ದೆಹಲಿಯಿಂದ ಹಿಂದಿರುಗಿದ ಕೇಂದ್ರ ಸಚಿವ ಸದಾನಂದ ಗೌಡ; ಸಾಂಸ್ಥಿಕ ಕ್ವಾರಂಟೈನ್ ಯಾಕಿಲ್ಲ?

ಕೇಂದ್ರ ಸಚಿವ ಡಿ ವಿ ಸದಾನಂದ ಗೌಡರು ದೆಹಲಿಯಿಂದ ಹಿಂದಿರುಗಿದ್ದರು. ಹೀಗಿದ್ದೂ ಅವರು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಟ್ಟಿಲ್ಲ. ಜನರಿಗೊಂದು ನ್ಯಾಯ, ಸಚಿವರಿಗೊಂದು ನ್ಯಾಯವೇ ಎಂದು ಹಲವು ಆರೋಪಗಳು ಕೇಳಿಬಂದ ಹಿನ್ನಲೆಯಲ್ಲಿ ಸಚಿವರು ಉತ್ತರಿಸಿದ್ದಾರೆ.

ಇಂದಿನಿಂದ ದೇಶಿಯ ವಿಮಾನಯಾನ ಸೇವೆ ಆರಂಭವಾಗಿದೆ. ನಿಯಮಗಳ ಪ್ರಕಾರ ಅಂತರ್‌ರಾಜ್ಯ ಪ್ರವಾಸ ಮಾಡಿದವರು 14 ದಿನಗಳ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಗಾಗಬೇಕಿದೆ. ಆದರೆ ಇಂದು ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಸದಾನಂದಗೌಡರು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡದೇ ಇರುವುದರಿಂದ ವಿವಾದ ಭುಗಿಲೆದ್ದಿದೆ.

ಔಷಧ ಸಚಿವರಾಗಿ ನನಗೆ ವಿನಾಯಿತಿ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ. ಕರ್ನಾಟಕ ಸರ್ಕಾರದ ಅಧಿಸೂಚನೆಯಲ್ಲಿ ಕ್ವಾರಂಟೈನ್ ವಿನಾಯಿತಿ ಪಟ್ಟಿಯಡಿಯಲ್ಲಿ ಫಾರ್ಮಾ ವಲಯವನ್ನು ಉಲ್ಲೇಖಿಸಿಲ್ಲ ಎಂದು ಪತ್ರಕರ್ತ ನಾಗಾರ್ಜುನ್‌ ದ್ವಾರಕನಾಥ್‌ ಟ್ವಿಟ್ಟರ್‌ನಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇನ್ನು ಇದಕ್ಕೆ ಸದಾನಂದ ಗೌಡರು ಸ್ಪಷ್ಟನೆ ನೀಡಿದ್ದಾರೆ. ನಾನು ಮಂತ್ರಿಯಾಗಿದ್ದೇನೆ ಮತ್ತು ನಾನು ಔಷಧ ಸಚಿವಾಲಯದ ಮುಖ್ಯಸ್ಥನಾಗಿದ್ದೇನೆ. ಔಷಧಿಗಳ ಪೂರೈಕೆ ಮತ್ತು ಇತರ ವಸ್ತುಗಳು ವ್ಯತ್ಯಯವಾದಲ್ಲಿ ವೈದ್ಯರು ರೋಗಿಗಳಿಗೆ ಏನು ಮಾಡಬಹುದು, ಅದು ಸರ್ಕಾರದ ವೈಫಲ್ಯವಲ್ಲವೇ? ದೇಶದ ಪ್ರತಿಯೊಂದು ಮೂಲೆಯಲ್ಲೂ ಔಷಧಿಗಳ ಪೂರೈಕೆಯನ್ನು ಖಚಿತಪಡಿಸಿಕೊಳ್ಳುವುದು ನನ್ನ ಜವಾಬ್ದಾರಿ ಎಂದು ಅವರು ತಿಳಿಸಿದ್ದಾರೆ.

ಎಲ್ಲಾ ನಾಗರಿಕರಿಗೆ ಮಾರ್ಗಸೂಚಿಗಳು ಅನ್ವಯವಾಗುತ್ತವೆ, ಆದರೆ ಕೆಲವು ಜವಾಬ್ದಾರಿಯುತ ಹುದ್ದೆಗಳನ್ನು ನಿರ್ವಹಿಸುವವರಿಗೆ ಕೆಲವು ವಿನಾಯಿತಿಗಳಿರುತ್ತವೆ ಎನ್ನುವ ಮೂಲಕ ಅವರು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಗಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಾನು ದೆಹಲಿಯಲ್ಲಿದ್ದಾಗಲು ಪ್ರತಿ ಮೂರು ದಿನಗಳಿಗೊಮ್ಮೆ ಕೊರೊನ ಟೆಸ್ಟ್‌ ಮಾಡಿಸಿದ್ದೇನೆ. ಕೊರೊನಾ ನೆಗೆಟಿವ್‌ ಬಂದಿದೆ. ನಮ್ಮ ಸಿಬ್ಬಂದಿಗಳಿಗೂ ಟೆಸ್ಟ್‌ ಮಾಡಿಸಲಾಗಿದೆ. ಇಂದು ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಇಳಿದಾಗ ನನ್ನನ್ನು ಟೆಸ್ಟ್‌ ಮಾಡಿದ್ದಾರೆ. ನನ್ನ ಮೊಬೈಲ್‌ ಆರೋಗ್ಯ ಸೇತು ಆಪ್‌ ಇದೆ. ಇದನ್ನೆಲ್ಲ ನೋಡಿಯೇ ನನ್ನನ್ನು ಬಿಟ್ಟಿದ್ದು ಎಂದು ಅವರು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ ಹದಿನಾಲ್ಕು ದಿನಗಳ ಕಾಲ ಮನೆಯಲ್ಲಿಯೇ ಕ್ವಾರಂಟೈನ್ ಆಗುವುದಾಗಿ ಅವರು ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights