ಬೆಚ್ಚಿಬೀಳಿಸಿದ ಪಾಲ್ಗರ್ ನರಹತ್ಯೆಯ ಬಗ್ಗೆ ಕೆಲವು ಹೊಣೆಗೇಡಿ ಮಾಧ್ಯಮಗಳು

ಮಹಾರಾಷ್ಟ್ರದ ಪಾಲ್ಗರ್‌ನಲ್ಲಿ ನಡೆದ ನರಹತ್ಯೆ ನಾಗರಿಕ‌ ಸಮಾಜ ಬೆಚ್ಚಿ ಬೀಳಿಸುವಂಥದ್ದು.‌ ಅರವತ್ತು, ಎಪ್ಪತ್ತು ಹಿರಿವಯಸ್ಸಿನ ಸಾಧುಗಳು ಹಾಗೆ ಕ್ರೂರವಾಗಿ ರಕ್ತಪಿಪಾಸುಗಳಿಂದ ಕೊಲೆಯಾಗಿಹೋಗುವಂಥ ಅಪರಾಧವನ್ನೇನು ಮಾಡಿದ್ದರು? ಎಂಥ ತಪ್ಪೇ ಮಾಡಿರಲಿ, ನೂರಾರು ಜನ ಹೀಗೆ ಹೊಡೆದುಕೊಲ್ಲಲು ಶುರು ಮಾಡಿದರೆ ಅಂಥ ಅರಾಜಕತೆ ದೇಶವನ್ನು ನಾಶಗೊಳಿಸುತ್ತದೆ ಎಂಬ ಎಚ್ಚರ ನಮ್ಮಲ್ಲಿ‌ ಬರುವುದು ಯಾವಾಗ?

ಈ ಪ್ರಶ್ನೆಗಳ ನಡುವೆ, ಈ ಲಿಂಚಿಂಗ್ ಪ್ರಕರಣ‌ ನಂತರ ತೆಗೆದುಕೊಂಡಿರುವ ಚಿತ್ರವಿಚಿತ್ರ ಆಯಾಮಗಳು ಭವಿಷ್ಯದ ಭಾರತದ ಕುರಿತು ಆತಂಕ ಮೂಡಿಸುತ್ತಿದೆ. ರಿಪಬ್ಲಿಕ್ ಟಿವಿಯ ಅರ್ನಾಬ್ ಗೋಸ್ವಾಮಿ ಇದನ್ನು ಕೋಮುವಾದೀಕರಣ ಮಾಡಲು ಹೋಗಿ ವಿಫಲನಾಗಿದ್ದಾನೆ. ಇತ್ತ ಕರ್ನಾಟಕದಲ್ಲಿ ಚಕ್ರವರ್ತಿ ಸೂಲಿಬೆಲೆ ಎಂಬ ಬಲಪಂಥೀಯ ಚಿಂತಕ ಪಾಲ್ಗರ್ ನರಮೇಧವನ್ನು ಮುಸ್ಲಿಮರ ತಲೆಗೆ ಕಟ್ಟಿ ಕೋಮುಗಲಭೆಗೆ ಪ್ರಚೋದನೆ ನೀಡಿದ್ದಾರೆ.

ಪಾಲ್ಗರ್ ಘಟನೆಯ ಕುರಿತು ಚಕ್ರವರ್ತಿ ಸೂಲಿಬೆಲೆ ಮನಸಿಗೆ ಬಂದಂತೆ ಕಥೆ ಕಟ್ಟಿ, ಮುಸ್ಲಿಮರನ್ನು ದೋಷಿಗಳನ್ನಾಗಿ ಮಾಡಿ ಬರೆದ ಲೇಖನ ಕರ್ನಾಟಕದ ಅತ್ಯಂತ ಹಿರಿಯ ಪತ್ರಿಕೆ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾಗಿದೆ‌. ಇದಲ್ಲದೆ ತಮ್ಮ ಇದೇ ಲೇಖನವನ್ನು ಯುವ ಲೈವ್ ಡಾಟ್ ನೆಟ್ ನಲ್ಲಿ ಪ್ರಕಟಿಸಿದ್ದಾರೆ.

ಸ್ವತಃ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಈ ಘಟನೆಗೆ ಕೋಮುಬಣ್ಣ ಕಟ್ಟಬೇಡಿ ಎಂದು ಹೇಳಿದರು. ಅಲ್ಲಿನ ಗೃಹ ಸಚಿವರು‌ ಬಂಧಿತ ಎಲ್ಲ ಆರೋಪಿಗಳ ಹೆಸರುಗಳನ್ನು ಪ್ರಕಟಿಸಿದರು. ಆ ಪೈಕಿ ಒಬ್ಬರೂ ಮುಸ್ಲಿಮರು ಇರಲಿಲ್ಲ. ನೂರಾರು ಮೀಡಿಯಾ ಏಜೆನ್ಸಿಗಳು ಈ ಕುರಿತು ವರದಿಗಳನ್ನು ಪ್ರಕಟಿಸಿವೆ. ಹಾಗಿದ್ದೂ ಚಕ್ರವರ್ತಿಯವರು ಆ ಸುಳ್ಳು ಲೇಖನ ಯಾಕೆ ಬರೆದರು?

ಚಕ್ರವರ್ತಿ ಸೂಲಿಬೆಲೆಯವರ ಈ ದುರುದ್ದೇಶಪೂರಿತ ಲೇಖನದ ಕುರಿತು ನೆಟಿಜನ್ ಗಳು ಆಧಾರ,‌ ದಾಖಲೆಗಳ ಸಮೇತ ಆಕ್ಷೇಪ ಎತ್ತುತ್ತಿದ್ದಂತೆ ಚಕ್ರವರ್ತಿ ಸೂಲಿಬೆಲೆ ತಮ್ಮ ಲೇಖನವನ್ನು ಎಡಿಟ್ ಮಾಡಿ ‘ಮುಸಲ್ಮಾನರಿಂದ ಕೊಲೆಗೀಡಾದರು’ ಎಂದು ಬರೆದಿದ್ದ ಕಡೆ ಮುಸಲ್ಮಾನರಿಂದ ಎಂಬ ಶಬ್ದವನ್ನು ಎಡಿಟ್ ಮಾಡಿದರು.‌ ಅಷ್ಟು ಹೊತ್ತಿಗಾಗಲೇ ಅವರ ಮೂಲಲೇಖನದ ಪೂರ್ಣಪಾಠವನ್ನು ಅವರ ನೂರಾರು ಅಭಿಮಾನಿಗಳು ಸಾಮಾಜಿಕ‌ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದರ ಪರಿಣಾಮ ಅಪಾರ. ಈಗಾಗಲೇ ಭಾರತದಲ್ಲಿ ಇಸ್ಲಾಮೋಫೋಬಿಯಾ ವೇಗವಾಗಿ ಹಬ್ಬುತ್ತಿದೆ.‌ ಸಾಮಾನ್ಯ ಜನರು ಸಹ ಮುಸ್ಲಿಮರನ್ನು ದ್ವೇಷಿಸುವಂಥ ವಾತಾವರಣವನ್ನು ದ್ವೇಷಭಕ್ತರು ಫೇಕ್ ನ್ಯೂಸ್ ಗಳ ಮೂಲಕ ಸೃಷ್ಟಿಸಿದ್ದಾರೆ. ಚಿಂತಕ ಎಂದು ತನ್ನ ಅಭಿಮಾನಿಗಳಿಂದ ಕರೆಯಿಸಿಕೊಳ್ಳುವ ಚಕ್ರವರ್ತಿ ಸೂಲಿಬೆಲೆಯವರಿಗೆ ಈ ಸುಳ್ಳು ಸುದ್ದಿ ಬರೆಯುವ, ಹಂಚಿಕೊಳ್ಳುವ ಅಗತ್ಯವಾದರೂ ಏನಿತ್ತು? ಇಂಥ ಲೇಖನಗಳ ಮೂಲಕ ಅವರು ಸಮಾಜದಲ್ಲಿ ಅಶಾಂತಿ, ಕೋಮುಗಲಭೆ ಸೃಷ್ಟಿಸಲು ಯತ್ನಿಸುತ್ತಿರುವುದು ಯಾವ ಕಾರಣಕ್ಕೆ? ಸರ್ಕಾರ ಯಾಕೆ ಇವರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂಬ ಪ್ರಶ್ನೆಗಳನ್ನು ನಾವು ಕೇಳಬೇಕಿದೆ.

ಭಾರತೀಯ ಸಮಾಜ ಕರೋನಾ ಬಿಕ್ಕಟ್ಟಿನ ಕಾಲದಲ್ಲಿ ಒಂದಾಗಿ ಹೋರಾಡಬೇಕಿತ್ತು. ಆದರೆ ಈ ವಿಷಯ ಸ್ಥಿತಿಯಲ್ಲೂ ವಿಷ ಹರಡುವ ಶಕ್ತಿಗಳ ವಿರುದ್ಧ ನಾಗರಿಕ ಸಮಾಜ ಎಚ್ಚೆತ್ತುಕೊಳ್ಳಬೇಕಿದೆ. ಕೋಮುಗಳ ನಡುವೆ ಗಲಭೆ ಎಬ್ಬಿಸಲು ಯತ್ನಿಸುತ್ತಿರುವವರ ವಿರುದ್ಧ ಸರ್ಕಾರ, ಪೊಲೀಸರು ಕ್ರಮ ಕೈಗೊಳ್ಳಬೇಕಿದೆ.

ಪಾಲ್ಗಾರ್ ನಲ್ಲಿ ಒಂದು ಗಾಳಿಸುದ್ದಿ ಜನರಲ್ಲಿ ವಿಷ ತುಂಬಿಸಿ ಭೀಕರ ನರಮೇಧಕ್ಕೆ ಕಾರಣವಾಯಿತು. ಸುಳ್ಳು ಸುದ್ದಿಯನ್ನು ಜನ ಎಷ್ಟು ಸುಲಭವಾಗಿ ನಂಬುತ್ತಾರೆ ಎಂಬುದಕ್ಕೆ ಇದು ಸಾಕ್ಷಿ. ಸುಳ್ಳು ಸುದ್ದಿ‌ಹರಡುವವರನ್ನು ನಮ್ಮ ಸರ್ಕಾರಗಳು ಇನ್ನೂ ಪರಿಗಣಿಸಿಯೇ ಇಲ್ಲ. ಹೀಗಿರುವಾಗ ಇಂಥ ಘಟನೆಗಳು ನಿಲ್ಲುವುದಾದರೂ ಹೇಗೆ?

ಹಿಂದೆ ದೇಶದಲ್ಲಿ ಒಂದು ಸಮುದಾಯದ ವಿರುದ್ಧ ಇಂತಹ ಗುಂಪು ಹತ್ಯೆಗಳನ್ನು ಹಬ್ಬಗಳಂತೆ ಆಚರಿಸಲಾಯಿತು. ಅಪರಾಧಿಗಳಿಗೆ ಹೂ ಹಾರ ಹಾಕಿ ಸ್ವಾಗತಿಸಲಾಯಿತು. ಈಗ ಸಾಧುಗಳ ಸಾಲುಹತ್ಯೆ ನಡೆದಿದೆ. ಕೊಲ್ಲುವವರಿಗೆ ಕೊಲ್ಲುವುದು ಅಭ್ಯಾಸವಾದರೆ ಯಾರನ್ನು ಬೇಕಾದರೂ ಕೊಲ್ಲುತ್ತಾರೆ. ಸುಳ್ಳು ಸುದ್ದಿ ಹಬ್ಬಿಸುವವರ ಮೇಲೆ ಕ್ರಮ ಕೈಗೊಳ್ಳದ ಸರ್ಕಾರ ಇದನ್ನು ಮನಗಾಣಬೇಕು.

  • ದಿನೇಶ್ ಕುಮಾರ್ ಎಸ್.ಸಿ
ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights