ದೆಹಲಿಯ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೇಜ್ರಿವಾಲ್ ಹೇಳಿದ್ದೇನು..?
ದೆಹಲಿ ಸಿಎಂ ಆಗಿ ಭಾನುವಾರ ಪ್ರಮಾಣ ವಚನ ಸ್ವೀಕಾರ ಮಾಡಿದ ಬಳಿಕ ಇಂದು ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು.
ಭಾನುವಾರ ರಾಮ್ ಲೀಲಾ ಮೈದಾನದಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ ಕೇಜ್ರಿವಾಲ್, ಮನೀಷ್ ಸಿಸೋಡಿಯಾ, ಸತ್ಯೇಂದರ್ ಜೈನ್, ಗೋಪಾಲ್ ರೈ, ಕೈಲಾಶ್ ಗೆಹ್ಲೋಟ್, ಇಮ್ರಾನ್ ಹುಸೈನ್ ಹಾಗೂ ರಾಜೇಂದ್ರನ್ ಗೌತಮ್ ಅವರು ದೆಹಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇವರಿಗೆ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.
ದೆಹಲಿ ಉಪಚುನಾವಣೆಯಲ್ಲಿ 70 ಕ್ಷೇತ್ರಗಳಲ್ಲಿ 62 ಕ್ಷೇತ್ರಗಳು ಆಮ್ ಆದ್ಮಿ ಪಕ್ಷ ಗೆಲ್ಲುವು ಮೂಲಕ ಭರ್ಜರಿ ಜಯವನ್ನು ಸಾಧಿಸಿತು. ಬಿಜೆಪಿ 8 ಕ್ಷೇತ್ರಗಳಲ್ಲಿ ಗೆದ್ದರೆ, ಕಾಂಗ್ರೆಸ್ ಒಂದು ಕ್ಷೇತ್ರಗಳಲ್ಲೂ ಖಾತೆ ತೆರೆಯದೆ ಸೋಲ್ಲೊಪ್ಪಿಕೊಂಡಿತು.
ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಕೇಜ್ರಿವಾಲ್ “ಈಗ ನಾನು ದೆಹಲಿಯ ಮುಖ್ಯಮಂತ್ರಿ. ನಾನು ಎಲ್ಲರ ಮುಖ್ಯಮಂತ್ರಿ. ದೆಹಲಿ ಜನರು ನನ್ನನ್ನು ಪ್ರೀತಿಸುತ್ತಾರೆ ಹಾಗೆಯೇ ನಾನೂ ದೆಹಲಿಯ ಜನರನ್ನು ಪ್ರೀತಿಸುತ್ತೇನೆ. ಯಾರೂ ಚಿಂತೆ ಮಾಡಬೇಕಾಗಿಲ್ಲ. ನಾನು ಎಲ್ಲರಿಗಾಗಿ ಕೆಲಸ ಮಾಡುತ್ತೇನೆ” ಎಂದು ಭರವಸೆ ನೀಡಿದರು.
“ನಾನು ಪ್ರತಿಯೊಬ್ಬರಿಗಾಗಿ ಕೆಲಸ ಮಾಡುತ್ತೇನೆ. ಪ್ರತಿಯೊಬ್ಬರೊಂದಿಗೂ ಕೆಲಸ ಮಾಡುತ್ತೇನೆ. ದೆಹಲಿಯನ್ನು ವಿಶ್ವ ನಗರವನ್ನಾಗಿ ಮಾಡಲು ಶ್ರಮಿಸುತ್ತೇನೆ. ಪಕ್ಷದ ಗೆಲವು ದೆಹಲಿ ಜನರ ಗೆಲುವು. ಎಲ್ಲರೂ ದೆಹಲಿಯತ್ತ ನೋಡುತ್ತಿದ್ದಾರೆ. ದೆಹಲಿಯಲ್ಲಾದ ರಾಜಕೀಯ ಬೆಳವಣಿಗೆಯನ್ನು ಗಮನಿಸುತ್ತಿದ್ದಾರೆ” ಎಂದರು.


