ಹಳ್ಳಿಹಕ್ಕಿಯ ಮುಗಿಯದ ಪೀಕಲಾಟ; ನಾಮನಿರ್ದೇಶನಕ್ಕೆ ದಂಬಾಲು ಬಿದ್ದ ವಿಶ್ವನಾಥ್‌!

ಕರ್ನಾಟಕ ರಾಜಕೀಯದಲ್ಲಿ ಹಳ್ಳಿಹಕ್ಕಿ ವಿಶ್ವನಾಥ್‌ ಗೂಳು ಕೇಳುವವರಿಲ್ಲದಂತಾಗಿದೆ.ಮುಖ್ಯಮಂತ್ರಿ ಯಡಿಯೂರಪ್ಪನವರು ನೀಡಿದ್ದ ಆಮಿಶಕ್ಕೆ ಮರುಳಾಗಿ, ಜೆಡಿಎಸ್‌ ಅಧ್ಯಕ್ಷ ಸ್ಥಾನವನ್ನೂ, ಜೆಡಿಎಸ್‌ ಪಕ್ಷವನ್ನೂ ತೊರೆದು ಬಿಜೆಪಿಗೆ ಹಾರಿಬಂದಿದ್ದ ವಿಶ್ವನಾಥ್‌ಗೆ ಬಿಜೆಪಿ ಹೈಕಮಾಂಡ್‌ ಕವಡೆ ಕಾಸಿನ ಕಿಮ್ಮತ್ತೂ ಕೊಡುತ್ತಿಲ್ಲ.

ಸದ್ಯ, ಶಾಸನಸಭೆಯಿಂದ ವಿಧಾನ ಪರಿಷತ್‌ಗೆ ಬಿಜೆಪಿಯ ಅಭ್ಯರ್ಥಿಗಳ ಆಯ್ಕೆ ಮುಗಿದಿದ್ದು, ಅಭ್ಯರ್ಥಿಗಳ ಪಟ್ಟಿಯಲ್ಲಿ ವಿಶ್ವನಾಥ್‌ಗೆ ಜಾಗ ಕೊಟ್ಟಿಲ್ಲ. ಇನ್ನು ನಾಮ ನಿರ್ದೇಶಿತ ಸದಸ್ಯರ ಆಯ್ಕೆ ಬಾಕಿ ಉಳಿದಿದ್ದು, ಅದೂ ಕೂಡ ತಿಂಗಳ ಕೊನೆಯಲ್ಲಿ ಮುಗಿಯಲಿದೆ.

ತಮ್ಮನ್ನು ಪರಿಷತ್ ಗೆ ನಾಮ ನಿರ್ದೇಶನ ಮಾಡುವಂತೆ ಎಚ್ ವಿಶ್ವನಾಥ್, ಸಿಎಂ ಯಡಿಯೂರಪ್ಪ ಅವರಿಗೆ ಒತ್ತಡ ಹಾಕುತ್ತಿದ್ದಾರೆ. ಮೊದಲ ಆಯ್ಕೆ ಪಟ್ಟಿಯ ನಾಲ್ಕು ಮಂದಿಯಲ್ಲಿ ತಮ್ಮ ಹೆಸರು ಇರಲಿದೆ ಎಂದು ಎಚ್ ವಿಶ್ವನಾಥ್ ಹೇಳಿಕೊಂಡಿದ್ದಾರೆ.

ನಾಮನಿರ್ದೇಶನದ ಆಕಾಂಕ್ಷಿಗಳಲ್ಲಿ, ರಾಜ್ಯ ಬಿಜೆಪಿ  ಉಪಾಧ್ಯಕ್ಷ, ಮಾಜಿ ಶಾಸಕ ನಿರ್ಮಲ್ ಕುಮಾರ್ ಸುರಾನಾ ಕೂಡ ಪ್ರಬಲ ಆಕಾಂಕ್ಷಿಯಾಗಿದ್ದು,  ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗಿಂತ ಹೆಚ್ಚು ಸಕ್ರಿಯವಾಗಿ ಪಕ್ಷದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇವರ ಜೊತೆಗೆ ಮಾಜಿ ಎಂಎಲ್ ಸಿ ಗೋ ಮಧುಸೂದನ್ ಕೂಡ ಪರಿಷತ್ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಆದರೆ ಮಧುಸೂದನ್ ಯಡಿಯೂರಪ್ಪ ವಿರೋಧಿ ಗುಂಪಿನಲ್ಲಿ ಸೇರಿಕೊಂಡಿರುವುದರಿಂದ ಅವರ ಆಯ್ಕೆ ಕಷ್ಟವಾಗಿದೆ ಎಂದು ಹೇಳಲಾಗುತ್ತಿದೆ.

ಅಲ್ಲದೆ, ಪ್ರಬಲ ನಾಯಕ ಎನಿಸಿಕೊಂಡಿರುವ ಹಾಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಳಿಸಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ  ಸಿಪಿ ಯೋಗೇಶ್ವರ್ ಕೂಡ ಎಂಎಲ್ ಸಿ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.

ಇವರೆಲ್ಲರ ನಡುವೆ, ನಾಮನಿದೇರ್ಶನಕ್ಕೆ ದಂಬಾಲು ಬಿದ್ದಿರುವ ವಿಶ್ವನಾಥ್‌, ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಕಾಡುತ್ತಿದ್ದಾರೆ. ಆದರೆ, ಯಡಿಯೂರಪ್ಪನವರ ಕಿಮ್ಮತ್ತಿಗೆ ಬಗ್ಗದ ಬಿಜೆಪಿ ಹೈಕಮಾಂಡ್‌ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಯಡಿಯೂರಪ್ಪನವರ ಮಾತಿಗೆ ಮಣೆ ಹಾಕುತ್ತಿಲ್ಲ. ಅದರಲ್ಲೂ, ರಾಜ್ಯಸಭಾ ಮತ್ತು ವಿಧಾನ ಪರಿಷತ್‌ ಅಭ್ಯರ್ಥಿಗಳ ಆಯ್ಕೆಯಲ್ಲಿ ಯಡಿಯೂರಪ್ಪನವರಿಗೆ ಹೈಕಮಾಂಡ್‌ ಉಲ್ಟಾ ಹೊಡೆದಿದೆ.

ಒಟ್ಟಾರೆ ಹಳ್ಳಿಹಕ್ಕಿಗೆ ಕಾಳನ್ನಾಕಲು ಬಿಜೆಪಿ ಹೈಕಮಾಂಡ್‌ ಹಿಂದೇಟು ಹಾಕುತ್ತಿದ್ದು, ಹಳ್ಳಿಪುಕ್ಕ ಮುದಿಡಿಕೊಂಡು ಕೂರುವ ಸ್ಥಿತಿ ಎದುರಾಗಿದೆ.

ಸದ್ಯ, ನಾಮನಿರ್ದೇಶಕ್ಕೆ ಬಿಜೆಪಿ ಯಾರನ್ನೂ ಸೂಚಿಸುತ್ತದೆ ಕಾದು ನೋಡಬೇಕು.


ಇದನ್ನೂ ಓದಿ: ಹಳ್ಳಿಹಕ್ಕಿಯ ಪುಕ್ಕ ಕಿತ್ತ ಬಿಜೆಪಿ; ವಿಶ್ವನಾಥ್ ‌ಪಾಲಿಗೆ ಮುಳ್ಳಾಯಿತಾ ಹೈಕಮಾಂಡ್!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights