ನಿಮಾನ್ಸ್ ಆಸ್ಪತ್ರೆ, ಪೊಲೀಸ್ ಠಾಣೆ ಸೇರಿದಂತೆ ಬೆಂಗಳೂರಿನೆಲ್ಲೆಡೆ ಕೊರೊನಾ ಆಕ್ರಮಣ; ಹೈ ಅಲರ್ಟ್
ಲಾಕ್‌ಡೌನ್ ನಂತರದಲ್ಲಿ ಕೊರೊನಾ ವೈರಸ್ ಬೆಂಗಳೂರಿನಲ್ಲಿ ತಾಂಡವವಾಡುತ್ತಿದೆ. ನಿನ್ನೆ ಒಂದೇ ದಿನ 196 ಪ್ರಕರಣಗಳು ದಾಖಲಾಗಿದ್ದು, 15 ಪೊಲೀಸ್ ಸಿಬ್ಬಂದಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಓರ್ವ ಎಎಸ್ಐ ಕೊರೋನಾಗೆ ಬಲಿಯಾಗಿದ್ದಾರೆ.
ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಈ ಹಿಂದೆ 9 ಮಂದಿ ಪೊಲೀಸರಿಗೆ ಪಾಸಿಟಿವ್ ಬಂದಿತ್ತು. ನಿನ್ನೆ ಮತ್ತೆ 15 ಮಂದಿಗೆ ಪಾಸಿಟಿವ್ ದೃಢವಾಗಿದ್ದು ಒಂದೇ ಠಾಣೆಯಲ್ಲಿ ಒಟ್ಟು 24 ಜನ ಪೊಲೀಸರಿಗೆ ಪಾಸಿಟಿವ್ ಕಾಣಿಸಿಕೊಂಡಿದೆ. ಓರ್ವ ಸಬ್ ಇನ್ಸ್‌ಪೆಕ್ಟರ್, ಇಬ್ಬರು ಎಎಸ್ಐಗಳು ಮತ್ತು ಹಲವು ಕಾನ್ಸ್‌ಟೇಬಲ್ ಗಳು ಸೋಂಕಿಗೆ ಗುರಿಯಾಗಿದ್ದಾರೆ.

ಅಲ್ಲದೆ, ಕಳೆದ ವಾರ ವಿಲ್ಸನ್ ಗಾರ್ಡನ್ ಗಾರ್ಡನ್ ಟ್ರಾಫಿಕ್ ಪೊಲೀಸ್ ಠಾಣೆಯ ಎಎಸ್ಐ ಅಧಿಕಾರಿಗೆ ಕೊರೊನಾ ದೃಢಪಟ್ಟಿದ್ದು, ನಿನ್ನೆ ಬೆಳಗ್ಗೆ ಅವರು ಸಾವನ್ನಪ್ಪಿದ್ದಾರೆ.
ಇದಲ್ಲದೆ, ಕೊರೊನಾ ಸೋಂಕು ನಿಮ್ಹಾನ್ಸ್ ಆಸ್ಪತ್ರೆಯಲ್ಲೂ ಪತ್ತೆಯಾಗಿದೆ. ಮೂಲಗಳ ಪ್ರಕಾರ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಓರ್ವ ಮಾನಸಿಕ ಅಸ್ವಸ್ಥ ರೋಗಿಯಲ್ಲಿ ವೈರಸ್ ಕಾಣಿಸಿಕೊಂಡಿದೆ. ಈ ರೋಗಿಯ ಸಂಪರ್ಕದಲ್ಲಿದ್ದ ನಾಲ್ವರನ್ನು ಕೂಡಲೇ ಕ್ವಾರಂಟೈನ್ ಮಾಡಲಾಗಿದ್ದು, ಆಸ್ಪತ್ರೆಯ ಐಸಿಯು ವಾರ್ಡ್ ಅನ್ನು ಸ್ಥಗಿತಗೊಳಿಸಲಾಗಿದೆ. ಅಲ್ಲದೆ ಸೋಂಕಿತರನ್ನು ವಿಕ್ಟೋರಿಯಾ ಅಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಪ್ರಕರಣವೂ ಸೇರಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿಯೇ ಒಟ್ಟು 8 ಜನರಿಗೆ ಸೋಂಕು ದೃಢಪಟ್ಟಿದೆ.
ಆಸ್ಪತ್ರೆಯ ಐಸಿಯು ವಾರ್ಡ್ ಅನ್ನು ಸ್ಥಗಿತಗೊಳಿಸಲಾಗಿರುವುದರಿಂದ, ಐಸಿಯು ವಾರ್ಡ್ ನಲ್ಲಿದ್ದ 20 ರೋಗಿಗಳನ್ನ ಪಕ್ಕದ ಬಿಲ್ಡಿಂಗ್‍ಗೆ ಶಿಫ್ಟ್ ಮಾಡಲಾಗಿದ್ದು, ಎಂದಿನಂತೆ ಚಿಕಿತ್ಸೆ ನೀಡಲಾಗುತ್ತಿದೆ.

ಆಸ್ಪತ್ರೆಗೆ ಬರುವ ಪ್ರತಿಯೊಬ್ಬ ರೋಗಿಗಳಿಗೆ ಸ್ವಾಬ್ ಟೆಸ್ಟ್ ನಡೆಸಲಾಗುತ್ತಿದ್ದು, ರೋಗಿಗಳ ಕಂಪ್ಲೀಟ್ ಮಾಹಿತಿಯನ್ನ ಟ್ರೇಸ್ ಮಾಡಿ ಚಿಕಿತ್ಸೆ ನೀಡಲು ನಿರ್ಧರಿಸಿದ್ದಾರೆ. ಆಸ್ಪತ್ರೆಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸಾಮಾಜಿಕ ಅಂತರ ಸೇರಿದಂತೆ ಕಡ್ಡಾಯ ನಿಯಮಗಳನ್ನು ತಪ್ಪದೇ ಪಾಲನೆ ಮಾಡಲಾಗುತ್ತಿದೆ.
ಕಲಾಸಿಪಾಳ್ಯ ಪೊಲೀಸ್ ಠಾಣೆ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಚಿಕ್ಕಪೇಟೆ ಹಾಗೂ ಕೆ.ಆರ್.ಮಾರ್ಕೆಟ್‌ನಲ್ಲಿನ ಚಟುವಟಿಕೆಗಳ ಮೇಲೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ.
ಅಲ್ಲದೆ, ಲಾಕ್‌ಡೌನ್ ಸಡಿಲಗೊಳಿಸಿದ ನಂತರ , ಬಿಎಂಟಿಸಿ ಬಸ್‌ಗಳ ಸಂಚಾರವನ್ನು ಆರಂಭಿಸಲಾಗಿದ್ದು, ವೊಲ್ವೋ ಬಸ್‌ಗಳನ್ನೂ ಓಡಿಸುವ ನಿರ್ಧಾರಕ್ಕೆ ಬಿಎಂಟಿಸಿ ಮುಂದಾಗಿತ್ತು. ಆದರೆ, ಕೊರೊನಾ ಸೋಂಕಿನ ಹರಡುವಿಕೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ವೊಲ್ವೊಬಸ್‌ಗಳನ್ನು ಓಡಿಸದಿರಲು ನಿರ್ಧರಿಸಲಾಗಿದೆ.

