ಫ್ಯಾಕ್ಟ್‌ಚೆಕ್ : ರಾಮ ಮಂದಿರದ ಕಾಣಿಕೆ ಹುಂಡಿ ಅರ್ಧ ದಿನದಲ್ಲೆ ಭರ್ತಿಯಾಯಿತೇ? ಈ ವಿಡಿಯೋ ನಿಜವಾಗಿಯೂ ರಾಮ ಮಂದಿರದ್ದೆ?
ಜನವರಿ 22ರಂದು ಅಯೋಧ್ಯೆಯ ರಾಮ ಮಂದಿರದ ಬಾಲರಾಮನ ಮೂರ್ತಿಯ ಉದ್ಘಾಟನಾ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮಕ್ಕೆ ದೇಶದ ಪ್ರಮುಖ ರಾಜಕಾರಣಿಗಳು, ಸಿನಿಮಾ ತಾರೆಯರು, ಸೆಲೆಬ್ರೆಟಿಗಳು ಭಾಗವಹಿಸಿದ್ದ ಸುದ್ದಿಗಳು ಮಾಧ್ಯಮಗಳಲ್ಲಿ ವರದಿಯಾಗಿದ್ದವು. ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಯಾದ ಅರ್ಧ ದಿನದಲ್ಲೆ ಕಾಣಿಕೆಯ ಹುಂಡಿ ಭರ್ತಿಯಾಗಿದೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.
ಆನಂದ ನಮೋ ಎಂಬ ಫೇಸ್‌ಬುಕ್ ಬಳಕೆದಾರನೊಬ್ಬ , ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಯಾದ ಅರ್ಧ ದಿನದಲ್ಲೆ ಕಾಣಿಕೆಯ ಹುಂಡಿ ಭರ್ತಿಯಾಗಿದೆ ಎಂಬ ಪೋಸ್ಟ್‌ಅನ್ನು ಹಂಚಿಕೊಂಡಿದ್ದು ತುಂಬಿದ ಹುಂಡಿಯಿಂದ ಹಣದ (ರೂಪಾಯಿ ನೋಟುಗಳ) ರಾಶಿಯನ್ನು ತೆಗೆಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಹಾಗಿದ್ದರೆ ಉದ್ಘಾಟನೆಯಾದ ಅರ್ಧ ದಿನದಲ್ಲೆ ಹುಂಡಿ ಭರ್ತಿಯಾಗಿ ಅದರಿಂದ ಹಣವನ್ನು ಹೊರತೆಗೆಯುತ್ತಿರುವುದು ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಯಾದ ಅರ್ಧ ದಿನದಲ್ಲೆ ಕಾಣಿಕೆಯ ಹುಂಡಿ ಭರ್ತಿಯಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ಅನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 16 ಜನವರಿ 2024ರಂದು ಇನ್‌ಸ್ಟಾಗ್ರಾಮ್ ನಲ್ಲಿ ಮಾಡಿದ ಪೋಸ್ಟ್‌ವೊಂದು ಲಭ್ಯವಾಗಿದೆ. ಅಂದರೆ ರಾಮ ಮಂದಿರ ಉದ್ಘಾಟನೆಗೂ ಒಂದು ವಾರಕ್ಕೂ ಮೊದಲು ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ.
View this post on Instagram
ನಿತಿನ್ ವೈಷ್ಣವ್ ಎಂಬ ಬಳಕೆದಾರರೊಬ್ಬರು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದು ಶ್ರೀ ಸನ್ವಾಲಿಯಾ ಸೇಠ್ ನಲ್ಲಿ ಈ ಬಾರಿ ದಾಖಲೆಯ ಮೊತ್ತ 12 ಕೋಟಿ 69 ಲಕ್ಷ ನಗದು ಹುಂಡಿಯಲ್ಲಿ ಬಂದಿದೆ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
ರಾಜಸ್ಥಾನದ ಚಿತ್ತೋರ್‌ಗಢದಲ್ಲಿರುವ ಶ್ರೀ ಸನ್ವಾರಿಯಾ ಸೇಠ್ ದೇವಸ್ಥಾನವನ್ನು ಕೀವರ್ಡ್ ಮೂಲಕ ಸರ್ಚ್ ಮಾಡಿದಾಗ, ಜನವರಿ 2024 ರಂದು ಪ್ರಕಟಗೊಂಡ ಸುದ್ದಿ ಲೇಖನಗಳು ಕಂಡುಬಂದಿದೆ. ಅಂದರೆ ಈ ತಿಂಗಳು, ಸನ್ವಾರಿಯಾ ಸೇಠ್ ದೇವಸ್ಥಾನದಲ್ಲಿ ಸ್ವೀಕರಿಸಿದ ದೇಣಿಗೆ ಮೊತ್ತವನ್ನು ವರದಿ ಮಾಡಿದೆ.
ಇದಲ್ಲದೆ, ಆ ಸಮಯದಲ್ಲಿ ಸನ್ವಾರಿಯಾ ಸೇಠ್ ದೇವಸ್ಥಾನದಲ್ಲಿ ಸ್ವೀಕರಿಸಿದ ದೇಣಿಗೆ ಮೊತ್ತದ ಎಣಿಕೆಯ ಸಮಯದಲ್ಲಿ 11 ಡಿಸೆಂಬರ್ 2023 ರಂದು ಅಪ್‌ಲೋಡ್ ಮಾಡಲಾದ ಮತ್ತೊಂದು ಇನ್‌ಸ್ಟಾಗ್ರಾಮ್ ವೀಡಿಯೊದಲ್ಲಿ ನಿತಿನ್ ಇದೇ ರೀತಿಯ ಕೆಂಪು ಬಣ್ಣದ ಕುರ್ತಾವನ್ನು ಧರಿಸಿರುವುದನ್ನು ಕಾಣಬಹುದು.
ಪ್ರಧಾನಿ ನರೇಂದ್ರ ಮೋದಿಯವರು 2023 ರ ಅಕ್ಟೋಬರ್‌ನಲ್ಲಿ ಸನ್ವಾರಿಯಾ ಸೇಠ್ ದೇವಸ್ಥಾನಕ್ಕೆ ಭೇಟಿ ನೀಡಿದ್ದರು ಇದನ್ನು ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ ವೀಡಿಯೊದಲ್ಲಿ ನೋಡಬಹುದು.
ಮತ್ತಷ್ಟು ಮಾಹಿತಿಗಾಗಿ Google ಸರ್ಚ್ ಮಾಡಿದಾಗ, ಫೋಟೋಗಳಲ್ಲಿ ಕೆಲವು ಬಳಕೆದಾರರು ಅಪ್‌ಲೋಡ್ ಮಾಡಿದ ಫೋಟೋಗಳು ಅದೇ ಚಿತ್ರವನ್ನು ತೋರಿಸುತ್ತವೆ. ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಕಂಡುಬರುವ ಹುಂಡಿಯ ದೃಶ್ಯಗಳು ಸನ್ವಾರಿಯಾ ಸೇಠ್ ದೇವಸ್ಥಾನಕ್ಕೆ ಸೇರಿದ ದೃಶ್ಯಗಳು ಎಂಬುದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ರಾಜಸ್ಥಾನದ ಚಿತ್ತೋರ್‌ಗಢದಲ್ಲಿರುವ ಶ್ರೀ ಸನ್ವಾರಿಯಾ ಸೇಠ್ ದೇವಸ್ಥಾನದ ಹುಂಡಿಯಲ್ಲಿ ಸಂಗ್ರಹವಾದ ಕಾಣಿಕೆಯ ಹಣವನ್ನು ಎಣಿಕೆ ಮಾಡುವ ದೃಶ್ಯಾವಳಿಗಳನ್ನು ರಾಮ ಮಂದಿರದ ಕಾಣಿಕೆಯ ಹುಂಡಿಯಲ್ಲಿ ಅರ್ಧ ದಿನದಲ್ಲೆ ಭರ್ತಿಯಾಗಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ ಎಂದು ಫ್ಯಾಕ್ಟ್‌ಲಿ ವರದಿ ಮಾಡಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ಅಯೋಧ್ಯೆಯ ರಾಮ ಮಂದಿರವೇ ಈಗ ದೇಶದ ಕೇಂದ್ರಬಿಂದು ಆಗಿರುವುದರಿಂದ ವಿಡಿಯೋದಲ್ಲಿ ಕ್ಲೈಮ್ ಮಾಡಿದಕ್ಕಿಂತಲೂ ಹೆಚ್ಚಿನ ಸಂಗ್ರಹ ಆಗಿರಲೂಬಹುದು, ಆದರೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋಗೂ ರಾಮ ಮಂದಿರಕ್ಕೂ ಸಂಬಂಧವಿಲ್ಲ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ರೈಲ್ವೆ ಟ್ರ್ಯಾಕ್ ಬಳಿ ನಿಂತು ಮೊಬೈಲ್‌ನಲ್ಲಿ ಮಾತನಾಡಿದಕ್ಕೆ ಕರೆಂಟ್ ಶಾಕ್ ತಗುಲಿದೆಯೇ?