ಕೊರೊನ ಬಿಕ್ಕಟ್ಟು: ಪೊಲೀಸರ ಹದ್ದು ಮೀರಿದ ಕ್ರಮಗಳನ್ನು ಖಂಡಿಸಿದ ಸಂಪಾದಕ ಮಂಡಲಿ

ದೇಶದಾದ್ಯಂತ ಕೊರೊನ ಸಾಂಕ್ರಾಮಿಕ ತಡೆಗೆ ಲಾಕ್ ಡೌನ್ ಘೋಷಿಸಿರುವ ಸಮಯದಲ್ಲಿ ಪೊಲೀಸರು, ಕೆಲವು ಕಾರ್ಯನಿರತ ಪತ್ರಕರ್ತರ ಮೇಲೆ ಅಕ್ರಮವಾಗಿ ಹದ್ದು ಮೀರಿ ವರ್ತಿಸಿರುವ ಕ್ರಮವನ್ನು ಭಾರತೀಯ ಸಂಪಾದಕ ಮಂಡಲಿ ಖಂಡಿಸಿದೆ. “ಇಂತಹ ಸಾಂಕ್ರಾಮಿಕದ ಸಮಯದಲ್ಲಿ, ಸರ್ಕಾರದ ಕೆಲಸಗಳನ್ನು ಮತ್ತು ಇತರ ಸುದ್ದಿಗಳನ್ನು ಪ್ರಸಾರ ಮಾಡುವುದು ಬಹಳ ಅಗತ್ಯವಾಗಿರುವ ಸಮಯದಲ್ಲಿ ಪೊಲೀಸರ ಕ್ರಮಗಳು ದಮನಕಾರಿ” ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಹಿಂದೂ ಬ್ಯೋರೋ ಅಧ್ಯಕ್ಷರೊಬ್ಬರು ಕೆಲಸದಿಂದ ಮನೆಗೆ ಹಿಂದಿರುಗುವಾಗ, ಅವರ ಕೊರಳಪಟ್ಟಿ ಹಿಡಿದು ಪೊಲೀಸರು ನಿಂದಿಸಿದ್ದರು ಎಂದು ಆರೋಪಿಸಲಾಗಿತ್ತು. ಇದನ್ನು ನ್ಯೂಸ್ ಲಾಂಡ್ರಿ ವರದಿ ಮಾಡಿತ್ತು. ನೋಯ್ಡಾದಲ್ಲಿ ಆಜ್ ತಕ ವರದಿಗಾರರ ಕಾರ್ ಕೀಗಳನ್ನು ಪೊಲೀಸರು ಕಸಿದುಕೊಂಡು, ವ್ಯಾನಿನಲ್ಲಿ ಕರೆದುಕೊಂದು ಹೋಗಿ ಹೊಡೆದಿದ್ದರು ಎಂಬ ಆರೋಪ ಕೂಡ ಬಂದಿದೆ.

ಇಂತಹ ಅಸಾಮಾನ್ಯ ಸನ್ನಿವೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಿರುವ ಅಧಿಕಾರಿಗಳು ಪತ್ರಕರ್ತರನ್ನು ಅವರ ಕೆಲಸ ಮಾಡುವುದರಿಂದ ತಡೆಯುವುದು ಸರಿಯಲ್ಲ ಎಂದಿರುವ ಸಂಪಾದಕ ಮಂಡಲಿ “ಕೇಂದ್ರ ಗೃಹ ಸಚಿವಾಲಯದ ಕಾರ್ಯಸೂಚಿಗಳ ಪ್ರಕಾರ ಮಾಧ್ಯಮವನ್ನು ಅಗತ್ಯ ಸೇವೆ ಎಂದು ಪರಿಗಣಿಸಲಾಗಿ, ಮಾಧ್ಯಮಗಳ ಕೆಲಸಗಳಿಗೆ ನಿರ್ಬಂಧ ಹೇರದೆ ಅವಕಾಶ ಮಾಡಿಕೊಟ್ಟಿದೆ ಎಂಬುದನ್ನು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಪೊಲೀಸರು ತಿಳಿದುಕೊಳ್ಳಬೇಕು” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ನಿರ್ಬಂಧದ ಸಮಯದಲ್ಲಿ ದೇಶದಾದ್ಯಂತ ಪೊಲೀಸರು ಸಾಮಾನ್ಯರ ಮೇಲೆ ಲಾಠಿ ಬೀಸಿರುವ, ತಮ್ಮ ಅಧಿಕಾರ ಮೀರಿ ವರ್ತಿಸಿ ಜನರಿಗೆ ತೊಂದರೆ ನೀಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಪೊಲೀಸರಿಗೆ ಲಾಠಿ ಇಲ್ಲದೆ ಇಂದು ಕೆಲಸ ಮಾಡಲು ಬೆಂಗಳೂರು ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್ ಹೇಳಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights