ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ದಾಳಿ ಹಿನ್ನೆಲೆ ಹಾಸ್ಟೆಲ್‌ನ ವಾರ್ಡನ್ ರಾಜೀನಾಮೆ!

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು)ನಲ್ಲಿ ಮಸುಕುಧಾರಿ ಗೂಂಡಾಗಳು ದಾಂಧಲೆ ನಡೆಸಿದ ಹಿನ್ನೆಲೆಯಲ್ಲಿ ಸಬರಮತಿ ಹಾಸ್ಟೆಲ್‌ನ ಹಿರಿಯ ವಾರ್ಡನ್ ಆರ್. ಮೀನಾ ಅವರು ರಾಜೀನಾಮೆ ನೀಡಿದ್ದಾರೆ.

‘ಹಿಂಸೆಯನ್ನು ತಡೆಯಲು ನಾವು ಪ್ರಯತ್ನಿಸಿದ್ದೇವೆ ಆದರೆ ಹಾಸ್ಟೆಲ್‌‌ನ ವಿದ್ಯಾರ್ಥಿಗಳಿಗೆ ಭದ್ರತೆ ಒದಗಿಸಲು ನಮ್ಮಿಂದ ಸಾಧ್ಯವಾಗಲಿಲ್ಲ’ ಎಂದು ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕಬ್ಬಿಣದ ಸರಳುಗಳು, ಮತ್ತು ಬಾಟಲಿಗಳಿಂದ ಶಸ್ತ್ರಸಜ್ಜಿತವಾದ ಮುಖವಾಡ ತೊಟ್ಟಿದ್ದ ಸುಮಾರು 50 ಗೂಂಡಾಗಳು ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯಕ್ಕೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಅಲ್ಲದೇ ಅವರು ಹೊರಹೋಗುತ್ತಿರುವಾಗ ಪೊಲೀಸರು ಕೈಕಟ್ಟಿ ನಿಂತಿರುವ ವಿಡಿಯೋವೊಂದು ವೈರಲ್‌ ಆಗಿದ್ದು ಪೊಲೀಸರ ಮೇಲೆ ಅನುಮಾನ ಮೂಡಿಸಿದೆ.

ಪೊಲೀಸರು ಮಧ್ಯಾಹ್ನದಿಂದ ಕ್ಯಾಂಪಸ್‌ನಲ್ಲಿದ್ದರು, ಆದರೆ ಅವರು ಏನೂ ಮಾಡಲಿಲ್ಲ” ಎಂದು ಜೆಎನ್‌ಯು ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಸಾಕತ್ ಮೂನ್ ದಾಳಿಯ ನಂತರ ಹೇಳಿದ್ದಾರೆ. ದಾಳಿಕೋರರು ಶಸ್ತ್ರಾಸ್ತ್ರಗಳೊಂದಿಗೆ ಜೆಎನ್‌ಯುಗೆ ಹೇಗೆ ಪ್ರವೇಶಿಸಿದರು? ಅವರನ್ನು ಗೇಟಿನ ಸೆಕ್ಯುರಿಟಿ ಅಥವಾ ಪೊಲೀಸರು ಏಕೆ ತಡೆಯಲಿಲ್ಲ, ಏಕೆ ಒಬ್ಬರನ್ನು ಬಂಧಿಸಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.

ಪೊಲೀಸರು ದಾಳಿಕೋರರನ್ನು ತಡೆಯುವ ಅಥವಾ ಬಂಧಿಸುವ ಕೆಲಸ ಮಾಡಿಲ್ಲ, ಬದಲಿಗೆ ಅವರಿಗೆ ಕುಮ್ಮಕ್ಕು ನೀಡಿದ್ದಾರೆ ಎಂದು ಜೆಎನ್‌ಯು ವಿದ್ಯಾರ್ಥಿ ಸಂಘ ಆರೋಪಿಸಿದೆ. ಇವರೆಗೂ ಪೊಲೀಸರು ಯಾರನ್ನು ಬಂಧಿಸದಿರುವುದು ಇದಕ್ಕೆ ಸಾಕ್ಷಿ ಎಂದು ಅವರು ಆರೋಪಿಸಿದ್ದಾರೆ. ದೆಹಲಿ ಕ್ರೈಮ್‌ ಬ್ರಾಂಚ್‌ಗೆ ತನಿಖೆಯ ಹೊಣೆಯನ್ನು ವಹಿಸಿದ್ದು, ಎಫ್‌ಐಆರ್‌ ದಾಖಲಾಗಿದೆ.

ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಸೇರಿದಂತೆ ಕನಿಷ್ಠ 34 ಜನರು ಗಾಯಗೊಂಡಿದ್ದಾರೆ. ಜೆಎನ್‌ಯು ವಿದ್ಯಾರ್ಥಿ ಸಂಘ, ಶಿಕ್ಷಕರ ಸಂಘ ದಾಳಿಯನ್ನು ಎಬಿವಿಪಿ ನಡೆಸಿದೆ ಎಂದು ಆರೋಪಿಸಿದೆ.

ಕ್ಯಾಂಪಸ್‌ಗೆ ಪ್ರವೇಶಿಸುವ ಮುನ್ನ ಶಸ್ತ್ರಸಜ್ಜಿತವಾದ ಗುಂಪು ಸಂಜೆ 6.45 ರ ಸುಮಾರಿಗೆ ತೆಗೆದ ಫೋಟೋಗಳಲ್ಲಿ, ಕ್ಯಾಂಪಸ್‌ನ ಬಸ್ ನಿಲ್ದಾಣದ ಬಳಿ ಆ ವ್ಯಕ್ತಿಗಳು ನಡೆದುಕೊಂಡು ಹೋಗುವುದನ್ನು ವಿಡಿಯೋದಲ್ಲಿ ಕಾಣಬಹುದು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights