ದೆಹಲಿ ಹಿಂಸಾಚಾರ – ಬಿಜೆಪಿ ಎದುರು 6 ಪ್ರಶ್ನೆಗಳನ್ನಿಟ್ಟ ಸೋನಿಯಾ ಗಾಂಧಿ..!
ದೆಹಲಿಯಲ್ಲಿ ಸಿಎಎ ಪರ ಹಾಗೂ ವಿರೋಧ ಪ್ರತಿಭಟನಾಕಾರರ ನಡುವೆ ನಡೆದ ಹಿಂಸಾಚಾರದಲ್ಲಿ 20 ನಾಗರೀಕರು ಬಲಿಯಾಗಿದ್ದು ಈ ವಿಚಾರಕ್ಕೆ ಕಾಂಗ್ರೆಸ್ ಹಂಗಾಮಿ ರಾಷ್ಟ್ರಾಧ್ಯಕ್ಷೆ ಬಿಜೆಪಿ ಎದುರು 6 ಪ್ರಶ್ನೆಗಳನ್ನಿಟ್ಟಿದ್ದಾರೆ. ಜೊತೆಗೆ ಇದರ ನೈತಿಕ ಹೊಣೆ ಹೊತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
ಇಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿ ವಿರುದ್ಧ ಕಿಡಿಕಾರಿರುವ ಸೋನಿಯಾ ಗಾಂಧಿ, ” ದೆಹಲಿ ಗಲಭೆ ನಡೆಯುತ್ತಿದ್ದಾಗ ಕೇಂದ್ರದ ಗೃಹ ಸಚಿವರು ಎಲ್ಲಿದ್ದರು ಮತ್ತು ಕಳೆದ ಭಾನುವಾರದಿಂದ ಅವರು ಏನು ಮಾಡುತ್ತಿದ್ದರು? ದೆಹಲಿ ಚುನಾವಣೆ ಮುಗಿದ ದಿನಗಳಿಂದ ಇಂದಿನ ವರೆಗೆ ಕೇಂದ್ರ ಗುಪ್ತಚರ ಇಲಾಖೆ ನೀಡಿದ ವರದಿಗಳು ಯಾವುವು? ಕೇಂದ್ರ ಗೃಹ ಇಲಾಖೆ ಹೇಳಿದಂತೆ ಈ ಗಲಭೆ ಪ್ರಚೋದಿಸಲ್ಪಟ್ಟಿದೆಯೇ? ದೆಹಲಿಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ ಎಂಬ ಸ್ಪಷ್ಟ ಸೂಚನೆಗಳು ಇದ್ದಾಗ್ಯೂ ಭಾನುವಾರ ರಾತ್ರಿ ನಿಯೋಜಿಸಲಾದ ಪೊಲೀಸ್ ಪಡೆಯ ಶಕ್ತಿ ಎಷ್ಟು? ಪರಿಸ್ಥಿತಿ ದೆಹಲಿ ಪೊಲೀಸರ ನಿಯಂತ್ರಣ ಮೀರಿದೆ ಎಂಬುದು ಸ್ಪಷ್ಟವಾದಾಗ ಹೆಚ್ಚುವರಿ ಭದ್ರತಾ ಪಡೆಗಳನ್ನು ತಕ್ಷಣವೇ ಕರೆಯಲಿಲ್ಲವೇಕೆ? ಘಟನೆ ನಡೆದಾಗ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಎಲ್ಲಿದ್ದರು ಮತ್ತು ಕಳೆದ ಭಾನುವಾರದಿಂದ ಅವರು ಏನು ಮಾಡುತ್ತಿದ್ದರು? ಎಂದು ಕೇಂದ್ರದ ಗೃಹ ಸಚಿವ ಅಮಿತ್ ಷಾ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಗರಂ ಆಗಿದ್ದಾರೆ.

