ಫ್ಯಾಕ್ಟ್‌ಚೆಕ್ : ದೇವಸ್ಥಾನದಲ್ಲಿ ಚಪ್ಪಲಿ ಕಾಯುವ ವೃದ್ದೆ ರಾಮ ಮಂದಿರಕ್ಕೆ 50 ಲಕ್ಷ ದೇಣಿಗೆ ನೀಡಿದ್ದು ನಿಜವೇ?

ಪತ್ರಿಕೆ, ಟಿವಿ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಕಂಡುಬರುವ ಹೆಚ್ಚಿನ ಸುದ್ದಿಗಳೆಂದರೆ ಅಯೋಧ್ಯೆ ರಾಮ ಮಂದಿರ, ಬಾಲರಾಮನಿಗೆ ಸಂಬಂಧಿಸಿದ್ದೇ ಆಗಿರುತ್ತವೆ. ಈಗ ಅಂತಹದ್ದೆ ಪೋಸ್ಟ್‌ವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು, ದೇವಸ್ಥಾನದಲ್ಲಿ ಚಪ್ಪಲಿ ಕಾಯುವ ಕೆಲಸ ಮಾಡುವ ವೃದ್ದೆಯೊಬ್ಬರು ರಾಮ ಮಂದಿರ ನಿರ್ಮಾಣಕ್ಕೆ 50 ಲಕ್ಷ ದೇಣಿಗೆ ನೀಡಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

ಪೊಸ್ಟ್‌ನಲ್ಲಿ ಈ ರೀತಿ ಹೇಳಲಾಗಿದ್ದು, “ಇಲ್ಲಿ ಹಳದಿ ಸೀರೆಯುಟ್ಟುಕೊಂಡು ಕುಳಿತಿರುವ ತಾಯಿಯ ಹೆಸರು ಯಶೋದಾ. ಆಕೆಯ ಗಂಡ ಆಕೆಯ 20ನೇ ವಯಸ್ಸಿನಲ್ಲಿ ಆಕೆಯನ್ನು ಬಿಟ್ಟು ಹೋಗುತ್ತಾನೆ. ಆಕೆ ವೃಂದಾವನದ ಬಂಕೆ ಬಿಹಾರಿಲಾಲ್ ದೇವಸ್ಥಾನದ ಮುಂದೆ ಭಕ್ತರ ಚಪ್ಪಲಿ ಕಾಯುವ ಕೆಲಸ ಮಾಡಿಕೊಂಡು ಬಂದಿದ್ದಾಳೆ. ಈ ಕೆಲಸವನ್ನು ಆಕೆ ಕಳೆದ 30 ವರ್ಷದಿಂದ ಮಾಡಿದ್ದಾಳೆ.

ಚಪ್ಪಲಿಯನ್ನು ರಕ್ಷಿಸಿದ್ದಕ್ಕೆ ಭಕ್ತರು ಆಕೆಗೆ ಅಲ್ಪಸ್ವಲ್ಪ ದುಡ್ಡು ಕೊಡುತ್ತಿದ್ದರು. ಈ ದುಡ್ಡನ್ನೆಲ್ಲಾ ಉಳಿಸಿ ಆಕೆಯ ಬಳಿಯಲ್ಲಿ 30 ವರ್ಷದಲ್ಲಿ 51 ಲಕ್ಷ ದುಡ್ಡು ಒಟ್ಟಾಗಿತ್ತು. ರಾಮಮಂದಿರ ಕಟ್ಟುತ್ತಾ ಇದ್ದಾರೆ ಅನ್ನುವ ಸುದ್ದಿ ತಿಳಿದ ಆಕೆ ತನ್ನ ಬಳಿಯಿದ್ದ 51 ಲಕ್ಷದ 10 ಸಾವಿರ ರೂಪಾಯಿಯನ್ನು ರಾಮಲಲ್ಲಾನ ಮಂದಿರ ಕಟ್ಟಲು ಕೊಟ್ಟಿದ್ದಾಳೆ.. ಇದಕ್ಕಿಂತ ದೊಡ್ಡ ಭಕ್ತಿಯ ಪರಾಕಾಷ್ಠೆ ಇದೆಯೇ! ಇವರೇ ನಿಜವಾದ ಧರ್ಮರಕ್ಷಕರು! ಜೈ ಶ್ರೀರಾಮ್! ಎಂಬ ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ.

ಇದೇ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನೀಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 2017ರಲ್ಲಿ ಸೋಶಿಯಲ್ ಮೀಡಿಯಾ ಮತ್ತು ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಮಾಡಿದ ವರದಿಗಳು ಲಭ್ಯವಾದವು.

ವರದಿಗಳ ಪ್ರಕಾರ,  70 ವರ್ಷದ ವಿಧವೆ ದಶಕಗಳ ಉಳಿತಾಯದಿಂದ ಸಂಗ್ರಹಿಸಿದ ಹಣ ಮತ್ತು ತಮ್ಮ ಆಸ್ತಿಗಳನ್ನು ಮಾರಾಟ ಮಾಡಿದ ಒಟ್ಟು ಹಣ 40 ಲಕ್ಷ ರೂ.ಗಳನ್ನು ವೃಂದಾವನದಲ್ಲಿ ಗೋಶಾಲೆ ಮತ್ತು ಧರ್ಮಶಾಲಾ ನಿರ್ಮಿಸಲು ನೀಡಿದ್ದಾರೆ ಎಂದಿದೆ.

ಜೂನ್ 26, 2017 ರಂದು ಟೈಮ್ಸ್‌ ಆಫ್ ಇಂಡಿಯಾದ ಮಾಡಿದ ಮಹಿಳೆಯನ್ನು ಮಾತನಾಡಿಸಿ ವರದಿಯನ್ನು ಪ್ರಕಟಿಸಿದೆ. ಟಿಒಐ  ಜೊತೆಗೆ ಮಾತನಾಡಿರುವ ಮಹಿಳೆ ತನ್ನ ಹೆಸರು ಕಟ್ನಿ, ಜಬಲ್ಪುರದವಳಾಗಿದ್ದು ಪತಿಯ ಮರಣದ ನಂತರ ವೃಂದಾವನಕ್ಕೆ ಬಂದಿದ್ದೇನೆ. ಗೋಶಾಲೆ ನಿರ್ಮಿಸಲು 15 ಲಕ್ಷ ರೂ.ಗಳನ್ನು ನೀಡಿದ್ದೇನೆ. ಕಟ್ನಿಯಲ್ಲಿರುವ ಮನೆಯನ್ನು ಮಾರಾಟ ಮಾಡಿ ಬಂದ ಹಣವನ್ನು ಇಲ್ಲಿಗೆ ನೀಡಿದ್ದಾಗಿ ಆಕೆ ಹೇಳಿದ್ದಾರೆ.

“ನಾನು ಇನ್ನಷ್ಟು ಕಾಲ ಬದುಕಿದ್ದರೆ, ಬರ್ಸಾನಾದಲ್ಲಿ ಗೌಶಾಲಾವನ್ನು ಮಾಡಲು ಬಯಸುತ್ತೇನೆ,” ಇದನ್ನು ಯಾವುದೇ ಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥವಾಗಿ ಮಾಡಲು ಭಯಸಿದ್ದೇನೆ ಎಂದು ಫೂಲ್ವತಿ ಹೇಳಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಫೂಲ್ವತಿ ಎಂಬ 70 ವರ್ಷದ ವೃದ್ದೆ 2017 ರಲ್ಲಿ ಮಧ್ಯಪ್ರದೇಶದ ಕಟ್ನಿಯಲ್ಲಿರುವ ತನ್ನ ಮನೆಯನ್ನು ಮಾರಾಟ ಮಾಡಿ ಬಂದ ಹಣದಿಂದ ವೃಂದಾವನದಲ್ಲಿ ಗೋಶಾಲೆ ಮತ್ತು ಧರ್ಮಶಾಲೆಯನ್ನು ನಿರ್ಮಿಸಲು ಮತ್ತು ಮಥುರಾ ಬಂಕೆ ಬಿಹಾರಿಯಲ್ಲಿ ಶ್ರೀಕೃಷ್ಣನ ದೇವಸ್ಥಾನದ ಆಚರಣೆಗಳಿಗಾಗಿ 40 ಲಕ್ಷ ರೂ ನೀಡಿರುವುದನ್ನು, ರಾಮ ಮಂದಿರ ನಿರ್ಮಾಣಕ್ಕೆ 50 ಲಕ್ಷ ನೀಡಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ರಾಮ ಮಂದಿರದ ಕಾಣಿಕೆ ಹುಂಡಿ ಅರ್ಧ ದಿನದಲ್ಲೆ ಭರ್ತಿಯಾಯಿತೇ? ಈ ವಿಡಿಯೋ ನಿಜವಾಗಿಯೂ ರಾಮ ಮಂದಿರದ್ದೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights