ನಮೋರ ಒಂದು ಟ್ವೀಟ್ ಒಂದೇ ದಿನದಲ್ಲಿ ಸೃಷ್ಟಿಸಿದ ಊಹಾಪೋಹ : ಚರ್ಚೆಯಾಗಿದ್ದು ಏನೇನು..?

ಭಾರತದ ಭವಿಷ್ಯದ ನಿಟ್ಟಿನಲ್ಲಿ ಬಹಳ ಪ್ರಯೋಜನಕಾರಿ ಎಂದು ಮೋದಿ ಸರ್ಕಾರ ಡಿಜಿಟಲ್ ಇಂಡಿಯಾ ಯೋಜನೆಯ ಮೂಲಕ ಅಂತರ್ಜಾಲದ ಸದ್ಬಳಕೆ ಬಗ್ಗೆ ಜಾಗೃತಿ ಕಾರ್ಯಕ್ರಮಗಳು, ಪ್ರತಿ ಹಳ್ಳಿಯಲ್ಲೂ 2020ರ ವೇಳೆಗೆ ಬ್ರಾಡ್ ಬ್ಯಾಂಡ್ ಕನೆಕ್ಷನ್ ಲಭ್ಯವಾಗುವಂತೆ ಮಾಡುವ ಗುರಿಯನ್ನು ಹೊಂದಿದೆ. ಹೀಗಿರುವಾಗ ಇದೇ ಸೋಮವಾರ ಮೋದಿ ಅವರು ಸೋಷಿಯಲ್​​ ಮೀಡಿಯಾದಿಂದ ಹೊರಬರುವುದಾಗಿ ಟ್ವೀಟ್​​ ಮಾಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಹೌದು… “ಫೇಸ್ ಬುಕ್, ಟ್ವಿಟರ್, ಇನ್​​ಸ್ಟಾಗ್ರಾಮ್ ಮತ್ತು ಯುಟ್ಯೂಬ್ ಸೇರಿದಂತೆ ನನ್ನೆಲ್ಲಾ ಖಾತೆಗಳನ್ನು ಭಾನುವಾರ ವೇಳೆ ಕೊನೆಗೊಳಿಸುವ ಬಗ್ಗೆ ಆಲೋಚಿಸುತ್ತಿದ್ದೇನೆ” ಎಂದು ಟ್ವೀಟ್​​ ಮಾಡಿದ್ದಾರೆ. ಮೋದಿ ನಿರ್ಣಯದಿಂದ ಅವರ ಅಭಿಮಾನಿಗಳು ನಿರಾಸೆಗೊಂಡಿದ್ದಾರೆ. ಹಾಗಾದ್ರೆ ಮೋದಿಜಿ ಭಾನುವಾರದಿಂದ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿಯುತ್ತಾರಾ..? ಈ ರೀತಿ ಟ್ವೀಟ್ ಮಾಡಲು ಕಾರಣವೇನು..? ವಿರೋಧ ಪಕ್ಷದ ನಾಯಕರ ಪ್ರತಿಕ್ರಿಯೆ ಏನು..? ಇಂತೆಲ್ಲಾ ವಿಚಾರಗಳ ಬಗ್ಗೆ ಭಾರೀ ಚರ್ಚೆ ನಡೆದಿವೆ.

ಮೋದಿ ದೇಶ ಕಂಡ ಪ್ರಭಾವಿ ನಾಯಕ. ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ವಿಶ್ವದ ಅಗ್ರಗಣ್ಯ ನಾಯಕ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಮೋದಿ ಅವರು ಟ್ವಿಟರ್‌ನಲ್ಲಿ 53.3 ದಶಲಕ್ಷ , ಫೇಸ್‌ಬುಕ್‌ನಲ್ಲಿ 44 ದಶಲಕ್ಷ ಮತ್ತು ಇನ್‌ಸ್ಟಾಗ್ರಾಂನಲ್ಲಿ 35.2 ದಶಲಕ್ಷ ಫಾಲೋವರ್‌ಗಗಳನ್ನು ಹೊಂದಿದ್ದಾರೆ. ಪ್ರಧಾನಿಯಾದ ಬಳಿಕ 2014ರಿಂದ ಈವರೆಗೆ ಅವರು ಒಂದು ಬಾರಿ ಕೂಡ ಸುದ್ದಿಗೋಷ್ಠಿ ನಡೆಸಿಲ್ಲ. ಆದಾಗ್ಯೂ ಅವರು ಸಾಮಾಜಿಕ ಜಾಲತಾಣಗಳ ಮೂಲಕ ಎಲ್ಲ ವಿಷಯಗಳನ್ನು ಹೇಳಿ, ನಿರಂತರ ಜನಸಂಪರ್ಕ ಸಾಧಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಸೋಷಿಯಲ್​​ ಮೀಡಿಯಾದಲ್ಲಿ ಯುವಕರೊಂದಿಗೆ ಭಾರೀ ಆಕ್ಟೀವ್​​ ಇದ್ದಾರೆ ಎಂಬುದಕ್ಕೆ ಇದುವೇ ಕೈಗನ್ನಡಿ. ಅಲ್ಲದೇ ಈ ಹೊಸ ದಾಖಲೆ ಮೋದಿ ಜನಪ್ರಿಯತೆಯನ್ನು ತೋರಿಸುತ್ತದೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಆದರೀಗ, ಹೀಗೆ ಜನರೊಂದಿಗೆ ಆ್ಯಕ್ಟೀವ್​​ ಆಗಿ ಬೆರೆಯಲು ಕೊಂಡಿಯಾಗಿದ್ದ ಸೋಷಿಯಲ್​ ಮೀಡಿಯಾದಿಂದಲೇ ಬರುತ್ತೇನೆ ಎಂದ ಮೋದಿ ಮಾತು ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ತುಸು ಕಷ್ಟವಾಗಿದೆ. ಅಷ್ಟಕ್ಕೂ ಮೋದಿ ಅವರು ಈ ರೀತಿ ಟ್ವೀಟ್ ಮಾಡಲು ಕಾರಣ ಏನು..?

ಪ್ರಧಾನಿ ಅವರ ಈ ನಿರ್ಣಯ ದೇಶದಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ನಿರ್ಬಂಧ ವಿಧಿಸುವ ಮುನ್ಸೂಚನೆ ಎಂದು ಹೇಳಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಿಂದ ಹೊರ ಬರುವ ನಿರ್ಣಯ ಕೈಗೊಂಡಿರುವ ಮೋದಿ ಈ ಮೂಲಕ ದೇಶಾದ್ಯಂತ ಸಾಮಾಜಿಕ ಜಾಲತಾಣಗಳ ಮೇಲೆ ನಿರ್ಬಂಧ ವಿಧಿಸುವ ಪರೋಕ್ಷ ಸಂದೇಶ ರವಾನಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಟ್ವೀಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ದ್ವೇಷ ಮಾತ್ರವಲ್ಲದೇ ಸ್ನೇಹ, ಸಹಬಾಳ್ವೆಯ ಸಂದೇಶಗಳನ್ನೂ ಕಳುಹಿಸಬಹುದು ಎಂದು ಅರಿತಿರುವ ಮೋದಿ, ತಮ್ಮ ರಾಜಕೀಯ ಅಜೆಂಡಾಗಳಿಗೆ ಅಡ್ಡಿಯನ್ನುಂಟು ಮಾಡುವ ಎಲ್ಲಾ ಪ್ರಯತ್ನಗಳಿಗೆ ತಡೆಯೊಡ್ಡಲು ಬಯಸಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಪುಷ್ಠಿಯಾಗಿ ಕೇಂದ್ರ ಸರ್ಕಾರ ಕೆಲವು ಸಾಮಾಜಿಕ ಜಾಲತಾಣಗಳ ನಡುವಿನ ಕಿತ್ತಾಟದ ಪ್ರಸಂಗಗಳು ಮತ್ತೆ ಮುನ್ನೆಲೆಗೆ ಬಂದಿವೆ. ಸರ್ಕಾರದ ನಿಯಮಗಳನ್ನು ಒಪ್ಪದ ಕೆಲವು ಸಾಮಾಜಿಕ ಜಾಲತಾಣಗಳೊಂದಿಗೆ ಮೋದಿ ಸರ್ಕಾರ ಈ ಹಿಂದೆ ಮುನಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಕಾರಣವನ್ನು ಕೆಲವರು ಒಪ್ಪಿದರೆ ಇನ್ನೂ ಕೆಲವರು ಇದಕ್ಕೆ ವಿರೋಧವನ್ನ ವ್ಯಕ್ತಪಡಿಸಿದ್ದಾರೆ.

 

ಮೋದಿಯವರು ಸಾಮಾಜಿಕ ಜಾಲತಾಣಗಳಿಂದ ದೂರ ಉಳಿಯುತ್ತೇನೆ ಎನ್ನುವುದರ ಹಿಂದಿರುವ ಮತ್ತೊಂದು ಕಾರಣ ಕೂಡ ಎಲ್ಲೆಡೆ ಹರಿದಾಡುತ್ತಿದೆ.  ಭಾನುವಾರ (ಮಾರ್ಚ್ 1) ದಿಲ್ಲಿಯಲ್ಲಿ ಗಲಭೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿಪರೀತ ವದಂತಿಗಳು ಹರಿದಾಡಿದ್ದವು. ಪರಿಣಾಮವಾಗಿ ಮತ್ತೊಮ್ಮೆ ಸಂಘರ್ಷ ಉಲ್ಬಣಿಸುವ ಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಬೇಸರಗೊಂಡಿರುವ ಪ್ರಧಾನಿಯವರು ಸಾಮಾಜಿಕ ಜಾಲತಾಣಗಳಿಂದ ನಿರ್ಗಮಿಸುವ ಯೋಚನೆ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಮೋದಿಜಿ ಸೋಷಿಯಲ್ ಮೀಡಿಯಾದಿಂದ ಹೊರಗುಳಿವ ಸಾಧ್ಯತೆ ಇದೆ. ಹಾಗಾದ್ರೆ ಮೋದಿ ಸೋಷಿಯಲ್ ಮೀಡಿಯಾದಿಂದ ಹೊರಗುಳಿವುದು ಸತ್ಯವೇ…?

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ರಾಜಕಾರಣಿಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಮುಖರು. ಅವರು ಒಂದು ಟ್ವೀಟ್, ಸ್ಟೇಟಸ್, ವಿಡಿಯೊ ಹಾಕಿದರೆ ಸಾಕು ಕೆಲವೇ ನಿಮಿಷಗಳಲ್ಲಿ ಸಾಕಷ್ಟು ವೈರಲ್ ಆಗುತ್ತದೆ. ಹೀಗಿರುವಾಗ ಈ ಒಂದು ಹೇಳಿಕೆ ಪ್ರಚಾರದ ತಂತ್ರ ಎನ್ನಲಾಗುತ್ತಿದೆ. ಹೀಗಾಗಿ ಮೋದಿ ಸಾಮಾಜಿಕ ಜಾಲತಾಣಗಳಿಮದ ದೂರ ಉಳಿಯುವುದು ಸತ್ಯಕ್ಕೆ ದೂರವಾದದ್ದು ಎನ್ನುವುದು ರಾಹುಲ್ ಗಾಂಧಿ ಅವರ ಅಭಿಪ್ರಾಯ.

ಮತ್ತೊಂದು ವಿಚಾರ ಅಂದ್ರೆ, ಟ್ವಿಪ್ಲೊಮಸಿ ಅಂತರಾಷ್ಟ್ರೀಯ ಸಂಸ್ಥೆಗಳು ಮತ್ತು ಸರ್ಕಾರಗಳಿಗೆ ಡಿಜಿಟಲ್ ತಂತ್ರಜ್ಞಾನ ಮತ್ತು ಅವುಗಳ ನಿರ್ವಹಣೆ ಹಾಗೂ ಅಭಿವೃದ್ಧಿ ಬಗ್ಗೆ ಸಲಹೆ ನೀಡುವ ಸಂಸ್ಥೆ ಪ್ರಕಾರ, ಮೋದಿ ಹೊಂದಿದ ಅತಿಹೆಚ್ಚು ಮಂದಿ ಅಭಿಮಾನಿಗಳ ಪೈಕಿ ಶೇ.60 ನಕಲಿ ಖಾತೆಗಳು ಎಂದು ವರದಿಯಾಗಿದೆ.

https://twitter.com/Twiplomacy/status/966226775683534848

ಇನ್ನೂ ಪ್ರಧಾನಿ ಮೋದಿ ಟ್ವೀಟ್‌ಗೆ ಹಲವರು ವ್ಯಂಗ್ಯಭರಿತ ಪ್ರತಿಕ್ರಿಯೆ ನೀಡಿದ್ದಾರೆ. ನೀವು ಬಿಡಬೇಕಾಗಿರುವುದು ಸ್ವೇಷ, ಅಸೂಯೆಯನ್ನೇ ವಿನಾ ಸಾಮಾಜಿಕ ಜಾಲತಾಣವನ್ನಲ್ಲ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಟಾಂಗ್‌ ನೀಡಿದ್ದಾರೆ. ಇನ್ನು, ನೀವು ಮಾತ್ರವಲ್ಲ ನಿಂದನೆ, ಬೆದರಿಕೆಗೆ ಇಳಿದಿರುವ ನಿಮ್ಮ ಬೆಂಬಲಿಗರ ಸೇನೆಗೂ ಉಪದೇಶ ನೀಡಿ ಎಂದು ರಣದೀಪ್‌ ಸುರ್ಜೇವಾಲಾ ಟ್ವೀಟ್‌ ಮಾಡಿದ್ದಾರೆ.

ಪ್ರಧಾನಿ ಮೋದಿ ಮಾಡಿದ ಟ್ವೀಟ್ ಬಗ್ಗೆ ಮಾತನಾಡಿದ ಮಹಾರಾಷ್ರ್ಟ ಸಚಿವ ಹಾಗೂ ಎನ್​ಸಿಪಿ ವಕ್ತಾರ ನವಾಬ್ ಮಲ್ಲಿಕ್ ಅವರು, ಮೋದಿ ಸಾಮಾಜಿಕ ಜಾಲತಾಣಗಳಿಂದ ದೂರವಿರುವ ಬಗ್ಗೆ ನಿನ್ನೆ ಸುಳಿವು ನೀಡಿದ್ದಾರೆ. ಅವರ ಜೊತೆ ಕೆಲ ಮಂತ್ರಿಗಳು ಸಹ ಸಾಮಾಜಿಕ ಜಾಲತಾಣವನ್ನು ತೊರೆಯುವ ಯೋಚನೆಯಲ್ಲಿದ್ದಾರೆ. ಇದನ್ನೇ ಎಲ್ಲಾ ಮೋದಿ ಭಕ್ತರು ಸಹ ಅನುಸರಿಸಿದರೆ ದೇಶ ನೆಮ್ಮದಿಯಿಂದ ಇರುತ್ತದೆ ಎಂದು ಹೇಳಿದ್ದಾರೆ. ಅಲ್ಲದೆ ಮೋದಿ ಅವರ ಈ ನಿರ್ಧಾರ ದೇಶಕ್ಕೆ ಹಿತವಾಗಿರುತ್ತದೆ. ಇದನ್ನು ನಾವು ಸ್ವಾಗತಿಸುತ್ತೇವೆ ಎಂದು ಟ್ವಟ್ಟರ್​ನಲ್ಲಿ “ModiQuitsSocialMedia” ಎಂಬ ಹ್ಯಾಶ್ ಟ್ಯಾಗ್ ಬಳಸಿ ಹಾಕಿದ್ದಾರೆ.

ಇನ್ನೂ ಫೇಸ್ ಬುಕ್ ಸಿಇಒ ಮಾರ್ಕ್ ಝುಕರ್ ಬರ್ಗ್ ಒಮ್ಮೆ ಪ್ರಧಾನಿ ಮೋದಿಯವರು ಸೋಷಿಯಲ್ ಮೀಡಿಯಾ ಮೇಲಿನ ಒಲವನ್ನು ಕಂಡು ಸಂತಸಗೊಂಡಿರೋದಿದೆ. ಹೀಗಿರುವ ಮೋದಿಯವರು ಸೋಷಿಯಲ್ ಮೀಡಿಯಾಗಳಿಂದ ಹೊರಬರುತ್ತೇನೆ ಎಂದು ಹೇಳಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಮೋದಿಯವರು ಏನೋ ಇದರಲ್ಲಿ ಟ್ವಿಸ್ಟ್ ಕೊಡಲಿದ್ದಾರೆ ಎಂದೇ ಮಾತನಾಡಿಕೊಳ್ಳುತ್ತಿದ್ದಾರೆ.

ಜೊತೆಗೆ ನಿರ್ಧಾರ ಬದಲಿಸುವಂತೆ ಒತ್ತಾಯಿಸಿ ‘ನೋ ಸಾರ್‌’ ಹ್ಯಾಶ್‌ಟ್ಯಾಗ್‌ ಸೋಮವಾರ ರಾತ್ರಿಯಿಂದಲೇ ಟ್ರೆಂಡಿಂಗ್‌ ಆಗುತ್ತಿದೆ. ಇದರ ಜತೆಗೆ ‘ಮೋದೀಜಿ’, ‘ನರೇಂದ್ರ ಮೋದಿ’ ಹ್ಯಾಶ್‌ಟ್ಯಾಗ್‌ಗಳು ಕೂಡ ಭಾರೀ ಟ್ರೆಂಡಿಂಗ್‌ ಆದವು. ಅಲ್ಲದೆ, ‘ನೋ ಮೋದಿ ನೋ ಟ್ವಿಟ್ಟರ್’ ಎಂಬ ಹ್ಯಾಶ್‌ಟ್ಯಾಗ್‌ ಕೂಡ ಟ್ರೆಂಡಿಂಗ್‌ ಆಗುತ್ತಿದೆ.

ಭಾರತೀಯ ಇತಿಹಾಸ, ಸಂಸ್ಕೃತಿ, ಮೌಲ್ಯ ಮತ್ತು ನಾಗರಿಕತೆಗೆ ಧಕ್ಕೆ ಉಂಟು ಮಾಡಲು ಯತ್ನಿಸುವ ದುಷ್ಟಶಕ್ತಿಗಳನ್ನು ಮಟ್ಟಹಾಕುವ ದೃಷ್ಟಿಯಿಂದ ನಿಮ್ಮ ಸಾಮಾಜಿಕ ಜಾಲತಾಣಗಳ ಹಾಜರಿ ಅತಿಮುಖ್ಯ ಎನಿಸಿದೆ. ಆ ಮೂಲಕ ನೀವು ಕೋಟ್ಯಂತರ ದೇಶಪ್ರೇಮಿ ಭಾರತೀಯರ ಧ್ವನಿ ಆಗಿದ್ದೀರಿ. ಈಗ ಅದರಿಂದ ದೂರ ಸರಿಯುವುದು ಸರಿಯಲ್ಲ. ದಯವಿಟ್ಟು ನಿರ್ಧಾರ ಬದಲಿಸಿ ಎಂದು ಹಲವರು ಟ್ವೀಟ್‌ ಮಾಡಿದ್ದಾರೆ.

ಇಂತೆಲ್ಲಾ ಊಹಾಪೋಹಗಳು ಬೆಳಕಿಗೆ ಬರುತ್ತಿದ್ದಂತೆ ಇಂದು ಮೋದಿ ಇದಕ್ಕೆಲ್ಲ ಸ್ಪಷ್ಟನೆ ನೀಡಿದ್ದಾರೆ. ಹೌದು… ಪ್ರಧಾನಿ ಮೋದಿ ಅವರ ನಿನ್ನೆಯ ಟ್ವೀಟ್ ನ ಅಸಲಿಯತ್ತು ಇಂದು ಬಯಲಾಗಿದೆ. ಮಾರ್ಚ್ 8 ಭಾನುವಾರ ಮಹಿಳಾ ದಿನ, ಈ ದಿನದಂದು ಮೋದಿ ಅವರು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳ ನಿರ್ವಹಣೆಯನ್ನು ಒಂದು ದಿನದ ಮಟ್ಟಿಗೆ ಮಹಿಳೆಯರ ಸುಪರ್ದಿಗೆ ನೀಡುತ್ತಿದ್ದಾರೆ.

ಆದರೆ ತನ್ನ ಖಾತೆಯನ್ನು ನಿಭಾಯಿಸುವ ಮಹಿಳೆಯನ್ನು ಸೂಚಿಸುವ ಜವಾಬ್ದಾರಿಯನ್ನು ಅವರು ದೇಶವಾಸಿಗಳಿಗೆ ನೀಡಿದ್ದಾರೆ. ಅದು ಹೇಗೆನ್ನುವ ಮಾಹಿತಿ ಇಲ್ಲಿದೆ.

ಪ್ರಧಾನಿ ಮೋದಿ ಅವರು ನಡೆಸಲು ಉದ್ದೇಶಿಸಿರುವ ಒಂದು ಅಭಿಯಾನದ ಭಾಗ ಇದಾಗಿದ್ದು #SheInspiresUs ಎಂಬ ಹ್ಯಾಷ್ ಟ್ಯಾಗ್ ನಡಿಯಲ್ಲಿ ಈ ಅಭಿಯಾನ ನಡೆಯುತ್ತದೆ. ನಮ್ಮ ಜೀವನದಲ್ಲಿ ಮಹತ್ವದ ಪಾತ್ರವನ್ನು ವಹಿಸುವ ಮಹಿಳೆಯರನ್ನು ಗೌರವಿಸುವ ಉದ್ದೇಶವನ್ನು ಈ ಅಭಿಯಾನವು ಹೊಂದಿದೆ.

ಒಟ್ಟಿನಲ್ಲಿ ಮೋದಿ ಅವರು ಮಾಡಿದ ಒಂದೇ ಒಂದು ಟ್ವೀಟ್ ಒಂದೇ ದಿನದಲ್ಲಿ ಇಷ್ಟೆಲ್ಲಾ ಚರ್ಚೆಗೆ ಗ್ರಾಸವಾಗಿ ಕೊನೆಗೆ ಸ್ಪಷ್ಟನೆ ಸಿಕ್ಕಿದ್ದು ಮೋದಿ ಅಭಿಮಾನಿಗಳಲ್ಲಿ ಸಂತಸ ತಂದಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights