ನಿಸಾರ್ ಅಹಮದ್ ಅವರಿಗೆ ನುಡಿ ಶ್ರದ್ಧಾಂಜಲಿ – ಪ್ರೊ. ಎಂ. ಎಸ್. ರಘುನಾಥ್

ಕಳೆದ ವಾರ ನಮ್ಮನ್ನಗಲಿದ ಕವಿ ಕೆ. ಎಸ್. ನಿಸಾರ್ ಅಹಮದ್ ಅವರನ್ನು ಕೇವಲ ನಿತ್ಯೋತ್ಸವ ಕವಿ ಎಂದು ಕರೆಯುವುದು ಅವರ ಕಾವ್ಯವನ್ನು ಒಂದು ಮುಷ್ಟಿಯಲ್ಲಿ ಹಿಡಿದು ಹಾಕಿದಂತೆ ಎಂದೇ ನನ್ನ ಭಾವನೆ. ಆ ಶಬ್ದವೇ ಅಷ್ಟರ ಮಟ್ಟಿಗೆ ಚೇತೋಹಾರಿಯಾಗಿ ರಮ್ಯ ರಮಣೀಯತೆಯನ್ನೂ ನಿತ್ಯ ಸೌಂದರ್ಯವನ್ನೂ ಪ್ರತಿಬಿಂಬಿಸುವ ಶಬ್ಧವಾಗಿ ಉಳಿಯಿತು. ನಿಸಾರರ ಕಾವ್ಯದಲ್ಲಿ ಕೇವಲ ನಿತ್ಯೋತ್ಸವ ಮಾತ್ರವಲ್ಲ, ನಿತ್ಯ ವಿಷಾದವೂ ಇದೆ, ನೋವೂ ಇದೆ. ಅವರ “ನಿಮ್ಮೊಡನಿದ್ದೂ ನಿಮ್ಮಂತಾಗದೆ” ಕವನದಲ್ಲಿ ವ್ಯಗ್ರತೆ, ವಿಷಾದ ಪ್ರಧಾನವಾಗಿದೆ.

“ನಿಮ್ಮ ಮಾತು ಕತೆಗಳಲ್ಲಿ ಹುದುಗಿದ ಬೆಕ್ಕು ಸಂಶಯದ ಪಂಜವೆತ್ತಿ

ನನ್ನ ನಂಬಿಕೆ ನೀಯತ್ತು ಹಕ್ಕು

ಕೊನೆಗೆ ಸಾಚಾತನವನ್ನು ಪರಚಿ, ಒತ್ತಿ

ನೋವಿಗೆ ಕಣ್ಣು ತುಂಬಿದ್ದರೂ

ಚೆಲ್ಲಿದ ರಕ್ತದಲ್ಲಿ ರಾಷ್ಟ್ರೀಯತೆಯ ಧಾತುಗಳ

ನನ್ನೆದುರಿನಲ್ಲೇ ತನಿಖೆ ಮಾಡುವ ಕ್ಷಣವನ್ನು

ಹುಸಿ ನಗುತ್ತ ಎದುರಿಸುವುದಿದೆಯಲ್ಲ

ಅದು ಬಲು ಕಷ್ಷದ ಕೆಲಸ.”

ಈ ಕವಿತೆಯಲ್ಲಿ ಹೇಳಿರುವಂತೆ, ಜಾತಿ ಧರ್ಮ ಆಧಾರಿತ ತಾರತಮ್ಯ ನೀತಿಯನ್ನು ಖಂಡಿಸುತ್ತದೆ ಅಷ್ಟೇ ಅಲ್ಲ, ಕವನದ ನಾಯಕನ ನೋವು ಒಂದು ಸಮುದಾಯದ ನೋವಿನ ದನಿಯೂ ಆಗಿ ನಮ್ಮ ಮನಸ್ಸನ್ನು ಆರ್ದಗೊಳಿಸುತ್ತದೆ. ಈ ಕವನದಲ್ಲಿ ಬರುವ ನಾನು ಯಾರು ಎಂಬುದರ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಈ ಕವಿತೆಯಲ್ಲಿ ಬರುವ ನಾನು ನಿಸಾರರಲ್ಲ ಎಂದು ನಿಸಾರ್ ಅವರೇ ಹೇಳಿದ್ದಾರೆ. ಹಾಗಾಗಿ, ಈ ಕವನದ ನಿರೂಪಕನು, ಈ ನೆಲದಲ್ಲೇ ಬೇರೊತ್ತಿದರೂ, ಪರಕೀಯ ಭಾವದಿಂದ ನರಳುವ ಸ್ಥಿತಿ ನಿರ್ಮಾಣವಾಗಿರುವುದು, ಆತಂಕದ ಸಂಗತಿಯಾಗಿದೆ ಎಂಬ ಟಿ.ಪಿ ಅಶೋಕ್ ಅವರ ಅಭಿಪ್ರಾಯ ಸಮಂಜಸವಾಗಿದೆ.

ನಿಸಾರರ ಕವಿತೆಯ ಸಾಲುಗಳಲ್ಲಿ ಕಾಣುವ ಸಂಕಟ ಅಕ್ಷರಗಳನ್ನು ಮೀರಿದ್ದು. ಅಂತಕರಣಕ್ಕೆ ಸಂಬಂಧಿಸಿದ್ದು. ‘ಕಲಕಿದ ಅಂತಹ್ಕರಣ ಅನ್ನಿಸುತ್ತದೆ’ ಎಂಬ ಬರಗೂರರ ಹೇಳಿಕೆ ಮಾರ್ಮಿಕವಾಗಿದೆ.

ಕವಿ ಬಯಸುವ ಸದೂರತೆ ಸಂಶಯಕ್ಕೆ ಎಡೆಕೊಡುವ ನೋವು ಇಲ್ಲಿ ಸ್ಪಷ್ಟವಾಗಿ ಧ್ವನಿಸುತ್ತದೆ. “ರಾಷ್ಟ್ರೀಯ ಧಾತುಗಳ ಪ್ರಯೋಗ ಧ್ವನಿಸುವ ಮುಖ್ಯವಾಹಿನಿಯೊಂದಿಗಿನ ಬಾಂಧವ್ಯ, ಕವಿಯ ಕಾವ್ಯಕ್ಕೂ ಅನ್ವಯಿಸುತ್ತದೆ” ಎಂಬ ಜಿ ಎನ್ ರಂಗನಾಥ ರಾವ್ ಅವರ ಮಾತುಗಳನ್ನು ಉಲ್ಲೇಖಿಸಬಹುದಾಗಿದೆ.

ಹಾಗೆ ನೋಡಿದರೆ, ನಿಸಾರರ ಕಾವ್ಯ ದಲ್ಲಿ ಕಾಣುವುದು, ಕೇವಲ ಸುಕೋಮಲತೆ ಮಾತ್ರವಲ್ಲ, ‘ನನ್ನ ನುಡಿ’ ಕವಿತೆಯಲ್ಲಿ ಹೇಳಿರುವಂತೆ, ‘ಮಾನವ ಕೋಟಿಯ ಮೂಕ ಸಂಕಟಕೆ ಮಾತಿನ ಪ್ರತಿನಿಧಿ ನನ್ನ ನುಡಿ, ನಿರ್ಬಲ ಸಾಹಸ ವಿಹೀನ ಬದುಕಿಗೆ ಅಭಯದ ಗುಡಿ ಈ ನನ್ನ ನುಡಿ’ ಎಂಬುದೂ ತಿಳಿಯುತ್ತದೆ. ಕೊನೆಯಲ್ಲಿ ‘ಇದು ಸಿಡಿಲಿನ ನುಡಿ, ಇದು ಮಡಿಯದ ನುಡಿ’ ಎಂದೂ ಹೇಳುತ್ತಾರೆ. ಇದಕ್ಕೆ ಉದಾಹರಣೆಯಾಗಿ ‘ಸವತಿ ಮಕ್ಕಳ ಹಾಗೆ’ ಕವಿತೆ ಯನ್ನು ನೋಡಬಹುದು. ‘ಧರ್ಮಾಂಧ ಧೂರ್ತರ ಎಡಗೈಯ ತುತ್ತಿಗೆ ಕೊಬ್ಬಿರುವ ಮನೆ ಮುರುಕ ಮಂದಿಯ ಕತ್ತಿಗೆ

ಒರೆಯಾಗಿ ಇಹರಿವರು ಒಳಗೊಳಗೆ ಮೆತ್ತಗೆ’ ಎಂಬಲ್ಲಿ ನಾವು ಕಾಣುವುದು “ಸಂಕಟದ ಸಂವೇದನೆ, ಪ್ರತಿರೋಧಾತ್ಮಕ ನಿವೇದನೆ” ನಂತರ ಕವಿ ಹೇಳುತ್ತಾರೆ, ಯಾರು ಏನೇ ಹೇಳಲಿ,”ಬೆಳಕು ಕಂಡೆವು ಇಲ್ಲೆ, ಬಾಡಿ ಬೀಳುವೆವಿಲ್ಲೆ, ಏನಾಟ ನಡೆದರೂ ನಿನ್ನಡಿಯ ಗಡಿಯಲ್ಲೇ” ಈ ಕವಿತೆಯಲ್ಲಿ ನೋವಿನ ನಿಷ್ಠುರತೆ ಇರುವುದನ್ನು ಗಮನಿಸ ಬೇಕು. ಈ ಕಾರಣದಿಂದಲೇ, ಈ ಕವಿತೆ ಬಹಳ ಮಹತ್ವದ್ದೆನಿಸುತ್ತದೆ.

ನಿಸಾರರ ಕಾವ್ಯದಲ್ಲಿ ಏನನ್ನು ಕಾಣಲು ಸಾಧ್ಯವಿಲ್ಲ? ಪರಕೀಯತೆ, ಮೂಲಭೂತವಾದದ ವಿರುದ್ಧ ಪ್ರತಿಭಟನೆ, ಧರ್ಮಾಂಧತೆಯ ಪ್ರತಿರೋಧ,  ಆಧುನಿಕತೆ – ಪರಂಪರೆ,  ಧರ್ಮ ನಿರಪೇಕ್ಷ ನೆಲೆಯ ಸಾಂಸ್ಕೃತಿಕ ಸಮನ್ವಯ ಈ ಎಲ್ಲವೂ ನಿಸಾರರ ಬರವಣಿಗೆಯಲ್ಲಿ ಅಭಿವ್ಯಕ್ತಿಗೊಂಡಿದೆ.

ಎರಡು ಭಾಷೆ, ಎರಡು ಧರ್ಮಗಳ ನಡುವಿನ ಮಧ್ಯೆ ನಿಂತು ಬರೆದ ನಿಸಾರ್ ಅಹಮದ್ ಅವರು ತಾವೇ ಹೇಳಿದಂತೆ ಅದೊಂದು ರೀತಿಯ ಹಗ್ಗದ ಮೇಲಿನ ನಡಿಗೆಯನ್ನು ಸಮರ್ಥವಾಗಿಯೇ ಮಾಡಿದರು ಎಂದು ಹೇಳಬಹುದೇನೋ. ಸರಳತೆಯಲ್ಲಿಯೂ ಸಂಕೀರ್ಣತೆಯನ್ನು ತಂದು ಕಾವ್ಯವನ್ನು ಜನತೆಯ ಹತ್ತಿರ ತರುವಲ್ಲಿ ಬಹಳ ಮಟ್ಟಿಗೆ ಯಶಸ್ವಿಯಾದರು. ಒಮ್ಮೊಮ್ಮೆ “ಬರೆಯುವುದೇ ಬೇಡವೆನ್ನಿಸುವ ಅತ್ರುಪ್ತತೆಯ ಬೇಸರಿನ ಒಂದೇತನದ ತಂತಿಯ ಮಧ್ಯೆ, ಆಗೀಗ ದೀಪಗಂಬದ ಬೆಳಕ ಏಕಾಗ್ರ ಕ್ಷಣ ಹುಣ್ಣಿಮೆಯ ಅಸ್ಪಷ್ಟತೆಯಲ್ಲಿ ತಾನಾಗಿ ನಗ್ನ ನಿಲ್ಲುವುದು ಕವಿತೆ” ಎಂಬುದು ಅವರ ಕಾವ್ಯಾನುಭವ.

ನಿಸಾರ್ ಅಹಮದ್ ಅವರು ನಿಸಾರ್ ವಾಚಿಕೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿರುವ ಉತ್ತರವು ಅವರ ಕಾವ್ಯವಿಧಾನದ ಬಗ್ಗೆ ಕೆಲವು ವಿವರಗಳನ್ನು ನೀಡುತ್ತದೆ; ಅವರು ಹೇಳಿದ್ದಾರೆ: “ನವೋದಯದ್ದು ಪ್ರಮುಖವಾಗಿ, ಭಾವ ತೀವ್ರತೆ, ಹಾಡಿಕೆ, ಛಂದೋ ವಿಧೇಯತೆ, ಪ್ರಾಸಬದ್ಧತೆ ಹೇಗೋ ಹಾಗೆಯೇ ಪ್ರಕೃತಿ, ಪ್ರೇಮ, ದೇವರು, ಅಧ್ಯಾತ್ಮ ಗಳಿಗೆ ಅತಿಶಯ ಆದ್ಯತೆ ನೀಡುವ ರೀತಿ. ನವ್ಯದ್ದು ಇದಕ್ಕೆ ಪ್ರತಿಯಾಗಿ ವಿಚಾರ ಪ್ರತಿಪಾದಕ, ಪ್ರತಿಮಾ ರೂಪಕಗಳ, ಅನಿಯತ ಹಾಗೂ ಮುಕ್ತ ಛಂದಸ್ಸನ್ನು ಬಳಸಿಕೊಳ್ಳುವ ರೀತಿ. ಆದರ್ಶ ಪ್ರತಿಪಾದನೆಗಿಂತ ವಾಸ್ತವತೆಯ ನಗ್ನ ಹಾಗೂ ದಹ್ಯಮಾನ ಚಿತ್ರವನ್ನು ಸಾಂಕೇತಿಕವಾಗಿ ಕುಂಚಿಸುವ ರೀತಿ. ಮನುಷ್ಯನ ತಬ್ಬಲಿತನ, ನಿರಾಶ್ರಯತೆಯ ದಾರುಣ ಅಸ್ತಿತ್ವವನ್ನು ಕಾಣಿಸುವ ರೀತಿ, ಸೃನಕ್ರಿಯೆಯಲ್ಲಿ ಮುಂದುವರಿದಂತೆ ನವೋದಯ–ನವ್ಯ ಗಳ ನಡುವಣ ಸಮತೋಲನ ಸ್ಥಿತಿಯೊಂದು ನನ್ನ ಕವಿತೆ ಗಳಲ್ಲಿ ನಿರ್ಮಾಣಗೊಂಡಿತ್ತು. ಮುಂದೊಮ್ಮೆ ಅಚ್ಚ ನವ್ಯ ವಿಧಾನದ ಕವಿತಾ ರಚನೆಯ ಅನಿವಾರ್ಯತೆ ನನಗೆ ಎದುರಾಯಿತು.”

ಹೀಗೆ ಕಾವ್ಯದ ಎಲ್ಲಾ ಮಾರ್ಗಗಳ ಶೈಲಿಯನ್ನು ಅರಗಿಸಿಕೊಂಡು, ನಿಸಾರ್ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ  ಸಾಹಿತ್ಯ ರಚನೆ ಮಾಡಿ, ಅಪೂರ್ವವಾದ ಮನ್ನಣೆಗೆ ಪಾತ್ರವಾಗಿದ್ದಾರೆ.

  • ಪ್ರೊ ಎಂ ಎಸ್ ರಘುನಾಥ್, ಬೆಂಗಳೂರು, ನಿವೃತ್ತ ಇಂಗ್ಲಿಶ್ ಪ್ರಾಧ್ಯಾಪಕರಾದ ಎಂ ಎಸ್ ರಘುನಾಥ್ ನಿಸಾರ್ ಅಹಮದ್ ಅವರ ಆತ್ಮೀಯ ಗೆಳೆಯರಾಗಿದ್ದರು. ಅನುವಾದದಲ್ಲಿ ವಿಶೇಷ ಆಸಕ್ತಿ ಹೊಂದಿರುವ ರಘುನಾಥ್ ಅವರು ಗೇಬ್ರಿಯಲ್ ಮಾರ್ಕ್ವೇಜ್ ಕಥೆಗಳನ್ನು, ಆರ್ಥರ್ ಮಿಲ್ಲರ್ ನಾಟಕವನ್ನು, ಅಮಿತಾವ್ ಘೋಷ್ ಕಾದಂಬರಿಯನ್ನೂ ಸೇರಿದಂತೆ ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ([email protected])
ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights