ಸಂವಿಧಾನದ 19ನೇ ವಿಧಿ ಅನ್ವಯ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವು ಪರಿಪೂರ್ಣ ಹಕ್ಕಲ್ಲ: ಬಾಂಬೆ ಹೈಕೋರ್ಟ್‌

ಸಂವಿಧಾನದ 19 ನೇ ವಿಧಿಯ ಅನ್ವಯ ಒದಗಿಸಲಾಗಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವು ಪರಿಪೂರ್ಣ ಹಕ್ಕು ಅಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಅವರ ಪುತ್ರ ಆದಿತ್ಯ ಠಾಕ್ರೆ ವಿರುದ್ಧ ಟ್ವಿಟರ್‌ನಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಓರ್ವ ಮಹಿಳೆಯ ವಿರುದ್ಧ ಮುಂಬೈ ಮತ್ತು ಪಾಲ್ಘರ್ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಆಕೆಯನ್ನು ಬಂಧಿಸದಂತೆ ಮಧ್ಯಂತರ ರಕ್ಷಣೆ ನೀಡಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿರುವ ಕೋರ್ಟ್‌ ಬಂಧನಕ್ಕೆ ತಡೆ ನೀಡಲು ನಿರಾಕರಿಸಿದೆ.

ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಎಸ್.ಎಸ್.ಶಿಂಧೆ ಮತ್ತು ಎಂ.ಎಸ್. ಕಾರ್ನಿಕ್ ಅವರ ನ್ಯಾಯಪೀಠ, ಸುನೀನಾ ಹೋಲೆ ಎಂಬ ಮಹಿಳೆಯನ್ನು ಮುಂದಿನ ಎರಡು ವಾರಗಳವರೆಗೆ ಬಂಧಿಸುವುದಿಲ್ಲ ಎಂಬ ಮಹಾರಾಷ್ಟ್ರ ಸರ್ಕಾರದ ಮೌಖಿಕ ಭರವಸೆಯನ್ನು ಅಂಗೀಕರಿಸಿತು.

ಆದಾಗ್ಯೂ, ಸುನೀನಾ ಹೋಲೆ ಅವರು ಮುಂಬೈ ಮತ್ತು ಪಾಲ್ಘರ್ ಜಿಲ್ಲೆಯ ಆಜಾದ್ ಮೈದಾನ ಮತ್ತು ತುಲಿನ್ಜ್ ಪೊಲೀಸ್ ಠಾಣೆಗಳಿಗೆ ವಿಚಾರಣೆಗಾಗಿ ಭೇಟಿ ನೀಡುವ ಸಂದರ್ಭದಲ್ಲಿ ಅವರನ್ನು ಗೌರವದಿಂದ ನಡೆಸಿಕೊಳ್ಳುವುದಾಗಿ ಹಾಗೂ ಪ್ರಶ್ನೆಗಳನ್ನು ಕೇಳಲು ಪೊಲೀಸರೊಂದಿಗೆ ‘ಸಹಕಾರ’ ನೀಡುತ್ತೇವೆ ಎಂದು ಸರ್ಕಾರ ಹೇಳಿದೆ.

ಶಿವಸೇನೆಯ ಯುವಸೇನಾ ವಿಭಾಗದ ರೋಹ್ ಚೌಹಾಣ್ ಮತ್ತು ಇತರರು ನೀಡಿರುವ ದೂರಿನ ಅಧಾರದ ಮೇಲೆ ಸುನೀನಾ ಹೋಲೆ ಅವರ ವಿರುದ್ಧ ಮೂರು ಎಫ್‌ಐಆರ್ ದಾಖಲಿಸಲಾಗಿದ್ದು, ಸುನೈನಾ ಹೋಲೆ ಟ್ವಿಟ್ಟರ್ನಲ್ಲಿ ಮುಖ್ಯಮಂತ್ರಿ ಮತ್ತು ಅವರ ಮಗನ ವಿರುದ್ಧ ಆಕ್ರಮಣಕಾರಿ ಮತ್ತು ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ನ್ಯಾಷನಲ್‌ ಲಾ ಸ್ಕೂಲ್‌ನಲ್ಲಿ ರಾಜ್ಯದ ವಿದ್ಯಾರ್ಥಿಗಳಿಗೆ ಶೇ.25 ಮೀಸಲಾತಿ: ಸರ್ಕಾರದ ಆದೇಶಕ್ಕೆ ಹೈಕೋರ್ಟ್‌ ತಡೆ

ಬಿಕೆಸಿ ಸೈಬರ್‌ ಅಪರಾಧ ಪೊಲೀಸರು ಆಕೆಯನ್ನು 2020ರ ಆಗಸ್ಟ್‌ನಲ್ಲಿ ಆಕೆಯನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಇದಲ್ಲದೆ, ಉಳಿದ ಎರಡು ಎಫ್‌ಐಆರ್‌ಗಳಲ್ಲಿ, ಸಿಆರ್‌ಪಿಸಿಯ ಸೆಕ್ಷನ್ 41ಎ (1) ರ ಅಡಿಯಲ್ಲಿ ಆಕೆಗೆ ನೋಟಿಸ್ ನೀಡಲಾಗಿದ್ದು, ತನಿಖೆಗಾಗಿ ಸಂಬಂಧಪಟ್ಟ ಆಜಾದ್ ಮೈದಾನ ಮತ್ತು ತುಲಿನ್ಜ್ ಪೊಲೀಸ್ ಠಾಣೆಗಳಿಗೆ ಭೇಟಿ ನೀಡುವಂತೆ ಹೇಳಾಗಿತ್ತು.

ನೋಟಿಸ್‌ಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದ ಹೋಲೆ ಹೈಕೋರ್ಟ್‌ ಮೊರೆ ಹೋಗಿದ್ದಾರೆ.  ಆಕೆಯ ವಕೀಲ ಚಂದ್ರಚೂಡ್, ತನ್ನ ಕಕ್ಷಿದಾರರು ವಿಚಾರಣೆಗಾಗಿ ಪೊಲೀಸ್‌ ಠಾಣೆಗೆ ಭೇಟಿ ನೀಡಿದರೆ ಅವರನ್ನು ಬಂಧಿಸುತ್ತಾರೆ ಎಂದು ಅತಂಕಗೊಂಡಿದ್ದಾರೆ. ಆದ್ದರಿಂದ, ಬಂಧನದಿಂದ  ಮಧ್ಯಂತರ ರಕ್ಷಣೆ ನೀಡಬೇಕು ಎಂದು ಕೋರಿದ್ದರು.

ಆದರೆ, ಅಪರೂಪದ ಪ್ರಕರಣದಲ್ಲಿ ಮಾತ್ರ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಬಹುದು ಎಂದು ನ್ಯಾಯಪೀಠ ಹೇಳಿರುವ ನ್ಯಾಯಪೀಠ, 41(ಎ) ಸೆಕ್ಷನ್ ಅಡಿಯಲ್ಲಿ ಒಬ್ಬ ವ್ಯಕ್ತಿಯನ್ನು ಪೊಲೀಸರ ತನಿಖೆಗೆ ಸಹಕರಿಸುತ್ತಿರುವವರೆಗೂ ಬಂಧಿಸಬೇಕಾಗಿಲ್ಲ. ಯಾರನ್ನೇ ಬಂಧಿಸಬೇಕಾದರೆ, ಅಂತಹ ಬಂಧನಕ್ಕೆ ಪೊಲೀಸರು ಪೂರ್ವ ಸೂಚನೆ ನೀಡಬೇಕು ಎಂದು ಹೇಳಿದೆ.

ಅಲ್ಲದೆ, ಪೊಲೀಸರು ಆಕೆಯ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದರೆ, ಅಥವಾ ಆಕೆಯ ಯಾವುದೇ ಹಕ್ಕುಗಳನ್ನು ಉಲ್ಲಂಘಿಸಿದರೆ, ಅಂತಹ ಸಂದರ್ಭದಲ್ಲಿ ನ್ಯಾಯಾಲಯವನ್ನು ಸಂಪರ್ಕಿಸಬಹುದು ಎಂದು ಸನೀನಾ ಹೋಲೆ ಅವರಿಗೆ ತಿಳಿಸಿದೆ.

ಟ್ವೀಟ್‌ಗೆ ಸಂಬಂಧಿದಿಂತೆ ಎಲ್ಲಾ ಆರೋಪಗಳನ್ನು ಕೈಬಿಡಬೇಕು. ತನ್ನ ಪ್ರಕರಣಗಳ ಅಂತಿಮ ವಿಚಾರಣೆಯ ವರೆಗೂ ತನ್ನನ್ನು ಬಂಧಿಸದಂತೆ ರಕ್ಷಣೆ ನೀಡಬೇಕು. ತನ್ನ ವಿರುದ್ಧ ಇರುವ ಎಫ್‌ಐಆರ್‌ಗಳನ್ನು ರದ್ದುಗೊಳಿಸಬೇಕು ಎಂದು ಸುನೀನಾ ಹೋಲೆ ಅವರು ಹೈಕೋರ್ಟ್‌ನಲ್ಲಿ ಕೋರಿದ್ದರು.

ಮುಂಬೈ ನಿವಾಸಿ ಸುನೈನಾ ಹೋಲೆ, ವರ್ಗಗಳ ನಡುವೆ ದ್ವೇಷ ಬಿತ್ತುವ, ದ್ವೇಷ ಅಥವಾ ಕೆಟ್ಟ ಅಭಿಪ್ರಾಯ ಸೃಷ್ಟಿಸುವ ಅಥವಾ ಉತ್ತೇಜಿಸುವ ಹೇಳಿಕೆಗಳಿಗಾಗಿ ಐಪಿಸಿ ಸೆಕ್ಷನ್ 505(2)ರ ಅಡಿಯಲ್ಲಿ ಮತ್ತು ವಿವಿಧ ಧಾರ್ಮಿಕ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದಕ್ಕಾಗಿ 153 (ಎ) ಮತ್ತು ಐಟಿ ಕಾಯಿದೆ ಅಡಿಯಲ್ಲಿ ಆರೋಪ ಎದುರಿಸುತ್ತಿದ್ದಾರೆ.

ಇದನ್ನೂ ಓದಿ: ಮರಾಠ ಸಮುದಾಯಕ್ಕೆ ಮೀಸಲಾತಿ; ವಿಸ್ತೃತ ಪೀಠಕ್ಕೆ ಪ್ರಕರಣ; ಸಧ್ಯಕ್ಕಿಲ್ಲ ಮರಾಠಿಗರಿಗೆ ಮೀಸಲಾತಿ!

ಜುಲೈ 25 ಮತ್ತು 28 ರ ನಡುವೆ ಅವರು ಸೋಷಿಯಲ್ ಮೀಡಿಯಾದಲ್ಲಿ ಉದ್ಧವ್ ಠಾಕ್ರೆ ಮತ್ತು ಆದಿತ್ಯ ಠಾಕ್ರೆ ಅವರ ಆಕ್ರಮಣಕಾರಿ ವ್ಯಂಗ್ಯಚಿತ್ರ ಸೇರಿದಂತೆ ಹಲವಾರು ಪೋಸ್ಟ್‌ಗಳನ್ನು ಟ್ವೀಟ್‌ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

“ಇದು ಈಗ ರಾಜಕೀಯ ಬಣ್ಣವನ್ನು ಪಡೆದುಕೊಂಡಿದೆ. ಅಲ್ಲದೆ, ಸಂವಿಧಾನದ 19ನೇ ವಿಧಿಯ ಅಡಿಯಲ್ಲಿ ತಮ್ಮ ಕಕ್ಷಿದಾರರ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ” ಎಂದು ಸುನೈನಾ ಪರ ವಕೀಲ ಚಂದ್ರಚೂಡ್‌ ವಾದಿಸಿದ್ದಾರೆ.

ಆದಾಗ್ಯೂ, 19 ನೇ ವಿಧಿಯ ಅಡಿಯಲ್ಲಿ ಒಬ್ಬರ ಮುಕ್ತ ವಾಕ್ ಮತ್ತು ಅಭಿವ್ಯಕ್ತಿ ಹಕ್ಕು ಸಂಪೂರ್ಣವಲ್ಲ ಎಂದು ನ್ಯಾಯಪೀಠ ನೆನಪಿಸಿದೆ.

“ಬಹುಶಃ ನಾಗರಿಕರು ಯಾವುದೇ ನಿರ್ಬಂಧಗಳಿಲ್ಲದೆ, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವು ಸಂಪೂರ್ಣ ಹಕ್ಕು ಎಂದು ಭಾವುಸಿರುವಂತಿದೆ” ಎಂದು ಎಂದು ನ್ಯಾಯಪೀಠ ಹೇಳಿದೆ.

ಎಫ್‌ಐಆರ್‌ ರದ್ದುಗೊಳಿಸುವ ಬಗ್ಗೆ ಸುನೈನಾ ಹಿಲಿ ಅವರನ್ನು ಸೆಪ್ಟೆಂಬರ್‌ 29 ರಂದು ನ್ಯಾಯಾಲಯವು ವಿಚಾರಣೆ ನಡೆಸಲಿದೆ. ಆ ವೇಳೆಗೆ ಹೊಲಿಯ ಮನವಿಗೆ ಉತ್ತರ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ.


ಇದನ್ನೂ ಓದಿ: ಸಾಲದ ಮೇಲಿನ ಬಡ್ಡಿ ನಿಷೇಧ: ಕೇಂದ್ರ ಸರ್ಕಾರಕ್ಕೆ ಅಂತಿಮ ಗಡುವು ನೀಡಿದ ಸುಪ್ರೀಂ ಕೋರ್ಟ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights