೇನು ಗೊತ್ತೇ?

