ಕೊರೊನಾ ವೈರಸ್ ತಡೆಗೆ ಔಷಧಿ ನೀಡುತ್ತಾರೆಂದು ಲಸಿಕೆ ಹಾಕಿಸಿಕೊಂಡ ಜನ…!
ಕೊರೊನಾ ವೈರಸ್ ತಡೆಗೆ ಔಷಧಿ ನೀಡುತ್ತಾರೆಂದು ಜನ ಔಷಧಿಗಾಗಿ ಜನಮುಗಿಬಿದ್ದ ಘಟನೆ ದಾವಣಗೆರೆ ನಗರದ ಪಿ ಜೆ ಬಡಾವಣೆಯಲ್ಲಿರುವ ಈಶ್ವರಮ್ಮ ಶಾಲೆಯಲ್ಲಿ ನಡೆದಿದೆ.
ಕೊರೊನಾ ವಿಶ್ವವ್ಯಾಪಿಯಾಗಿ ಗಾಳಿಯಂತೆ ವೇಗವಾಗಿ ಹರಡುತ್ತಿದೆ. ಇದಕ್ಕೆ ಔಷಧಿ ಕಂಡು ಹಿಡಿಯಲು ವಿಜ್ಞಾನಿಗಳು ಹರಸಾಹಸ ಪಡುತ್ತಿದ್ದಾರೆ. ಜನ ಸೋಂಕಿನಿಂದ ತಪ್ಪಿಸಿಕೊಳ್ಳಲು ನಾನಾ ಮಾರ್ಗಗಳನ್ನ ಹುಡುಕುತ್ತಿದ್ದಾರೆ. ಈ ನಡುವೆ ಇದೇ ಸಮಯವನ್ನ ಬಳಸಿಕೊಳ್ಳುವ ಕೆಲ ಮಂದಿ ಸುಳ್ಳು ಸುದ್ದಿ ಹಬ್ಬಿಸಿ ಹಣ ಮಾಡಲು ಮುಂದಾಗಿರುವುದು ಬೆಳಕಿಗೆ ಬಂದಿದೆ.
ಲಸಿಕೆ ಹಾಕಿಸಿಕೊಂಡರೇ ಕೊರೊನಾ ಬರೋಲ್ಲಾ ಎಂದು ಸುಳ್ಳು ಸುದ್ದಿಯನ್ನು ನಂಬಿ ಲಸಿಕೆ ಹಾಕಿಸಿಕೊಳ್ಳಲು ಜನ ಸಾಗರೋಪಾದಿಯಲ್ಲಿ ಹರಿದು ಬಂದ ಘಟನೆ ರಾಜ್ಯದ ಜನತೆಯನ್ನ ಹುಬ್ಬೇರಿಸುವಂತೆ ಮಾಡಿದೆ. ದೇಶದಲ್ಲಿ ಎಂಥೆತಾ ರೋಗಗಳಿಗೆ ಔಷಧಿ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಅಂಥದ್ರಲ್ಲಿ ಮೊನ್ನಯಷ್ಟೇ ಹುಟ್ಟಿಕೊಂಡ ಹೊಸಾ ರೋಗಕ್ಕೆ ಯಾವುದೇ ಕೋರ್ಸ್ ಮಾಡದ ವ್ಯಕ್ತಿ ಲಸಿಕೆ ನೀಡ್ತಾನೆ ಅಂದ್ರೆ ಹೇಗಿರುತ್ತೆ…?
ಹೌದು… ಸತ್ಯಸಾಯಿ ಹೋಮಿಯೋಪಥಿ ಕೇಂದ್ರದಿಂದ ಸಾರ್ವಜನಿಕರಿಗೆ ಲಸಿಕೆ ಹಾಕಲಾಗಿದೆ. ಕೊರೊನಾ ತಡೆಯುತ್ತದೆ ಎಂದು ಸುಳ್ಳು ಹೇಳಿ ಸತ್ಯಸಾಯಿ ಹೋಮಿಯೋಪಥಿ ಕ್ಲಿನಿಕ್ ಸಿಬ್ಬಂದಿ ಸಾರ್ವಜನಿಕರ ಬಾಯಿಗೆ ಒಂದು ಹನಿ ಆರ್ಸನಿಕ್ ಅಲ್ಬಾ 30, ಎಂಬ ಹೋಮಿಯೋಪಥಿ ಡ್ರಾಪ್ಸ್ ಹಾಕಿದ್ದಾನೆ. ಶೋಭಾರಾಣಿ ಎಂಬುವವರಿಗೆ ಸೇರಿದ ಹೋಮಿಯೋಪಥಿ ಕ್ಲಿನಿಕ್ ಗೆ ಯಾರೂ ಕೂಡ ಬರುತ್ತಿರಲಿಲ್ಲ. ಹೇಗಾದ್ರು ಮಾಡಿ ಜನರನ್ನ ಕರೆತರಬೇಕು ಎನ್ನುವ ದೃಷ್ಟಿಯಿಂದ ಇಲ್ಲಿನ ಸಿಬ್ಬಂದಿ ಕೊರೊನಾ ಹೆಸರು ಹೇಳಿ ಹಣ ಮಾಡಲು ಮುಂದಾಗಿದ್ದಾನೆ.
ಅಷ್ಟಕ್ಕೂ ಡ್ರಾಪ್ ಹಾಕುವ ಸಿಬ್ಬಂದಿ ಯಾವುದೇ ಕೋರ್ಸ್ ಮಾಡಿಲ್ಲ. ಕ್ಲಿನಿಕ್ ಗೆ ಜನ ಬರಲಿ ಎಂಬ ಕಾರಣಕ್ಕೆ ಈ ರೀತಿ ಸುಳ್ಳು ಹಬ್ಬಿಸಿದ್ದಾನೆ. ಹೀಗೆ ಬೇಕಾಬಿಟ್ಟಿ ಕಾನೂನು ಉಲ್ಲಂಘನೆ ಮಾಡಿ ಜನರಿಗೆ ಲಸಿಕೆ ಹಾಕಿದ್ದಾನೆ.
ಕೊರೊನಾ ವೈರಸ್ ಗೆ ಲಸಿಕೆ ವಿತರಿಸುವುದಾಗಿ ಬೋರ್ಡ್ ಹಾಕಿದ್ದರಿಂದ ಸತ್ಯಸಾಯಿ ಹೋಮಿಯೋಪಥಿ ಕೇಂದ್ರಕ್ಕೆ ಡ್ರಾಪ್ಸ್ ಹಾಕಿಸಲು ಜನರು ಮುಗಿಬಿದ್ದಿದ್ದಾರೆ. ಸರ್ಕಾರದ ಆದೇಶದ ಪ್ರಕಾರ ಹೆಚ್ಚು ಜನ ಗುಂಪು ಗುಂಪಾಗಿ ಸೇರುವ ಹಾಗಿಲ್ಲ. ಇದನ್ನ ಮೀರಿ ಜನರನ್ನ ಒಗ್ಗೂಡಿಸುವುದು ಮಾತ್ರವಲ್ಲದೇ, ಕೊರೊನಾ ಸೋಂಕಿಗೆ ಲಸಿಕೆ ಕೊಡುವ ಬೋರ್ಡ್ ಬೇರೆ ಹಾಕಿದ್ದಾನೆ ಭೂಪ.


ವಿಷಯ ತಿಳಿದ ಜಿಲ್ಲಾ ಆಯುಷ್ ಆಧಿಕಾರಿ ಶಂಕರ್ ಗೌಡ ಹಾಗೂ ತಾಲ್ಲೂಕು ವೈದ್ಯಾಧಿಕಾರಿ, ಪೊಲೀಸರು ಸ್ಥಳಕ್ಕೆ ಆಗಮಿಸಿ ಕೆಪಿಎಂಇ ಆಕ್ಟ್ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳ ಅನುಮತಿ ಪಡೆಯದೆ ಕಾನೂನು ಬಾಹಿರವಾಗಿ ಡ್ರಾಪ್ಸ್ ಹಾಕಿದ ಸಿಬ್ಬಂದಿಯನ್ನು ಬಂಧಿಸಿದ್ದಾರೆ. ಯಾವುದೇ ಪರವಾನಿಗೆ ಪಡೆಯದೇ ಡ್ರಾಪ್ಸ್ ಹಾಕಿದ್ದರಿಂದ ಕ್ಲಿನಿಕ್ ಸೀಜ್ ಮಾಡಿದ್ದಾರೆ. ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಈ ಕುರಿತು ವರದಿ ಕೂಡ ನೀಡಲಾಗಿದೆ.
ಜನ ಕೂಡ ಇಂಥಹ ಡೋಂಗಿ ವ್ಯಕ್ತಿ ಹಾಗೂ ಕ್ಲಿನಿಕ್ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಸೋಂಕು ತಡೆಯುವುದು ದೊಡ್ಡ ಸವಾಲಾಗಿರುವುದು ಎಷ್ಟು ಸತ್ಯವೋ ಇದಕ್ಕೆ ಔಷಧಿ ಕಂಡು ಹಿಡಿಯುವುದು ಕೂಡ ಅದಕ್ಕಿಂತ ದೊಡ್ಡ ಸವಾಲಿನ ಕೆಲಸ. ಹೀಗಾಗಿ ಇಂತಹ ಹಣ ಮಾಡುವ ಡೋಂಗಿಗಳ ಮಾತು ಕೇಳಿ ಹಣ ಕಳೆದುಕೊಂಡು ಗುಂಪಾಗಿ ಸೇರಿ ಪ್ರಾಣಕ್ಕೂ ಕುತ್ತು ತರಿಸಿಕೊಳ್ಳುವ ಮುನ್ನ ಯೋಚಿಸಿ. ಅಮಾಯಕರೊಂದಿಗೆ ಆಟವಾಡುವ ಇಂತಹ ವ್ಯಕ್ತಿಗಳ ವಿರುದ್ಧ ಆರೋಗ್ಯ ಇಲಾಖೆಗೆ ದೂರು ನೀಡಿ.

