FACT CHECK | ಭಾರತ್ ಮಾತಾಕಿ ಜೈ ಎಂದಿದ್ದಕ್ಕೆ BJP ಶಾಸಕನನ್ನು ಸದನದಿಂದ ಹೊರ ಹಾಕಿದ್ದು ನಿಜವೇ?

ಜಮ್ಮು ಮತ್ತು ಕಾಶ್ಮೀರ ಅಸೆಂಬ್ಲಿಯಲ್ಲಿ ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದ್ದಕ್ಕಾಗಿ BJP ಶಾಸಕರನ್ನು ಹೊರಹಾಕಲಾಯಿತು ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ವಿಷಯ ಮತ್ತೊಮ್ಮೆ ಚರ್ಚೆಯಲ್ಲಿದೆ. ವಾಸ್ತವವಾಗಿ, ಆರ್ಟಿಕಲ್ 370 ಮತ್ತು 35-ಎ ಮರುಸ್ಥಾಪನೆಗೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಲಾಯಿತು. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಇದರಲ್ಲಿ ವ್ಯಕ್ತಿಯೊಬ್ಬರು ಭಾರತ್ ಮಾತಾ ಕಿ ಜೈ ಎಂಬ ಘೋಷಣೆಗಳನ್ನು ಕೂಗುತ್ತಿದ್ದಂತೆ ಮಾರ್ಷಲ್‌ಗಳು ಅವರನ್ನು ಸದನದಿಂದ ಹೊರಕ್ಕೆ ಹಾಕುತ್ತಿರುವುದನ್ನು ನೋಡಬಹುದು.

ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಇದೇ ಹೇಳಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದು, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಭಾರತ್ ಮಾತಾಕಿ ಜೈ ಎಂದ ವ್ಯಕ್ತಿಯನ್ನು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಕಲಾಪದಿಂದ ಹೊರಕ್ಕೆ ಕಳುಹಿಸಲಾಗಿದೆ ಎಂಬ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಸಂಬಂಧಿತ ಕೀವರ್ಡ್‌ಗಳೊಂದಿಗೆ ಗೂಗಲ್​ ಸರ್ಚ್ ಮಾಡಿದಾಗ,  ನವೆಂಬರ್ 08, 2024 ರಂದು ಎಎನ್‌ಐ ನ್ಯೂಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡ ವಿಡಿಯೋವೊಂದು ಲಭ್ಯವಾಗಿದೆ.

ವಿಡಿಯೋ ವರದಿಯ ಪ್ರಕಾರ, ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಕಲಾಪ ನಡೆಯುತ್ತಿದ್ದ ವೇಳೆ  ಗದ್ದಲ ಉಂಟುಮಾಡಿ ಬಾವಿಗೆ ಪ್ರವೇಶಿಸಿದ ಬಿಜೆಪಿ ಶಾಸಕರನ್ನು ಸ್ಪೀಕರ್ ಆದೇಶದ ಮೇರೆಗೆ ಮಾರ್ಷಲ್‌ಗಳು ಹೊರಗೆ ಕರೆದೊಯ್ದಿದ್ದಾರೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.370 ನೇ ವಿಧಿಯನ್ನು ತೆಗೆದುಹಾಕುವ ವಿಷಯದ ಬಗ್ಗೆ ನವೆಂಬರ್ 8 ರಂದು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಕೋಲಾಹಲ ಮುಂದುವರೆದಿದೆ ಎಂದು ಈ ವಿಡಿಯೋದ ವಿವರಣೆಯಲ್ಲಿ ಹೇಳಲಾಗಿದೆ.

ಕುಪ್ವಾರದ ಪಿಡಿಪಿ ಶಾಸಕ ಆರ್ಟಿಕಲ್ 370 ರ ಮರುಸ್ಥಾಪನೆಯ ಬ್ಯಾನರ್ ಅನ್ನು ತೋರಿಸಿದ ನಂತರ ಸದನದಲ್ಲಿ ಕೋಲಾಹಲ ಉಂಟಾಯಿತು, ಇದನ್ನು ಅನುಸರಿಸಿ ಬಿಜೆಪಿ ಶಾಸಕರು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ‘ಭಾರತ್ ಮಾತಾ ಕಿ ಜೈ’ ಘೋಷಣೆಗಳನ್ನು ಕೋಗಿದರು. ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಸ್ಪೀಕರ್ ಅಬ್ದುಲ್ ರಹೀಮ್ ರಾಥರ್ ಅವರ ಆದೇಶದ ಮೇರೆಗೆ, ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಅಧಿವೇಶನದ 5 ನೇ ದಿನವಾದ ನವೆಂಬರ್ 8 ರಂದು ಸದನದ ಬಾವಿಗೆ ಪ್ರವೇಶಿಸಿದ ಬಿಜೆಪಿ ಶಾಸಕರನ್ನು ಮಾರ್ಷಲ್‌ಗಳು ಹೊರಹಾಕಿದರು ಎಂಬ ಮಾಹಿತಿ ಇದೆ.

ಬಾರಾಮುಲ್ಲಾ ಲೋಕಸಭಾ ಕ್ಷೇತ್ರದ ಸಂಸದ ಇಂಜಿನಿಯರ್ ರಶೀದ್ ಅವರ ಸಹೋದರ ಖುರ್ಷಿದ್ ಅಹ್ಮದ್ ಶೇಖ್ ಅವರನ್ನು ಮಾರ್ಷಲ್‌ಗಳು ವಿಧಾನಸಭೆಯಿಂದ ಹೊರಗೆ ಕರೆದೊಯ್ದರು. ಸದನದಲ್ಲಿ 370ನೇ ವಿಧಿ ವಿರುದ್ಧ ತರಲಾದ ನಿರ್ಣಯವನ್ನು ಬಿಜೆಪಿ ನಿರಂತರವಾಗಿ ವಿರೋಧಿಸುತ್ತಿದೆ. ಈ ಅವಧಿಯಲ್ಲಿ ಸದನದಲ್ಲಿ ತಳ್ಳಾಟ, ಗದ್ದಲವೂ ಕಂಡು ಬಂತು. 370 ನೇ ವಿಧಿ ಮರುಸ್ಥಾಪನೆಗೆ ಸಂಬಂಧಿಸಿದ ಎರಡು ಪ್ರಸ್ತಾಪಗಳ ಮೇಲೆ ವಿಧಾನಸಭೆಯಲ್ಲಿ ಈ ಗದ್ದಲ ನಡೆದಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗಿದ್ದಕ್ಕಾಗಿ ಬಿಜೆಪಿ ಶಾಸಕರನ್ನು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಿಂದ ಹೊರಹಾಕಲಾಗಿದೆ ಎಂಬುದು ಸುಳ್ಳು. ವಾಸ್ತವವಾಗಿ ವಿಧಾನಸಭೆಯ ಅಧಿವೇಶನದಲ್ಲಿ 370 ನೇ ವಿಧಿಯ ಗದ್ದಲದ ನಂತರ ಸ್ಪೀಕರ್ ಆದೇಶದ ಮೇರೆಗೆ ಮಾರ್ಷಲ್‌ಗಳಿಂದ ಇವರನ್ನು ಹೊರಹಾಕಲಾಯಿತು. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಮಚ್ಚು ಹಿಡಿದು ಪೊಲೀಸರಿಗೆ ಧಮ್ಕಿ ಹಾಕುತ್ತಿರುವ ಮುಸ್ಲಿಂ ಮಹಿಳೆಯ ವೈರಲ್ ವಿಡಿಯೋದ ಅಸಲೀಯತ್ತೇನು ಗೊತ್ತೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights