FACT CHECK | ಹಿಂದು ವ್ಯಕ್ತಿಯೊಬ್ಬ ತನ್ನ ಸಹೋದರಿಯನ್ನೆ ಮದುವೆಯಾಗಿದ್ದಾನೆ ಎಂಬುದು ನಿಜವೇ?

ಬಿಹಾರದ ಹಿಂದೂ ವ್ಯಕ್ತಿಯೋರ್ವ ತನ್ನ ಸ್ವಂತ ತಂಗಿಯನ್ನು ಮದುವೆಯಾಗಿದ್ದಾನೆ ಎಂದು ಹೆಣ್ಣು ಮತ್ತು ಗಂಡುವಿನ ಎರಡು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಚಿತ್ರಗಳಲ್ಲಿ ಇಬ್ಬರೂ ಹೂಮಾಲೆ ಹಾಕಿಕೊಂಡಿದ್ದಾರೆ. ಈ ಫೋಟೋವನ್ನು ಹಂಚಿಕೊಳ್ಳುವಾಗ, ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು, ‘‘ಬಿಹಾರದಲ್ಲಿ, ಒಬ್ಬ ಹಿಂದೂ ಸಹೋದರ ತನ್ನ ಸ್ವಂತ ಸಹೋದರಿಯನ್ನು ಮದುವೆಯಾಗಿದ್ದಾನೆ, ಹೀಗೆ ಏಕೆ ಮಾಡಿದೆ ಎಂದು ಸ್ಥಳೀಯರು ಕೇಳಿದಾಗ, ನನ್ನ ಸಹೋದರಿ ಬೇರೆಯವರ ಬಳಿಗೆ ಹೋದರೆ ಅದು ಸರಿ ಅಲ್ಲ. ಮನೆಯ ವಸ್ತುಗಳು ಮನೆಯಲ್ಲಿಯೇ ಇರಬೇಕು, ಅದಕ್ಕಾಗಿಯೇ ನಾನು ಇದನ್ನು ಮಾಡಿದ್ದೇನೆ ಎಂದನು’’ ಎಂದು ಬರೆದುಕೊಂಡಿದ್ದಾರೆ.

ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವನ್ನು ಪರಿಶೀಲಿಸಲು, ವೈರಲ್ ಫೋಟೊವನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಅಕ್ಟೋಬರ್ 27, 2024 ರ ಫೇಸ್‌ಬುಕ್ ಪೋಸ್ಟ್‌ವೊಂದು ಲಭ್ಯವಾಗಿದೆ. ಜೈ ತೋಮರ್ ಮೋಹನಪುರ ಹೆಸರಿನ ಖಾತೆಯಿಂದ ಮಾಡಿದ ಈ ಪೋಸ್ಟ್‌ನಲ್ಲಿ ವೈರಲ್ ಆಗುತ್ತಿರುವ ಎರಡು ಚಿತ್ರಗಳ ಹೊರತಾಗಿ ಇತರ ಚಿತ್ರಗಳೂ ಲಭ್ಯವಾಗಿವೆ. ಜೈ ಅವರ ಸ್ನೇಹಿತ ಸಂದೀಪ್ ಕುಶ್ವಾಹ ಅವರ ನಿಶ್ಚಿತಾರ್ಥದ ಫೋಟೋಗಳು ಎಂದು ಇಲ್ಲಿ ಬರೆಯಲಾಗಿದೆ.

ಈ ವಿಷಯದ ಬಗ್ಗೆ ನಿಜಾಂಶ ತಿಳಿಯಲು ಖಾಸಗಿ ವೆಬ್​ಸೈಟ್‌ವೊಂದು ಜೈ ತೋಮರ್ ಅವರನ್ನು ಸಂಪರ್ಕಿಸಿ ಮಾತನಾಡಿಸಿದೆ. ಅವರು ನೀಡಿರುವ ಮಾಹಿತಿಯ ಪ್ರಕಾರ, ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಅಕ್ಟೋಬರ್ 27 ರಂದು ತನ್ನ ಸ್ನೇಹಿತ ಸಂದೀಪ್ ಕುಶ್ವಾಹಾ ಅವರ ನಿಶ್ಚಿತಾರ್ಥ ನಡೆದಿತ್ತು ಎಂದು ತಿಳಿಸಿದ್ದಾರೆ. ಇದು ನಡೆದಿರುವುದು ಬಿಹಾರದಲ್ಲಿ ಅಲ್ಲ ಮಧ್ಯಪ್ರದೇಶದಲ್ಲಿ ಎಂಬುದು ಇಲ್ಲಿ ಸ್ಪಷ್ಟವಾಗಿದೆ.

ಈ ಕುರಿತು ಸಂದೀಪ್ ಕುಶ್ವಾಹ ಕೂಡ ಮಾತನಾಡಿದ್ದು, ನಾವು ಮೊರೆನಾ ನಿವಾಸಿ ಮತ್ತು ಈ ಚಿತ್ರಗಳು ನಮ್ಮ ನಿಶ್ಚಿತಾರ್ಥದ ಫೋಟೋಗಳು ಎಂದು ಹೇಳಿದ್ದಾರೆ. ಗ್ವಾಲಿಯರ್ ಜಿಲ್ಲೆಯ ಭೈಪುರ ಗ್ರಾಮದಲ್ಲಿ ವಾಸಿಸುವ ತಮ್ಮ ಭಾವಿ ಪತ್ನಿಯ ಹೆಸರು ಅಂಜಲಿ ಕುಶ್ವಾಹ ಎಂದು ಸಂದೀಪ್ ಹೇಳಿದ್ದಾರೆ. ತಮ್ಮ ನಿಶ್ಚಿತಾರ್ಥ ಭೈಪುರ ಗ್ರಾಮದಲ್ಲಿಯೇ ನಡೆದಿದೆ. ಅಂಜಲಿ ತನ್ನ ಸಹೋದರಿ ಅಲ್ಲ ಮತ್ತು ಇಬ್ಬರೂ ಅರೇಂಜ್ಡ್ ಮ್ಯಾರೇಜ್ ಆಗಲಿದ್ದೇವೆ, ಈ ಮೊದಲು ಒಬ್ಬರಿಗೊಬ್ಬರು ಯಾವುದೇ ಪರಿಚಯ ಇರಲಿಲ್ಲ ಎಂದು ಅವರು ಹೇಳಿದ್ದಾರೆ. ಸಂದೀಪ್ ಅವರು ಮೊರೆನಾ ನಿವಾಸಿಯಾಗಿದ್ದು, ಒಡಿಶಾದ ಪರದೀಪ್‌ನಲ್ಲಿ ಸರ್ವೇಯರ್ ಆಗಿ ಕೆಲಸ ಮಾಡುತ್ತಿದ್ದಾರಂತೆ.

ಸಂದೀಪ್ ಮತ್ತು ಅಂಜಲಿ ಸಹೋದರ ಮತ್ತು ಸಹೋದರಿ ಎಂದು ಹೇಳಿಕೊಳ್ಳುವ “ಲವ್ಲಿ ಸಿಮ್ರಾನ್” ಖಾತೆಯ ವಿರುದ್ಧ ದೂರು ನೀಡುವ ಕುರಿತು ಜೈ ತೋಮರ್ ಹಲವಾರು ಫೇಸ್‌ಬುಕ್ ಪೋಸ್ಟ್‌ಗಳಲ್ಲಿ ಬರೆದಿರುವುದನ್ನು ಇಲ್ಲಿ ಗಮನಿಸಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯ ಭೈಪುರ ಗ್ರಾಮದ  ಸಂದೀಪ್ ಕುಶ್ವಾಹಾ ಮತ್ತು ಅಂಜಲಿ ನಡುವೆ ನಡೆದ ನಿಶ್ಚಿತಾರ್ಥದ ಫೋಟೊಗಳನ್ನು ಬಿಹಾರದಲ್ಲಿ, ಹಿಂದೂ ವ್ಯಕ್ತಿಯೊಬ್ಬ ತನ್ನ ಸ್ವಂತ ಸಹೋದರಿಯನ್ನು ಮದುವೆಯಾಗಿದ್ದಾನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಭಾರತ್ ಮಾತಾಕಿ ಜೈ ಎಂದಿದ್ದಕ್ಕೆ BJP ಶಾಸಕನನ್ನು ಸದನದಿಂದ ಹೊರ ಹಾಕಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights